ಪ್ರಸಾದ್ ನಾಯ್ಕ್, ದೆಹಲಿ.
ವಿಪರೀತ ಬ್ಯುಸಿಯಾಗಿರುವುದೇ ಒಂದು ದೊಡ್ಡ ಸಾಧನೆ ಎಂಬ ಭ್ರಮೆಯೊಂದನ್ನು ಮಹಾನಗರಗಳು ನಮಗೆ ದಯಪಾಲಿಸಿವೆ. ಅದು ಹಿತವಾದ ಸುಳ್ಳೊಂದನ್ನು ಹೇಳಿ, ನಮ್ಮನ್ನು ನಾವೇ ವಂಚಿಸಿಕೊಳ್ಳುವ ಒಂದು ಬಗೆಯ ಪೊಳ್ಳು ಸಮಾಧಾನ. ಏನಾದರೊಂದು ಕೆಲಸಗಳಲ್ಲಿ ವ್ಯಸ್ತರಾಗಿರುವ ಮಾತ್ರಕ್ಕೆ ಅದು ನಿಜಕ್ಕೂ ಅರ್ಥವುಳ್ಳ ಕೆಲಸ ಎಂದೇನೂ ಆಗಬೇಕಿಲ್ಲವಲ್ಲ!- ಪ್ರಸಾದ್ ನಾಯ್ಕ್, ದೆಹಲಿ.
“ಜೀವ ಉಳಿಸುವುದೊಂದನ್ನು ಬಿಟ್ಟರೆ ಬೇರೆ ಯಾವ ಕೆಲಸಗಳಲ್ಲೂ ಅತೀ ಅರ್ಜೆಂಟು ಎಂಬುದಿರುವುದಿಲ್ಲ. ವಿಶೇಷವಾಗಿ ಕಾರ್ಪೊರೆಟ್ ಸಂಸ್ಥೆಗಳು ನೀಡುವ ನಕಲಿ ಡೆಡ್ಲೈನುಗಳಲ್ಲಿ” ಅಂತ ಇತ್ತೀಚೆಗೆ ಟ್ವೀಟೊಂದನ್ನು ಓದಿದೆ. ಮಹಾನಗರಗಳಲ್ಲಿ ವಾಸಿಸುವ ನನ್ನಂತಹ ಹಲವಾರು ಮಂದಿ ಒಂಥರಾ ಡೆಡ್ಲೈನುಗಳ ಜಾಲದಲ್ಲೇ ಬದುಕುತ್ತಿರುವವರು. ಹೀಗಾಗಿ ಇದನ್ನು ಓದಿದಾಕ್ಷಣ ಬಹಳ ರಿಲೇಟೆಬಲ್ ಅನ್ನಿಸಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಸಾವಿರಾರು ಮಂದಿ ಈ ಟ್ವೀಟನ್ನು ತಮ್ಮದೇ ಅನುಭವವೆಂಬಂತೆ ಹಂಚಿಕೊಂಡಿದ್ದರು ಕೂಡ.
ಒಂದೂವರೆ ದಶಕದ ಹಿಂದೆ ದಿಲ್ಲಿಯಂತಹ ಮಹಾನಗರಕ್ಕೆ ಹೊಸದಾಗಿ ಬಂದಿಳಿದಿದ್ದ ನಾನು ಡೆಡ್ಲೈನ್ ಭೂತಕ್ಕೆ ಹೊಸದಾಗಿ ಮುಖಾಮುಖಿಯಾದಾಗ ಗಾಬರಿಯಾಗಿದ್ದೆ. ಇದರ ಹಿಂದಿದ್ದ ಕಾರಣವು ಡೆಡ್ಲೈನುಗಳ ಜೊತೆಗೆ ಬರುತ್ತಿದ್ದ ದೊಡ್ಡ ಜವಾಬ್ದಾರಿಗಳಲ್ಲ. ಬದಲಾಗಿ ಡೆಡ್ಲೈನುಗಳ ಹೆಸರಿನಲ್ಲಿ ಬರುತ್ತಿದ್ದ ಅರ್ಥವಿಲ್ಲದ ತುರ್ತುಗಳು. ಹೀಗೆ ಡೆಡ್ಲೈನುಗಳೊಂದಿಗೆ ಶುರುವಾದ ಮೆಟ್ರೋ ಬದುಕು ಮುಂದೆಯೂ ನನ್ನನ್ನು ನೆರಳಿನಂತೆ ಹಿಂಬಾಲಿಸಿತು. ಒಂದು ಮುಗಿದರೆ ಇನ್ನೊಂದು ಬರುತ್ತಿತ್ತು. ಇನ್ನೊಂದು ಮುಗಿದರೆ ಮತ್ತೊಂದು ಅದರ ಬೆನ್ನ ಹಿಂದೆಯೇ ತಯಾರಾಗಿ ನಿಂತಿರುತ್ತಿತ್ತು. ಬಹಳಷ್ಟು ಡೆಡ್ಲೈನುಗಳನ್ನು ಅಗತ್ಯವಿಲ್ಲದಿದ್ದರೂ ಕೃತಕವಾಗಿ ಸೃಷ್ಟಿಸಲಾಗುತ್ತಿತ್ತು. ಅವುಗಳು ಹಿಂದಿನದಕ್ಕಿಂತ ಬಹಳ ಮುಖ್ಯವೆಂಬಂತೆ ಬೇರೆ ಬಿಂಬಿಸಲಾಗುತ್ತಿತ್ತು. ಕೊನೆಗೂ ಇವುಗಳೊಂದಿಗೆ ತಕ್ಕಮಟ್ಟಿನ ಸಂಧಾನವೊಂದು ಸಾಧ್ಯವಾಗಿದ್ದು ಡೆಡ್ಲೈನುಗಳು ಬದುಕಿನ ಭಾಗವೆಂದು ಒತ್ತಾಯಪೂರ್ವಕವಾಗಿ ಒಪ್ಪಿಕೊಳ್ಳಬೇಕಾಗಿ ಬಂದ ನಂತರವೇ.
ಇದಕ್ಕಿಂತಲೂ ವಿಚಿತ್ರವಾದ ಸಂಗತಿಯೆಂದರೆ ಮಹಾನಗರಗಳ ಬಹುತೇಕ ನಿವಾಸಿಗಳು ತಮ್ಮ ಬಿಡುವಿಲ್ಲದ ದಿನಚರಿಯನ್ನು ಒಂದು ಬಗೆಯ ಹೆಮ್ಮೆಯೆಂಬಂತೆ, ತಮ್ಮ ವ್ಯಕ್ತಿತ್ವಕ್ಕೆ ಅಂಟಿಸಿಕೊಳ್ಳುವ ಪರಿ. ಹಾಗೆ ನೋಡಿದರೆ ಸದಾ ಬ್ಯುಸಿಯಾಗಿರುವುದು ಅವರಿಗೆ ಸಂತಸವನ್ನೇನೂ ತಂದಿರುವುದಿಲ್ಲ. ಹಾಗಿದ್ದೂ ಅದನ್ನೊಂದು ಹೆಮ್ಮೆಯ ಕಿರೀಟದಂತೆ ಧರಿಸಿ, ಬೀಗುವ ಪರಿಯು ಮಹಾನಗರವೇ ಅವರಿಗೆ ನೀಡಿರುವ ವಿಕ್ಷಿಪ್ತ ಶಾಪವೇನೋ ಎಂಬಂತೆ ಅನಿಸಿದರೆ ಅತಿಶಯೋಕ್ತಿಯೇನಿಲ್ಲ. ಇದು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ಆಸುಪಾಸಿನಲ್ಲಿ ಕಟ್ಟಿರುವೆಗಳಂತೆ ಓಡಾಡಿಕೊಂಡಿರುವ ಜನಸಂದಣಿಗೆ ಎಷ್ಟು ಸತ್ಯವೋ, ದಿಲ್ಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ನಿನಲ್ಲಿ ಕಾಣುವ ಅಪಾರ ಜನಸಂದಣಿಗೂ ಅಷ್ಟೇ ಸತ್ಯ. ಹೀಗಾಗಿ ಇದು ಜನರ ಮನೋಭಾವ ಎನ್ನುವುದಕ್ಕಿಂತಲೂ, ಮಹಾನಗರಗಳಲ್ಲಿರುವ ಜೀವನಶೈಲಿಯ ಪ್ರಭಾವ ಎನ್ನುವುದೇ ಹೆಚ್ಚು ಸೂಕ್ತ.
