ಬೆಂಗಳೂರು: ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಭಾಗಿ ಆಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ.
ಜೋ ಸೈಮನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ, ನಟ, ಗೀತರಚನೆಕಾರನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
1977 ರಲ್ಲಿ ಸಿನಿಮಾ ನಿರ್ದೇಶನ ಆರಂಭಿಸಿದ ಜೋ ಸೈಮನ್, ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
‘ಒಂದು ಪ್ರೇಮದ ಕತೆ’, ಕನ್ನಡಕ್ಕೆ ಹಲವಾರು ಆಕ್ಷನ್ ಮತ್ತು ಪ್ರೇಮಕತಾ ಸಿನಿಮಾಗಳನ್ನು ಜೋ ಸೈಮನ್ ನೀಡಿದ್ದಾರೆ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರೊಟ್ಟಿಗೆ ಆಪ್ತ ಗೆಳೆತನ ಹೊಂದಿದ್ದರು.
ಮೂಲತಃ ಮಂಡ್ಯದವರಾಗಿದ್ದ ಜೋ ಸೈಮನ್, ಹಲವಾರು ಸಿನಿಮಾ ನಿರ್ದೇಶನ, ನಟನೆ ಮಾಡುವ ಜೊತೆಗೆ ಸಿನಿಮಾ ಸಂಬಂಧಿ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಲನಚಿತ್ರ ಸಂಘದಲ್ಲಿ ಕೆಲ ಪ್ರಮುಖ ಹುದ್ದೆಗಳನ್ನು ಸಹ ಅವರು ನಿಭಾಯಿಸಿದ್ದರು.


