ಬೆಳ್ತಂಗಡಿ : ಅಧ್ಯಯನ ಪ್ರವಾಸದ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಕರೆದುಕೊಂಡು ಹೋದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚರಗೊಂಡ ಶಿಕ್ಷಣ ಇಲಾಖೆ ಬಳಂಜ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಬಾರಿ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಫೆ.9ರಂದು ಸರಕು ಸಾಗಾಣಿಕೆ ವಾಹನಗಳಾದ, ಪಿಕಪ್ ವಾಹನ ( KA-21-A-8776 ) ಮತ್ತು ಟಿಪ್ಪರ್ ( KA-70-2596 ) ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು, ಅನಿಲ್ ಫಾರ್ಮ್ ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ವಿಡಿಯೋ ಎಲ್ಲೆಡೆ ವೈರಲ್ ಅಗಿತ್ತು.