ಇನ್ನು ಮಹಾನಗರಗಳಲ್ಲಿ ದೀರ್ಘಕಾಲದವರೆಗೆ ತಮ್ಮ ದಿನಗಳನ್ನು ಕಳೆದವರು ಇತರ ಪ್ರದೇಶಗಳಿಗೆ ಹೋದರೆ, ಬದುಕು ಹಟಾತ್ತನೆ ನಿಂತುಹೋದಂತೆ ಅನ್ನಿಸುವುದು ಸಹಜವೂ ಹೌದು. “ಕಲ್ಕತ್ತೆಯಲ್ಲಿ ಬದುಕು ಹೇಗಿರುತ್ತದೆ ಎಂದರೆ ಸ್ಲೋ ಮೋಷನ್ನಿನಲ್ಲಿ ನಡೆಯುವ ಸಿನೆಮಾದಂತೆ”, ಅಂತ ನನ್ನ ಹಿರಿಯ ಮಿತ್ರರೊಬ್ಬರು ಹೇಳುತ್ತಿದ್ದರು. ಅದು ಒಂದು ಮಟ್ಟಿಗೆ ಸತ್ಯ ಎಂಬುದನ್ನು ನನ್ನ ಪ್ರವಾಸವೊಂದರಲ್ಲಿ ಅರಿತುಕೊಂಡೆ. ಉದ್ಯೋಗನಿಮಿತ್ತ ನಾನು ಆಫ್ರಿಕಾದ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿದ್ದಾಗ ಅಲ್ಲಿಯ ಗ್ರಾಮಸ್ಥರು ಸಮಯದ ಬಗ್ಗೆ ಹೊಸದೊಂದು ಥಿಯರಿಯನ್ನೇ ಹೇಳುತ್ತಿದ್ದರು. “ಸಮಯಕ್ಕೆ ಬೆಲೆ ಕೊಟ್ಟು ನಾವಿರುವುದಲ್ಲ. ನಮ್ಮಿಂದಲೇ ಸಮಯಕ್ಕೆ ಬೆಲೆ ಬರುವುದು. ನಾವು ಯಾವ ಕಾರಣಕ್ಕೂ ಸಮಯದ ಕಟ್ಟುಪಾಡುಗಳಿಗೆ ಬಂದಿಯಾಗಲಾರೆವು”, ಎಂಬ ಹೊಸದೊಂದು ವಾದವು ನನಗಲ್ಲಿ ಸಿಕ್ಕಿತ್ತು. ಅದು ಸರಿಯೋ, ತಪ್ಪೋ ಎಂಬುದು ನಂತರದ ಮಾತು. ಆದರೆ ಇವುಗಳನ್ನು ಮೊದಲಬಾರಿ ಕಂಡಾಗ ಮಹಾನಗರಗಳಲ್ಲಿ ಯಂತ್ರಮಾನವರಂತೆ ದುಡಿಯುತ್ತಿದ್ದ ನಾವು ಮನಸಾರೆ ನಕ್ಕಿದ್ದಂತೂ ಸತ್ಯ.
ಹಾಗಂತ ಅಲ್ಲಿದ್ದ ಎಲ್ಲರೂ ಸೋಮಾರಿಗಳು ಅಂತೇನಿಲ್ಲ. ವಿಶೇಷವಾಗಿ ಹೆಂಗಸರಂತೂ ಇಂತಹ ಉಡಾಫೆಯ ಮಾತುಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ಯಾಕೆಂದರೆ ಆಫ್ರಿಕಾದ ಕುಗ್ರಾಮಗಳಲ್ಲಿ ಬದುಕು ನಡೆಯುವುದೇ ಮನೆಯಲ್ಲಿರುವ ಹೆಣ್ಣುಮಕ್ಕಳಿಂದ. ಆಕೆ ಬೆಳಿಗ್ಗೆ ಬೇಗನೆ ಎದ್ದು, ಮೈಲುಗಟ್ಟಲೆ ನಡೆದು, ಬಕೆಟ್ಟುಗಳಲ್ಲಿ ನೀರು ತುಂಬಿಸಿಕೊಂಡು ಮನೆಗೆ ಮರಳಬೇಕು. ಹೀಗೆ ಬಂದವಳು ಕುಟುಂಬದ ಸದಸ್ಯರಿಗಾಗಿ ತಿಂಡಿತೀರ್ಥಗಳನ್ನು ಸಿದ್ಧಪಡಿಸಬೇಕು. ನಂತರ ಹೊಟ್ಟೆಪಾಡಿಗಾಗಿ ಕೃಷಿ ಕೆಲಸಕ್ಕೋ, ವ್ಯಾಪಾರಕ್ಕೋ ಗಡಿಬಿಡಿಯಲ್ಲಿ ತೆರಳಬೇಕು. ಹೀಗೆ ಹೋದಾಕೆ ಮಳೆ-ಬಿಸಿಲುಗಳ ಪರಿವೆಯಿಲ್ಲದೆ ತಮ್ಮ ಬೆನ್ನುಗಳಲ್ಲಿ ಹೊತ್ತಿರುವ ಉತ್ಪನ್ನಗಳನ್ನು ಮಾರಬೇಕು. ಈ ಮಧ್ಯೆ ಆಗಾಗ ಬಂದು ಸತಾಯಿಸುವ ಮಿಲಿಟರಿ ಮಂದಿಯಿಂದಲೂ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು. ಅಂತೂ ಲೆಕ್ಕವಿಲ್ಲದಷ್ಟು ಕಸರತ್ತುಗಳನ್ನು ಮಾಡಿ ದಿನವನ್ನು ಹೀಗೆ ಮುಗಿಸುವಷ್ಟರಲ್ಲಿ ದೇಹ ಮತ್ತು ಮನಸ್ಸು ಹೈರಾಣಾಗಿರುತ್ತದೆ. ಕೊಂಚ ನಿರಾಳರಾಗೋಣ ಎನ್ನುವಷ್ಟರಲ್ಲಿ ಮತ್ತೊಂದು ಯಾವುದೋ ಜವಾಬ್ದಾರಿಯು ಬಂದು ಕದ ತಟ್ಟುತ್ತಿರುತ್ತದೆ. ಆಫ್ರಿಕನ್ ಕುಗ್ರಾಮಗಳ ಜೀವನಾಡಿಗಳಾದ ಈ ಮಹಿಳೆಯರಿಗೆ ನಮಗಿರುವಂತಹ ಡೆಡ್ಲೈನ್ ಇಲ್ಲದಿರಬಹುದು. ಆದರೆ ನಿತ್ಯದ ಬದುಕೇ ಅವರಿಗೊಂದು ರೋಚಕ ಟಾಸ್ಕ್.
ಆ ರೀತಿಯಲ್ಲಿ ನೋಡಿದರೆ ಇಲ್ಲಿಯ ಪುರುಷರು ಪರಮಸುಖಿಗಳು. ದೇಸಿ ಸಾರಾಯಿ ಕುಡಿಯುತ್ತಾ, ಅಲ್ಲಿಲ್ಲಿ ಜೂಜಾಡುತ್ತಾ, ಡಜನ್ ಗಟ್ಟಲೆ ಮದುವೆಯಾಗುತ್ತಾ, ಅಷ್ಟಿದ್ದೂ ಹೊಸ ಸಂಬಂಧಗಳಿಗೆ ಹಂಬಲಿಸುತ್ತಾ ಹಾಯಾಗಿರುವ ಬಹುತೇಕ ಗಂಡಸರು ನೀವು ಬಿಡುವಾಗಿದ್ದರೆ ಎಷ್ಟು ಬೇಕಾದರೂ ಅಜ್ಜಿಕತೆ ಹೇಳಬಲ್ಲರು. ಸಮಯದ ಬಗೆಗಿನ ಇಂತಹ ಉಡಾಫೆಯ, ಕೆಲಸಕ್ಕೆ ಬಾರದ ಥಿಯರಿಗಳನ್ನು ಇವರಷ್ಟೇ ಹುಟ್ಟುಹಾಕಬಲ್ಲರು ಎಂಬುದು ಇಲ್ಲಿಯ ಹೆಂಗಸರ ದೂರು. ಜಗತ್ತಿನಲ್ಲಿ ಹೀಗೂ ಇರುತ್ತದಲ್ಲ ಎಂಬುದು ಇವರನ್ನು ನೋಡಿ, ಅಚ್ಚರಿಪಡುವ ಬಿಳಿಯರಿಗೆ ಒಂದು ಮುಗಿಯದ ಸೋಜಿಗ. ಒಬ್ಬನಂತೂ ಒಮ್ಮೆ ಹೊಸದಾಗಿ ಭಾರತಕ್ಕೆ ಬಂದಾಗ ಇಲ್ಲಿರುವ ಜನಜಂಗುಳಿಯನ್ನು ನೋಡಿ ದಂಗಾಗಿದ್ದನಂತೆ. ಇಡೀ ಜಗತ್ತಿನ ಮಂದಿ ತಾನಿದ್ದಲ್ಲಿಗೆ ಬಂದು ಸೇರಿದಂತಿತ್ತಪ್ಪ ಎಂದು ಉದ್ಗರಿಸಿದ್ದ ಆತ.
