ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಸಹೋದರಿ ಹೆಸರಿನಲ್ಲಿ 14 ಕೆಜಿ 600 ಗ್ರಾಂ ಕೆಜಿ ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಿ ಐಶ್ವರ್ಯಗೌಡ ಹಾಗೂ ಪತಿ ಹರೀಶ್ ಅವರನ್ನು ಬಂಧಿಸಲಾಗಿದೆ. ಸುರೇಶ್ ಹೆಸರಿನಲ್ಲಿ ಮಾತನಾಡಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಟ ಧಮೇಂದ್ರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಐಶ್ವರ್ಯ ಗೌಡ ಮತ್ತು ಹರೀಶ್ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ನಂತರ 4ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಐಶ್ವರ್ಯಗೌಡ ಅವರನ್ನು ವಶಕ್ಕೆ ಕೇಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಐಶ್ವರ್ಯ ಗೌಡ ಕಳೆದ ಜನವರಿಯಿಂದ ಡಿಸೆಂಬರ್ ವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ.
ನಟ ಧರ್ಮೇಂದ್ರ ಡಿ.ಕೆ ಸುರೇಶ್ ಧ್ವನಿಯಲ್ಲಿ ಕರೆ ಮಾಡಿ ಹಣ ನೀಡಲು ಕಾಲಾವಕಾಶ ಕೇಳಿದ್ದರು. ಹಣ ಬಾರದೆ ಇದ್ದಾಗ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಇಬ್ಬರನ್ನೂ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆ ವನಿತಾ ಐತಾಳ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದ ನಂತರ ಪ್ರತಿಕ್ರಿಯೆ ನೀಡಿರುವ ಅವರು ಐಶ್ವರ್ಯಗೌಡ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕರೆದಿದ್ದರು. ನಾನು ಅವರ ವಿರುದ್ಧ 8.41 ಕೋಟಿ ಮೌಲ್ಯದ 14 ಕೆಜಿ ಚಿನ್ನಾಭರಣ ವಂಚನೆ ಪ್ರಕರಣ ದಾಖಲು ಮಾಡಿದ್ದೇನಿ. ಸೂಕ್ತ ದಾಖಲೆಗಳು ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಪೊಲೀಸರಿಗೆ ಕೊಟ್ಟಿದೇನೆ ಎಂದು ಹೇಳಿದ್ದಾರೆ. ಡಿ.ಕೆ ಸುರೇಶ್ ಅವರನ್ನು ಹಣ ಕೇಳಲು ಭೇಟಿ ಮಾಡಿದ್ದೆ. ಅವರು ಇದಕ್ಕೂ ನನಗೂ ಸಂಬಂಧ ಇಲ್ಲ. ನೀವು ಪೊಲೀಸ್ ಕಮೀಷನರ್ ಗೆ ದೂರು ಕೊಡಿ ಎಂದಿದ್ದರು. ಅದರಂತೆ ನಾನು ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.