ಬೆಂಗಳೂರು: ಹೊಸವರ್ಷ 2026 ಚುನಾವಣೆಗಳ ವರ್ಷ ಎಂದು ಹೇಳಲಾಗುತ್ತಿದೆ. ಈ ವರ್ಷದಲ್ಲಿ ಜಿಬಿಎ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಈ ವಾದಕ್ಕೆ ಪುಷ್ಠಿಯಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ವರ್ಷದಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಅವರು ಈ ಚುನಾವಣೆಗಳಿಗೆ ತಯಾರಿಯನ್ನೂ ಆರಂಭಿಸಿದ್ದಾರೆ.
ಯಾವೆಲ್ಲಾ ಚುನಾವಣೆಗಳು ನಡೆಯಲಿವೆ?
ತಾಲೂಕು ಪಂಚಾಯತಿ (3,671 ಕ್ಷೇತ್ರಗಳು); 31 ಜಿಲ್ಲಾ ಪಂಚಾಯತಿ (1,130 ಕ್ಷೇತ್ರಗಳು); ಗ್ರಾಮ ಪಂಚಾಯತಿ ಚುನಾವಣೆ(6000 ವಾರ್ಡ್‌ಗಳು); ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೂ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹಾಲಿ ಶಾಸಕರ ನಿಧನದಿಂದ ತೆರವಾಗಿರುವ 2 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ.
2020-21ರಿಂದ ರಾಜ್ಯದ 239 ತಾಲೂಕು ಪಂಚಾಯಿತಿಗಳ 3,671 ಕ್ಷೇತ್ರಗಳು ಹಾಗೂ 31 ಜಿಲ್ಲೆಗಳ 1,130 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ. ಬಾಕಿ ಜಿಪಂ ಮತ್ತು ತಾಪಂಗಳ ಕ್ಷೇತ್ರ ಪುನರ್ವಿಂಗಡಣೆಯನ್ನು ಸರ್ಕಾರ ಒಪ್ಪಿಕೊಂಡಿದೆಯಾದರೂ ಮೀಸಲಾತಿಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ನೀಡಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿದ್ದು ವಿಚಾರಣೆಗೆ ಬಾಕಿ ಉಳಿದಿದೆ. ಸರ್ಕಾರ ಚುನಾವಣೆ ನಡೆಸಲು ಸಮ್ಮತಿ ಸೂಚಿಸಿದರೆ ಈ ಪ್ರಕರಣ ಇತ್ಯರ್ಥಗೊಳ್ಳುವುದು ಕಷ್ಟವೇನಲ್ಲ. ಬಹುಶಃ ಏಪ್ರಿಲ್ ವೇಳೆಗೆ ಚುನಾವಣೆ ದಿನಾಂಕ ನಿಗದಿಯಾಗಲಿದೆ ಎಂದು ಶಾಸಕರೊಬ್ಬರು ಅಭಿಪ್ರಾಯಪಡುತ್ತಾರೆ.
ಜಿಬಿಎ ವ್ಯಾಪ್ತಿಯೆ ಐದು ಪಾಲಿಕೆಗಳಿಗೆ ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಯಾರಿ ಆರಂಭಿಸಿವೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆಕಾಂಕ್ಷಿಗಳಿಂದ ಅರ್ಜಿಗಳನ್ನೂ ಆಹ್ವಾನಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಸಮಿತಿಗಳನ್ನು ರಚಿಸಿವೆ.
2023 ರಲ್ಲಿ ವಿಧಾನಸಭಾ, 2024 ರಲ್ಲಿ ಲೋಕಸಭಾ ಚುನಾವಣೆ ನಡೆದಿದ್ದನ್ನು ಹೊರತುಪಡಿಸಿದರೆ 2025 ರಲ್ಲಿ ಯಾವುದೇ ಚುನಾವಣೆ ನಡೆದಿಲ್ಲ. ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಯಬೇಕಿತ್ತಾದರೂ ಮೀಸಲಾತಿ ಹಂಚಿಕೆ ವಿಳಂಬದಿಂದ ವಿಳಂಬವಾಗಿದೆ. ಈ ವರ್ಷ ಈ ಎಲ್ಲ ಚುನಾವಣೆಗಳು ನಡೆಲಿವೆ ಎಂದು ಭಾವಿಸಲಾಗಿದೆ.

