ಕೌರ್ ನಡೆಯನ್ನು ಸಾತ್ವಿಕ ಆಕ್ರೋಶವಾಗಿ ನೋಡಿ, ಅದನ್ನು ಅಲ್ಲಿಗೆ ಬಿಡಬಹುದಿತ್ತು. ಆದರೆ ಅದನ್ನು ವೀರಾವೇಶದಿಂದ ಕೊಂಡಾಡಿದ್ದು, justify ಮಾಡಿದ್ದು, ಬಿಜೆಪಿ ಅಂಧಭಕ್ತರು ನಡೆಯನ್ನು ಸಮರ್ಥಿಸಿದಂತೆ ನನಗೆ ಕಂಡಿತು. ಬಿಜೆಪಿಯವರ ‘ಭಾಷೆ’ಯಲ್ಲೇ ನಾವೂ ಮಾತನಾಡಲು ಹೊರಟರೆ, ನಾವು ಗೆಲ್ಲುವುದಿಲ್ಲ. ಅವರು ಆ ‘ಭಾಷೆ’ಯಲ್ಲಿ ಗೋಧ್ರಾದಂತಹ ಮಹಾಕಾವ್ಯಗಳನ್ನು ಬರೆದವರು. ನಾವಿನ್ನೂ ಕಾಗುಣಿತ ಕಲಿಯುತ್ತಿದ್ದೇವೆ. ಮತ್ತು ಅದರಲ್ಲಿ ನಾವೆಷ್ಟೇ ನಿಪುಣರಾದರೂ, ಅವರನ್ನು ಸೋಲಿಸಲು ಆಗುವುದಿಲ್ಲ – ಎಸ್ ಕುಮಾರ್
ಈ ಬಾರಿಯ ಚುನಾವಣೆಯ ಬಹುದೊಡ್ಡ ತಿರುವು ಸರ್ವಾಧಿಕಾರದತ್ತ ಹೊರಳಿಬಿಡಬಹುದೆಂಬ ಆತಂಕದಲ್ಲಿದ್ದ ನಮ್ಮನ್ನು ನಿರಾಳಗೊಳಿಸಿದ್ದು. ಹಾಗಾಗಿ ಮಾತನಾಡುವ, ನಮ್ಮ ಸಿಟ್ಟು ಹೊರಹಾಕುವ, ಧೈರ್ಯವನ್ನು ಕೊಟ್ಟಿದೆ. ಇನ್ನು ಮುಂದೆ ಬಿಜೆಪಿಯನ್ನೋ, ಬಲಪಂಥೀಯರನ್ನೋ ಠೀಕಿಸುವವರು ಧೈರ್ಯವಾಗಿ ಹೊರಬರುತ್ತಾರೆ, ಮಾತನಾಡುತ್ತಾರೆ. ಇದು ಬಹಳ ಮುಖ್ಯವಾಗಿ ಆಗಬೇಕಾದ್ದು. ಬಿಜೆಪಿ-ಆರ್‍ಎಸ್‌ಎಸ್ ಅಥವಾ ಯಾವುದೇ ನಿರಂಕುಶ ಪ್ರಭುತ್ವ ಮೊದಲು ಕೊಲ್ಲುವುದು ಸಂವಾದವನ್ನು. ಯಾಕಂದ್ರೆ ಅದು ಧೈರ್ಯ, ವೈಚಾರಿಕ ಸ್ಪಷ್ಟತೆ, ಸಾಮುದಾಯಿಕ ಶಕ್ತಿಯಾಗಿ ವಿಸ್ತರಿಸುವ, ಬೆಳೆಯುವ ಅವಕಾಶಗಳನ್ನು ಜೀವಂತವಾಗಿರಿಸುತ್ತದೆ. ಆದರೆ ಈ ಹತ್ತು ವರ್ಷಗಳಲ್ಲಿ ಅದನ್ನು ಹಲವು ರೀತಿಯಲ್ಲಿ ಹತ್ತಿಕ್ಕಲಾಗಿತ್ತು. ಆದರೆ ಫಲ ಕೊಟ್ಟಿಲ್ಲ. ಹಾಗಾಗಿ ಧ್ರುವ್ ರಾಠಿಯಿಂದ ಸ್ಫೂರ್ತಿ ಪಡೆದ ಅನೇಕರು ಧೈರ್ಯವಾಗಿ ಟೀಕಿಸುತ್ತಾರೆ. ಇನ್ನಷ್ಟು ಬೇರೆ ಬೇರೆ ಮಾದರಿ, ವ್ಯಕ್ತಿ, ವಿಚಾರಗಳಿಂದ ಸ್ಫೂರ್ತಿ ಪಡೆದವರು, ತಮ್ಮ ಟೀಕೆ, ತಕರಾರು, ವಿಮರ್ಶೆಗಳನ್ನು ಹೊರ ಹಾಕುತ್ತಾರೆ. ಭಾರತದ ಪ್ರತಿಯೊಬ್ಬ ಸಾಮಾನ್ಯನಿಗೆ ಮರಳಿರುವ ಈ ಆತ್ಮಸ್ಥೈರ್ಯ ನಿಜಕ್ಕೂ ಆಶಾದಾಯಕವಾದದ್ದು.
ಇದೆಲ್ಲಾ ಯೋಚಿಸುತ್ತಿರುವಾಗಲೇ ಗುರುವಾರ ಚಂಡೀಗಢದ ವಿಮಾನ ನಿಲ್ದಾಣಲ್ಲಿ ನಡೆದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಟಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಂಗನಾ ರಣಾವತ್‌ಗೆ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿ ಕಪಾಳಕ್ಕೆ ಹೊಡೆದ ಘಟನೆ ವರದಿಯಾಯಿತು. ಕಂಗನಾ ಕಳೆದ ಕೆಲವು ವರ್ಷಗಳಿಂದ ಮೋದಿ ಮತ್ತು ಬಿಜೆಪಿಯನ್ನು ಓಲೈಸುವುದಕ್ಕಾಗಿ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದವರು. ಅವುಗಳಲ್ಲಿ ಒಂದು ದೆಹಲಿ ಗಡಿಗಳಲ್ಲಿ ಹೋರಾಟಕ್ಕೆ ಬಂದ ರೈತರನ್ನು ಖಾಲಿಸ್ತಾನಿಗಳು, 100 ರೂ ಆಸೆಗೆ ಹೋರಾಟಕ್ಕೆ ಬಂದವರು ಎಂದು ಕರೆದದ್ದು. ಕಂಗನಾರ ಈ ಹೇಳಿಕೆಯಿಂದ ನೊಂದಿದ್ದ CISF ಯೋಧೆ ಕುಲ್ವಿಂದರ್ ಕೌರ್ ವಿಮಾನ ನಿಲ್ದಾಣದಲ್ಲಿ ಅವರ ಕಪಾಳಕ್ಕೆ ಹೊಡೆದಿದ್ದರು. “100 ರೂ ಆಸೆಗೆ ಹೋರಾಟಕ್ಕೆ ಬಂದವರು ಎಂದು ಹೇಳಿದ್ರಲ್ಲ.. ಅಲ್ಲಿ ನಮ್ಮಮ್ಮ ಹೋರಾಟಕ್ಕೆ ಕೂತಿದ್ದರು” ಎಂದು ಕೌರ್ ಹೇಳಿದ ಮಾತುಗಳು ವಿಡಿಯೋ ರೂಪದಲ್ಲಿ ವೈರಲ್ ಆಗಿವೆ.
ಕೌರ್ ಕಂಗನಾಗೆ ಹೊಡೆದ ಕೆಲವೇ ನಿಮಿಷಗಳಲ್ಲಿ ಸುದ್ದಿ ವ್ಯಾಪಕವಾಗಿ ಹರಡಿ, ಶೇರ್ನಿ (ಸಿಂಹಿಣಿ) ಎಂದು ಕೌರ್‌ಳನ್ನು ಹೊಗಳಲಾಯ್ತು. ಕಂಗನಾಗೆ ಹೊಡೆದದ್ದು ಸರಿ, ಇನ್ನೊಂದು ಹೊಡೆಯಬೇಕಿತ್ತು, ಮಂಗಳಾರತಿ, ಕಪಾಳಮೋಕ್ಷ ಇತ್ಯಾದಿ ಮಾತುಗಳು ಕೇಳಿ ಬಂದವು. ಕೆಲವರು ಇದು ಸರಿಯಲ್ಲ. ಕೌರ್ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯಾಗಿ ಹೀಗೆ ಮಾಡಬಾರದಿತ್ತು. ಹಿಂಸೆಯ ಮಾರ್ಗ ಅನುಸರಿಸಬಾರದಿತ್ತು ಎಂಬ ವಾದವೂ ಕೇಳಿ ಬರಲಾರಂಭಿಸಿತು.
