ನಮ್ಮ ನಡುವಿನ ರಾಜಕಾರಣಿಗಳನ್ನು ನೋಡಿ. ಎಲ್ಲರೆದುರು ಸಂಪೂರ್ಣವಾಗಿ ಬೆತ್ತಲಾದ ನಂತರವೂ ಇವರು ಏನೂ ಆಗಿಲ್ಲವೆಂಬಂತೆ ಎದೆಯುಬ್ಬಿಸಿ ಓಡಾಡಿ ಕೊಂಡಿರುತ್ತಾರೆ. ಪಾಪಪ್ರಜ್ಞೆ ಹಾಗಿರಲಿ, ಅವರಲ್ಲಿ ಕನಿಷ್ಠ ಮುಜುಗರವೂ ನಮಗೆ ಕಾಣಸಿಗುವುದಿಲ್ಲ. ಈ ನಿಟ್ಟಿನಲ್ಲಿ ಇವರು ಅಸಾಮಾನ್ಯರು. ಓರ್ವ ಯಶಸ್ವಿ ರಾಜಕಾರಣಿಯಾಗಲು ಬೇರೇನು ಬೇಕೋ ಬೇಡವೋ. ಆದರೆ ದಪ್ಪನೆಯ ಚರ್ಮವಂತೂ ಇರಲೇಬೇಕು! – ಪ್ರಸಾದ್ ನಾಯ್ಕ್, ದೆಹಲಿ
ಓರ್ವ ಯಶಸ್ವಿ ರಾಜಕಾರಣಿಯಾಗಲು ಬೇರೇನು ಬೇಕೋ ಬೇಡವೋ. ಆದರೆ ದಪ್ಪನೆಯ ಚರ್ಮವಂತೂ ಇರಲೇಬೇಕು!
ಇವೆಲ್ಲಾ ನಮ್ಮ ದೇಶದಲ್ಲಿ ಮಾತ್ರವೆಂದು ಅಂದುಕೊಂಡಿದ್ದೆ. ಆದರಿದು ವಿಶ್ವವ್ಯಾಪಿ ಎಂಬುದು ನಂತರ ತಿಳಿದು ಬಂತು. ಅಂದಹಾಗೆ ನಮ್ಮ ರಾಜ್ಯದಲ್ಲಿ ಸಿಡಿ-ಲೇಡಿ-ಕೇಡಿ ಇಂಬಿತ್ಯಾದಿ ಗಲಾಟೆಗಳು ಹೊಸದೇನಲ್ಲ. ಆದರೆ ಈ ಬಾರಿ ಗದ್ದಲ ಮಾಡಿದ್ದು ಮಾತ್ರ ಪೆನ್-ಡ್ರೈವ್ ಪ್ರಕರಣ. ಅಷ್ಟಕ್ಕೂ ಈ ಬಗ್ಗೆ ಮೊಟ್ಟಮೊದಲು ಧೈರ್ಯವಾಗಿ ಮಾತನಾಡಲಾರಂಭಿಸಿದ್ದು ಪರ್ಯಾಯ ಮಾಧ್ಯಮಗಳೇ ಎಂಬುದನ್ನು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಭಯಂಕರ ಸ್ಟಾರ್ಟಿಂಗ್ ಟ್ರಬಲ್ ಸಮಸ್ಯೆಗೀಡಾಗಿದ್ದ ಈ ಪ್ರಕರಣಕ್ಕೆ ಕೊಂಚವಾದರೂ ವೇಗ ನೀಡಿದ ಶ್ರೇಯಸ್ಸು ನಿಸ್ಸಂದೇಹವಾಗಿ ಈ ಪರ್ಯಾಯ ಮಾಧ್ಯಮಗಳಿಗೆ ಸಲ್ಲಬೇಕು.
