18 ಆರೋಪಿಗಳ ಬಂಧನ;1 ಕೋಟಿ ರೂ. ಮೌಲ್ಯದ ವಾಹನಗಳ ವಶ

Most read





ಬೆಂಗಳೂರು: ನಗರದ ವಿವಿಧ ಪೊಲೀಸ್‌ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿರುವ ಪೊಲೀಸರು ರೂ. 1 ಕೋಟಿ ಮೌಲ್ಯದ ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 115 ದ್ವಿಚಕ್ರ ವಾಹನ, ನಾಲ್ಕು ಆಟೊ, ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ತಿಳಿಸಿದ್ದಾರೆ.

ಇವರ ಪೈಕಿ 10 ಮಂದಿ ಹಿಂದೆಯೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರವೂ ಮತ್ತೆ ಕಳ್ಳತನಕ್ಕೆ ಇಳಿದಿದ್ದರು. ಅವರೆಲ್ಲರನ್ನೂ ಪತ್ತೆಹಚ್ಚಿ ಬಂಧಿಸಲಾಗಿದೆ. ಪದೇ ಪದೇ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗುತ್ತಿರುವ ಈ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ವಕೀಲರ ಮೂಲಕ ನ್ಯಾಯಾಲಯದಲ್ಲಿ ಮನವಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ರಾಜಗೋಪಾಲನಗರ ಠಾಣೆಯ ಪೊಲೀಸರು ವೈಟ್‌ಫೀಲ್ಡ್ ನಿವಾಸಿ ಆನಂದ್‌ ಎಂಬಾತನನ್ನು ಬಂಧಿಸಿ ರೂ. 26.50 ಲಕ್ಷ ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ದೊಡ್ಡಬಿದರಕಲ್ಲು ಮಾರಣ್ಣ ಬಡಾವಣೆಯ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಕೆಡಿಡಿಎಲ್‌ ಕಾರ್ಖಾನೆ ಎದುರು ದೂರುದಾರರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಆರೋಪಿ ಕಳ್ಳತನ ಮಾಡಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಕಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಂದಿನಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನಗಳ ಕಳ್ಳತನ ಮಾಡುತ್ತಿದ್ದ ಕೆಂಗೇರಿ ನಿವಾಸಿ ಮಹಮ್ಮದ್ ನಿಜಾರ್  ಎಂಬಾತನನ್ನು ಬಂಧಿಸಿದ್ದಾರೆ. ಈತ ಹಗಲಿನಲ್ಲಿ ಚಹಾ ವ್ಯಾಪಾರ ಮಾಡುತ್ತಿದ್ದ. ರಾತ್ರಿ ವೇಳೆ ರಸ್ತೆ ಬದಿ ಹಾಗೂ ಮನೆಯ ಎದುರು ನಿಲುಗಡೆ ಮಾಡಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ಈತನಿಂದ 12 ದ್ವಿಚಕ್ರ ವಾಹನ, ಒಂದು ಆಟೊವನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ರೂ. 5.81 ಲಕ್ಷ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.

ಮನೆಯ ಮುಂದೆ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿದೆ ಎಂದು ಲಗ್ಗೆರೆಯ ನಿವಾಸಿಯೊಬ್ಬರು ನಂದಿನಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಇವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಹಲವು ಬಡಾವಣೆಗಳಲ್ಲಿ ನಿಲುಗಡೆ ಮಾಡಿದ್ದ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರೂ. 9 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ ಪೊಲೀಸರು, ನಾಲ್ವರನ್ನು ಬಂಧಿಸಿ ರೂ. 8.5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಜೆ.ಪಿ. ನಗರ, ತಲಘಟ್ಟಪುರ, ಬಸವನಗುಡಿ, ಎಚ್‌ಎಎಲ್‌, ಮಡಿವಾಳ, ಬೆಳ್ಳಂದೂರು ಪೊಲೀಸರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ದ್ವಿಚಕ್ರ ವಾಹನ ಹಾಗೂ ಆಟೊಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article