ಅನೇಕರು ಇದೊಂದು ರೋಚಕ ಸಂಗತಿ ಎಂಬಂತೆ ಸಂಭ್ರಮಿಸಿದರು. ವೈಚಾರಿಕ ಬೇಧವಿರುವ ಬಣದಲ್ಲಿ ಕಂಗನಾ ನಿಂತಿದ್ದಾರೆ. ಹಾಗಾಗಿ ಆ ಬಣದೊಂದಿಗೆ ಇರುವ ತಕರಾರಿನ ಕಾರಣಕ್ಕೆ ಕಂಗನಾಗೆ ಆದ ಕಪಾಳಮೋಕ್ಷ, ಆಕೆಯ ವಿಚಾರ ಬದ್ಧತೆಗೆ ಕೊಟ್ಟ ಪೆಟ್ಟು ಎಂದು ಭಾವಿಸಿ ಸಂಭ್ರಮಿಸಿದ್ದಾರೆ. ಕೌರ್ ಳ ಆಳದಲ್ಲಿದ್ದ ಸ್ವಾಭಿಮಾನ, ತನ್ನವರಿಗೆ ಆದ ಅವಮಾನದ ಆಕ್ರೋಶ ಆ ಹೊತ್ತು ಹೊರಬಿದ್ದಿತು. ಈ ಕಾರಣಕ್ಕೆ ಕಂಗನಾರ ಕಪಾಳಕ್ಕೆ ಹೊಡೆದ ನಿಲುವು ಸಮರ್ಥನೀಯ ಎಂದೇ ಎಲ್ಲರ ವಾದವಾಗಿತ್ತು.
ಆದರೆ, ಇಂತಹ ನಿಲುವು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನೂ ಯೋಚಿಸಬೇಕಿತ್ತು. ಘಟನೆ ನಡೆದ ತುಸು ಹೊತ್ತಿನಲ್ಲಿ ಕಂಗನಾ ಒಂದು ವಿಡಿಯೋ ಬಿಡುಗಡೆ ಮಾಡಿದರು. ಘಟನೆಯ ಕುರಿತು ‘ಪಂಜಾಬಿನಲ್ಲಿ ಹೆಚ್ಚುತ್ತಿರುವ ಉಗ್ರವಾದ, ಆತಂಕವಾದವನ್ನು ಹೇಗೆ ನಿಯಂತ್ರಿಸ್ತೀವಿ ಎಂಬುದು ನನ್ನ ಆತಂಕ” ಎಂದು ಹೇಳಿ ವಿಡಿಯೋ ಮುಗಿಸಿದ್ದಾರೆ. ಕಂಗನಾ ರಣಾವತ್‌ಗೆ ಹೊಡೆದ ಘಟನೆಯನ್ನು ಕೇವಲ ಕಪಾಳಮೋಕ್ಷಕ್ಕೆ ಸೀಮಿತಗೊಳಿಸಿ ಸಂಭ್ರಮಿಸಿದ್ದಕ್ಕೆ, ಕಂಗನಾ ಪಂಜಾಬಿಗಳನ್ನು ಉಗ್ರವಾದದ ಚೌಕಟ್ಟಿಗೆ ಸಾರ್ವತ್ರೀಕರಿಸುವ ಹೇಳಿಕೆ ನೀಡಿಬಿಟ್ಟರು.
ಕೌರ್ ನಡೆಯನ್ನು ಸಾತ್ವಿಕ ಆಕ್ರೋಶವಾಗಿ ನೋಡಿ, ಅದನ್ನು ಅಲ್ಲಿಗೆ ಬಿಡಬಹುದಿತ್ತು. ಆದರೆ ಅದನ್ನು ವೀರಾವೇಶದಿಂದ ಕೊಂಡಾಡಿದ್ದು, justify ಮಾಡಿದ್ದು, ಬಿಜೆಪಿ ಅಂಧಭಕ್ತರು ನಡೆಯನ್ನು ಸಮರ್ಥಿಸಿದಂತೆ ನನಗೆ ಕಂಡಿತು.
