ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಕೊರತೆ ಹಾಗೂ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಐಐಎಸ್ ಸಿ ವಿಜ್ಞಾನಿಗಳ ಸಹಯೋಗದಲ್ಲಿ ವಿಸ್ತೃತ ಅಧ್ಯಯನ ನಡೆಸಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಳೆದ ಬಾರಿ ಬೇಸಿಗೆಯಲ್ಲಿ ಎದುರಾದ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರ ಅಡಿಯಲ್ಲಿ, ಬೆಂಗಳೂರು ನಗರಕ್ಕೆ ಸುಸ್ಥಿರವಾದ ಹಾಗೂ ವೈಜ್ಞಾನಿಕವಾದ ಕ್ರಿಯಾಯೋಜನೆಯನ್ನು ತಯಾರಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸ್ಸಿ), ರಾಜ್ಯ ಹಾಗೂ ಕೇಂದ್ರ ಅಂತರ್ಜಲ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು . ಈ ಟಾಸ್ಕ್ ಫೋರ್ಸ್ ಕಳೆದ ಆರು ತಿಂಗಳಿನಲ್ಲಿ ಬೆಂಗಳೂರು ನಗರದ ನೀರು ಸರಬರಾಜು, ಅಂತರ್ಜಲ ಮಟ್ಟದ ದತ್ತಾಂಶಗಳನ್ನು ವಿವರವಾಗಿ ಅಧ್ಯಯನ ನಡೆಸಿದೆ.
ಈ ವರದಿಯಲ್ಲಿ ಮುಂಬರುವ ಏಪ್ರಿಲ್ 2025 ರಲ್ಲಿ ಹೆಚ್ಚು ನೀರಿನ ಕೊರತೆಯನ್ನು ಎದುರಿಸಬಹುದಾದ ವಾರ್ಡ್‌ಗಳ ಪಟ್ಟಿ, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸಲಹೆಗಳು ಹಾಗೂ ಅಂತರ್ಜಲದ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುವಂತಹ ಡ್ಯಾಶ್‌ಬೋರ್ಡ್ ನೀಡುವ ಗುರಿಯನ್ನು ನೀಡಲಾಗಿತ್ತು. ಈ ಅಧ್ಯಯನದ ಎರಡನೇ ಮಧ್ಯಂತರ ವರದಿಯನ್ನು ತಂತ್ರಜ್ಞರ ತಂಡ ಸಲ್ಲಿಸಿದೆ. 110 ಹಳ್ಳಿಗಳನ್ನು ಒಳಗೊಂಡಂತೆ ನಗರದ 80 ವಾರ್ಡ್‌ಗಳನ್ನು ಹೆಚ್ಚು ಅಂತರ್ಜಲ ಅವಲಂಬಿತ ಹಾಗೂ ಅತಿ ಹೆಚ್ಚು ನೀರಿನ ಕೊರತೆಯನ್ನು ಎದುರಿಸಬಹುದಾದ ವಾರ್ಡ್‌ಗಳಾಗಿ ಗುರುತಿಸಲಾಗಿದೆ. (ವಾರ್ಡ್‌ಗಳ ಪಟ್ಟಿಯನ್ನು ನೀಡಿದೆ). ನಗರದ ಕೇಂದ್ರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಮಾರು 5 ಮೀಟರ್‌ಗಳಷ್ಟು, ಸಿಎಂಸಿ ಪ್ರದೇಶದಲ್ಲಿ 10-15 ಮೀಟರ್‌ಗಳಷ್ಟು ಹಾಗೂ 110 ಹಳ್ಳಿಗಳಲ್ಲಿ 20-25 ಮೀಟರ್‌ಗಳಷ್ಟು ಕೆಳಕ್ಕೆ ಇಳಿಯುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿದೆ.
ನಗರದಲ್ಲಿ ಅಂತರ್ಜಲದ ಮೇಲೆ ದಿನೇ ದಿನೇ ಅವಲಂಬನೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸುಮಾರು 800 ಎಂಎಲ್‌ಡಿಯಷ್ಟು ನೀರನ್ನು ಕೊಳವೆ ಬಾವಿಗಳಿಂದ ತಗೆಯಲಾಗುತ್ತಿದೆ. ನಗರದ 110 ಹಳ್ಳಿಗಳು, ಸೌತ್ ಈಸ್ಟ್ ಹಾಗೂ ವೈಟ್‌ಫೀಲ್ಡ್ ಕಡೆಗಳಲ್ಲಿ ಕೊಳವೆ ಬಾವಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದನ್ನ ವರದಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಒಂದು ನಗರಕ್ಕೆ ಸೀಮಿತವಾಗಿ ಇಂತಹ ವೈಜ್ಞಾನಿಕ ಅಧ್ಯಯನ ಕೈಗೊಳ್ಳಲಾಗಿದೆ. ತಂತ್ರಜ್ಞರ ತಂಡ ನಡೆಸಿರುವ ಈ ಅಧ್ಯಯನ ವರದಿಯಲ್ಲಿ ಹಲವಾರು ಆಘಾತಕಾರಿ ಅಂಶಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರದ ನೀರಿನ ಕೊರತೆಯನ್ನು ಸಮರ್ಪಕವಾಗಿ ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದ್ದ ಅಧ್ಯಯನದಲ್ಲಿ ನಗರದ ಸೌತ್ – ಈಸ್ಟ್ ಭಾಗ, ವೈಟ್‌ಫೀಲ್ಡ್ ಹಾಗೂ ಹೊರಭಾಗದ ಪ್ರದೇಶಗಳಲ್ಲಿ ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತರಾಗಿದ್ದು ಈ ಭಾಗದಲ್ಲಿ ಅತಿ ಹೆಚ್ಚು ನೀರಿನ ಕೊರತೆಯ ಒತ್ತಡ ಎದುರಾಗಲಿದೆ ಎನ್ನುವುದನ್ನು ತಿಳಿಸಲಾಗಿದೆ. ಹೆಚ್ಚಿನ ರಿಸ್ಕ್ ಇರುವ ವಾರ್ಡ್‌ಗಳಲ್ಲಿ ಜನರಿಗೆ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯುವಂತೆ ಮನವೊಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ .
ಕಾವೇರಿ 5 ನೇ ಹಂತದ ಯೋಜನೆ ಅನುಷ್ಠಾನದಿಂದಾಗಿ ಬೆಂಗಳೂರು ಜಲಮಂಡಳಿಯ ಬಳಿ ನೀರು ವಿಫಲುವಾಗಿ ಲಭ್ಯವಿದೆ. ಅಂತರ್ಜಲದ ಮೇಲೆ ಹಾಗೂ ಟ್ಯಾಂಕರ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿರುವಂತಹ ಅಪಾರ್ಟ್‌ಮೆಂಟ್‌ಗಳು, ಲೇಔಟ್‌ಗಳು ಹಾಗೂ ಕಟ್ಟಡಗಳು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವ ಮೂಲಕ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.