ಆರ್ ಜಯಕುಮಾರ್ ಅಗಲಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಸ್ವತಃ ಅವರಿಗೇ ಗೊತ್ತಿತ್ತು, ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು. ಅದಕ್ಕಾಗಿಯೇ ಅವರು ʻಗಾಂಧಿ ಮರೆತ ನಾಡಿನಲ್ಲಿʼ ಮತ್ತು ʻಕಾಡು ಹಾದಿಯ ಬೆಳಕಿನ ಜಾಡಿನಲ್ಲಿʼ ಎಂಬ ಎರಡು ಪುಸ್ತಕಗಳನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದ್ದರು. ಪುಸ್ತಕಗಳ ಬಿಡುಗಡೆಗೂ ಮುನ್ನ ನನಗೆ ʻಕಾಡು ಹಾದಿಯ ಬೆಳಕಿನ ಜಾಡಿನಲ್ಲಿʼ ಪುಸ್ತಕದ ಪಿಡಿಎಫ್ ಕಳಿಸಿದ್ದರು. ಪಿಡಿಎಫ್ ಓದುವುದು ಕಷ್ಟ. ಆದರೂ ಓದಲು ಆರಂಭಿಸಿದ್ದೆ. ನಾವು ಒಡನಾಡಿದ ಜಯಕುಮಾರ್ ಅವರ ಬದುಕಿನ ಹಿನ್ನೆಲೆ ಓದಿ ಗಾಬರಿಯಾಗಿಹೋಗಿತ್ತು. ಆ ಕೃತಿ ಓದಲು ಗಟ್ಟಿ ಗುಂಡಿಗೆ ಬೇಕು.
ಜಯಕುಮಾರ್ ಅವರನ್ನು ಮೊದಲು ನೋಡಿದ್ದು, 1997-98ರಲ್ಲಿ ಇರಬೇಕು. ಅವರು ಹಾಸನಕ್ಕೆ ಸಂಯುಕ್ತ ಕರ್ನಾಟಕ ವರದಿಗಾರರಾಗಿ ಬಂದಿದ್ದರು. ಕುರುಚಲು ಕಪ್ಪುಗಡ್ಡ, ಸುಟ್ಟೇ ಬಿಡುವಂಥ ನೋಟದ ಕಣ್ಣುಗಳು, ಗಂಟೆ ಹೊಡೆದಂಥ ಧ್ವನಿ. ಹಾಸನದಲ್ಲಿ ಸಂಯುಕ್ತ ಕರ್ನಾಟಕದ ಪೂರ್ಣಪ್ರಮಾಣದ ಉದ್ಯೋಗಿಯನ್ನು ವರದಿಗಾರರನ್ನಾಗಿ ಹಾಕುವ ಪರಿಪಾಠ ಇರಲಿಲ್ಲ. ಸಾಧಾರಣವಾಗಿ ಬಿಡಿವರದಿಗಾರರೇ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಜಯಕುಮಾರ್ ಬಂದಿದ್ದೇ ಒಂದು ಆಶ್ಚರ್ಯವಾಗಿತ್ತು. ಅದನ್ನು ಅವರೇ ಒಂದು ಭಾಷಣದಲ್ಲಿ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದರು. ಸಂಯುಕ್ತ ಕರ್ನಾಟಕದ ಆಗಿನ ಸಂಪಾದಕ ಶಾಮರಾವ್ ಅವರು ಉದ್ದೇಶಪೂರ್ವಕವಾಗಿ ಜಯಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಅಷ್ಟೇ ಅಲ್ಲ, ಅವರಿಗೊಂದು ಸ್ಪಷ್ಟವಾದ ಟಾಸ್ಕ್ ಕೊಟ್ಟಿದ್ದರು. ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಕನಿಷ್ಠ ದಿನಕ್ಕೆ ಐದು ಸ್ಟೋರಿಗಳನ್ನು ಅವರು ಕೊಡಬೇಕಿತ್ತು! ತಮಾಶೆ ಎಂದರೆ ದೇವೇಗೌಡರು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿದ ಮೇಲೆ ಶಾಮರಾಯರು ಗೌಡರೊಂದಿಗೆ ಆತ್ಮೀಯರಾಗಿಬಿಟ್ಟರಂತೆ! ಜೊತೆಗೆ ಜಯಕುಮಾರ್ ಅವರಿಗೆ ಬಡ್ತಿಯೂ ಸಿಕ್ಕಿಬಿಟ್ಟಿತ್ತು!