ಒಂದು ಗಮನಿಸಬೇಕು; ಬಿಜೆಪಿಯವರ ‘ಭಾಷೆ’ಯಲ್ಲೇ ನಾವೂ ಮಾತನಾಡಲು ಹೊರಟರೆ, ನಾವು ಗೆಲ್ಲುವುದಿಲ್ಲ. ಅವರು ಆ ‘ಭಾಷೆ’ಯಲ್ಲಿ ಗೋಧ್ರಾದಂತಹ ಮಹಾಕಾವ್ಯಗಳನ್ನು ಬರೆದವರು. ನಾವಿನ್ನೂ ಕಾಗುಣಿತ ಕಲಿಯುತ್ತಿದ್ದೇವೆ. ಮತ್ತು ಅದರಲ್ಲಿ ನಾವೆಷ್ಟೇ ನಿಪುಣರಾದರೂ, ಅವರನ್ನು ಸೋಲಿಸಲು ಆಗುವುದಿಲ್ಲ. ನಾವು ಬೇರೆಯದೇ ‘ಭಾಷೆ’ಯನ್ನು ಬಳಸಿ, ಬಿಜೆಪಿ ಅರ್ಥ ಮಾಡಿಕೊಳ್ಳುವುದಕ್ಕೆ ಹೆಣಗಾಡುವಂತೆ ಮಾಡಬೇಕು. ಅಲ್ಲಿ ನಮ್ಮ ಗೆಲುವಿದೆ ಎಂದು ನನಗೆ ಬಲವಾಗಿ ಅನ್ನಿಸುತ್ತದೆ. ಸ್ವಲ್ಪ ಅಸಂಗತವಾಯ್ತಲ್ಲವೆ?
ʼಒಂದು ವರ್ಷ ಕಾಲ ದೆಹಲಿಯ ಗಡಿಯಲ್ಲಿ ತನ್ನ ತಾಯಿಯೂ ಸೇರಿದಂತೆ ಸಾವಿರಾರು ಪಂಜಾಬ್-ಹರ್ಯಾಣದ ರೈತರು ಸತ್ಯಾಗ್ರಹ ನಡೆಸಿದರು. ಈ ಒಂದು ವರ್ಷದ ಅವಧಿಯಲ್ಲಿ ನಾನೂ ಪ್ರತಿ ದಿನವೂ ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದ್ದೇನೆ. 700ಕ್ಕೂ ಹೆಚ್ಚು ರೈತರು ಸತ್ತರು, ಕೋವಿಡ್‌ನ ನೆಪದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ನೋಡಿದ್ದೇನೆ. ಮುಳ್ಳು ಬೇಲಿ, ಮೊಳೆ, ತಡೆ ಗೋಡೆಗಳು ಕಣ್ಣ ಮುಂದೆ ಇವೆ. ಇಷ್ಟಾಗಿಯೂ ಸಂಯಮ ಕಳೆದುಕೊಳ್ಳದ ಪಂಜಾಬಿನ ಮಂದಿ ಹಿಂಸೆಯನ್ನು ಪ್ರತಿರೋಧದ ಅಸ್ತ್ರವನ್ನೇಕೆ ಮಾಡಿಕೊಳ್ಳಲಿಲ್ಲ? ಪಂಜಾಬಿನ ಜನ ಪ್ರೀತಿಯಲ್ಲೂ ಧಾರಾಳಿಗರು, ಕೋಪದಲ್ಲೂ ಧಾರಾಳಿಗರು ಎಂದು ಕೇಳಿದ್ದೇನೆ. ತೊಡೆ ತಟ್ಟಿದ್ದರೆ, ದೆಹಲಿ ಕುರುಕ್ಷೇತ್ರವಾಗುವುದಕ್ಕೆ ಒಂದು ವಾರವೂ ಬೇಕಿರಲಿಲ್ಲ. ಆದರೆ ಒಂದು ವರ್ಷ ಪಟ್ಟು ಹಿಡಿದು ಕೂತಿದ್ದೇಕೆ?” ಕೌರ್ ಳ ಆಕ್ರೋಶವನ್ನು ಸಾತ್ವಿಕ ಹಿಂಸೆ ಎಂದು ಸಮರ್ಥಿಸಿದವರು ಮತ್ತು ಸ್ವತಃ ಕೌರ್ ಹೀಗೆ ನೆನಪಿಸಿ ಕೊಳ್ಳಬೇಕಾಗಿತ್ತು.