ಪೆನ್-ಡ್ರೈವ್ ಪ್ರಕರಣವು ಹೀಗೆ ಏಕಾಏಕಿ ಭುಗಿಲೆದ್ದಾಗ ನನಗೆ ತಕ್ಷಣ ನೆನಪಾಗಿದ್ದು ಅಮೆರಿಕನ್ ಅಪರಾಧಿ ಜೆಫ್ರಿ ಎಪ್ಸ್ಟೀನ್. ಅಂದಹಾಗೆ ಈ ಜೆಫ್ರಿಯ ಕತೆ ಸಾಮಾನ್ಯದ್ದಲ್ಲ. ಸಾಮಾನ್ಯ ಹಿನ್ನೆಲೆಯಲ್ಲಿ ಬೆಳೆದ ಜೆಫ್ರಿ ತನ್ನ ಬುದ್ಧಿಮತ್ತೆ ಮತ್ತು ಸಂಪರ್ಕಗಳಿಂದ ತನ್ನದೇ ಸಂಸ್ಥೆಗಳನ್ನು ಬೆಳೆಸಿ ಯಶಸ್ವಿಯಾದ. ದುಡ್ಡಿನ ಹಾಸಿಗೆಯಲ್ಲೇ ಬಿದ್ದು ಹೊರಳಾಡುವಷ್ಟು ಧನಿಕನಾದ. ಅವನ ಗೆಳೆಯರ ಬಳಗದಲ್ಲಿ ಹಾಲಿವುಡ್ ನಟ-ನಟಿಯರಿಂದ ಹಿಡಿದು ದೇಶವಿದೇಶಗಳ ಪ್ರಖ್ಯಾತ ಉದ್ಯಮಿಗಳು, ರಾಜಮನೆತನದ ಸದಸ್ಯರು, ಪ್ರಭಾವಿ ರಾಜಕಾರಣಿಗಳೂ ಇದ್ದರು. ಅಮೆರಿಕಾದ ಗಣ್ಯಾತಿಗಣ್ಯರೆಲ್ಲ ಈತ ತನ್ನ ಖಾಸಗಿ ದ್ವೀಪಗಳಲ್ಲಿ ಆಯೋಜಿಸುತ್ತಿದ್ದ ಐಷಾರಾಮಿ ಪಾರ್ಟಿಗಳಿಗೆಂದೇ ಹಾತೊರೆದು ಹೋಗುತ್ತಿದ್ದರು. ಈ ವಲಯದಲ್ಲಿ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಸ್ಟೀಫನ್ ಹಾಕಿಂಗ್, ಮೈಕಲ್ ಜಾಕ್ಸನ್, ರಿಚರ್ಡ್ ಬ್ರಾನ್ಸನ್ ನಂಥಾ ಘಟಾನುಘಟಿಗಳಿದ್ದರು ಎಂದರೆ ಈತ ಅದೆಷ್ಟು ದೊಡ್ಡ ಕುಳವೆಂದು ನಾವು ಊಹಿಸ ಬಹುದು.
ಜೆಫ್ರಿಯ ಮೇಲಿದ್ದ ಆರೋಪವೆಂದರೆ ಈತ ನೂರಾರು ಹೆಣ್ಣುಮಕ್ಕಳನ್ನು ತನ್ನ ಲೈಂಗಿಕ ಸುಖಕ್ಕಾಗಿ ಬಳಸಿಕೊಳ್ಳುತ್ತಿದ್ದ ಎಂಬುದು. ಇದರಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಸಂಖ್ಯೆಯೂ ಸಾಕಷ್ಟಿತ್ತು. ಸಾಮಾನ್ಯವಾಗಿ ವಿದ್ಯಾರ್ಥಿನಿಯರನ್ನು, ಯುವತಿಯರನ್ನು ತನ್ನ ಬಂಗಲೆಗೆ ಕರೆಸಿ ಕೊಳ್ಳುತ್ತಿದ್ದ ಈತ ಅವರಿಗೆ ಒಂದಿಷ್ಟು ಪುಡಿಗಾಸು ನೀಡಿ, ಆ ಹೆಣ್ಣುಮಕ್ಕಳು ತಮ್ಮ ಗೆಳತಿಯರನ್ನೂ ಅಲ್ಲಿಗೆ ಕರೆತರುವಂತೆ ಮಾಡುತ್ತಿದ್ದ. ಕ್ರಮೇಣ ಇದೊಂದು ಪಿರಾಮಿಡ್ ಸ್ಕೀಮಿನ ನೆಟ್ವರ್ಕಿನಂತೆ, ಜೆಫ್ರಿಯ ದೇಹಸುಖಕ್ಕೆಂದೇ ಮೀಸಲಾಗಿದ್ದ ಹೆಣ್ಣುಮಕ್ಕಳ ದೊಡ್ಡದೊಂದು ಜಾಲವೇ ಅಲ್ಲಿ ನಿರ್ಮಾಣವಾಗಿತ್ತು. ಇವುಗಳಲ್ಲದೆ ಈ ಹೆಣ್ಣುಮಕ್ಕಳನ್ನು ಜೆಫ್ರಿಯ ಒಡೆತನದ ಖಾಸಗಿ ದ್ವೀಪಗಳಿಗೆ ಕರೆದೊಯ್ದು, ಜಗತ್ತಿನಾದ್ಯಂತ ಸೆಲೆಬ್ರಿಟಿಗಳೆಂದು ಕರೆಸಿಕೊಳ್ಳುವ ಗಣ್ಯರ ಮನರಂಜನೆಗೂ ಇವರನ್ನು ಬಳಸಿಕೊಳ್ಳಲಾಗುತ್ತಿತ್ತು.
