ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಪೂರೈಕೆ ಮಾಡಲು ಬೆಂಗಳೂರಿಗೆ ಮಾದಕ ವಸ್ತುಗಳ ಕಳ್ಳ ಸಗಾಣೆಯಾಗುತ್ತಲೇ ಇದೆ. ರಸ್ತೆ ಮಾರ್ಗದಲ್ಲಿ ವಾಹನಗಳ ಮೂಲಕ ಸಾಗಾಣೆ ಮಾಡಿದರೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ನಿಷೇಧಿತ ಗಾಂಜಾವನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಎಂಟು ಮಂದಿಯನ್ನು ರೈಲ್ವೇ ಪೊಲೀಸರು ಬಂಧಿಸಿ ಸುಮಾರು 1 ಕೋಟಿ ರೂ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಶಾಂತಿ ಮತ್ತು ಹಟಿಯಾ ಎಕ್ಸ್ಪ್ರೆಸ್ ರೈಲಿನಲ್ಲಿ ಆಗಮಿಸುತ್ತಿದ್ದ ಎಂಟು ಆರೋಪಿಗಳ ಬಳಿ ಇದ್ದ ಟ್ರ್ಯಾಲಿ ಬ್ಯಾಗ್ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ಮತ್ತು ಪೊಲೀಸ್ ಶ್ವಾನ ದಳಕ್ಕೂ ವಾಸನೆ ಬಾರದ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗಿತ್ತು. ಆದರೂ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳೆಲ್ಲರೂ ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಸ್ತೆ ಮೂಲಕ ವಾಹನಗಳಲ್ಲಿ ಸರಬರಾಜು ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ಸಾಗಾಣೆ ಮಾಡುತ್ತಿದ್ದರು.
ಹೈಡ್ರೋಪೋನಿಕ್ ಗಾಂಜಾ ಜಪ್ತಿ:
ಒಂದು ವಾರದ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಅವರು ಬೆಂಗಳೂರಿಗೆ ಸಾಗಾಣೆ ಮಾಡುತಿದ್ದ ನಿಷೇಧಿತ ಉನ್ನತ ಗುಣಮಟ್ಟದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 80 ಲಕ್ಷ ರೂ ಎಂದು ಹೇಳಲಾಗಿದೆ. ಇಬ್ಬರು ಪ್ರಯಾಣಿಕರು ಪ್ರತ್ಯೇಕ ವಿಮಾನಗಳ ಮೂಲಕ ಒಂದೇ ದಿನ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಇವರ ಪ್ರಯಾಣದ ಇತಿಹಾಸ ನೋಡಿದಾಗ ಕೇವಲ 20 ದಿನಗಳ ಅಂತರದಲ್ಲಿ ಎರಡನೇ ಬಾರಿ ಬ್ಯಾಂಕಾಕ್ ಗೆ ತೆರಳಿದ್ದರು. ಇದರಿಂದ ಅನುಮಾನಗೊಂಡು ತಪಾಸಣೆ ನಡೆಸಿದಾಗ ಇವರ ಬಳಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಒಬ್ಬರು ಟ್ರಾಲಿ ಬ್ಯಾಗ್ ನಲ್ಲಿ ಮತ್ತು ಮತ್ತೊಬ್ಬರು ಚಿಪ್ಸ್ ಪಾಕೆಟ್ ಗಳಲ್ಲಿ ಗಾಂಜಾವನ್ನು ಅಡಗಿಸಿಟ್ಟಿದ್ದರು. ಇಬ್ಬರೂ ಪ್ರತ್ಯೇಕ ವಿಮಾನಗಳಲ್ಲಿ ಆಗಮಿಸಿದ್ದರೂ ಇವರು ಒಂದೇ ಡ್ರಗ್ ಮಾಫಿಯಾ ತಂಡಕ್ಕೆ ಸೇರಿರಬಹುದು ಎಂದು ಕಸ್ಟಮ್ಸ್ ಅಧಿಕಾರಿಗಳು ಅನುಮಾನಪಟ್ಟಿದ್ದಾರೆ.
ಹೈಡ್ರೋಪೋನಿಕ್ ಗಾಂಜಾವನ್ನು ಪ್ರಯೋಗಾಲಯಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ಸೇರ್ಪಡೆಮಾಡಿ ಅಭಿವೃದ್ಧಿ ಪಡಿಸಲಾಗುತ್ತದೆ. ಹೊಸ ವರ್ಷಾಚರಣೆ ಹಿನ್ನೆಯಲ್ಲಿ ಗಾಂಜಾವನ್ನು ಬೆಂಗಳೂರಿಗೆ ಕಳ್ಳಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ.