ಎಂಜಿ ರಸ್ತೆ ಸುತ್ತಮುತ್ತ 15 ಮೆ. ಟನ್ ತ್ಯಾಜ್ಯ ಸಂಗ್ರಹ

Most read

ಬೆಂಗಳೂರು: ನಗರದ ಪೂರ್ವ ವಲಯ ವ್ಯಾಪ್ತಿಯ ಎಂ.ಜಿ ರಸ್ತೆಯ ಸುತ್ತಮುತ್ತಲಿನ ರಸ್ತೆ/ಪ್ರದೇಶಗಳಲ್ಲಿ ಹೊಸ ವರ್ಷಾರಣೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಬಿದ್ದಿದ್ದ ಸುಮಾರು 15 ಮೆಟ್ರಿಕ್ ಟನ್ ತ್ಯಾಜ್ಯ-ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಪೂರ್ವ  ವಲಯ ಆಯುಕ್ತರಾದ ಸ್ನೇಹಲ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ ರವರ ನೇತೃತ್ವದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆ ನಗರದ ಸಿಬಿಡಿ ರಸ್ತೆಗಳಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವಿಭಾಗದ ಮೇಲ್ವಿಚಾರಣೆಯಲ್ಲಿ ಬೆಳಗ್ಗೆಯೊಳಗಾಗಿ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿರುತ್ತದೆ.

ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ತ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ್ ಬಾ ರಸ್ತ್ತೆ ಸೇರಿದಂತೆ ಮುಂತಾದ ರಸ್ತೆಗಳಲ್ಲಿ ಮುಂಜಾನೆ 3.00ರಿಂದ ಸ್ವಚ್ಛತಾ ಕಾರ್ಯ ಆರಂಭಿಸಿ ಬೆಳಗ್ಗೆ 7.00ರ ವೇಳೆಗೆ ಪೂರ್ಣಗೊಳಿಸಿ ಸುಮಾರು 15 ಮೆ. ಟನ್ ತ್ಯಾಜ್ಯವನ್ನು ಬೀದಿಗಳಿಂದ ತೆರವುಗೊಳಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ವಚ್ಛತಾ ಕಾರ್ಯವು ಶಾಂತಿನಗರ ವಿಭಾಗದ ಘನತ್ಯಾಜ್ಯ ವಿಭಾಗದಿಂದ ಮಾಡಲಾಗಿದ್ದು, 70ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡಿದರು. ಈ ವೇಳೆ ಕಿರಿಯ ಆರೋಗ್ಯ ಅಧಿಕಾರಿಗಳು,  ಮಾರ್ಷಲ್ ಗಳು ಮೇಲ್ವಿಚಾರಣೆಯಲ್ಲಿದ್ದು, 25 ಆಟೋ ಟಿಪ್ಪರ್‌ಗಳು, 3 ಕಾಂಪ್ಯಾಕ್ಟರ್ ಗಳು ಸ್ಥಳದಲ್ಲಿದ್ದವು.

 ಸಿಬಿಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು, ಮಧ್ಯದ ಬಾಟಲಿಗಳು ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಸಲಾಗಿದೆ. ಪುನರ್ ಬಳಕೆಯ ಸುನಾರು 3 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ.

ಹೊಸ ವರ್ಷಾಚರಣೆಯ ಅಂಗವಾಗಿ ಎಂಜಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಡಿರುವ ಕುರಿತಂತೆ, ಸುಮಾರು 25 ಸ್ಥಳೀಯ ವಾಯು ವಿಹಾರಿಗಳು ಬೆಳಗ್ಗೆ 7 ಗಂಟೆಯಿಂದ 7 ಕಿ.ಮೀ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಸುತ್ತಾಡಿ ಸ್ವಚ್ಛತೆ ಮಾಡಿರುವುದನ್ನು ಖಾತರಿಪಡಿಸಿದರು. ಅಲ್ಲದೆ ಪಾಲಿಕೆ ಮಾಡಿರುವ ಸ್ವಚ್ಚತಾ ಕಾರ್ಯಕ್ಕೆ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.  ಸ್ವಚ್ಚತಾ ಕಾರ್ಯದ ವೇಳೆಸಹಾಯಕ ಪ್ರಧಾನ ವ್ಯವಸ್ಥಾಪಕರಾದ ರವಿಕುಮಾರ್, ಚೀಫ್ ಮಾರ್ಷಲ್ ರಜ್‌ಬಿರ್ ಸಿಂಗ್, ಸಹಾಯಕ  ಕಾರ್ಯಪಾಲಕ ಅಭಿಯತರರಾದ ಅಪ್ಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

More articles

Latest article