ನಮಗಿಂದು ಬೇಕಾಗಿರುವ ಸ್ತ್ರೀವಾದ ಹೇಗಿರಬೇಕು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಯುವ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೂಲಭೂತ ಅಂಶಗಳೇನು? ಇತ್ಯಾದಿ ವಿಷಯಗಳನ್ನು ಚರ್ಚಿಸಿದ್ದಾರೆ ವಕೀಲರೂ, ಸಂಶೋಧಕರೂ ಆಗಿರುವ ಸುಚಿ ಅವರು.
“If any female feels she needs anything beyond herself to legitimate and validate her existence, she is already giving away her power to be self-defining, her agency”. Bell Hooks- Feminism is for Everybody: Passionate Politics, 2000.
ಖ್ಯಾತ ಸ್ತ್ರೀವಾದಿ ಬೆಲ್ ಹುಕ್ಸ್ ಹೇಳುವ ಮಾತು ಬಹಳ ಮೌಲ್ಯಭರಿತ, ಪ್ರಸ್ತುತ ಹಾಗೂ ಅಗಾಧವಾದ ಜೀವನಾನುಭವದಿಂದ ಹೇಳಿರುವ ಮಾತು. –“ಯಾವುದೇ ಹೆಣ್ಣು ತನ್ನ ‘ಅಸ್ತಿತ್ವವನ್ನು ನ್ಯಾಯಯುತಗೊಳಿಸಲು ಹಾಗೂ ಮೌಲೀಕರಿಸಲು ತನ್ನಿಂದ ಹೊರಗೆ ಇನ್ನೇನನ್ನೋ ಬಯಸುತ್ತಿದ್ದಾಳೆ ಎಂದಾದಲ್ಲಿ ಅವಳು ಈಗಾಗಲೇ ಸ್ವಮೌಲ್ಯಮಾಪನದ ಅಧಿಕಾರವನ್ನು ಹಾಗೂ ಸ್ವಾಯತ್ತತೆಯನ್ನು ಇನ್ನೊಬ್ಬರಿಗೆ ಧಾರೆಯೆರೆಯುತ್ತಿದ್ದಾಳೆ ಎಂದು ಹೇಳಬಹುದು”.
ಕೈಗಾರಿಕಾ ಕ್ರಾಂತಿಯಿಂದ ಪ್ರೇರೇಪಿತಗೊಂಡು ತದನಂತರದಲ್ಲಿ ರೂಪುಗೊಂಡ ಮಹಿಳಾ ಸಬಲೀಕರಣಕ್ಕೆ ಅದರದ್ದೇ ಆದ ಆಯಾಮಗಳಿವೆ. ಇಂದಿನ ಯುವಮಹಿಳೆಯರು ಈ ಆಯಾಮಗಳನ್ನು ಗುರುತಿಸಿ, ಪ್ರಸ್ತುತ ಸನ್ನಿವೇಶಕ್ಕೆ,ಪ್ರಸ್ತುತ ಪ್ರಪಂಚಕ್ಕೆ ಹೊಂದುವ ಸ್ತ್ರೀವಾದದತ್ತ ನಡೆಯಬೇಕಾಗಿರುವುದು ಇಂದಿನ ಅಗತ್ಯ.