ಮುಂದೆ ಅದ್ಯಾವುದೋ ಕೆಟ್ಟ ಘಳಿಗೆಯೊಂದರಲ್ಲಿ ಜೆಫ್ರಿಯ ಈ ಹೈ-ಪ್ರೊಫೈಲ್ ಅಂತಃಪುರ ವಿಲಾಸಗಳೆಲ್ಲ ಬಟಾಬಯಲಾಗಿ ಬಹುದೊಡ್ಡ ವಿವಾದವಾಯಿತು. ಅವನು ಜೈಲು ಪಾಲಾಗಿ ಕೆಲ ಕಾಲ ಜೈಲುಶಿಕ್ಷೆಯನ್ನೂ ಅನುಭವಿಸಿದ. ನಂತರ ಅದೊಂದು ದಿನ ನಿಗೂಢವಾಗಿ ಜೈಲಿನಲ್ಲೇ ಹೆಣವಾಗಿಬಿಟ್ಟ. ಅಧಿಕೃತವಾಗಿ ಇದನ್ನು ಆತ್ಮಹತ್ಯೆ ಎಂದು ಘೋಷಿಸಿದರೂ ಕೂಡ, ಈ ನಿಗೂಢ ಸಾವಿನ ಹಿಂದೆ ದೊಡ್ಡವರೆನಿಸಿಕೊಳ್ಳುವ ಹಲವರ ಕೈವಾಡವಿದೆ ಎಂಬ ಊಹಾಪೋಹಗಳು ಬಲವಾಗಿವೆ.
ಹೀಗೆ ಜೆಫ್ರಿಯ ಸಾವಿನೊಂದಿಗೆ ಹಲವು ಗಣ್ಯಾತಿಗಣ್ಯರ ಬೆಡ್ರೂಮ್ ರಹಸ್ಯಗಳೆಲ್ಲ ಶಾಶ್ವತವಾಗಿ ಸಮಾಧಿಯಾಗಿ ಬಿಟ್ಟವು. ಒಂದು ಕಾಲದಲ್ಲಿ ಅಮೆರಿಕಾದ ಅತ್ಯಂತ ಪ್ರಭಾವಿಗಳಲ್ಲೊಬ್ಬನಾದ ಜೆಫ್ರಿ ಜೈಲುಪಾಲಾದ ನಂತರ ಕಾಲಕಸಕ್ಕಿಂತ ಕಡೆಯಾಗಿಬಿಟ್ಟಿದ್ದ. ಆದರೆ ಅವನ ಹೆಸರಿನೊಂದಿಗೆ ಆಗಾಗ ಕೇಳಿಬರುತ್ತಿದ್ದ ಡೊನಾಲ್ಡ್ ಟ್ರಂಪ್ ನಂತಹ ದಿಗ್ಗಜರು ಮಾತ್ರ ಇಂದಿಗೂ ಆರಾಮಾಗಿ ಓಡಾಡಿ ಕೊಂಡಿದ್ದಾರೆ. ಒಂದು ಕಾಲದಲ್ಲಿ ಜೆಫ್ರಿಯ ವೈಭವದ ಆತಿಥ್ಯವನ್ನು ಸವಿದಿದ್ದ ಹಲವು ಖ್ಯಾತನಾಮರು, ಈಗ “ಯಾರೋ ಯಾವುದೋ ಒಂದು ಪಾರ್ಟಿಯಲ್ಲಿ ನನಗೆ ಅವನನ್ನು ಪರಿಚಯಿಸಿದ್ದರು. ಹೀಗಾಗಿ ಮುಖ ಪರಿಚಯ ಬಿಟ್ಟು ಬೇರೇನಿಲ್ಲ” ಎಂದು ಸುಲಭವಾಗಿ ಜಾರಿಕೊಳ್ಳುತ್ತಾರೆ. ಟ್ರಂಪ್ ಅಂತೂ ಪೋರ್ನ್ ಸ್ಟಾರ್ ಒಬ್ಬಳೊಂದಿಗೆ ನಡೆಸಿರುವ ಹಣದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಆಗಾಗ ಸುದ್ದಿಯಾಗುವವರು. ಇಂಗ್ಲೆಂಡಿನ ರಾಣಿಯಾಗಿದ್ದ ಕ್ವೀನ್ ಎಲಿಜಬೆತ್ ಪುತ್ರ ಪ್ರಿನ್ಸ್ ಆಂಡ್ರ್ಯೂ (ಡ್ಯೂಕ್ ಆಫ್ ಯಾರ್ಕ್)ನ ಕಚ್ಚೆಹರುಕತನದ ಬಗ್ಗೆ ಬರೆಯದ ಟ್ಯಾಬ್ಲಾಯ್ಡುಗಳು ಇರಲಿಕ್ಕಿಲ್ಲ. ಇವೆಲ್ಲದರ ಹೊರತಾಗಿಯೂ ಇವುಗಳೆಲ್ಲ ಟ್ಯಾಬ್ಲಾಯ್ಡುಗಳಿಗೆ ಚಪ್ಪರಿಸುವ ಸುದ್ದಿಯೇ ಹೊರತು ಸ್ವತಃ ಸುದ್ದಿಯಾದವರಿಗೆ ಅದರ ಬಿಸಿ ತಟ್ಟುವುದೇ ಇಲ್ಲ. ಕನಿಷ್ಠಪಕ್ಷ ಈ ಮಂದಿಯ ಸಾರ್ವಜನಿಕ ಜೀವನದ ವಿಚಾರದಲ್ಲಂತೂ ಇದು ಸತ್ಯ.
ಇದಕ್ಕೇನೇ ಹೇಳುವುದು. ಯಶಸ್ವಿ ರಾಜಕಾರಣಿಯಾಗಲು ದಪ್ಪ ಚರ್ಮ ಇರಲೇಬೇಕು ಅಂತ. ಶೇರು ಮಾರುಕಟ್ಟೆಯಲ್ಲಿ ಹಾಕಿದ ದುಡ್ಡು ಮುಳುಗಿತೆಂದು, ಯಾರೋ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಿದರೆಂದು, ಸಂಗಾತಿ ಅನೈತಿಕ ಸಂಬಂಧವೊಂದಕ್ಕೆ ಕೈಚಾಚಿದನೆಂದು, ಚಿಕ್ಕದೊಂದು ಸೋಲು ಎದುರಾಯಿತೆಂದು ಖಿನ್ನತೆಗೆ ಜಾರುವ, ಆತ್ಮಹತ್ಯೆಗೆ ಪ್ರಯತ್ನಿಸುವ ಹತಾಶೆಗಳೆಲ್ಲ ಸಾಮಾನ್ಯರಲ್ಲೇ ಕಾಣುವುದು. ಆದರೆ ನಮ್ಮ ನಡುವಿನ ರಾಜಕಾರಣಿಗಳನ್ನು ನೋಡಿ. ಎಲ್ಲರೆದುರು ಸಂಪೂರ್ಣವಾಗಿ ಬೆತ್ತಲಾದ ನಂತರವೂ ಇವರು ಏನೂ ಆಗಿಲ್ಲವೆಂಬಂತೆ ಎದೆಯುಬ್ಬಿಸಿ ಓಡಾಡಿ ಕೊಂಡಿರುತ್ತಾರೆ. ಪಾಪಪ್ರಜ್ಞೆ ಹಾಗಿರಲಿ, ಅವರಲ್ಲಿ ಕನಿಷ್ಠ ಮುಜುಗರವೂ ನಮಗೆ ಕಾಣಸಿಗುವುದಿಲ್ಲ. ಈ ನಿಟ್ಟಿನಲ್ಲಿ ಇವರು ಅಸಾಮಾನ್ಯರು.