ನಮ್ಮ ಆಲೋಚನೆಗಳು ಇದೇ ನೆಲೆಯಲ್ಲಿ ಬಿಚ್ಚಿಕೊಳ್ಳಬೇಕಿತ್ತು ಎಂಬುದು ನನ್ನ ನಿರೀಕ್ಷೆಯಾಗಿತ್ತು.
ಕೌರ್ ಕಪಾಳಕ್ಕೆ ಹೊಡೆದಿದ್ದು ಸಹಜವಾದ ಔಟ್ ಬರ್ಸ್ಟ್ ಎಂದು ಗ್ರಹಿಸಿ ಅದು ಕೇವಲ ಕಂಗನಾರಿಗೆ ಹೊಡೆದದ್ದಷ್ಟೇ ಅಲ್ಲ ಎಂದು ಬಿಟ್ಟಿದ್ದರೆ ಕೌರ್ ನಡೆಗೂ ಒಂದು ತೂಕ ಬಂದಿರುತ್ತಿತ್ತು. ಕಂಗನಾ ಅಲ್ಲಿ ನಿಜಕ್ಕೂ ಕ್ಷುಲ್ಲಕವಾಗಿ ಬಿಡುತ್ತಿದ್ದರು.
ನಾನು ಈ ಘಟನೆಯನ್ನು ನೋಡಿದ್ದು ಹೀಗೆ- ಸರ್ಕಾರ ಬದಲಾಗಿದೆ. ಹತ್ತು ವರ್ಷದ ದಬ್ಬಾಳಿಕೆಯ ಬಳಿಕ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ. ಎಲ್ಲರಿಗೂ ಧೈರ್ಯ ಬಂದಿದೆ. ಅದುವೇ ಕೌರ್ ಕಪಾಳ ಮೋಕ್ಷ ಪ್ರಕರಣದಲ್ಲಿ ವ್ಯಕ್ತವಾಗುತ್ತಿದೆ. ಕಂಗನಾಗೆ ಹೊಡೆದಿದ್ದು, ಮೋದಿಗೆ, ಬಿಜೆಪಿಗೆ ಹೊಡೆದಂತೆ. ನಿಮ್ಮ ದರ್ಪ, ದೌಲತ್ತುಗಳನ್ನು ನೋಡಿ ಸಾಕಾಗಿದೆ. ನಮಗೆ ನೀವೇನು ಮಾಡಿದ್ದೇರೆಂಬುದು ಗೊತ್ತಿದೆ. ನಾವು ಮರೆತಿಲ್ಲ ಎಂದು ಎಚ್ಚರಿಸುವುದಕ್ಕೆ ನೀಡಿದ ಕಪಾಳಮೋಕ್ಷವಿದು ಎಂದುಕೊಂಡೆ. ಸಂವಿಧಾನವನ್ನು ಬದಲಿಸುತ್ತೇವೆ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುತ್ತೇವೆ ಎಂದು ಹೇಳಿದವರನ್ನು ಬೆಂಬಲಿಸಲು ಹೊರಟ, ಜಾತ್ಯತೀತ ಮೌಲ್ಯಗಳನ್ನು ಇಂದಿಗೂ ತಮ್ಮ ರಾಜಕೀಯ ಬತ್ತಳಿಕೆಯಲ್ಲಿ ಇರಿಸಿಕೊಂಡಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡುರವರಿಗೆ ಎಚ್ಚರಿಕೆ ಈ ಕಪಾಳ ಮೋಕ್ಷ ಎಂದು ಭಾವಿಸಿದೆ. ತರ್ಕವಿಲ್ಲದ, ಆಧಾರವಿಲ್ಲದ, ಅಸಹ್ಯ, ಅಪದ್ಧಗಳನ್ನು ಹೊರಹಾಕಿಯೂ ಸಾಮಾಜಿಕ ಮನ್ನಣೆ ಪಡೆದ ಮಾತ್ರಕ್ಕೆ ನಿಮಗೆ ಗೌರವ ಸಿಕ್ಕುವುದಿಲ್ಲ ಎಂಬುದನ್ನು ಎಲ್ಲ ನಾಯಕರಿಗೂ ತಲಪಿಸಿ ಅವರನ್ನು ಎಚ್ಚರಿಸುವುದಕ್ಕಾಗಿ ಈ ಕಪಾಳ ಮೋಕ್ಷ ಎಂದು ಭಾವಿಸಿದೆ.
