ಸ್ತ್ರೀ-ಪುರುಷರಲ್ಲಿ ಗಂಡಾಳ್ವಿಕೆಯ ಚಿಂತನೆ ಬರುವುದಕ್ಕೆ ಕಾರಣ ಯಾರು ಎಂಬ ಪ್ರಶ್ನೆ ನನ್ನಂಥವರನ್ನು ಕಾಡುತ್ತಿದೆ.
ಮಹಿಳಾ ವಾದಗಳ ಬಗ್ಗೆ ದಿನ ಕಳೆದಂತೆ ಹೆಚ್ಚಚ್ಚು ಚರ್ಚೆಗಳು ಹುಟ್ಟಿಕೊಂಡಿವೆ. ಪುರುಷ ಪ್ರಭುತ್ವ ದೇಶದಲ್ಲಿ ಇದೊಂದು ಆರೋಗ್ಯಕರ ಬೆಳವಣಿಗೆ. ಸ್ತ್ರೀ ಸಮಾನತೆ ಅಂದ್ರೇನು ಎಂಬ ಪ್ರಶ್ನೆ ಯುವಜನರಲ್ಲಿ ಹುಟ್ಟುತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಒಂದಾಗಿದೆ.
ಶಾಲೆ ಕಾಲೇಜುಗಳಲ್ಲಾಗಲೀ, ಮನೆ, ಕುಟುಂಬದಲ್ಲಾಗಲೀ ಸ್ತ್ರೀ ಪುರುಷ ಸಮಾನತೆಯ ತತ್ವಗಳ ಬಗ್ಗೆ ಕಲಿಸುವುದು, ಕಲಿಯುವುದು ತೀರಾ ಕಡಿಮೆ. ಹೀಗಾಗಿ ಕೆಲ ಪ್ರಗತಿಪರ ಯುವಕರು ಸ್ತ್ರೀ ಸಮಾನತೆಯ ವಿಚಾರವನ್ನು ತಿಳಿಯುವ ಕುತೂಹಲ ಮತ್ತು ಬದುಕುವ ಪ್ರಯತ್ನಕ್ಕೆ ಮುನ್ನುಗ್ಗುವಾಗ ಅನೇಕ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಸ್ತ್ರೀ ಸಮಾನತೆ ಎಂದರೆ ಅಧಿಕಾರದ ವರ್ಗಾವಣೆ ಎಂಬ ದೊಡ್ಡ ತಪ್ಪು ಕಲ್ಪನೆಗಳು ಹೆಚ್ಚು ಪ್ರಸ್ತುತವಾಗುತ್ತಿದೆ. ಆದರೆ ಎಂದರೆ ಪುರುಷರಿಂದ ತಮ್ಮ ಪಾಲಿನ ಅಧಿಕಾರವನ್ನು ಕಿತ್ತುಕೊಂಡು ಅವರ ಸರಿಸಮಾನವಾಗಿ ಹೆಣ್ಣು ನಿಲ್ಲುವುದಷ್ಟೇ ಸ್ತ್ರೀ ಸಮಾನತೆ ಅಲ್ಲ . ಅದು ಸಮಾನತೆಯ ಒಂದು ಭಾಗವಷ್ಟೇ. ಬದಲಿಗೆ ಹೆಣ್ಣು ಮಗು ಹುಟ್ಟಿನಿಂದ ಸಹಜವಾಗಿ ತನಗೆ ಮನಬಂದಂತೆ ಬದುಕುವ, ಆಕೆಯ ಲಿಂಗದ ಆಧಾರದ ಮೇಲೆ ಯಾವುದೇ ಒತ್ತಡ ಮತ್ತು ಗೋಡೆಗಳಿಲ್ಲದ ವಾತಾವರಣವನ್ನು ನಿರ್ಮಿಸಬೇಕಾದ ಮುಕ್ತ ವ್ಯವಸ್ಥೆಯಾಗಿದೆ.