ಆರೇಳು ವರ್ಷಗಳ ಹಿಂದೆ ದಿಲ್ಲಿಯಲ್ಲಿದ್ದ ಕೆಲ ಸಂಸದರ ಮನೆಗೆ ಖುದ್ದಾಗಿ ಹೋಗಬೇಕಾದ ಸಂದರ್ಭವೊಂದು ಒದಗಿ ಬಂದಿತ್ತು. ಹೀಗೆ ನಾನು ಹೋಗಿದ್ದ ಅವಧಿಯಲ್ಲಿ ಅಧಿವೇಶನಗಳು ನಡೆಯುತ್ತಿರಲಿಲ್ಲವಾದ್ದರಿಂದ ಸಂಸದರು ದಿಲ್ಲಿಯಲ್ಲಿರದೆ ತಮ್ಮ ಸ್ವಕ್ಷೇತ್ರಗಳಿಗೆ ಮರಳಿದ್ದರು. ವಿಪರ್ಯಾಸವೆಂದರೆ ಆ ಸಂಸದರ ಹೆಸರು-ಮುಖಗಳು ನನಗೆ ಅದೆಷ್ಟು ಅಪರಿಚಿತವಾಗಿದ್ದವರೆಂದರೆ ಅವರು ಸ್ವತಃ ಬಂದು ಕಣ್ಣೆದುರು ನಿಂತರೂ ಅವರನ್ನು ಗುರುತು ಹಿಡಿಯುವುದು ನನ್ನಿಂದ ಸಾಧ್ಯವಿರಲಿಲ್ಲ. ಇದು ಸಾಲದೆಂಬಂತೆ “ನಮ್ಮ ಸಾಹೇಬರ ಪ್ರಭಾವ ಅಷ್ಟಕ್ಕಷ್ಟೇ. ಇವರಿಂದ ಆಗುವಂಥದ್ದೇನಿಲ್ಲ”, ಎಂದು ಅವರ ಸಿಬ್ಬಂದಿಗಳೇ ಅವರ ಬೆನ್ನಹಿಂದೆ ತಮಾಷೆಯಾಗಿ ಮಾತಾಡಿಕೊಳ್ಳುವುದೂ ಇರುತ್ತಿತ್ತು.
ಈ ಬಾರಿಯ “ದ ಹಿಂದೂ” ವರದಿಯು ಅಂಕಿಅಂಶಗಳ ಸಮೇತ ಹೇಳಿರುವುದು ಕೂಡ ಅದನ್ನೇ. ಕರ್ನಾಟಕದಿಂದ ಲೋಕಸಭೆಗೆ ಚುನಾಯಿತರಾಗಿ ಹೋದ 28 ಚುನಾಯಿತ ಸಂಸದರಲ್ಲಿ ಮೂವರು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಐದು ವರ್ಷಗಳ ಆಡಳಿತಾವಧಿಯಲ್ಲಿ ನಮ್ಮ ರಾಜ್ಯದ ಐವರು ಸಂಸದರದ್ದು ಸಂಸತ್ತಿನಲ್ಲಿ ಹಾಜರಾತಿ ಏನು ಗೊತ್ತೇ? ಶೂನ್ಯ! ಹೀಗೆ ನಮ್ಮ ಕೆಲವು ರಾಜಕಾರಣಿಗಳು ಅಧಿಕಾರದ ಪಡಸಾಲೆಯಲ್ಲಿದ್ದೂ ಅಜ್ಞಾತವಾಸದಲ್ಲಿರುತ್ತಾರೆ. ಅವರ ಅಸ್ತಿತ್ವವು ಉಳಿದವರಿಗೆ ಮತ್ತೊಮ್ಮೆ ನೆನಪಾಗುವುದು ಮುಂದಿನ ಚುನಾವಣಾ ಋತುವಿನಲ್ಲಿ ಮಾತ್ರ.
ಮನುಷ್ಯನೊಬ್ಬನಿಗೆ ದಪ್ಪಚರ್ಮ ಮೈಗೂಡಿ ಬಿಟ್ಟಾಗ ಈ ಬಗೆಯ ಉಡಾಫೆಯೂ ಸಹಜವಾಗಿ ಬಂದುಬಿಡುತ್ತದೆ. ಆಗ ಚಿತ್ರವಿಚಿತ್ರ ಖಯಾಲಿಗಳೂ ಬಂದು ಸೇರಿಕೊಳ್ಳುತ್ತವೆ. ಕೆಲವು ರಾಜಕಾರಣಿಗಳು ತಮ್ಮನ್ನು ತಾವು ಸಾಕ್ಷಾತ್ ದೇವರೆಂದು ಭಾವಿಸುವುದೂ ಇದೆ. ಥೇಟು ಆಫ್ರಿಕನ್ ಸರ್ವಾಧಿಕಾರಿಗಳಂತೆ. ಹೀಗಾದಾಗ ಅವರ ಹಿಂದೆ ಭಟ್ಟಂಗಿಗಳ ಗುಂಪೊಂದು ಸದಾ ಅಂಟಿಕೊಂಡಿರುತ್ತದೆ. ಸಾಮಾನ್ಯವಾಗಿ ಎಲ್ಲದಕ್ಕೂ ಬಹುಪರಾಕು ಹಾಕುವುದು ಮತ್ತು ನೈಜ ಜನನಾಯಕನೆಂಬ ಒಂದು ಬಗೆಯ ಸಾರ್ವಜನಿಕ ಇಮೇಜನ್ನು ಕಟ್ಟಿಕೊಡುವುದು ಈ ಆಸ್ಥಾನ ವಿದ್ವಾಂಸರ ಕೆಲಸ.
ಬಾಬಾಸಾಹೇಬ್ ಅಂಬೇಡ್ಕರ್ ಕೇಂದ್ರ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆಲ ಮಂದಿ ಅವರನ್ನು ಸುಮ್ಮನೆ ನೋಡುವುದಕ್ಕೆಂದೇ ಅವರ ಸರಕಾರಿ ಬಂಗಲೆಗೆ ಬರುತ್ತಿದ್ದರಂತೆ. ಹಲವು ಮಂದಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕೂಡ ಅಲ್ಲಿಗೆ ಬರುತ್ತಿದ್ದರಿಂದ, ಹೀಗೆ ಬಂದವರು ಯಾವ ಉದ್ದೇಶವಿಟ್ಟುಕೊಂಡು ಬಂದಿದ್ದಾರೆ ಎಂಬುದನ್ನು ಅಂದಾಜಿಸುವುದು ಕೊಂಚ ಕಷ್ಟವೇ ಆಗುತ್ತಿತ್ತು. ಅಸಲಿಗೆ ಬಾಬಾಸಾಹೇಬರ ಮನೆಯ ಬಾಗಿಲು ಎಲ್ಲರ ಪಾಲಿಗೂ ತೆರೆದಿರುತ್ತಿದ್ದಿದ್ದು ಇದರ ಹಿಂದಿನ ಮುಖ್ಯ ಕಾರಣಗಳಲ್ಲೊಂದಾಗಿತ್ತು.
