ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನ ನಡೆಸಲು ಸಮಿತಿ ರಚನೆ ಮಾಡಿದ್ದೇವೆ. ಐಪಿಎಲ್ ಚೆನ್ನಾಗಿ ನಡೆಸಲು ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದರು.
ಐಪಿಎಲ್ 2026ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಒಪ್ಪಿಗೆ ಸಿಕ್ಕಿದೆ. ಆದರೆ, ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಲು ಗೃಹ ಇಲಾಖೆಗೆ ವಹಿಸಲಾಗಿದೆ. ಈ ಮೂಲಕ ಎಂಟು ತಿಂಗಳ ಬಳಿಕ ಚಿನ್ನಸ್ವಾಮಿ ಅಂಗಳದಲ್ಲೇ ಆರ್‌ಸಿಬಿ ಪಂದ್ಯಗಳು ಪುನಾರಂಭ ಆಗಲಿವೆ.
ಗೃಹ ಇಲಾಖೆ ಷರತ್ತುಗಳು ಹಾಗೂ ಸುರಕ್ಷತಾ ಕ್ರಮಗಳು, ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ವಿವರಗಳನ್ನು ಆದೇಶದ ಮೂಲಕ ಹೊರಡಿಸಲಿದ್ದಾರೆ. ಗೃಹ ಸಚಿವರು ಈ ಕುರಿತು ವಿವರಗಳನ್ನು ನೀಡಲಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.
ನ್ಯಾ. ಕುನ್ಹಾ ಸಮಿತಿ ವರದಿ, ಮಹೇಶ್ವರ್ ರಾವ್ ನೇತೃತ್ವದ ಸಮಿತಿ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಕಪ್ ಗೆದ್ದ ಬಳಿಕ ಆಯೋಜಿಸಲಾಗಿದ್ದ ವಿಜಯೋತ್ಸವದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಕ್ರೀಡಾಂಗಣದಲ್ಲಿ ಸುರಕ್ಷತೆ ಇಲ್ಲದ ಕಾರಣ ಪಂದ್ಯಾವಳಿ ನಿಷೇಧಿಸಲಾಗಿತ್ತು.