ಸಾರ್ವಜನಿಕ ವಲಯದ ಸಂವೇದನಾಶೀಲರು, ವಿಶ್ಲೇಷಿಸಬೇಕಾಗಿದ್ದು, ನೋಡಬೇಕಾಗಿದ್ದು, ಚರ್ಚಿಸಬೇಕಾಗಿದ್ದು ಈ ನಿಟ್ಟಿನಲ್ಲಿ. ಮಬ್ಬಕ್ತರಂತೆ ನಾವೂ ಸ್ಪಂದಿಸಿದ್ದು ನಿಜಕ್ಕೂ ಖೇದಕರ.
ಬಿಜೆಪಿ ಇಂದು ಬಹುಮತಗಳಿಸಿಲ್ಲ. ಆದರೆ ಅದರ ಸಂಘಟನಾ ಚತುರತೆ, ಸಂಪನ್ಮೂಲಗಳ ಅಗಾಧತೆಯ ಮುಂದೆ ದೇಶದ ಯಾವ ರಾಜಕೀಯ ಶಕ್ತಿಯೂ ನಿಲ್ಲಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಖಾತೆ ತೆರೆದಿಲ್ಲ ಎಂದು ಸಂಭ್ರಮಿಸುತ್ತಿದ್ದೇವೆ. ಆದರೆ ಮತಗಳಿಕೆ ಹೆಚ್ಚಿದೆ. ಕೇರಳದಲ್ಲಿ ಖಾತೆ ತೆರೆದಿದೆ. ಕರ್ನಾಟಕದಲ್ಲಿ ಕಳೆದ ಬಾರಿಯಂತೆ ಹೆಚ್ಚಿನ ಸ್ಥಾನಗಳನ್ನು ಗೆದ್ದಿಲ್ಲ ಎಂದು ನೆಮ್ಮದಿಯಾಗಿದ್ದೇವೆ. ಆದರೆ ಅದು ತನ್ನ ಮತಗಳಿಕೆಯನ್ನು ಭದ್ರಗೊಳಿಸಿಕೊಂಡಿದೆ ಎಂಬುದು ಗಮನಾರ್ಹ. ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದೇ ಬಿಜೆಪಿ ಅಥವಾ ಬಲಪಂಥೀಯ ವಿಚಾರಧಾರೆಯ ಮೊದಲ ಆದ್ಯತೆ. ಅದು ಎಂದಿಗೂ ಫಲಕೊಡುತ್ತದೆ ಎಂಬ ವಿಶ್ವಾಸ ಅದಕ್ಕೆ. ಅದನ್ನು ಎದುರಿಸುವುದು ಇಂತಹ ಶೀಘ್ರಸ್ಖಲನದ ಉತ್ಸಾಹದಲ್ಲಿ ಅಲ್ಲ ಎಂಬುದು ನಮ್ಮ ಎಚ್ಚರವಾಗಬೇಕು.
ಈ ಬರಹ ಮುಗಿಸುವ ಹೊತ್ತಿಗೆ ನನ್ನ ಗಮನಕ್ಕೆ ಬಂದ ಎರಡು ಮೂರು ವಿಷಯಗಳನ್ನು ಹೇಳಿ ಮುಗಿಸುತ್ತೇನೆ.
- ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ತುಂಡರಿಸಿದ್ದು ಹಳ್ಳಿಗಳು. ಪ್ರತಿ ಎರಡು ಹಳ್ಳಿಗಳಲ್ಲಿ ಒಂದು ಹಳ್ಳಿ ಬದಲಾವಣೆಗೆ ಮತ ಹಾಕಿದೆ. ಅಲ್ಲಿ ಬಡತನ, ನಿರುದ್ಯೋಗ, ಅಭದ್ರತೆಗಳು ಬಿಜೆಪಿ ವಿರುದ್ಧ ಮತಚಲಾಯಿಸುವುದಕ್ಕೆ ಪ್ರೇರೇಪಿಸಿವೆ. ಬಹಳ ಮುಖ್ಯವಾಗಿ ಸಂವಿಧಾನ ಬದಲಾವಣೆಯ ಭಯ.
