ಪೊಷಕರಿಗೆ ಗುಡ್‌ ನ್ಯೂಸ್;‌  1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ; ಸಚಿವ ಮಧು ಬಂಗಾರಪ್ಪ

Most read

ಬೆಂಗಳೂರು: ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಡಿಲಗೊಳಿಸಿದೆ. ಈ ವರ್ಷಕ್ಕೆ 5 ವರ್ಷ 5 ತಿಂಗಳಾಗಿದ್ದರೂ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಷಯ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಒಂದನೇ ತರಗತಿಗೆ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಒಂದನೇ ತರಗತಿ ಸೇರ್ಪಡೆಗೆ ಆರು ವರ್ಷ ವಯೋಮಿತಿ ಇದೆ. ಎರಡು ತಿಂಗಳು ಮಾತ್ರ ಸಡಿಲಿಕೆ ಮಾಡಬಹುದಷ್ಟೇ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಮೊದಲು 6 ವರ್ಷ ಕಡ್ಡಾಯ ಎಂದು ತಿಳಿಸಿದ್ದರು. ನಂತರ ಚರ್ಚೆ ನಡೆಸಿದಾಗ 5 ವರ್ಷ 5 ತಿಂಗಳು ಆಗಿದ್ದರೆ ದಾಖಲಾತಿ ಮಾಡಬಹುದು ಎಂದು ತಿಳಿಸಿದ್ದಾರೆ. ಒಂದನೇ ತರಗತಿಗೆ ಯುಕೆಜಿ ಮುಗಿಸಿರಬೇಕು. ವಯೋಮಿತಿ ಸಡಿಲಿಕೆ ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯವಾಗಲಿದ್ದು, ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಒಂದನೇ ತರಗತಿಗೆ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಲು ಪೋಷಕರು ಒತ್ತಡ ಹೇರುತ್ತಿದ್ದರು. ಮಕ್ಕಳನ್ನು ಯಂತ್ರದ ರೀತಿಯಲ್ಲಿ ಓದಿಸಬೇಡಿ. ಹಾಗೆ ಮಾಡಿದರೆ ಮಕ್ಕಳಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದೂ ಮನವಿ ಮಾಡಿಕೊಂಡರು.

More articles

Latest article