ಈ ನಡುವೆ “ಯಾರು ನೀವು? ಯಾಕೆ ಬಂದಿದ್ದು?” ಅಂತ ಬಾಬಾಸಾಹೇಬರು ಕೇಳಿದರೆ “ನಿಮ್ಮ ದರ್ಶನಕ್ಕಾಗಿ ಬಂದಿದ್ದೇವೆ ಸಾಬ್” ಅಂತ ಹೇಳುತ್ತಿದ್ದರಂತೆ ಈ ಮಂದಿ. “ದರ್ಶನ ಕೊಡಲು ನಾನು ಅವಧೂತನೂ ಅಲ್ಲ, ದೇವರೂ ಅಲ್ಲ. ಹೀಗೆಲ್ಲ ಸುಮ್ಮನೆ ಬಂದು ಸಮಯ ಹಾಳು ಮಾಡಬೇಡಿ. ಸಾಷ್ಟಾಂಗ ಹೊಡೆಸಿಕೊಳ್ಳಲು ಕಾಯುತ್ತಿರುವ ರಾಜಕೀಯ ನಾಯಕರು ನಮ್ಮ ನಡುವೆ ಸಾಕಷ್ಟಿದ್ದಾರೆ. ನಿಮಗೆ ಅಷ್ಟು ಬಿಡುವಿದ್ದರೆ ನೀವು ಅಲ್ಲಿಗೆ ಹೋಗಬಹುದು”, ಎಂದು ಹೀಗೆ ಬಂದವರನ್ನು ವಾಪಾಸು ಕಳಿಸುತ್ತಿದ್ದರಂತೆ ಡಾ. ಬಿ. ಆರ್. ಅಂಬೇಡ್ಕರ್. ನಿಸ್ಸಂದೇಹವಾಗಿ ಅವರ ಬಿಡುವಿಲ್ಲದ ದಿನಚರಿಯಲ್ಲಿ ಇಂತಹ ಅಪಸವ್ಯಗಳಿಗೆಲ್ಲ ಜಾಗವೇ ಇರಲಿಲ್ಲ.
ಆದರೆ ಕಾಲ ಬದಲಾದಂತೆ ರಾಜಕಾರಣಿಗಳ ಖಯಾಲಿಗಳೂ ಬದಲಾಗಿವೆ. ಇತ್ತೀಚೆಗೆ ಸೌಂದರ್ಯ ತಜ್ಞರೊಬ್ಬರ ಸಂದರ್ಶನವನ್ನು ನೋಡುತ್ತಿದ್ದಾಗ ಹೊಸ ಸತ್ಯವೊಂದು ತಿಳಿದು ಬಂದಿತ್ತು. ಅದೇನೆಂದರೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುವ ಸ್ಥಿತಿವಂತರ ಪಟ್ಟಿಯಲ್ಲಿ ಈಗ ರಾಜಕಾರಣಿಗಳೂ ಸೇರಿಕೊಂಡಿದ್ದಾರೆ ಎಂಬುದು. ಇತ್ತೀಚಿನ ದಿನಗಳಲ್ಲಿ ನೋಡಲು ಕಾಣುವ ಮತ್ತು ದೈಹಿಕವಾಗಿ ಫಿಟ್ ಆಗಿರುವ ರಾಜಕಾರಣಿಗಳು ಹೆಚ್ಚು ಜನಪ್ರಿಯರಾಗುತ್ತಿದ್ದಾರೆ ಎಂಬ ಅಂಶವು ಹಲವು ರಾಜಕಾರಣಿಗಳನ್ನು ಈ ತಜ್ಞರ ಬಳಿ ಕರೆ ತರುತ್ತಿದೆಯಂತೆ. ಇನ್ನು ನಮ್ಮ ಚಿತ್ರನಟರೂ ನಾಚುವಷ್ಟರ ಮಟ್ಟಿಗೆ ಪೋಷಾಕುಗಳಲ್ಲಿ ವೈವಿಧ್ಯ, ಫೋಟೋಗಳತ್ತ ಮೋಹ ಮತ್ತು ಭರ್ಜರಿ ಪಿ.ಆರ್ ಮಷೀನರಿಗಳನ್ನಿಟ್ಟುಕೊಂಡಿರುವ ನಮ್ಮ ಘಟಾನುಘಟಿ ರಾಜಕೀಯ ನಾಯಕರ ಹೆಸರುಗಳು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ಇವಿಷ್ಟೇ ಅಲ್ಲ. ರಾಜಕಾರಣಿಗೆ ಎಲ್ಲರಂತೆ ವಯಸ್ಸಾಗಬಹುದು. ಆದರೆ ವೃದ್ಧಾಪ್ಯವೆಂಬುದು ಅಷ್ಟಾಗಿ ಕಾಡಿದಂತಿಲ್ಲ. ಹೀಗಾಗಿ ವಯಸ್ಸು ಎಪ್ಪತ್ತು-ಎಂಭತ್ತಾದರೂ ನಾನಿನ್ನು ಮೊಮ್ಮಕ್ಕಳ ಜೊತೆ ಆಟವಾಡಿಕೊಂಡು ಆರಾಮಾಗಿರುತ್ತೇನೆ ಎಂದು ಸಾರ್ವಜನಿಕ ಬದುಕಿನಿಂದ ಮರೆಯಾಗುವ ರಾಜಕಾರಣಿಗಳು ತೀರಾ ಕಡಿಮೆ. ಹೀಗಾಗಿ ಇಳಿವಯಸ್ಸಿನಲ್ಲೂ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳನ್ನು ನಾವು ನೋಡುತ್ತಿರುತ್ತೇವೆ. ತನ್ನ ಬದುಕಿಡೀ ಒಂದೇ ಪಕ್ಷದಲ್ಲಿದ್ದು, ಅತ್ಯುಚ್ಚ ಸಾಂವಿಧಾನಿಕ ಹುದ್ದೆಗಳಿಗೇರಿ, ತಮ್ಮ ಕೊನೆಯ ವರ್ಷಗಳಲ್ಲಿ ಬೇರೊಂದು ಪಕ್ಷದ ಜೊತೆ ಸೇರಿಕೊಂಡು ಮೂಲೆಗುಂಪಾಗಿಬಿಟ್ಟ ಹೆಸರುವಾಸಿ ರಾಜಕಾರಣಿಯೊಬ್ಬರು ನಮ್ಮದೇ ರಾಜ್ಯದಲ್ಲಿದ್ದಾರೆ. ಹೊರಜಗತ್ತು ಅವರ ಈ ನಡೆಗಾಗಿ ಹೆಚ್ಚೆಂದರೆ ಒಂದಿಷ್ಟು ಕಾಲ ಟೀಕಿಸಬಹುದು. ಆದರೆ ಈ ಟೀಕೆಗಳು ಅವರನ್ನೇನೂ ಅಷ್ಟಾಗಿ ಕಾಡಿದಂತಿಲ್ಲ. ಪಬ್ಲಿಕ್ ಮೆಮೊರಿಯೆನ್ನುವುದೇ ಇಷ್ಟು, ಹೀಗಾಗಿ ಸುಮ್ಮನಿದ್ದರೆ ಎಲ್ಲರಿಗೂ ಕ್ಷೇಮ ಎಂದು ಅವರೇ ತಣ್ಣಗಿರುವಂತಿದೆ.
ಇದನ್ನು ಓದಿದ್ದೀರಾ? http://“ಮೀ ಟೈಂ ಎಂಬ ಫ್ರೀ ಟೈಂ” https://kannadaplanet.com/free-time-called-me-time/
“ಅಧಿಕಾರದಲ್ಲಿರುವ ರಾಜಕಾರಣಿಗಳನ್ನು ಮತ್ತು ಡೈಪರ್ ಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಿರಬೇಕು. ಎರಡಕ್ಕೂ ಇರುವ ಕಾರಣವೊಂದೇ!”, ಎಂದು ವಿಡಂಬನಾತ್ಮಕವಾಗಿ ಹೇಳಿದ್ದರಂತೆ ಖ್ಯಾತ ಅಮೆರಿಕನ್ ಲೇಖಕ ಮಾರ್ಕ್ ಟ್ವೈನ್. ತಾನು ಹೀಗಂದರೆ ರಾಜಕಾರಣಿಗಳಿಗೆ ಬೇಸರವಾಗುವುದಿಲ್ಲ ಎಂಬುದು ಬಹುಷಃ ಆತನಿಗೆ ತಿಳಿದಿತ್ತು. ಒಂದು ಪಕ್ಷ ಇಂದು ಬೇಸರವಾದರೂ, ಅದು ನಾಳೆಯವರೆಗೆ ರಾಜಕೀಯ ನಾಯಕರ ಮತ್ತು ಸುತ್ತಲಿನ ಮಂದಿಯ ಪ್ರಜ್ಞೆಯಲ್ಲಿ ಉಳಿಯುವುದಿಲ್ಲ ಎಂಬ ಖಾತ್ರಿಯೂ ಅವರಿಗಿತ್ತು. ಎಲ್ಲಾ ದಪ್ಪಚರ್ಮದ ಮಹಿಮೆ!
ಇಷ್ಟು ಕಠೋರವಾದ ವಿಮರ್ಶೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವುದಕ್ಕೇನೇ ಅವರು ರಾಜಕಾರಣಿಗಳಾಗಿರೋದು!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.