ನವದೆಹಲಿ: ಗುಜರಾತ್ ರಾಜ್ಯವೊಂದರಲ್ಲೇ 10 ಅನಾಮಧೇಯ ಪಕ್ಷಗಳು ಅಪರೂಪಕ್ಕೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ, ಐದು ವರ್ಷಗಳಲ್ಲಿ ಬರೋಬ್ಬರಿ 4,300 ಕೋಟಿ ರೂ. ದೇಣಿಗೆ ಪಡೆದಿರುವ ವಿಷಯ ಕುರಿತು ಚುನಾವಣಾ ಆಯೋಗತ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
2019-20ರಿಂದ 2023-24ರವರೆಗೆ ಹತ್ತು ರಾಜಕೀಯ ಪಕ್ಷಗಳು ಹಣ ಪಡೆದಿವೆ ಎಂದು ಜನಪ್ರಿಯ ಪತ್ರಿಕೆ ದೈನಿಕ್ ಭಾಸ್ಕರ್ ವರದಿ ಮಾಡಿದ್ದು, ಈ ವರದಿಯನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಲೋಕಶಾಹಿ ಸತ್ತಾ ಪಕ್ಷ, ಭಾರತೀಯ ರಾಷ್ಟ್ರೀಯ ಜನತಾ ದಳ, ಸ್ವತಂತ್ರ ಅಭಿವ್ಯಕ್ತಿ ಪಕ್ಷ, ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ, ಸತ್ಯವಾದಿ ರಕ್ಷಕ ಪಕ್ಷ, ಭಾರತೀಯ ಜನಪರಿಷದ್, ಸೌರಾಷ್ಟ್ರ ಜನತಾ ಪಕ್ಷ, ಜನ್ ಮನ್ ಪಾರ್ಟಿ, ಮಾನವಾಧಿಕಾರ ರಾಷ್ಟ್ರೀಯ ಪಕ್ಷ ಮತ್ತು ಗರೀಬ್ ಕಲ್ಯಾಣ್ ಪಕ್ಷಗಳೇ ಹತ್ತು ಅನಾಮಧೇಯ ಪಕ್ಷಗಳು.
2019 ಮತ್ತು 2024ರ ನಡುವೆ ಎರಡು ಲೋಕಸಭಾ ಚುನಾವಣೆಗಳು ಮತ್ತು 2022ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ದೇಣಿಗೆ ಪಡೆದಿರುವ ಹತ್ತು ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದವು. ಈ ಎಲ್ಲಾ 43 ಅಭ್ಯರ್ಥಿಗಳು ಕೇವಲ 54,069 ಮತಗಳನ್ನು ಮಾತ್ರ ಗಳಿಸಿದ್ದರು. ಈ ಪಕ್ಷಗಳು ಚುನಾವಣೆಗಳಿಗೆ ಕೇವಲ 39.02 ಲಕ್ಷ ರೂ.ಗಳನ್ನು ವೆಚ್ಚ ಮಾಡಿವೆ. ಆದರೆ, ಲೆಕ್ಕಪತ್ರ ಪರಿಶೋಧನೆಯಲ್ಲಿ ರೂ. 3,500 ಕೋಟಿ ವೆಚ್ಚ ಮಾಡಿರುವುದಾಗಿ ಲೆಕ್ಕ ತೋರಿಸಿವೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಈ ಪಕ್ಷಗಳು ಸಾವಿರಾರು ಕೋಟಿ ರೂಪಾಯಿಗಳನ್ನು ದೇಣಿಗೆ ಪಡೆದಿದದ್ದಾದರೂ ಹೇಗೆ ಮತ್ತು ಆ ಹಣ ಎಲ್ಲಿಗೆ ಹೋಯಿತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ತನಿಖೆ ನಡೆಸಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಚುನಾವಣಾ ಆಯೋಗ ಈ ಡೇಟಾವನ್ನು ಮರೆಮಾಚಲು ಸಾಧ್ಯವಾಗುವಂತೆ ಕಾನೂನುಗಳನ್ನು ಬದಲಾಯಿಸುತ್ತದೆಯೇ?” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದೆ ಎಂಬ ಆರೋಪಕ್ಕೆ ಚುನಾವಣಾ ಆಯೋಗ ರಾಹುಲ್ ಅವರಿಂದ ಅಫಿಡವಿಟ್ ಕೇಳಿದೆ. ಈಗಲೂ ಕೇಳಲಿದೆಯೇ ಎಂದು ಕುಟುಕಿದ್ದಾರೆ.