ಸುಕ್ಮಾ: 16 ನಕ್ಸಲರು ಸೇರಿದಂತೆ 27 ಮಂದಿ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗೆ ಶರಣಾಗಿದ್ದಾರೆ. ಶರಣಾದ 27 ನಕ್ಸಲರ ಪೈಕಿ 10 ಮಂದಿ ಮಹಿಳೆಯರು ಸೇರಿದ್ದಾರೆ. ಇವರ ತಲೆಗೆ 50 ಲಕ್ಷ ಇನಾಮು ಘೋಷಣೆಯಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪಡೆಯ (ಸಿಆರ್‌ಪಿಎಫ್) ಅಧಿಕಾರಿಗಳ ಎದುರು ಶರಣಾಗಿದ್ದಾರೆ.
ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲೈಟ್ ಮುಖಂಡ ಮಲ್ಲೊಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಮತ್ತಿತರ 61 ನಕ್ಸಲರು ಶರಣಾದ ಒಂದು ದಿನದ ಬಳಿಕ ಈ ನಕ್ಸಲರೂ ಶರಣಾಗಿದ್ದಾರೆ. ಶರಣಾದ ಎಲ್ಲಾ ನಕ್ಸಲರಿಗೆ ತಲಾ ರೂ.50 ಸಾವಿರ ನೆರವು ನೀಡಲಾಗಿದೆ. ಸರ್ಕಾರದ ಯೋಜನೆಗಳ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ ಜಿಎ) ಸದಸ್ಯ ಓಯಮ್ ಲಖ್ಮು ತಲೆಗೆ 10 ಲಕ್ಷ ಇನಾಮು ಘೋಷಿಸಲಾಗಿತ್ತು. ಪಿಎಲ್ ಜಿಎ ಪಾರ್ಟಿ ಕಮಿಟಿ ಸದಸ್ಯೆ ಮದ್ವಿ ಭೀಮ, ಸುನೀತಾ ಅಲಿಯಾಸ್ ಕವಾಸಿ ಸೋಮ್ಡಿ ಮತ್ತು ಸೋಡಿ ಮಾಸೆ ಸೇರಿ ಮೂವರು ನಕ್ಸಲರಿಗೆ ತಲಾ ರೂ.8 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿದು ಬಂದಿದೆ.