ನಾಳೆ ಬಿಜೆಪಿ ನಾಯಕರು ಹೊಸಪೇಟೆಗೆ ಬಂದು ಫಲಾನುಭವಿಗಳ ಮಾತು ಕೇಳಬೇಕು: ಕೈ ಮುಖಂಡ ಮಂಜುನಾಥ್ ಭಂಡಾರಿ

Most read

ಬೆಂಗಳೂರು: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಾಳೆ, ಮೇ 20 ರಂದು ಆಯೋಜನೆಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸಿ ಫಲಾನುಭವಿಗಳನ್ನು ನೋಡಿ ಖುದ್ದು ಭಾಷಣ ಕೇಳಿ, ಕಿವಿತುಂಬಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಮೇಲ್ಮನೆ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಹ್ವಾನ ನೀಡಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ  ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಮಾವೇಶಕ್ಕೆ ಬರಬೇಕು. ಫಲಾನುಭವಿಗಳು ಏನು ಹೇಳುತ್ತಾರೆ ಎಂಬುದನ್ನುನೋಡಿ, ಕೇಳಿ ಕಣ್ತುಂಬಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಕರೋನಾ ಕಾಲದಲ್ಲಿ ರಾಜ್ಯದ ಆರ್ಥಿಕತೆ ಹದಗೆಟ್ಟಿತ್ತು. ಜನ ಸಂಕಷ್ಟ ಅನುಭವಿಸುತ್ತಿದ್ದರು. ಕಾಂಗ್ರೆಸ್ ಚುನಾವಣಾ  ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಜನ ಕಲ್ಯಾಣ ಯೋಜನೆಗಳ ಜತೆ ರಾಜ್ಯದ ಆರ್ಥಿಕತೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿತ್ತು. ಕಾಂಗ್ರೆಸ್‌ ಎಂದರೆ ಗ್ಯಾರಂಟಿ. ಕಾಂಗ್ರೆಸ್ ನಾಯಕರು ಎಂದರೆ ಗ್ಯಾರಂಟಿ. ಪಕ್ಷ ನೀಡಿದ ಆಶ್ವಾಸನೆಯನ್ನು ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಈಡೇರಿಸಿಕೊಂಡು ಬಂದಿದೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಗ್ಯಾರಂಟಿ ಕರ್ನಾಟಕದಲ್ಲಿದೆ:

ಎರಡು ವರ್ಷಗಳಿಂದ ಕಾಂಗ್ರೆಸ್ 90 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೇರವಾಗಿ ತಲುಪಿಸಲಾಗಿದೆ. ರಾಜ್ಯದ ಬಡವರು, ಮಧ್ಯಮ ವರ್ಗದವರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಯುವಕರು ಎಲ್ಲರಿಗೂ ಜಾತಿ, ಧರ್ಮ, ಪಕ್ಷಬೇಧವಿಲ್ಲದೇ  ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ‌ ಮಾಡಲಾಗಿದೆ. ಪ್ರಪಂಚದ ಯಾವ ರಾಷ್ಟ್ರದಲ್ಲೂ ಇಲ್ಲದಂಥ ವಿಶಿಷ್ಟವಾದ ಜನಕಲ್ಯಾಣ ಕಾರ್ಯಕ್ರಮ  ಈ ಗ್ಯಾರಂಟಿ ಯೋಜನೆಯಾಗಿದೆ. ಆದರೆ, ವಿರೋಧ ಪಕ್ಷಗಳ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ‌

ಆದರೆ, 4 ಲಕ್ಷ 09 ಸಾವಿರ ಕೋಟಿ ರೂ. ಆಯವ್ಯಯದಲ್ಲಿ 1 ಲಕ್ಷ 35. ಸಾವಿರ ಕೋಟಿ ರೂ. ಹಣವನ್ನು ನಮ್ಮ ಮುಖ್ಯಮಂತ್ರಿಗಳು ಅಭಿವೃದ್ಧಿಗಾಗಿ ತೆಗೆದಿರಿಸಿದ್ದಾರೆ. ಹಾಗಾಗಿ ಗ್ಯಾರಂಟಿಗಳ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪುವ ಜತೆಗೆ, ಅಭಿವೃದ್ಧಿ ಯೋಜನೆಗಳೂ ಶರವೇಗದಲ್ಲಿ‌ ನಡೆಯುತ್ತಿವೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

More articles

Latest article