ಇವತ್ತು ನಾವು ಆಚರಿಸುತ್ತಿರುವ ವಿಶ್ವ ಮಹಿಳಾ ದಿನಾಚರಣೆಗೆ ಬಹು ಪ್ರಾಮುಖ್ಯವಾದ ಇತಿಹಾಸವಿದೆ. ಪ್ರಪಂಚದಲ್ಲಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭ, ಎಲ್ಲೆಲ್ಲೂ ಆಹಾರದ ಕೊರತೆ, ಉದ್ಯೋಗದ ಕೊರತೆ, ದೇಶದ ಆರ್ಥಿಕ ಪರಿಸ್ಥಿತಿ ತತ್ತರಿಸುತ್ತಿದ್ದ ಸಂದರ್ಭ, ಜನರ ಜೀವನ ಅಸ್ತವ್ಯಸ್ತವಾಗಿದ್ದ ಕಾಲವದು. ರಷ್ಯಾದಲ್ಲಿ ಆವಾಗಲೇ ಈ (ಅ)ವ್ಯವಸ್ಥೆಯ ಅರಿವು ಜನರಲ್ಲಿ ಮೂಡಿತ್ತು. 1917ರ ಮಾರ್ಚ್ 8 ರಂದು, ರಷ್ಯಾದ ಪೆಟ್ರೋಗ್ರಾಡ್ ನಲ್ಲಿ, (ಇವತ್ತಿನ ಸೇಂಟ್ ಪೀಟರ್ಸ್ಬರ್ಗ್) ರಷ್ಯಾದ ಮಹಿಳಾ ಕಾರ್ಮಿಕರು (ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು) ಒಂದು ಮೆರವಣಿಗೆ ಪ್ರಾರಂಭಿಸಿದರು, ಅದು ಅಂತಿಮವಾಗಿ ಇಡೀ ನಗರ, ಇಡೀ ದೇಶವನ್ನು ಆವರಿಸಿತು. “ರೊಟ್ಟಿ ಮತ್ತು ಶಾಂತಿ”, ಅವರ ಬೇಡಿಕೆಯಾಗಿತ್ತು. ಅದು ಜನರ ಹಸಿವನ್ನು ನೀಗಿಸುವತ್ತ ಪ್ರಾಶಸ್ತ್ಯ ಕೊಟ್ಟಿತ್ತಲ್ಲದೆ ಪ್ರಪಂಚವನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಿದ್ದ- ಮೊದಲನೆಯ ಮಹಾಯುದ್ಧವನ್ನು ಕೊನೆಗೊಳಿಸುವಂತೆ ಒತ್ತಾಯಿಸಿತು. ಇದು ಮುಂದೆ ರಷ್ಯಾದಲ್ಲಿ ನಡೆದ ಫೆಬ್ರವರಿ ಕ್ರಾಂತಿಗೆ ಪ್ರೇರೇಪಣೆಯಾಯಿತು, ತದನಂತರ – ರಷ್ಯಾದಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯನ್ನು ರೂಪಿಸಿತು. ಮಾರ್ಚ್ 8ರ ಈ ಘಟನೆ ‘ವಿಶ್ವ ಮಹಿಳಾ ದಿನಾಚರಣೆಗೆ’ ಪ್ರೇರೇಪಣೆ ಆಯಿತು. ಅಂದಿನ ಮಹಿಳೆಯರ ಆದ್ಯತೆ – ರೊಟ್ಟಿ ಮತ್ತು ಶಾಂತಿಯಾಗಿತ್ತು, ಒಂದು ಘನತೆಯುತ ಜೀವನ ನಡೆಸಲು ಇವೆರಡೂ ಅತೀ ಅವಶ್ಯಕ.
ಬಹುಶಃ ಇಂದು ಕೂಡ ನಮ್ಮ ಆಶಯಕ್ಕೆ ಇದುವೇ ಬುನಾದಿ- ಒಂದು ಮೌಲ್ಯಯುತ, ಶಾಂತಿಯುತ ಜೀವನ, ಆತ್ಮಗೌರವ ಬದುಕು.
ಅಂತರಾಷ್ಟ್ರೀಯ ಮಹಿಳಾ ದಿನವು – ನಮ್ಮ ದೇಶ ಹಾಗೂ ಸಮಾಜದಲ್ಲಿ ಮಹಿಳಾ ಹಕ್ಕುಗಳಲ್ಲಿ ಆಗಿರುವ ಪ್ರಗತಿಯನ್ನು ನೆನಪಿಸುತ್ತಾ, ನಾವು ಪರಿಗಣಿಸಬೇಕಾದ ಹೊಸ ಸವಾಲುಗಳನ್ನು ಪ್ರತಿಬಿಂಬಿಸುವ ಒಂದು ಅವಕಾಶ. ಇವತ್ತಿನ ನಮ್ಮ ಭಾರತೀಯ ಸಮಾಜ ಹೆಚ್ಚಾಗಿ ಗಂಡಾಳ್ವಿಕೆಯ ನಿಯಮಗಳಿಗೆ ಅನುಸಾರವಾಗಿಯೇ ನಡೆಯುತ್ತದೆ ಎಂದರೆ ತಪ್ಪಾಗಲಾರದು. ಕಾನೂನು ಇದಕ್ಕೆ ವ್ಯತಿರಿಕ್ತವಾಗಿದ್ದರೂ, ಕುಟುಂಬ ಹಾಗೂ ಸಮಾಜದ ಕಟ್ಟುಕಟ್ಟಳೆಗಳನ್ನು ಮೀರಿ ಹೋಗುವುದು ಮಹಿಳೆಯರಿಗೆ ಇವತ್ತಿಗೂ ಸುಲಭದ ಕೆಲಸವಲ್ಲ. ಇಂದಿನ ಯುವತಿಯರು ಈ ಸಂಕೋಲೆಗಳಿಂದ ಹೊರಬರಲು ಅವರನ್ನು ಸಶಕ್ತಗೊಳಿಸುವ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ. ಸಾಮಾಜಿಕ ನಿರೀಕ್ಷೆಗಳಿಗೆ ಸವಾಲು ಹಾಕುವ ಮೂಲಕ, ಶಿಕ್ಷಣದ ಮೂಲಕ ಮತ್ತು ಇಂತಹ ಬದಲಾವಣೆಯನ್ನು ಪ್ರತಿಪಾದಿಸುವ ಮೂಲಕ, ಯುವತಿಯರು ಹೆಚ್ಚು ಸಮಾನತೆಯ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು.
ಸಾಮಾಜಿಕ ಕಟ್ಟುಕಟ್ಟಳೆಗಳನ್ನು ಪ್ರಶ್ನಿಸುವವರನ್ನು ಬೆಂಬಲಿಸುವುದೂ ಸಹ ಯುವ ಮಹಿಳೆಯರು ಇಂದು ಮಾಡಬೇಕಾದ ಮುಖ್ಯ ಕೆಲಸ. ಇಲ್ಲವಾದರೆ, ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹಾಕಿಕೊಂಡಂತಾಗುತ್ತದೆ. ಅದು ನಮ್ಮ ನಟನಟಿಯರಿರಬಹುದು, ಯೂಟ್ಯೂಬ್ ಬ್ಲಾಗರುಗಳಿರಬಹುದು, ಯಾರಿಂದಲೇ ಇರಲಿ, ನಮಗೆ ‘ಮಹಿಳಾ ಪ್ರಾತಿನಿಧ್ಯತೆ, ಮಹಿಳೆಯರ ಸಮಾನ ಅವಕಾಶಕ್ಕಾಗಿ ಧ್ವನಿ ಬಂದರೆ’ ಅದನ್ನು ಪ್ರೋತ್ಸಾಹಿಸಿ, ಉತ್ತೇಜಿಸುವುದು ನಮ್ಮ ಕರ್ತವ್ಯ.
ನಮಗಿಂದು ಬೇಕಾಗಿರುವ ಸ್ತ್ರೀವಾದ ಹೇಗಿರಬೇಕು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಯುವ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೂಲಭೂತ ಅಂಶಗಳೇನು?
ಲಿಂಗತ್ವ ಪಾತ್ರಗಳು ಮತ್ತು ನಿರೀಕ್ಷೆಗಳನ್ನು ಮರು ವ್ಯಾಖ್ಯಾನಿಸುವುದು: ಇತ್ತೀಚಿನ ಹೈಕೋರ್ಟ್ ಆದೇಶದ ಪ್ರಕಾರ ಗಂಡನಾದವನು ತನ್ನ ಹೆಂಡತಿ ಮನೆಗೆಲಸ ಮಾಡಬೇಕೆಂದು ನಿರೀಕ್ಷಿಸುವುದು ಹಿಂಸೆ ಎನಿಸಿಕೊಳ್ಳುವುದಿಲ್ಲ. ಈ 21ನೆ ಶತಮಾನದಲ್ಲಿಯೂ ಮನೆಗೆಲಸ ಬರಿಯ ಹೆಂಡತಿಯ ಜವಾಬ್ದಾರಿಯೇ? ಗಂಡು-ಹೆಣ್ಣು ಇಬ್ಬರೂ ಸಮಾನ ಶಿಕ್ಷಣ ಪಡೆದು ಸಮಾನವಾಗಿ ದುಡಿಯುತ್ತಿರುವಾಗ ಹೆಂಡತಿ ಮಾತ್ರ ಮನೆಗೆಲಸ ಮಾಡಬೇಕೆಂದು ನಿರೀಕ್ಷಿಸುವುದು ಎಷ್ಟು ಸರಿ? ನಾವಿಂದು ಲಿಂಗತ್ವ ಪಾತ್ರವನ್ನು (ಜೆಂಡರ್ ರೋಲ್) ಮರುವ್ಯಾಖ್ಯಾನಿಸಿಕೊಳ್ಳಬೇಕಿದೆ. ಎಲ್ಲಿ ಇಬ್ಬರೂ ಸಮಾನ ಶಿಕ್ಷಣ ಪಡೆದು ಸಮಾನವಾಗಿ ದುಡಿಯುವರೋ ಅಲ್ಲಿ ಮನೆಗೆಲಸ, ಮಕ್ಕಳ ಆರೈಕೆಯಲ್ಲಿ ಇಬ್ಬರದ್ದೂ ಸಮಾನ ಜವಾಬ್ದಾರಿ ಆಗಲೇಬೇಕು. ಗಂಡಾಳ್ವಿಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು, ಇಂದಿನ ಯುವತಿಯರು ಸಾಂಪ್ರದಾಯಿಕ ಲಿಂಗತ್ವ ಪಾತ್ರಗಳನ್ನು ಹಾಗೂ ನಿರೀಕ್ಷೆಗಳನ್ನು ಪ್ರಶ್ನಿಸಿ ಮರು ವ್ಯಾಖ್ಯಾನಿಸಬೇಕು. ಹೆಣ್ಣಿನ ಮೌಲ್ಯವು ಆಕೆಯ ವೈವಾಹಿಕ ಸ್ಥಿತಿ ಅಥವಾ ಸಾಮಾಜಿಕ ಮಾನದಂಡಗಳಿಗೆ ಅನುಗುಣವಾಗಿರುವ ಸಾಮರ್ಥ್ಯದಿಂದ ಮಾತ್ರ ವ್ಯಾಖ್ಯಾನಿಸಲ್ಪಟ್ಟಿಲ್ಲ ಎಂದು ಮೊದಲು ಅರಿತುಕೊಳ್ಳಬೇಕು. ಇವತ್ತು ಮಹಿಳೆಯರೂ ಕೂಡ ತಮ್ಮ ಆಶಯ, ಅಭಿಲಾಷೆ, ಕೆರಿಯರ್ ಬಗ್ಗೆ ಫೋಕಸ್ ಮಾಡುವುದು ತಪ್ಪಲ್ಲ. ಆಳವಾಗಿ ಬೇರೂರಿರುವ ಗಂಡಾಳ್ವಿಕೆಯ ರೂಢಿಗಳನ್ನು ಕಿತ್ತುಹಾಕುವಲ್ಲಿ ಲಿಂಗ ಸಮಾನತೆ, ಒಪ್ಪಿಗೆ ಮತ್ತು ವೈಯಕ್ತಿಕ ಏಜೆನ್ಸಿಯ ಬಗ್ಗೆ ಮುಕ್ತ ಮಾತುಕತೆಗಳನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ.
ಗಂಡಾಳ್ವಿಕೆ ಹೇರಿದ ಅಡೆತಡೆಗಳನ್ನು ನಿವಾರಿಸಲು ಯುವತಿಯರನ್ನು ಸಬಲೀಕರಣಗೊಳಿಸುವಲ್ಲಿ ಶಿಕ್ಷಣವು ಪ್ರಬಲ ಸಾಧನ. ಇಂದಿನ ಯುವಮಹಿಳೆಯರು ಉನ್ನತ ಶಿಕ್ಷಣವನ್ನು ಪಡೆಯುವುದು, ಮತ್ತು ತಮ್ಮ ಜ್ಞಾನವನ್ನು ವಿಸ್ತರಿಸುವುದು ಅತೀ ಅಗತ್ಯ. ಕೆರಿಯರ್ ರಿಲೇಟೆಡ್ ಸರ್ಟಿಫಿಕೇಟ್ಸ್, ಕೆರಿಯರ್ ಓರಿಯೆಂಟೆಡ್ ಟ್ರೈನಿಂಗ್ಸ್, ಆಫೀಸ್ ಆನ್-ಸೈಟ್, ವರ್ಕ್ ರಿಲೇಟೆಡ್ ಕಾನ್ಫರೆನ್ಸ್ ಇಂತಹ ಅನುಭವಗಳು ಮಹಿಳೆಯರಿಗೆ ಬಹಳ ಮುಖ್ಯ. ಇದರ ಜೊತೆಗೆ ವಿಮರ್ಶಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದರಿಂದ ದಬ್ಬಾಳಿಕೆಯನ್ನು ಪ್ರಶ್ನಿಸುವ ವಿಶ್ವಾಸ ಬರುತ್ತದೆ. ಶಿಕ್ಷಣವು ಆರ್ಥಿಕ ಸ್ವಾತಂತ್ರ್ಯಕ್ಕೆ ಬುನಾದಿ. ಯುವತಿಯರು ತಮ್ಮ ಸ್ವಾಯತ್ತತೆಯನ್ನು ಪಡೆಯಲು ಮತ್ತು ಮಾಹಿತಿಬಲದ ತೀರ್ಮಾನ (ಇನ್ಫಾರ್ಮ್ಡ್ ಡಿಸಿಶನ್) ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಶಿಕ್ಷಣಕ್ಕೆ ಸಮಾನ ಪ್ರವೇಶ, ಸಮಾನ ಅವಕಾಶದ ಪ್ರತಿಪಾದನೆ ಮಾಡಲೇಬೇಕು.
ಇಂದು ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸುವುದೂ ಅಗತ್ಯ, ದೈನಂದಿನ ವ್ಯಾಯಾಮ, ರೆಗ್ಯುಲರ್ ಹೆಲ್ತ್ ಚೆಕ್-ಅಪ್, ಹೆಲ್ತ್ ಇನ್ಶೂರೆನ್ಸ್ (ತಮಗೆ, ತಮ್ಮ ನ್ನು ಅವಲಂಬಿಸಿದವರಿಗೆ)ಬಗ್ಗೆಯೂ ಗಮನ ಕೊಡಲೇಬೇಕು. ಇದರ ಜೊತೆಜೊತೆಗೆ ಒಂದಿಷ್ಟು ಕಾನೂನು ಅರಿವು, ಪ್ರಪಂಚದ ಆಗು-ಹೋಗುಗಳ ಅರಿವೂ ಕೂಡ ಇದ್ದರೆ, ಯಾವುದೇ ರೀತಿಯ ಸಂಕಷ್ಟಗಳು ಬಂದಾಗ ಸರಿಯಾಗಿ ಅದನ್ನು ಎದುರಿಸಿ ನಿಲ್ಲಬಹುದು.
ಮಹಿಳೆಯರಿಗೆ ತಮ್ಮ ಆಸ್ತಿಹಕ್ಕು, ತಮ್ಮ ಕಾನೂನು ಹಕ್ಕು, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಸಂಬಂಧೀ ಮಾಹಿತಿಗಳ ಅರಿವಿದ್ದರೆ ಇಂತಹದ್ದೇನೇ ನಡೆದರೂ ಅದನ್ನು ಹೇಗೆ ನಿಭಾಯಿಸಬಹುದು ಎಂದು ತಿಳಿದಿರುತ್ತದೆ.
ಇಂದು ಬರಿಯ ಕೆರಿಯರ್ ಅಲ್ಲದೆ, ತಮ್ಮದೇ ಎಕ್ಸ್ಟ್ರಾ ಕರಿಕ್ಯುಲರ್ ಆಕ್ಟಿವಿಟೀಸ್ ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದೂ ಅತೀ ಅವಶ್ಯ. ಇದರಿಂದ ತಮಗೆ ಬೇಕಾದ, ತಮ್ಮ ಕೆರಿಯರ್ ವಿಸ್ತರಣೆಗೆ ಬೇಕಾದ ನೆಟ್ವರ್ಕ್ ಕೂಡಾ ಬೆಳೆಸಿಕೊಳ್ಳಬಹುದು. ಬರಿಯ ಮನೆ, ಆಫೀಸು ಅಲ್ಲದೆ ತಮ್ಮದೇ ಆದ ಸಪೋರ್ಟ್ ಸಿಸ್ಟಮ್ ಬೆಳೆಸಿಕೊಳ್ಳುವುದು ಕೂಡ ಅವಶ್ಯ.
ಗಂಡಾಳ್ವಿಕೆಯ ಸಮಾಜದಲ್ಲಿ ಮಹಿಳೆಯರಲ್ಲಿ ಒಗ್ಗಟ್ಟು ಬಹುಮುಖ್ಯ. ಯುವತಿಯರು ತಮ್ಮ ಸಪೋರ್ಟ್ ಸಿಸ್ಟಮ್ ಅನ್ನು ಗಟ್ಟಿಗೊಳಿಸಬೇಕು, ಮತ್ತು ಅದನ್ನು ಪೋಷಿಸಬೇಕು. ಹಾಗೆಯೇ ಅದು ಸಾಮಾಜಿಕ ಜಾಲತಾಣವಿರಲಿ, ಕ್ಲಬ್-ಹೌಸ್, ತಮ್ಮ ನೆಚ್ಚಿನ ರನ್ನಿಂಗ್ ಕ್ಲಬ್, ಟ್ರಾವೆಲಿಂಗ್ ಗ್ರೂಪ್, ಟ್ರೆಕಿಂಗ್ ಗ್ರೂಪ್, ವರ್ಕ್-ಔಟ್ ಗ್ರೂಪ್ , ಗಾಲ್ಫ್ ಕ್ಲಬ್, ಡಾನ್ಸ್ ಅಕಾಡೆಮಿ, ಬೈಕಿಂಗ್ ಗ್ರೂಪ್, ಸಂಗೀತ ಶಾಲೆ ಯಾವುದೇ ಇರಬಹುದು – ತಮ್ಮದೇ ಆದ ಸಮೂಹಗಳನ್ನು ಕಟ್ಟಿಕೊಳ್ಳಬೇಕು. ಇವುಗಳ ಮೂಲಕ ಸಮಾನ ಮನಸ್ಕರೊಂದಿಗೆ ತಮ್ಮ ಅನುಭವ- ಆಲೋಚನೆಗಳನ್ನು ಹಂಚಿಕೊಳ್ಳಬಹುದಲ್ಲದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬಹುದು. ತಮ್ಮದೇ ಆದ ಬೆಂಬಲಿತ ಸಮುದಾಯವನ್ನು ನಿರ್ಮಿಸುವ ಮೂಲಕ, ಅವರು ಗಂಡಾಳ್ವಿಕೆಯ ರೂಢಿಗಳನ್ನು ಒಟ್ಟಾಗಿ ಪ್ರಶ್ನಿಸಿ ಎದುರಿಸಲು ಸಾಧ್ಯ. ಇದಕ್ಕಾಗಿ ಪರಸ್ಪರ ಪ್ರೇರಣೆ ಪಡೆದುಕೊಳ್ಳಲು ಸಾಧ್ಯ. ಮಾರ್ಗದರ್ಶನ ಕಾರ್ಯಕ್ರಮಗಳು, ಮಹಿಳಾ ಸಂಸ್ಥೆಗಳು ಮತ್ತು ಆನ್ಲೈನ್ ಸಮುದಾಯಗಳು ಅಂತಹ ನೆಟ್ವರ್ಕ್ಗಳನ್ನು ಉತ್ತೇಜಿಸಲು ಮತ್ತು ಮಹಿಳೆಯರ ಧ್ವನಿಯನ್ನು ವರ್ಧಿಸಲು ಬೇಕಾದಷ್ಟು ವೇದಿಕೆಗಳನ್ನು ಒದಗಿಸುತ್ತವೆ.
ಗಂಡಾಳ್ವಿಕೆಯ ಸಂಕೋಲೆಗಳಿಂದ ಮುಕ್ತವಾಗಲು, ನಮ್ಮ ಯುವ ಮಹಿಳೆಯರು ಬದಲಾವಣೆಯ ರೂವಾರಿಗಳಾಗುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಸಮಾಜದ ವಿವಿಧ ಹಂತಗಳಲ್ಲಿ (ಆಫೀಸು, ಸರ್ಕಾರ, ಸೋಶಿಯಲ್ ಮೀಡಿಯಾ) ಲಿಂಗ ಸಮಾನತೆಯ ಬಗ್ಗೆ ಚರ್ಚೆಗಳಲ್ಲಿ ತೊಡಗಬೇಕು. ವ್ಯವಸ್ಥಿತ ಬದಲಾವಣೆಯನ್ನು ಉಂಟುಮಾಡಲು ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಹಕರಿಸುವುದು ಮತ್ತು ಇಡೀ ಮಹಿಳಾ ಸಮಾಜ, ತನ್ಮೂಲಕ ಸಮಾಜ ಅಭಿವೃದ್ಧಿ ಹೊಂದುವ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ.
ಹಾಗಾಗಿ ಇಂದಿನ ದಿನ ನಮ್ಮ ಪೂರ್ವಿಕರು ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಸಮಾನ ಅವಕಾಶ ಒದಗಿಸಲು ಮಾಡಿದ ಹೋರಾಟ, ಬಲಿದಾನ, ತ್ಯಾಗವನ್ನು ನೆನಪಿಸಿಕೊಳ್ಳುತ್ತಾ, ನಮ್ಮಿಂದ ಆಗಬೇಕಾದ ಕೆಲಸಗಳತ್ತ ಕರ್ತವ್ಯಬದ್ಧರಾಗೋಣ. ಸಮತೆಯ ಸಮಾಜದ ಸಾಕಾರ ಒಂದೆರಡು ದಿನ, ಒಂದೆರಡು ವರ್ಷದ ಅಥವಾ ಒಂದೆರಡು ಜನರ ಜವಾಬ್ದಾರಿಯಲ್ಲ, ಅದು ನಮ್ಮ ನಿಮ್ಮೆಲ್ಲರ, ನಿರಂತರ ಜವಾಬ್ದಾರಿ