ನವದೆಹಲಿ: ಒಕ್ಕೂಟ ವ್ಯವಸ್ಥೆಯ ಆಡಳಿತದ ಪರಿಕಲ್ಪನೆಯನ್ನು ಮರೆತಿರುವ ಜಾರಿ ನಿರ್ದೇಶನಾಲಯ ತನ್ನ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದೆ ಎಂದು ಜಾರಿ ನಿರ್ದೇಶನಾಲಯವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗದುಕೊಂಡಿದೆ. ತಮಿಳುನಾಡು ಸರ್ಕಾರದ ಅಬಕಾರಿ ಚಿಲ್ಲರೆ ಮಾರಾಟ ವ್ಯವಸ್ಥೆಯಲ್ಲಿನ ಅವ್ಯವಹಾರ ಆರೋಪದಡಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಇಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮದ್ಯ ಮಾರಾಟಕ್ಕೆ ರಚಿಸಲಾದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ಅಡಿ ಮಂಜೂರು ಮಾಡಲಾದ ಅಬಕಾರಿ ಪರವಾನಗಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯದ ವಿವಿಧ ಬಾಗಗಳಲ್ಲಿ ದಾಳಿ ನಡೆಸಿದ್ದರು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಅಗಸ್ಟಿನ್ ಜಾರ್ಜ್ ಮಾಸಿ ಅವರ ದ್ವಿಸದಸ್ಯ ಪೀಠ, ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುವ ನಿಮ್ಮ ಜಾರಿ ನಿರ್ದೇಶನಾಲಯವು ಹದ್ದು ಮೀರುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನೇ ದುರುಪಯೋಗಪಡಿಸಿಕೊಂಡಿರುವ ಜಾರಿ ನಿರ್ದೇಶನಾಲಯವನ್ನು ಈ ಹಿಂದೆಯೂ ಹಲವು ಪೀಠಗಳು ತರಾಟೆಗೆ ತೆಗೆದುಕೊಂಡ ಉದಾಹರಣೆಗಳಿವೆ. ಸರ್ಕಾರದ ವಿರೋಧಿಗಳನ್ನು ಹಣಿಯಲು ಈ ಕಾಯ್ದೆಯ ದುರುಪಯೋಗ ಕುರಿತು ವಿರೋಧ ಪಕ್ಷಗಳೂ ಹಲವು ಬಾರಿ ಆರೋಪ ಮಾಡಿದ್ದವು.
ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಮಿತ್ ಆನಂದ ತಿವಾರಿ ವಾದ ಮಂಡಿಸಿದರು. ಇವರ ವಾದ ಮಾನ್ಯ ಮಾಡಿದ ಪೀಠವು, ಜಾರಿ ನಿರ್ದೇಶನಾಲಯದ ದಾಳಿಗೆ ತಡೆ ನೀಡಿತು. ತಡೆಯಾಜ್ಞೆಗೆ ವಿರೋಧ ವ್ಯಕ್ತಪಡಿಸಿದ ಎಸ್.ವಿ. ರಾಜು, ಈ ಪ್ರಕರಣದಲ್ಲಿ ರೂ.1 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಜಾರಿ ನಿರ್ದೇಶನಾಲಯವು ಮಿತಿ ಮೀರಿಲ್ಲ ಎಂದು ತಿಳಿಸಿದರು.
ಮದ್ಯದಂಗಡಿ ಪರವಾನಗಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. 2014ರಲ್ಲಿ ನಡೆದ ಪ್ರಕರಣದಲ್ಲಿ ತಪ್ಪು ಎಸಗಿದವರ ವಿರುದ್ಧ ಸುಮಾರು 41 ಎಫ್ ಐಆರ್ ಗಳು ದಾಖಲಾಗಿವೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ನಿಗಮದ ಮೇಲೆ ಹೇಗೆ ದಾಳಿ ನಡೆಸಲು ಸಾಧ್ಯ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು.
ಜಾರಿ ನಿರ್ದೇಶನಾಲಯದ ದಾಳಿ ಪ್ರಶ್ನಿಸಿ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರವು ಹೈಕೋರ್ಟ್ ಮೆಟ್ಟಿಲೇರಿತ್ತು. ಸಂವಿಧಾನದ ಉಲ್ಲಂಘನೆ ಮತ್ತು ಒಕ್ಕೂಟ ರಚನೆಯ ವಿರುದ್ಧದ ಕ್ರಮ ಇದಾಗಿದೆ ಎಂದು ವಾದಿಸಿತ್ತು ಆದರೆ ಜಾರಿ ನಿರ್ದೇಶನಾಲಯದ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಜಾರಿ ನಿರ್ದೇಶನಾಲಯವು ಮಾರ್ಚ್ 6 ರಿಂದ 8ರವರೆಗೆ ವಿವಿಧೆಡೆ 60 ಗಂಟೆಗಳ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು.