2020ರ ದೆಹಲಿ ಗಲಭೆ: ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಗೆ  ಜಾಮೀನು

Most read

ನವದೆಹಲಿ: ದೆಹಲಿಯಲ್ಲಿ ನಡೆದ ಗಲಭಗೆ ಪಿತೂರಿ ನಡೆಸಿದ ಆರೋಪದ ಪ್ರಕರಣದಲ್ಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ, ಹೋರಾಟಗಾರ ಉಮರ್ ಖಾಲಿದ್ ಅವರಿಗೆ  ದೆಹಲಿಯ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರಿಗೆ 7 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ.

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ಪಿತೂರಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಅವರು ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪಿತೂರಿ, ಗಲಭೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ.

ಇವರ ಜಾಮೀನು ಅರ್ಜಿಗಳನ್ನು ಮಾರ್ಚ್ 2022 ರಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಅಕ್ಟೋಬರ್ 2022 ರಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ನಂತರ, ಉಮರ್ ಖಾಲಿದ್ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಸುಪ್ರಿಂಕೋರ್ಟ್‌ ಮೇ 2023 ರಲ್ಲಿ ಪ್ರತಿಕ್ರಿಯೆ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ನಂತರ ಉಮರ್ ಖಾಲಿದ್ ತನ್ನ ಜಾಮೀನು ಅರ್ಜಿಗಳನ್ನು ಹಿಂಪಡೆದಿದ್ದರು.

ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್‌ ಆರ್‌ ಸಿ ವಿರೋಧಿಸಿ ನಡೆದ ಪ್ರತಿಭಟನೆ ನಂತರ ಹಿಂಸಾಚಾರಕ್ಕೆ ತಿರುಗಿತ್ತು. ಈ ಗಲಭೆಯಲ್ಲಿ 53 ಮಂದಿ ಮೃತಪಟ್ಟು 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಉಮರ್ ಖಾಲಿದ್, ತಾನು ಸಭೆಗಳಲ್ಲಿ ಭಾಗವಹಿಸಿದ್ದು ನಿಜ. ನನ್ನಂತೆ ಅನೇಕ ಮಂದಿ ಸಭೆಯ್ಲಿ ಭಾಗವಹಿಸಿದ್ದರು. ಇದೇನೂ ರಹಸ್ಯ ಸಭೆಯಾಗಿರಲಿಲ್ಲ ಎಂದು  ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಪ್ರಕರಣದಲ್ಲಿ ಖಾಲಿದ್‌ ಅಲ್ಲದೆ ಎಎಪಿ ನಾಯಕ ತಾಹಿರ್ ಹುಸೇನ್, ಖಾಲಿದ್ ಸೈಫಿ, ಇಶ್ರತ್ ಜಹಾನ್, ಮೀರನ್ ಹೈದರ್ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ.

More articles

Latest article