ಮುಂಬೈ: ಎರಡು ದಶಕಗಳ ನಂತರ ಶಿಸೇನೆಯ ಎರಡು ಬಣಗಳ ಮುಖಂಡರು ಹಾಗೂ ಸೋದರ ಸಂಬಂಧಿಗಳಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಜತೆಗೂಡಿದ್ದಾರೆ. ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂ ಎನ್ ಎಸ್) ಮುಖ್ಯಸ್ಥರಾಗಿದ್ದರೆ ಉದ್ಧವ್ ಠಾಕ್ರೆ ಶಿವಸೇನಾ (ಯುಬಿಟಿ) ಅಧ್ಯಕ್ಷರಾಗಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಲು ಮತ್ತು ಮರಾಠಿ ಭಾಷೆಯನ್ನು ಉಳಿಸಲು ಮುಂಬೈನ ವರ್ಲಿಯ ಎನ್ ಎಸ್ ಸಿಐ ಡೋಮ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ವಿಕ್ಟರಿ’ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ ‘ನಾವು ಜತೆಗೂಡಿದ್ದೇ ಒಂದಾಗಿರಲು’ ಎಂದು ಬಣ್ಣಿಸಿದ್ದಾರೆ.
ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಜತೆಗೂಡಿ ಸ್ಪರ್ಧಿಸುವ ಸೂಚನೆಯನ್ನೂ ನೀಡಿದರು. ಆಗ ಉದ್ಧವ್ ಮಾತಿಗೆ ಕಿಕ್ಕಿರಿದು ಸೇರಿದ್ದ ಅಪಾರ ಜನರು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು.
ವೇದಿಕೆ ಮೇಲೆ ಕುಳಿತಿದ್ದ ಏಕೈಕ ವ್ಯಕ್ತಿ ಉದ್ಧವ್ ಠಾಕ್ರೆ ಅವರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಇಬ್ಬರು ಸೋದರರನ್ನು ಒಂದುಗೂಡಿಸಲು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರಿಗೂ ಸಾಧ್ಯವಾಗಿರಲಿಲ್ಲ. ಅದನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸಾಧ್ಯವಾಗಿಸಿದರು ಎಂದು ವ್ಯಂಗ್ಯವಾಡಿದರು.
ಮುಂಬೈ ಮಹಾನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಹುನ್ನಾರದಿಂದಲೇ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವ ಸಂಚು ರೂಪಿಸಿದೆ. ಇದನ್ನು ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅಷ್ಟರೊಳಗೆ ರಾಜ್ಯ ಸರ್ಕಾರ ತನ್ನ ವಿವಾದಿತ ತ್ರಿಭಾಷಾ ಸೂತ್ರ ಜಾರಿಯನ್ನು ಹಿಂಪಡೆದಿದೆ. ಇದರಿಂದಾಗಿ ‘ವಿಕ್ಟರಿ’ ರ‍್ಯಾಲಿ ಆಯೋಜಿಸಲಾಗಿದೆ ಎಂದರು.
ಬಾಳಾಸಾಹೇಬ್ ಠಾಕ್ರೆ ಅವರೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತವರು. ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ಕೆಲಸ ಮಾಡಿದವರು. ಹಾಗೆಂದ ಮಾತ್ರಕ್ಕೆ ಮರಾಠಿ ಅಸ್ಮಿತೆಯೊಂದಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾನಿ ಅವರೂ ಕಾನ್ವೆಂಟ್ ಶಾಲೆಯಲ್ಲಿ ಕಲಿತವರು. ಹಾಗೆಂದ ಮಾತ್ರಕ್ಕೆ ಅವರ ಹಿಂದುತ್ವವನ್ನು ಯಾರಾದರೂ ಪ್ರಶ್ನಿಸುತ್ತಾರೆಯೇ? ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಉದ್ಧವ್ ಠಾಕ್ರೆ ಮಾತನಾಡಿ, ಬಿಜೆಪಿ ಸರ್ಕಾರ ಜನರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲು ಹೊರಟಿದೆ. ಮರಾಠಿ ಮತ್ತು ಮಹಾರಾಷ್ಟ್ರದ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು. ನಮ್ಮ ಶಕ್ತಿ ನಮ್ಮ ಒಗ್ಗಟ್ಟಿನಲ್ಲಿರಬೇಕು. ಸಂಕಷ್ಟ ಎದುರಾದಾಗಲೆಲ್ಲಾ ನಾವು ಜತೆಗೂಡಿದ್ದೇವೆ ಎಂದರು.
2005ರಲ್ಲಿ ಇಬ್ಬರು ಸೋದರರ ನಡುವೆ ವೈಮನಸ್ಸು ಉಂಟಾಗಿದ್ದರಿಂದ ರಾಜ್ ಠಾಕ್ರೆ ಶಿವಸೇನಾ ತೊರೆದು ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂಎನ್ ಎಸ್) ಹುಟ್ಟುಹಾಕಿದರು. ಇದಾದ ನಂತರ ಈ ಇಬ್ಬರನ್ನೂ ಒಂದುಗೂಡಿಸುವ ಹಲವು ಪ್ರಯತ್ನಗಳು ನಡೆದರೂ ಸಾಧ್ಯವಾಗಿರಲಿಲ್ಲ.
2022ರಲ್ಲಿ ಮಹಾರಾಷ್ಟ್ರದಲ್ಲಿ ಉಂಟಾದ ರಾಜಕೀಯ ಪಲ್ಲಟದಲ್ಲಿ ಶಿವಸೇನಾ ಮತ್ತು ಎನ್ ಸಿ ಪಿ ವಿಭಜನೆಗೊಂಡಿತು. ಶಿವಸೇನಾದಿಂದ ಬಂದ ಏಕನಾಥ ಶಿಂಧೆ ಹಾಗೂ ಎನ್ ಸಿಪಿಯ ಅಜಿತ್ ಪವಾರ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಿಜೆಪಿ, ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿತು. ಇದರ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳಿಂದ ಈ ಸೋದರ ಸಂಬಂಧಿಗಳು ಒಂದಗೂಡುವ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದವು. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟ ತ್ರಿಭಾಷಾ ಸೂತ್ರ ಮತ್ತು ಅದರಲ್ಲಿ ಮೂರನೇ ಭಾಷೆಯಾಗಿ ಹಿಂದಿಯ ಹೇರಿಕೆ ಕುರಿತು ಮಹಾರಾಷ್ಟ್ರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಮರಾಠಿ ಅಸ್ಮಿತೆಯ ಈ ವಿಷಯವೇ ಈ ಸೋದರ ಸಂಬಂಧಿಗಳು ಜತೆಗೂಡಲು ವೇದಿಕೆ ಕಲ್ಪಿಸಿತು.