ಯಾವ ಆಟ ಆಡಬೇಕು, ಯಾವ ಬಟ್ಟೆ ತೊಡಬೇಕು, ಯಾವ ವಿಷಯ ಓದಬೇಕು, ಯಾವ ಕ್ಷೇತ್ರದಲ್ಲಿ ಮುಂದುವರೆಯಬೇಕು, ಯಾರನ್ನ ಮದುವೆ ಆಗಬೇಕಾ, ಬೇಡ್ವಾ?, ಮದುವೆಗೂ ಮುಂಚೆ ಮತ್ತು ನಂತರ ಯಾವ ಧರ್ಮ, ಜಾತಿಯ ರೀತಿ ರಿವಾಜುಗಳನ್ನು ತಾನು ಆಚರಿಸಬೇಕಾ? ಬೇಡ್ವಾ! ತನ್ನ ಹೆಸರ ಮುಂದೆ ಹೆಸರು ಏನಿರಬೇಕು? ಹೀಗೆ ಎಲ್ಲದರಲ್ಲೂ ಆಕೆಗೆ ತನ್ನ ಬದುಕಿನ ಎಲ್ಲ ಹಂತಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ ಮತ್ತು ವ್ಯವಸ್ಥೆಯನ್ನು ಹುಟ್ಟು ಹಾಕುವುದು ನೈಜ ಸ್ತ್ರೀ ಸಮಾನತೆ ಮತ್ತು ಸ್ತ್ರೀವಾದದ ಉದ್ದೇಶವಾಗಿದೆ. ಇಲ್ಲಿ ಸ್ತ್ರೀ ಮೇಲಲ್ಲ ಪುರುಷ ಕೆಳಗಲ್ಲ, ಸರಿ ಸಮಾನರು ಅದುವೇ ಸ್ತ್ರೀವಾದವಾಗಿದೆ.
ಇಲ್ಲಿ ಪುರುಷರು ಆಕೆಗೆ ಏನೂ ಗೊತ್ತಿಲ್ಲ ಎಂಬ ಭ್ರಮೆಯಿಂದ ಹೊರ ಬಂದು, ಆಕೆಯನ್ನು ಮುಂದೆ ಬಿಟ್ಟು ತನ್ನ ದಾರಿಯಲ್ಲಿ ಸಾಗಲು ಸ್ಫೂರ್ತಿ ನೀಡಬೇಕಿದೆ. ಆಕೆ ಕರೆದರೆ ಹೆಗಲಾಗಿ ನಿಲ್ಲಿ. ಇಲ್ಲದಿದ್ದಲ್ಲಿ ದೂರದಿಂದ ಹಾರೈಸಬೇಕಾಗಿದೆ. ಆಕೆಗೂ ಸಹ ನಮ್ಮಷ್ಟು ಮಾನಸಿಕ ಮತ್ತು ದೈಹಿಕ ಶಕ್ತಿ ಸಾಮರ್ಥ್ಯ ಇದೆ.ಅದನ್ನು ನಾವು ಒಪ್ಪಬೇಕಿದೆ.
ಎಚ್.ಎಸ್.ಶ್ರೀಮತಿ ಅನುವಾದಿಸಿದ “ಬಾರಯ್ಯ ಮಮ ಬಂಧು” ಪುಸ್ತಕ ಓದಿ. ಅದರಲ್ಲಿ ಮೂಲ ಲೇಖಕಿ ಬೆಲ್ ಹುಕ್ಸ್ ಅವರು ಬಹಳ ಅರ್ಥಪೂರ್ಣ ವಿಚಾರಗಳ ಬಗ್ಗೆ ಚರ್ಚೆಸಿದ್ದಾರೆ. ಪುರುಷತ್ವ ಮತ್ತು ಗಂಡಾಳ್ವಿಕೆಯ ಪದಗಳನ್ನು ಅವಶ್ಯ ಬಿದ್ದಲ್ಲೆಲ್ಲಅದನ್ನ ಪ್ರಸ್ತುತ ಪಡಿಸಬೇಕು. ಆಗಲೇ ಈ ಶೋಷಣೆ ಮಾಡುವವರಿಗೆ ಮತ್ತು ಶೋಷಣೆಗೆ ಒಳಗಾಗುವ ಸ್ತ್ರೀ ಪುರುಷರಿಗೆ ತಮ್ಮ ನಡವಳಿಕೆಗೆ ಕಾರಣವೇನು ಎಂಬುದು ಅರ್ಥವಾಗಲಿದೆ ಎನ್ನುತ್ತಾರೆ ಲೇಖಕಿ.
