ಕೋಲಾರ: ಪ್ರೀತಿಸುವಂತೆ ಮಗಳನ್ನು ಬಲವಂತ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಬುದ್ಧಿಮಾತು ಹೇಳಿದ್ದಕ್ಕಾಗಿ ಆಕೆಯ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಸುನಿಲ್ ಕುಮಾರ್ (27), ಕೋಲಾರದ ವಿನೋಭನಗರದ ಯಶ್ವಂತ್ ಯಾದವ್ (26) ಹಾಗೂ ತಾಲ್ಲೂಕಿನ ಉರಿಗಿಲಿ ಗ್ರಾಮದ ನಿವಾಸಿ ಮನೋಜ್ ಕುಮಾರ್ (26) ಬಂಧಿತ ಆರೋಪಿಗಳು.
ಹೊನ್ನೇನಹಳ್ಳಿ ಗ್ರಾಮದ ರಾಮಸ್ವಾಮಯ್ಯ ಎಂಬುವರ ಪುತ್ರಿಯನ್ನು ಅದೇ ಗ್ರಾಮದ ಸುನಿಲ್ ಕುಮಾರ್ ಎಂಬಾತ ಪ್ರೀತಿಸುವಂತೆ ಬಲವಂತ ಮಾಡಿ ಪೀಡಿಸಿ ಬೆದರಿಕೆ ಹಾಕುತ್ತಿದ್ದ. ಈ ವಿಷಯ ತಿಳಿದ ಆಕೆಯ ತಂದೆ ರಾಮಸ್ವಾಮಯ್ಯ ಆತನನ್ನು ಕರೆದು ಬುದ್ದಿ ಹೇಳಿದ್ದರು.
ತನಗೆ ಬುದ್ದಿ ಹೇಳಿದರು ಎಂಬ ಕಾರಣಕ್ಕೆ ರಾಮಸ್ವಾಮಯ್ಯ ಅವರಿಗೆ ಕಾರು ಗುದ್ದಿಸಿ ಕೊಲ್ಲಲು ಸುನಿಲ್ ಕುಮಾರ್ ಪ್ರಯತ್ನ ಪಟ್ಟಿದ್ದ. ಆದರೆ ಯಶಸ್ವಿಯಾಗಿರಲಿಲ್ಲ. ಮತ್ತೆ ಮಾರ್ಚ್ 8ರಂದು ರಾತ್ರಿ 9 ಗಂಟೆಗೆ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಲು ಪ್ರಯತ್ನ ಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಮಸ್ವಾಮಯ್ಯ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್
ಪಿ ಎಂ.ಎಚ್.ನಾಗ್ಲೆ ಮುಂದಾಳತ್ವದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕೆ.ಕಾಂತರಾಜ್, ಪಿಎಸ್‌ಐ ಭಾರತಿ, ಕ್ರೈಂ ಸಿಬ್ಬಂದಿ ಮುರಳಿ, ರಾಜೇಶ್, ಜಿಲ್ಲಾ ಅಪರಾಧ ದಳದ ಸಿಬ್ಬಂದಿ ಆಂಜಿನಪ್ಪ, ಸತೀಶ್, ನವೀನ್ ತಂಡವು ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರ್, ಕಬ್ಬಿಣದ ಲಾಂಗ್, ಮಚ್ಚುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಎರಡನೇ ಆರೋಪಿ ಯಶ್ವಂತ್ ಯಾದವ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪ್ರಸಿದ್ಧ ಖಳನಟ ದಿವಗಂತ ವಜ್ರಮುನಿ ಅವರ ಅಳಿಯನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ದಾಖಲಾಗಿದೆ. ಸುನಿಲ್ ಕುಮಾರ್ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಹಾಗೂ ಎಎಚ್‌ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜ್ ಕುಮಾರ್ ವಿರುದ್ಧವೂ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.