ಅಸಲಿಗೆ ವಿಪರೀತ ಬ್ಯುಸಿಯಾಗಿರುವುದೇ ಒಂದು ದೊಡ್ಡ ಸಾಧನೆ ಎಂಬ ಭ್ರಮೆಯೊಂದನ್ನು ಮಹಾನಗರಗಳು ನಮಗೆ ದಯಪಾಲಿಸಿವೆ. ಅದು ಹಿತವಾದ ಸುಳ್ಳೊಂದನ್ನು ಹೇಳಿ, ನಮ್ಮನ್ನು ನಾವೇ ವಂಚಿಸಿಕೊಳ್ಳುವ ಒಂದು ಬಗೆಯ ಪೊಳ್ಳು ಸಮಾಧಾನ. ಏನಾದರೊಂದು ಕೆಲಸಗಳಲ್ಲಿ ವ್ಯಸ್ತರಾಗಿರುವ ಮಾತ್ರಕ್ಕೆ ಅದು ನಿಜಕ್ಕೂ ಅರ್ಥವುಳ್ಳ ಕೆಲಸ ಎಂದೇನೂ ಆಗಬೇಕಿಲ್ಲವಲ್ಲ! ದಿನನಿತ್ಯ ಮೂರರಿಂದ ನಾಲ್ಕು ತಾಸುಗಳ ಕಾಲ ಮಹಾನಗರಗಳ ಟ್ರಾಫಿಕ್ಕಿನಲ್ಲಿ ಸೆಣಸಾಡುತ್ತಾ, ಅಂದಾಜು ಹತ್ತು ತಾಸುಗಳ ಕಾಲ ಉದ್ಯೋಗ ಮಾಡುತ್ತಾ, ನಾಲ್ಕೈದು ತಾಸುಗಳನ್ನು ಟಿವಿ-ಒಟಿಟಿ-ಸೋಷಿಯಲ್ ಮೀಡಿಯಾಗಳ ಮಾಯಾಲೋಕದಲ್ಲಿ ಕಳೆದುಹೋಗುತ್ತಾ, ಅಳಿದುಳಿದ ಕೆಲ ತಾಸುಗಳಲ್ಲಿ ಅರ್ಧಬಂರ್ಧ ನಿದ್ದೆ ಮಾಡಿ, ನಂತರ ಟೆನ್ಷನ್ನೆಂದು ಗೊಣಗಾಡುತ್ತಾ, ತೂಕಡಿಸುತ್ತಾ… ಹೀಗೆ ನಮ್ಮ ನಿನ್ನೆ, ಇಂದು, ನಾಳೆಗಳು ಇದೇ ದಿನಚರಿಯಲ್ಲಿ ತಮ್ಮ ಪಾಡಿಗೆ ಸಾಗುತ್ತಲೇ ಇರುತ್ತವೆ. ದಿನ, ವಾರ, ತಿಂಗಳು, ವರ್ಷಗಳು ಕ್ಷಣಗಳ ವೇಗದಲ್ಲಿ ಉರುಳುತ್ತಲೇ ಇರುತ್ತವೆ. ಥೇಟು ಆಟೋಮೇಷನ್ನಿನಲ್ಲಿ ಹಾಕಿ ಮರೆತುಬಿಟ್ಟಿರುವ ಒಂದು ಸೊಫಿಸ್ಟಿಕೇಟೆಡ್ಲೀ ಪ್ರೊಗ್ರಾಮ್ಡ್ ಯಂತ್ರದಂತೆ!
