ಕಾರವಾರ/ಬೆಂಗಳೂರು: ಉತ್ತರ ಕನ್ನಡದಲ್ಲಿ ಮುಂಗಾರು ಮಳೆಯ ರೌದ್ರಾವತಾರಕ್ಕೆ ಒಬ್ಬ ಬಲಿಯಾಗಿದ್ದು, ಹತ್ತು ಮಂದಿ ಕಣ್ಮರೆಯಾಗಿರುವ ಆಘಾತಕಾರಿ ಬೆಳವಣಿಗೆ ವರದಿಯಾಗಿದೆ.
ಮನೆ ಮೇಲೆ ಗುಡ್ಡ ಕುಸಿದು ಕಿನ್ನರ ಗ್ರಾಮದ ಗುರವ ಎಂಬುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿತದಿಂದ ಮನೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹೊರಗೆ ತೆಗೆಯಲಾಯಿತಾದರೂ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ನಡುವೆ ಉತ್ತರಕನ್ನಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿರುವ ಸಮಸ್ಯೆಗಳ ಕುರಿತು ಇಂದು ಶಾಸಕ ಸತೀಶ್ ಸೈಲ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಭೂಕುಸಿತದಿಂದ 10 ಜನರು ಕೊಚ್ಚಿ ಹೋಗಿದ್ದಾರೆ. ಮನೆಗಳಿಗೆ ಮಣ್ಣು ನುಗ್ಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ, ಒಂದು ಗಂಟೆ ಒಳಗೆ ವರದಿ ತರಿಸಿಕೊಳ್ಳುತ್ತೇನೆ. ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿಯವರು ಸರಿಯಾದ ಕಾಲುವೆ ಮಾಡಿಲ್ಲ. ಕೇಂದ್ರದವರು ಸಹಕಾರ ಕೊಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.