ಇಸ್ಲಾಮಾಬಾದ್: ತೋಷಖಾನಾ-2 ಭ್ರಷ್ಟಾಚಾರ ಪ್ರಕರಣದಲ್ಲಿ ಖ್ಯಾತ ಕ್ರಿಕೆಟ್ ಆಟಗಾರ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಮಾಜಿ ಪತ್ನಿ ಪತ್ನಿ ಬುಶ್ರಾ ಬೀಬಿ ಇಬ್ಬರಿಗೂ ತಲಾ ಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಖಾನ್ ಮತ್ತು ಬುಶ್ರಾ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2021ರ ಮೇ ತಿಂಗಳಲ್ಲಿ ಇಮ್ರಾನ್ ಖಾನ್ ಮತ್ತು ಬುಶ್ರಾ ದಂಪತಿ ಸೌದಿ ಅರೇಬಿಯಾಗೆ ಪ್ರವಾಸ ಹೋಗಿದ್ದಾಗ ಅವರಿಗೆ ಸೌದಿ ಯುವರಾಜ ದುಬಾರಿ ಬೆಲೆ ಬಾಳುವ ಬುಲ್ಗಾರಿ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು. ನಂತರ ಆ ಆಭರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿರುವ ಆರೋಪದ ಪ್ರಕರಣ ಇದಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶಾರುಖ್ ಅರ್ಜುಮಂಡ್ ಅವರು ಈ ಆದೇಶ ಹೊರಡಿಸಿದ್ದಾರೆ. ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ 10 ವರ್ಷ ಮತ್ತು ಇತರ ಭ್ರಷ್ಟಾಚಾರ ನಿಯಂತ್ರಣ ಪ್ರಕರಣಗಳಲ್ಲಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ.
ಜೈಲು ಶಿಕ್ಷ ಜತೆಗೆ ಇಮ್ರಾನ್ ಖಾನ್ ದಂಪತಿಗೆ 16.4 ಮಿಲಿಯನ್ ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಈ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಇಮ್ರಾನ್ ಪರ ವಕೀಲರು ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ಇಮ್ರಾನ್ ಖಾನ್ ತಳ್ಳಿ ಹಾಕಿದ್ದಾರೆ. ಇಮ್ರಾನ್ ಖಾನ್ ಅವರು ಅಕ್ಟೋಬರ್ 2023 ರಿಂದ ರಾವಲ್ಪಿಂಡಿ ಜೈಲಿನಲ್ಲಿದ್ದಾರೆ. ಬೇರೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಅವರು 14 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾರೆ.

