ಬೆಂಗಳೂರು: ರಾಜ್ಯದಲ್ಲಿ ಬೆಳೆಯುವ ತೊಗರಿ ಬೇಳೆಯನ್ನು ನಿರ್ಲಕ್ಷಿಸಿ ವಿದೇಶದಿಂದ ಆಮದು ಮಾಡಿಕೊಳ್ಳುವ ಕೇಂದ್ರದ ಒಪ್ಪಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅತಿಹೆಚ್ಚು ತೊಗರಿ ಉತ್ಪಾದಿಸುವ ರಾಜ್ಯ ಕರ್ನಾಟಕ. ರಾಜ್ಯದ ಉತ್ಪಾದನೆಯಲ್ಲಿ ಶೇ.40 ಪ್ರಮಾಣದ ತೊಗರಿ ಕಲಬುರಗಿ ಜಿಲ್ಲೆ ಒಂದರಲ್ಲೇ ಬೆಳೆಯಲಾಗುತ್ತಿದೆ. ಅಲ್ಲದೆ ಉತ್ಕೃಷ್ಟ ಗುಣಮಟ್ಟದಿಂದಾಗಿ ಭೌಗೋಳಿಕ ಸೂಚ್ಯಂಕ ಟ್ಯಾಗ್ ಅನ್ನೂ ಪಡೆದುಕೊಂಡಿದೆ. ಆದರೆ ಪ್ರಧಾನಿ ಮೋದಿ ಸರ್ಕಾರ ನಮ್ಮ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಎಕ್ಸ್ ಮೂಲಕ ಆರೋಪಿಸಿದ್ದಾರೆ.
ಮೇ 2021 ರಿಂದ ತೊಗರಿ ಆಮದು ಮಾಡಿಕೊಳ್ಳಲಾಗುತ್ತಿದೆ. ಸುಂಕ ವಿನಾಯಿತಿಯನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲಾಗಿದೆ. 2024-25 ರಲ್ಲಿ ಮಾತ್ರ 13 ಲಕ್ಷ ಮೆಟ್ರಿಕ್ ಟನ್ ನಷ್ಟು ತೊಗರಿಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಮೊಜಾಂಬಿಕ್ ನಂತಹ ದೇಶಗಳೊಂದಿಗೆ ಇನ್ನೂ ಎರಡು ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
2024-25 ರ ಸಾಲಿನಲ್ಲಿ ಭಾರತ 35 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದಿಸಿದೆ. ಆದರೆ, ಈ ಉತ್ಪಾದನೆಯಲ್ಲಿ ಕೇಂದ್ರದ ಮೋದಿ ಸರಕಾರ ಕೇವಲ ಶೇ.10 ರಷ್ಟನ್ನು ಮಾತ್ರ ಸಂಗ್ರಹಿಸಿದೆ. ಕರ್ನಾಟಕದ ರೈತರು 10 ಲಕ್ಷ ಕ್ವಿಂಟಾಲ್ ತೊಗರಿ ಬೆಳೆದಿದ್ದಾರೆ. ತೊಗರಿ ಖರೀದಿಗೆ ನಿಗದಿಪಡಿಸಿದ ದರ ರೂ 7,550 ಮಾತ್ರ. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಅಂದರೆ ರೂ 6,000 ಕ್ಕೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರಾಜ್ಯದ ರೈತರು ರೂ 1,550 ಕೋಟಿ ನಷ್ಟ ಅನುಭವಿಸುವಂತಾಯಿತು ಎಂದು ವಿವರಿಸಿದ್ದಾರೆ.
ಈ ವರ್ಷದ ಕನಿಷ್ಠ ಬೆಂಬಲ ಬೆಲೆ ರೂ 8,000 ನಿಗದಿಯಾಗಿದೆ. ಆದರೆ, ತೊಗರಿ ಬೆಲೆ ರೂ 6,250ಕ್ಕೆ ಕುಸಿದಿದೆ. ಇದು ಎರಡು ವರ್ಷದ ದರಗಳ ಅರ್ಧದಷ್ಟಾಗಿದೆ. ಇದಕ್ಕೆ ಕೇಂದ್ರ ಸರಕಾರದ ತೊಗರಿ ಆಮದು ನನೀತಿಯೇ ಕಾರಣವಾಗಿದೆ. ನಮ್ಮ ರೈತರು ಬೆಳೆದ ಉತ್ಕೃಷ್ಟ ಗುಣಮಟ್ಟದ ತೊಗರಿ ಬದಲಿಗೆ ಕಡಿಮೆ ಗುಣಮಟ್ಟದ ತೊಗರಿ ಆಮದಿಗೆ ಕೇಂದ್ರ ಮುಂದಾಗಿರುವುದಕ್ಕೆ ಪ್ರಿಯಾಂಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.