ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಕರೆ ನೀಡಿದ್ದಾರೆ.
ಸಂವಿಧಾನ ಜಾರಿಯಾಗಿ 75ನೇ ವಸಂತಕ್ಕೆ ಕಾಲಿಡುತ್ತಿದ್ದು, ನ್ಯಾಯಾಲಯಗಳಲ್ಲಿ ಇಂದಿಗೂ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಯಾದ ಪೂಜೆ, ಅರ್ಚನೆಯನ್ಮು ನಿಲ್ಲಿಸಿ, ಸಂವಿಧಾನವನ್ನು ಗೌರವಿಸಿ ಅದಕ್ಕೆ ತಲೆಬಾಗಿ ಎಂದು ಹೇಳಿದ್ದಾರೆ
ಭಾರತದ ಸಂವಿಧಾನದಲ್ಲಿರುವ ಜಾತ್ಯತೀತ ತತ್ವವನ್ನು ಉತ್ತೇಜಿಸಬೇಕು ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂವಿಧಾನದ ಪೀಠಿಕೆಯ ಪ್ರತಿಗೆ ಗೌರವಿಸುವ ಮೂಲಕ ಪ್ರಾರಂಭಿಸಬಹುದು ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಕೆಲವೊಮ್ಮೆ ನ್ಯಾಯಾಧೀಶರು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಕೆಲವು ಮಾತುಗಳನ್ನು ಹೇಳಬೇಕಾಗುತ್ತದೆ, ನಾನು ಅಂತದ್ದೆ ನಿಲುವು ತೆಗೆದುಕೊಂಡು ಹೇಳಲಿದ್ದೇನೆ. ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ-ಅರ್ಚನೆಯನ್ನು ನಿಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ. ಬದಲಿಗೆ, ನಾವು ಸಂವಿಧಾನದ ಪೀಠಿಕೆಯ ಚಿತ್ರವನ್ನು ಇಟ್ಟುಕೊಂಡು ಅದಕ್ಕೆ ನಮಸ್ಕರಿಸಬೇಕಾಗಿದೆ. ಸಂವಿಧಾನವು ಜಾರಿಯಾಗಿ 75 ವರ್ಷಗಳನ್ನು ಪೂರೈಸಿದಾಗ, ಅದರ ಘನತೆಯನ್ನು ಕಾಪಾಡಿಕೊಳ್ಳಲು, ನಾವು ಈ ಹೊಸ ಪದ್ಧತಿಯನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.
ಮಾರ್ಚ್ 3 ರಂದು ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಹೊಸ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಓಕ ಅವರು ಮಾತನಾಡಿ, ಸಂವಿಧಾನದ ಪೀಠಿಕೆಯ ‘ಜಾತ್ಯತೀತ’ ಮತ್ತು ‘ಪ್ರಜಾಪ್ರಭುತ್ವ’ ಪದಗಳು ಬಹಳ ಮುಖ್ಯ ಅದನ್ನು ನಾವು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
“ಸಂವಿಧಾನವು 75 ವರ್ಷಗಳನ್ನು ಪೂರೈಸಿದೆ. ಡಾ. ಅಂಬೇಡ್ಕರ್ ಅವರು ನಮಗೆ ಆದರ್ಶ ಸಂವಿಧಾನವನ್ನು ನೀಡಿದ್ದಾರೆ, ಇದರಲ್ಲಿ ಜಾತ್ಯತೀತತೆಯ ಉಲ್ಲೇಖವಿದ್ದು ಇದು ಎಷ್ಟು ಮುಖ್ಯವಾದದ್ದು ಎಂಬುದನ್ನು ಕಂಡುಕೊಳ್ಳಬೇಕಿದೆ. ನಮ್ಮ ನ್ಯಾಯಾಲಯ ವ್ಯವಸ್ಥೆಯನ್ನು ಬ್ರಿಟಿಷರು ರಚಿಸಿರಬಹುದು ಆದರೆ ಅದು ನಮ್ಮ ಸಂವಿಧಾನದಿಂದ ನಡೆಯುತ್ತಿದೆ. ನ್ಯಾಯಾಲಯಗಳು ಸಂವಿಧಾನದಿಂದ ರೂಪಿಸಲ್ಪಟ್ಟಿದೆ ಎಂದು ಹೇಳಿದ್ದಾರೆ
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ, ನ್ಯಾಯಾಲಯದ ಆವರಣದಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾದರೂ ಅವುಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ಕರ್ನಾಟಕದಲ್ಲಿದ್ದಾಗ, ನಾನು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಲು ಹಲವು ಬಾರಿ ಪ್ರಯತ್ನಿಸಿದೆ ಆದರೆ ನಾನು ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಸಂವಿಧಾನ ಜಾರಿಯಾಗಿ 75 ವರ್ಷಗಳನ್ನು ಪೂರ್ಣಗೊಳಿಸುವ ಈ ಸುಸಂದರ್ಭದಲ್ಲಿ ನಮಗೆ ಜಾತ್ಯತೀತತೆಯನ್ನು ಮುನ್ನಡೆಸಲು ಉತ್ತಮ ಸಮಯವಾಗಿದೆ” ಎಂದು ಅವರು ಹೇಳಿದರು.