ಈ ಕಾರಣಕ್ಕಾಗಿಯೇ ನಾನು ಮಹಾನಗರಗಳ ಬದುಕನ್ನು ರೀಲ್ ಗಳ ವೀಕ್ಷಣೆಗೆ ಹೋಲಿಸುವುದು. ಸೋಷಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಅಡ್ಡಾಡುವ ವ್ಯಕ್ತಿಯೊಬ್ಬ ಕಾರಣವಿಲ್ಲದೆ ರೀಲ್ ಒಂದನ್ನು ತೆರೆಯುತ್ತಾನೆ. ಕೇವಲ ಇಪ್ಪತ್ತು ಸೆಕೆಂಡುಗಳ ನಾಲ್ಕೈದು ರೀಲ್ ಗಳನ್ನು ನೋಡಿ ಒಂದಿಷ್ಟು ರಿಲ್ಯಾಕ್ಸ್ ಆಗೋಣ ಅಂತ. ಮೇಲ್ನೋಟಕ್ಕೆ ಅದೊಂದು ನಿರುಪದ್ರವಿ ಕಾಲಹರಣ. ಸುಲಭಕ್ಕೆ ಬಿಡಿಸಿಕೊಳ್ಳಲಾರದ ಚಟ. ಮೊದಲ ಕಂಟೆಂಟಿನ ಇಪ್ಪತ್ತು ಸೆಕೆಂಡು ಮುಗಿದ ತಕ್ಷಣ ಅದರ ಬೆನ್ನಿಗೇ ಇನ್ನೊಂದು ರೀಲ್ ಬರುತ್ತದೆ. ಅದರ ಹಿಂದೆಯೇ ಮತ್ತೊಂದು. ಹೀಗೆ ಮೆದುಳಿಗೆ ಚಿಕ್ಕದೊಂದು ಬ್ರೇಕ್ ನೀಡಲೆಂದು ರೀಲ್ ಗಳತ್ತ ತಿರುಗುವ ವ್ಯಕ್ತಿ ತನಗರಿವಿಲ್ಲದಂತೆ ತಾಸುಗಟ್ಟಲೆ ರೀಲ್ ಗಳ ಲೋಕದಲ್ಲೇ ಕಳೆದುಹೋಗಿರುತ್ತಾನೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಒಂದು-ಒಂದೂವರೆ ತಾಸುಗಳ ಕಾಲ ರೀಲ್ ಗಳನ್ನು ಸತತವಾಗಿ ನೋಡಿದ ನಂತರವೂ ತಾನೇನು ನೋಡಿದೆನೆಂಬುದನ್ನು ಹೇಳಲು ಆತನಿಗಾಗುವುದಿಲ್ಲ. ಕಂಟೆಂಟುಗಳ ರೂಪದಲ್ಲಿ ಅಷ್ಟು ಮಾಹಿತಿಗಳನ್ನು ತನ್ನೊಳಗೆ ಇಳಿಸಿಕೊಂಡರೂ ಕೊನೆಗೆ ಉಳಿಯುವುದು ದಟ್ಟ ಖಾಲಿತನ ಮಾತ್ರ!
ಇಂತಹ ಅಮೂಲ್ಯ ಸಮಯವನ್ನು ಕಟ್ಟಿಹಾಕುವುದು ಹೇಗೆಂದು ಹಲವು ಹೈಟೆಕ್ ಮೋಟಿವೇಷನಲ್ ಗುರುಗಳು ಭಾಷಣ ಬಿಗಿಯುತ್ತಲೇ ಇರುತ್ತಾರೆ. ಈ ಬಗ್ಗೆ ಮತ್ತಷ್ಟು ರೀಲುಗಳನ್ನು ಬಿಡುತ್ತಲೇ ಇರುತ್ತಾರೆ. ಆದರೆ ಮನೆ, ಉದ್ಯೋಗ, ಜವಾಬ್ದಾರಿಗಳ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಮಹಾನಗರಗಳ ಜನಸಾಮಾನ್ಯನಿಗೆ ಅದು ತಟ್ಟುವುದೇ ಇಲ್ಲ. ಏಕೆಂದರೆ “ಮನೆಯ ಒತ್ತಡವನ್ನು ಆಫೀಸಿಗೆ ಕೊಂಡೊಯ್ಯಬೇಡ, ಆಫೀಸಿನ ಒತ್ತಡವನ್ನು ಮನೆಗೆ ತರಬೇಡ” ಎಂದು ಹಿರಿಯರು ಹೇಳುತ್ತಿದ್ದ ಸಂದರ್ಭವು ಇಂದು ಸಂಪೂರ್ಣವಾಗಿ ಅಡಿಮೇಲಾಗಿದೆ. ಇಂದು ಆಫೀಸಿನ ಲ್ಯಾಪ್-ಟ್ಯಾಪ್ ಗಳು ನಮ್ಮ ಬೆಡ್ರೂಮುಗಳನ್ನು ಸೇರಿವೆ. ವಾಟ್ಸಾಪಿನ ಬ್ಲೂ-ಟಿಕ್ ಮತ್ತು ಆನ್ಲೈನ್ ಸ್ಟೇಟಸ್ಸುಗಳು ಮಾತಿನ ಹಂಗಿಲ್ಲದೆಯೇ ಎಲ್ಲರಿಗೆ ನಮ್ಮ ಚಟುವಟಿಕೆಗಳ ಸುಳಿವನ್ನು ನೀಡುತ್ತಿರುತ್ತವೆ. ವ್ಯಕ್ತಿತ್ವ ವಿಕಸನದ ಜೊತೆಜೊತೆಗೆ ಆನ್ಲೈನ್ ಜಗತ್ತಿನಲ್ಲೂ ಯದ್ವಾತದ್ವಾ ಸೆಲ್ಫ್ ಬ್ರಾಂಡಿಂಗ್ ಮಾಡಬೇಕಾದ ವಿಚಿತ್ರ ಒತ್ತಡದಲ್ಲಿದ್ದೇವೆ ನಾವು. ಏಕೆಂದರೆ ಈ ಯುಗದ ಡಿಜಿಟಲ್ ಮಾರುಕಟ್ಟೆಯಲ್ಲಿ ಎಲ್ಲವೂ ಬಿಕರಿಯಾಗಬಲ್ಲ ಉತ್ಪನ್ನಗಳೇ. ಖುದ್ದು ನಾವೂ ಕೂಡ!
ಉದ್ಯೋಗದ ಹೆಸರಿನಲ್ಲಿ ದಿನರಾತ್ರಿಗಳ ಪರಿವೆಯಿಲ್ಲದೆ ಬರುತ್ತಿದ್ದ ಮತ್ತು ಬರುತ್ತಲೇ ಇರುವ ಡೆಡ್ಲೈನುಗಳೀಗ ಮಹಾನಗರಗಳಲ್ಲಿ ಬಹುತೇಕರ ಬದುಕಿನ ಅವಿಭಾಜ್ಯ ಅಂಗಳಾಗಿಬಿಟ್ಟಿವೆ. “ಮೀ ಟೈಮ್ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ ಯಾವತ್ತೂ ಸ್ವತಃ ನೋಡಿಲ್ಲ”, ಎಂದು ನಾವೆಲ್ಲ ಪರಸ್ಪರರ ಕಾಲೆಳೆದುಕೊಳ್ಳುತ್ತೇವೆ. ಇವೆಲ್ಲ ಜಂಜಾಟಗಳ ನಡುವಿನಲ್ಲೂ ಓದು, ಕಲಿಕೆ, ಸಂಗೀತ, ಪ್ರವಾಸ, ಫಿಟ್ನೆಸ್, ಚಾರಣಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಾಗುವ ಬೆರಳೆಣಿಕೆಯ ಮಂದಿಯೂ ಇದ್ದಾರೆ. ಅವರು ಕ್ಲೀಷೆಯ Busy ಗಿಂತಲೂ ಹೆಚ್ಚಾಗಿ ನಿಜಾರ್ಥದ Productive ವರ್ಗಕ್ಕೆ ಸೇರುವವರು.
ನಾವು ನಿಜವಾಗಿ ಫಾಲೋ ಮಾಡಬೇಕಾಗಿರುವುದು ಈ ವರ್ಗದ ಮಂದಿಯನ್ನೇ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಕಾಸ್ಮೋಪಾಲಿಟನ್ ಕನಸೂ, ಕಾಂಚಾಣವೂ” https://kannadaplanet.com/cosmopolitan-dream-and-money/