ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಅನಿಶ್ಚಿತತೆಯ ಕಾರಣದಿಂದಾಗಿ ವಿಮಾನಯಾನ ಸಂಸ್ಥೆಗಳು ತನ್ನ ಸಾಮರ್ಥ್ಯವನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಮಾರ್ಚ್ 29 ರಿಂದ ಪ್ರಾರಂಭವಾಗುವ ಮುಂಬರುವ ಬೇಸಿಗೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ವಾರಕ್ಕೆ ಸುಮಾರು 3,000 ವಿಮಾನಗಳನ್ನು ಕಡಿತಗೊಳಿಸಿ ಕಾರ್ಯನಿರ್ವಹಿಸಲಿವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ಕಳೆದ ವರ್ಷದ ಬೇಸಿಗೆ ವೇಳಾಪಟ್ಟಿಯಲ್ಲಿ 25,610 ಸಾಪ್ತಾಹಿಕ ವಿಮಾನಗಳನ್ನು ನಿರ್ವಹಣೆ ಮಾಡಿದ್ದವು. 2024 ರಲ್ಲಿ 24,275 ಆಗಿತ್ತು. ಈ ಬೇಸಿಗೆ ವೇಳಾಪಟ್ಟಿಯಲ್ಲಿ ಈ ಸಂಖ್ಯೆ ಈಗ ಸುಮಾರು 22,600 ಸಾಪ್ತಾಹಿಕ ವಿಮಾನಗಳಿಗೆ ಇಳಿಯುವ ನಿರೀಕ್ಷೆಯಿದೆ.
ಇದು ಮಾರ್ಚ್ 29 ರಿಂದ ಜಾರಿಗೆ ಬರಲಿದೆ ಮತ್ತು ಅಕ್ಟೋಬರ್ 31 ರವರೆಗೆ ಮುಂದುವರಿಯುತ್ತದೆ.
ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳು, ವಿಶೇಷವಾಗಿ ಇಂಧನ ಮತ್ತು ವಿದೇಶಿ ವಿನಿಮಯ ಮತ್ತು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮುಂದುವರಿದರೆ ಪ್ರಯಾಣದ ಬೇಡಿಕೆ ದುರ್ಬಲಗೊಳ್ಳಬಹುದೆಂಬ ಕಳವಳಗಳಿಂದಾಗಿ ವಿಮಾನಯಾನ ಸಂಸ್ಥೆಗಳು ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿವೆ ಎಂದು ಅಧಿಕಾರಿ ಹೇಳಿದರು.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಹೇಳಿಕೆ ನೀಡಿದ್ದು, “ಇಂಡಿಗೋ ತನ್ನ ದೇಶೀಯ ಬೇಸಿಗೆ ವೇಳಾಪಟ್ಟಿಯನ್ನು ಏಪ್ರಿಲ್ನಲ್ಲಿ ಸುಮಾರು 2,000 ದೈನಂದಿನ ವಿಮಾನಗಳೊಂದಿಗೆ ಪ್ರಾರಂಭಿಸಲು ಉದ್ದೇಶಿಸಿದೆ. ಇಂಡಿಗೋದ ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಚಳಿಗಾಲದಂತೆಯೇ ಯೋಜಿಸಲಾಗಿತ್ತು.
ಆದರೆ ನಿಯೋಜಿತ ಪ್ರಮಾಣವು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂದರ್ಭಗಳನ್ನು ಆಧರಿಸಿ ಬದಲಾಗುತ್ತದೆ. ಇಂಧನ ಮತ್ತು ವಿದೇಶೀ ವಿನಿಮಯ ಸಂಬಂಧಿತ ವೆಚ್ಚಗಳು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ಈಗಾಗಲೇ ಹೆಚ್ಚುತ್ತಿರುವ ವೆಚ್ಚದ ವಾತಾವರಣದ ಜೊತೆಗೆ, ನಿರ್ವಹಣಾ ವೆಚ್ಚದಲ್ಲಿ ಬಹಳ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.