ಪುರುಷರು ಕೇವಲ ದುರಹಂಕಾರಿ ಅಥವಾ ಬರಿ ಶೋಷಣೆಯನ್ನು ಮಾಡುತ್ತಾ ಬರುತ್ತಾನೆ. ಅದನ್ನು ಬಿಟ್ಟು ಆತನಿಗೆ ಪ್ರೀತಿಸುವುದು ಮತ್ತು ಸೌಮ್ಯಾಯುತವಾಗಿ ಬದುಕುವುದು ಬರುವುದಿಲ್ಲ ಎಂಬ ಸಾಮಾನ್ಯೀಕರಣದಿಂದ ಕೆಲ ಸ್ತ್ರೀವಾದಿಗಳು ಕೂಡಾ ಹೊರಬರಬೇಕಿದೆ. ಪುರುಷರಿಗೆ ಅಳುವುದು ತಪ್ಪು ಎಂದು ಹೇಳಿ ಕೊಟ್ಟವರು ಯಾರು? ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ ಅವನನ್ನು ಗದರಿಸಿ ಹೆಂಗಸರ ತರ ಇರಬೇಡ ಅಂತ ಹೇಳಿದ್ದು ಯಾರು?, ಗಂಡಸ್ತನ ಎಂದರೆ ಕೋಪವನ್ನು ಮಾತ್ರ ತೋರಿಸಬೇಕು ಅಂತ ಕಲಿಸಿಕೊಟ್ಟವರು ಯಾರು?
ನಾನೊಬ್ಬ 28ವಯಸ್ಸಿನ ಯುವಕ. ನನಗೆ ಎಲ್ಲಾ ವಿಚಾರದಲ್ಲೂ ಕೋಪ ಬರ್ತಿತ್ತು. ನಾನು ಚಿಕ್ಕವನಿದ್ದಾಗ ಅದು ಮಾತ್ರ ನನ್ನ ವ್ಯಕ್ತಿತ್ವದ ಭಾಗವಾಗಿರಲಿಲ್ಲವಲ್ಲ. ನಾನು ಹುಡುಗಿಯರ ಜೊತೆ ಆಟ ಆಡಿದ್ದು ನೆನಪಿದೆ. ಆದರೆ ನಾವು ಚಡ್ಡಿಯಿಂದ ಪ್ಯಾಂಟ್ ಹಾಕುವ ಹೊತ್ತಿಗೆ ಹುಡುಗಿಯರ ಸವಾಸ ಮಾಡಿದರೆ ನೀನು ಹೆಣ್ಣಿಗ, ಹೆಣ್ಣಾಳಿ ಅಂತ ಹಿಯ್ಯಾಳಿಸಲು ಸ್ನೇಹಿತರಿಗೆ ಹೇಳಿ ಕೊಟ್ಟಿದ್ದು ಯಾರು? ನನ್ನಲ್ಲಿನ ಪಿತೃಪ್ರಧಾನ ಚಿಂತನೆಗೆ ನಾನೊಬ್ಬನೇ ಹೇಗೆ ಕಾರಣ? ನಾವು ಪ್ರೀತಿಯನ್ನ ಪದಗಳಲ್ಲಿ, ವರ್ತನೆಯಲ್ಲಿ ವ್ಯಕ್ತಪಡಿಸಲು ಆಗದಿದ್ದಾಗ ಒದ್ದಾಡಿದ್ದೇವೆ. ಏಷ್ಟೋ ಬಾರಿ ಪ್ರಾಣಕ್ಕಿಂತ ಪ್ರೀತಿ ಮಾಡುತ್ತಿದ್ದ ಪ್ರೀತಿಸುವವರನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಪುರುಷರಷ್ಟೇ ಕಾರಣವಾ! ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಎಂಬುದು ಇವಾಗ ಅರಿವಾಗುತ್ತಿದೆ. ಪುರುಷರಲ್ಲಿ ಪಿತೃಪ್ರಧಾನ ಮನಸ್ಥಿತಿ ಕೇವಲ ತಂದೆ, ಅಣ್ಣನಿಂದ ಮಾತ್ರ ಬರಲಿಲ್ಲ. ಅಷ್ಟೆ ಪ್ರಮಾಣದಲ್ಲಿ ತಾಯಿ,ಅಕ್ಕ, ಅಜ್ಜ ಅಜ್ಜಿಯಿಂದ ಹಿಡಿದು ಶಾಲೆಯ ಶಿಕ್ಷಕರಿಂದ, ಕಾಣದ ಆ ನಾಲ್ಕು ಜನರಿಂದ (ಒಟ್ಟಾರೆ ಸಮಾಜ) ಬಂದಿದೆ.
ಶಾಲೆಯಲ್ಲಿ ಕೂರಿಸುವಾಗ ಹೆಣ್ಣು ಮಕ್ಕಳಿಗೆ ಎಡಕ್ಕೆ ಗಂಡು ಮಕ್ಕಳಿಗೆ ಬಲಕ್ಕೆ, ಅವರಿಗೆ ರಿಂಗ್ ಎಸೆತ, ಹುಡುಗರಿಗೆ ಕಬ್ಬಡ್ಡಿ, ಅವರಿಗೆ ರಂಗೋಲಿ ನಮಗೆ ತೆಂಗಿನ ಮರ ಹತ್ತಿಸಿ ಎಳೆ ನೀರು ಕಿತ್ತಿಸಿದ್ದು ಯಾರು? ಅಲ್ಲಿಂದಲೇ ತಾನೇ ಹುಡುಗರಿಗೆ ಪುರುಷತ್ವದ ಅಹಮಿಕೆ ಬಂದಿದ್ದು!
ಇದಕ್ಕೆ ಪರಿಹಾರ ಸ್ತ್ರೀವಾದಿಗಳು ಪುರುಷರನ್ನು ಕೇವಲ ಟೀಕಿಸದೆ, ಅವರನ್ನು ಆದರಿಂದ ಹೊರ ತರುವುದರ ಬಗ್ಗೆಯೂ ಹೆಚ್ಚು ಚರ್ಚಿಸಬೇಕಿದೆ. ಬೆಲ್ ಹುಕ್ಸ್ ಹೇಳಿದಂತೆ ಪುರುಷರು ನಿಜವಾಗ್ಲೂ ಖುಷಿ ಆಗಿರಬೇಕು ಎಂದಾದರೆ ಪುರುಷತ್ವದ ಗೋಡೆಗಳನ್ನು ಒಡೆದು ಅವರನ್ನು ತಮ್ಮೊಂದಿಗೆ ಕರೆ ತರಬೇಕು. ಅದಕ್ಕೆ ಮಹಿಳೆಯರು ಕೂಡ ಸಂಘರ್ಷ ಮಾಡಬೇಕಿದೆ. ಅವರ ತಪ್ಪುಗಳನ್ನು ಪದೇ ಪದೇ ಟೀಕಿಸುವುದಕ್ಕಿಂತ, ಮುಂದೆ ತಪ್ಪಾಗದಂತೆ ಸಂವೇದನಾಶೀಲತೆಯನ್ನು ಅವರಲ್ಲಿ ಬಿತ್ತಬೇಕಿದೆ. ಮಹಿಳೆಯರ ಖುಷಿ ಕೇವಲ ಪುರುಷರಿಂದ ದೂರ ಉಳಿಯುವುದರಿಂದ ಬರುವುದಿಲ್ಲ. ಬದಲಾಗಿ ಬಯಸುವ ಪುರುಷರಿಗೆ ಜೊತೆಯಾಗಿ ನಿಂತು ಅವರ ವರ್ತನೆಯಿಂದ ಆಗುವ ನೋವನ್ನು ತಿಳಿಸಿ ಕೊಡಬೇಕಿದೆ. ಕಲ್ಲಾಗಿರುವ ಪುರುಷರ ಭಾವನೆಗಳನ್ನು ವ್ಯಕ್ತಪಡಿಸಲು ಅವರೊಂದಿಗೆ ಕೈ ಜೋಡಿಸಿದರೆ ಸ್ತ್ರೀವಾದ ತನ್ನ ಉದ್ದೇಶಿತ ಗುರಿಯತ್ತ ಸಾಗಬಹುದು.
ಪುರುಷರು ಕೂಡ ತಾವೂ ಮಹಿಳೆಯರಂತೆ ಮನುಷ್ಯರಷ್ಟೆ ಅಂತ ಅರಿವಾಗಿ, ಅರ್ಥವಾಗಿ ಪುರುಷತ್ವದಿಂದ ಹೊರ ಬರಲು ಸಂಘರ್ಷದ ದಾರಿಯಲ್ಲಿ ಸಾಗಬೇಕು. ಬಹುತೇಕರು ಆರಂಭ ಮಾಡುವುದಿಲ್ಲ. ಕೆಲವರು ವೇದಿಕೆಗಳ ಮೇಲೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾ ಮನೆಗೆ ಬಂದು ಚಪ್ಪಲಿ ಬಿಡುವ ಜಾಗದಲ್ಲಿ ಆ ವಿಚಾರ ಬಿಟ್ಟು ಹೋಗ್ತಾರೆ. ಬೆರಳೆಣಿಕಯಷ್ಟು ಪುರುಷರು ಆ ಸಂಘರ್ಷವನ್ನು ದಾಟಿ ಸ್ತ್ರೀ ಸಮಾನತೆಯ ವಿಚಾರಗಳನ್ನು, ಚಪ್ಪಲಿಯೊಂದಿಗೆ ಬಿಡದೆ, ಎದೆಯಲ್ಲಿಟ್ಟುಕೊಂಡು ಬೆಡ್ ರೂಮ್ ವರೆಗೆ ತಗೊಂಡು ಹೋಗಿ ಬದುಕುತ್ತಿದ್ದಾರೆ. (ಸ್ತ್ರೀಯರಿಗೂ ಅನ್ವಯ).
ನಾವು ಇದರಲ್ಲಿ ಎಲ್ಲಿದ್ದೇವೆಂದು ನಮಗೆ ನಾವೇ ಪ್ರಶ್ನೆ ಮಾಡಿಕೊಂಡು, ಒಬ್ಬರಿಗೊಬ್ಬರು ಈ ಗಂಡಾಳ್ವಿಕೆಯ ಜಾಲದಿಂದ ಹೊರಬರಲು ಸಹಾಯ ಮಾಡಿಕೊಂಡು ಸ್ತ್ರೀವಾದ ಸ್ಥಾಪನೆಗೆ ತನ್ಮೂಲಕ ಸಮತೆಯ ಸಮಾಜದ ಸಾಕಾರಕ್ಕೆ ಮುಂದಾಗಬೇಕು.
M.K ಸಾಹೇಬ್ ನಾಗೇಶನಹಳ್ಳಿ