ಮುಂಬೈ: 14 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಜಾಹೀರಾತು ಫಲಕ ಬಿದ್ದು ಸಂಭವಿಸಿದ ಅವಘಡದ ಪ್ರಮುಖ ಆರೋಪಿ ಭಾವೇಶ್ ಭಿಂಡೆ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಘೋಟ್ಕಾಪರ್ ಬಳಿಯ ಪೆಟ್ರೋಲ್ ಬಂಕ್ ಸಮೀಪ ಅವಳಡಿಸಲಾಗಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕ ಕಳೆದ ಸೋಮವಾರ ಮಧ್ಯಾಹ್ನ ನಡೆದ ದುರ್ಘಟನೆಯಿಂದಾಗಿ ಕೆಳಗೆ ಬಿದ್ದು 14 ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಜಾಹೀರಾತು ಫಲಕಗಳನ್ನು BMC ನಿರಾಕ್ಷೇಪಣಾ ಪತ್ರ ಇಲ್ಲದೆ ಅಕ್ರಮವಾಗಿ ಅಳವಡಿಸಿದ್ದ ಈಗಲ್ ಮೀಡಿಯಾದ ಮಾಲೀಕ ಭಾವೇಶ್ ಭಿಂಡೆ ವಿರುದ್ಧ ಪಂತ್ ನಗರ ಪೊಲೀಸರು ಐಪಿಸಿ ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ದೂರು ದಾಖಲಿಸಿಕೊಂಡು ಆತನ ಹುಡುಕಾಟದಲ್ಲಿದ್ದಾರೆ.
ಭಾವೇಶ್ ಭಿಂಡೆ ಇಗೋ ಮೀಡಿಯಾ ( EGO MEDIA ) ಹೆಸರಲ್ಲಿ ಮುಂಬೈ ನಗರದಾದ್ಯಂತ ನೂರಾರು ಜಾಹೀರಾತು ಫಲಕಗಳನ್ನು ಅಳವಡಿಸಿದ್ದು, ಅವಘಡ ಸಂಭವಿಸಿದ ಸ್ಥಳದಲ್ಲೇ ನಾಲ್ಕು ಬೃಹತ್ ಫಲಕಗಳನ್ನು ಅಳವಡಿಸಿದ್ದ.
ಭಾವೇಶ್ ಭಿಂಡೆಯ ಕುರಿತು ಕುತೂಹಲಕಾರಿ ಮಾಹಿತಿಗಳು ಹೊರಗೆ ಬರುತ್ತಿದ್ದು, ಈತನ ಮೇಲೆ ಈಗಾಗಲೇ 23 ಕ್ರಿಮಿನಲ್ ಮೊಕದ್ದಮೆಗಳಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಅವನ ಮೇಲೆ ಅತ್ಯಾಚಾರದ ಪ್ರಕರಣವೂ ದಾಖಲಾಗಿದ್ದು, ಜಾಮೀನು ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಭಾವೇಶ್ ಭಿಂಡೆ ಮಾಲಿಕತ್ವದ ಮತ್ತೊಂದು ಜಾಹೀರಾತು ಸಂಸ್ಥೆಯನ್ನು ರೈಲ್ವೆ ಇಲಾಖೆ ವಾಣಿಜ್ಯ ವಿಭಾಗ 2017-18ರಲ್ಲಿ ಅಕ್ರಮವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ ಬ್ಲಾಕ್ ಲಿಸ್ಟ್ ಮಾಡಲಾಗಿತ್ತು. 2009ರಲ್ಲಿ ಭಾವೇಶ್ ಭಿಂಡೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲನ್ನಪ್ಪಿದ್ದ.
ಸೋಮವಾರದ ಘಟನೆಯ ನಂತರ BMP ಮತ್ತು ಇತರೆ ಸಂಸ್ಥೆಗಳು ಮುಂಬೈ ನಗರದಲ್ಲಿರುವ ಅಕ್ರಮ ಮತ್ತು ಅಪಾಯಕಾರಿ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿವೆ.