ಢಾಕಾ (ಬಾಂಗ್ಲಾದೇಶ): ಕ್ಷಿಪ್ರ ಬೆಳವಣಿಗೆಗಳಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಹೊರನಡೆದಿದ್ದರೂ, ಜನಾಕ್ರೋಶ ಇನ್ನೂ ತಣ್ಣಗಾಗಿಲ್ಲ. ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಿಗೆ ಬಾಂಗ್ಲಾದೇಶೀ ಸೈನ್ಯ ಧಾವಿಸಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತರಲು ಹೆಣಗಾಡುತ್ತಿದೆ.
ಬಾಂಗ್ಲಾದೇಶಿ ಸೇನಾ ಮುಖ್ಯಸ್ಥ ವೇಕರ್ ಉಜ್ ಜಮಾನ್ ಈಗಾಗಲೇ ಮಧ್ಯಂತರ ಸರ್ಕಾರ ರಚಿಸುವುದಾಗಿ ಹೇಳಿದ್ದು, ದೇಶದಲ್ಲಿ ಶಾಂತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ.
ದೇಶದಲ್ಲಿ ಈಗ ಬಿಕ್ಕಟ್ಟು ತಲೆದೋರಿದೆ. ನಾನು ಈಗಾಗಲೇ ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ. ದೇಶವನ್ನು ಮುನ್ನಡೆಸಲು ಮಧ್ಯಂತರ ಸರ್ಕಾರ ರಚನೆ ನಡೆಸಲು ನಿರ್ಧರಿಸಿದ್ದೇವೆ. ದೇಶದ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಿಸುವ ಹೊಣೆಗಾರಿಕೆ ನನ್ನದು. ನಿಮ್ಮ ಬೇಡಿಕೆಗಳು ಈಡೇರುತ್ತವೆ. ದಯವಿಟ್ಟು ನಮ್ಮನ್ನು ಬೆಂಬಲಿಸಿ ಮತ್ತು ಹಿಂಸೆಯನ್ನು ಕೈಬಿಡಿ. ನೀವು ನಮ್ಮೊಂದಿಗೆ ಸಹಕರಿಸುವುದಾದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳೋಣ. ಹಿಂಸೆಯ ಮೂಲಕ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ವೇಕರ್ ಉಜ್ ಜಮಾನ್ ದೇಶದ ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಸೇನಾ ಮುಖ್ಯಸ್ಥರು ಏರ್ಪಡಿಸಿದ್ದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು, ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರಾದರೂ ಆಡಳಿತಾರೂಡ ಅವಾಮಿ ಲೀಗ್ ಪಕ್ಷದ ಯಾವುದೇ ನಾಯಕರೂ ಭಾಗವಹಿಸಿರಲಿಲ್ಲ.
ಐದನೇ ಬಾರಿಗೆ ದೇಶದ ಪ್ರಧಾನಿಯಾಗಿ ಈ ವರ್ಷ ತಮ್ಮ ಅಧಿಕಾರ ಸ್ವೀಕರಿಸಿದ್ದ ಶೇಖ್ ಹಸೀನಾ, ಈಗ ಜನಾಕ್ರೋಶಕ್ಕೆ ಶರಣಾಗಿ ರಾಜೀನಾಮೆ ನೀಡುವುದರ ಜೊತೆಗೆ ದೇಶವನ್ನೇ ಬಿಟ್ಟು ಪರಾರಿಯಾಗಿದ್ದಾರೆ. ಸೇನೆಗೆ ಸೇರಿದ ಏರ್ ಕ್ರಾಫ್ಟ್ ಒಂದರಲ್ಲಿ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
76 ವರ್ಷದ ಶೇಖ್ ಹಸೀನಾ ಅವರೊಂದಿಗೇ ಅವರ ತಂಗಿ ಶೇಖ್ ರೆಹಾನ್ ಕೂಡ ಇದ್ದರು ಎಂದು ತಿಳಿದುಬಂದಿದೆ. ಪ್ರತಿಭಟನಾಕಾರರು ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಬಾಂಗ್ಲಾದೇಶ ಸೈನ್ಯ ರಾಜೀನಾಮೆ ನೀಡಿ ತೆರಳಲು 45 ನಿಮಿಷಗಳ ಕಾಲಾವಕಾಶ ನೀಡಿತ್ತು.
ಪ್ರತಿಭಟನಾಕಾರರು ಹಸೀನಾ ಅವರ ತಂದೆ ಮತ್ತು ಬಾಂಗ್ಲಾದೇಶ ವಿಮೋಚನೆಯ ರೂವಾರಿ ಶೇಖ್ ಮುಜೀಬುರ್ ರೆಹಮಾನ್ ಅವರ ಪುತ್ಥಳಿಗಳನ್ನು ಒಡೆದುಹಾಕುತ್ತಿರುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಬಂಗಬಂಧು ಎಂದೇ ಹೆಸರಾಗಿದ್ದ ಮುಜೀಬುರ್ ರೆಹಮಾನ್ ಬಾಂಗ್ಲಾದೇಶ ವಿಮೋಚನೆಯ ನಂತರ ದೇಶದ ಹೀರೋ ಆಗಿದ್ದರು. ಆದರೆ ಬದಲಾದ ರಾಜಕೀಯ ಸ್ಥಿತಿಯಲ್ಲಿ ಮಗಳ ಮೇಲಿನ ಕೋಪಕ್ಕೆ ಅಪ್ಪನ ಪ್ರತಿಮೆಗಳು ನೆಲಕ್ಕುರುಳಿವೆ.