- ನಿನ್ನೆಯ ಘಟನೆ ನಡೆದ ಕೂಡಲೇ ಬಿಜೆಪಿಯ ಮುಖವಾಣಿಯೇ ಆಗಿರುವ ಎಎನ್‌ಐ ಸುದ್ದಿ ಸಂಸ್ಥೆ ಮಂಡಿಯ ಕಾಂಗ್ರೆಸ್‌ನ ಸೋತ ಅಭ್ಯರ್ಥಿ ವಿಕ್ರಮಾದಿತ್ಯ ಅವರ ಪ್ರತಿಕ್ರಿಯೆ ಕೇಳಿತು. ಆತ ಅತ್ಯಂತ ಸಂಯಮ ಹಾಗೂ ಘನತೆಯಿಂದ, “ಇದು ನಡೆಯಬಾರದ ಘಟನೆ. ಮಹಿಳೆ ಮತ್ತು ಸಂಸದೆ, ಅವರೊಂದಿಗೆ ಭದ್ರತಾ ಅಧಿಕಾರಿಯೊಬ್ಬರು ಹೀಗೆ ನಡೆದುಕೊಂಡಿದ್ದು ದುರಾದೃಷ್ಟಕರ’ ಎಂದಿದ್ದಾರೆ. ನಮಗೆ ಬೇಕಾಗಿರುವುದು ಇಂತಹ ಸಂಯಮ. ಈತ ಮಂಡಿ ಕ್ಷೇತ್ರದಲ್ಲಿ ಅತ್ಯಂತ ಭರವಸೆಯ ಅಭ್ಯರ್ಥಿಯಾಗಿ, ಜನಪ್ರೀತಿ ಗಳಿಸಿಕೊಂಡವರು.
- ಎನ್‌ಡಿಎ ಸಭೆಯಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗುತ್ತಿರುವ ನರೇಂದ್ರ ಮೋದಿ, ಸಂವಿಧಾನದ ಪ್ರತಿಗೆ ನಮಸ್ಕರಿಸಿದ ವಿಡಿಯೋ ಹೊರಬಿತ್ತು. 400 ಸ್ಥಾನ ಕೊಡಿ, ಸಂವಿಧಾನವನ್ನು ಬದಲಿಸುತ್ತೇನೆ ಎಂಬ ಅಜೆಂಡಾವೊಂದು ಚುನಾವಣೆಯ ಪೂರ್ವದಲ್ಲಿ, ಚುನಾವಣೆಯ ಉದ್ದಕ್ಕೂ ಕೇಳಿ ಬಂದಿತ್ತು. ಆದರೆ ಸಂವಿಧಾನದ ಮುಂದೆ ತಲೆಬಾಗಲೇ ಬೇಕಾಯ್ತು.
ಹೋರಾಟ ಇನ್ನೂ ಇದೆ. ವ್ಯರ್ಥ ಉಗ್ರತೆಯಲ್ಲಿ ಶಕ್ತಿ ಮತ್ತು ಯುಕ್ತಿ ಕಳೆದು ಹೋಗುತ್ತದೆ. ಈ ನೆಲದ ಮಾನವೀಯ ಮೌಲ್ಯಗಳನ್ನು, ಘನತೆಯನ್ನು ಜೀವಂತವಾಗಿರಿಸಿಕೊಳ್ಳಲು ಸಂಯಮದ ಸಂವಾದದಿಂದ ಮಾತ್ರ ಸಾಧ್ಯ. ಇದು ನಮ್ಮ ಎಚ್ಚರವಾಗಿರಬೇಕೆಂಬ ಆಶಯವನ್ನು ಜೀವಂತವಾಗಿ ಇರಿಸಿಕೊಳ್ಳಬೇಕಿರುವುದೇ ಸವಾಲು.
ಎಸ್ ಕುಮಾರ್
ಇದನ್ನೂ ಓದಿ- ಮದಿಸಿದ ಆನೆಯ ಮದವಡಗಿಸಿದ ಮಹಾಜನತೆ