ಇದ್ಯಾವುದೂ ನಮಗೆ ಗೊತ್ತಿರಲಿಲ್ಲ. ನಾನು ಆಗಿನ್ನೂ ಓದುತ್ತಿದ್ದೆ, ಅದರ ಜೊತೆಗೆ ಪತ್ರಿಕೋದ್ಯಮದ ಹುಚ್ಚಿತ್ತು. ಒಡನಾಟ ಶುರುವಾಗಿತ್ತು. ಜಯಕುಮಾರ್ ಎಷ್ಟು ಮಾತಾಡಿದರೂ ಕೇಳುತ್ತಲೇ ಇರಬೇಕು ಅನ್ನಿಸುತ್ತಿತ್ತು. ಎಸ್ ಎಫ್ ಐ, ಡಿವೈಎಫ್ ಐ ನಲ್ಲಿ ಪಳಗಿದ ಕೈ ಅವರು. ಹೀಗಾಗಿ ಎಲ್ಲ ವಿಷಯಗಳ ಕುರಿತು ಅವರಿಗೆ ಸ್ಪಷ್ಟ ತಿಳಿವಳಿಕೆ ಇತ್ತು. ನಾನು ಮತ್ತು ಅವರು ಹಾಸನದ ಎವಿಕೆ ಕಾಲೇಜಿನ ಕಾಮರ್ಸ್ ವಿಭಾಗದವರು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದೆವು. ಎಷ್ಟು ವಿದ್ವತ್ ಪೂರ್ಣವಾದ ಮಾತುಗಳು ಎಂದು ಎಲ್ಲರೂ ತಲೆದೂಗಿದ್ದರು. ಆ ಕಾಲಕ್ಕೆ ನಮಗೆ ಉದಾರೀಕರಣ, ಖಾಸಗೀಕರಣಗಳೇ ದೊಡ್ಡ ಶತ್ರು. ನಮ್ಮ ಹೋರಾಟಗಳಲ್ಲಿ, ಮಾತುಗಳಲ್ಲಿ ಜಾಗತೀಕರಣ ಎಂಬ ಶಬ್ದವಿಲ್ಲದೆ ಇರುತ್ತಿರಲಿಲ್ಲ.
ಜಯಕುಮಾರ್ ಹಾಸನದಲ್ಲಿ ಅದ್ಭುತವಾಗಿ ಕೆಲಸ ಮಾಡಿದರು. ಹಾಸನದಲ್ಲಿ ಆ ಕಾಲಕ್ಕೆ ದೇವೇಗೌಡರ ಕುಟುಂಬದ ವಿರುದ್ಧ ಬರೆಯುವುದು ಅಷ್ಟು ಸುಲಭವಿರಲಿಲ್ಲ. ಯಾರಿಗೂ ಆ ಧೈರ್ಯವೂ ಇರುತ್ತಿರಲಿಲ್ಲ. ಜಯಕುಮಾರ್ ಆ ಭೀತಿಯನ್ನು ಕಿತ್ತುಹಾಕಿದ್ದರು. ಅವರಿಗೆ ಶಾಮರಾಯರು ಕೊಟ್ಟ ಟಾಸ್ಕ್ ಸರಿಯಾಗಿ ನಿಭಾಯಿಸಿದರೋ ಇಲ್ಲವೋ ಎರಡನೇ ಪ್ರಶ್ನೆ. ಅಲ್ಲಿದ್ದಷ್ಟು ಕಾಲ ಅವರು ಜನಪರ ಪತ್ರಕರ್ತರಾಗಿಯೇ ಗುರುತಿಸಿಕೊಂಡರು. ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತಂದರು. ಚಳವಳಿಗಳ ಬೆನ್ನಿಗೆ ನಿಂತರು. ಹಾಸನ ಜಿಲ್ಲೆಯಲ್ಲಿ ಸಂಯುಕ್ತ ಕರ್ನಾಟಕದ ಸರ್ಕ್ಯುಲೇಷನ್ ಇದ್ದಿದ್ದು ಅಷ್ಟಕ್ಕಷ್ಟೆ. ಆದರೆ ಜಯಕುಮಾರ್ ಒಂದು ಪತ್ರಿಕಾಗೋಷ್ಠಿಯಲ್ಲಿ ಇದ್ದಾರೆಂದರೆ, ರಾಜಕಾರಣಿಗಳು ಭಯಪಡುತ್ತಿದ್ದರು. ಒಮ್ಮೊಮ್ಮೆ ಜಯಕುಮಾರ್ ಬಾರದೆ ಪತ್ರಿಕಾಗೋಷ್ಠಿ ಶುರುವಾಗುತ್ತಲೇ ಇರಲಿಲ್ಲ.
ಆ ದಿನಗಳಲ್ಲಿ ಜಯಕುಮಾರ್ ಹಾಸನ ಜಿಲ್ಲೆಯ ಪತ್ರಿಕಾರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು. ಅವರ ಬೈಲೈನ್ ಬರೆಹಗಳು ಸಾಕಷ್ಟು ಸದ್ದುಮಾಡುತ್ತಿದ್ದವು. ಇದಕ್ಕಿಂತ ಹೆಚ್ಚಾಗಿ ಅವರು ಅಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಚಳವಳಿಗಳಿಗೆ ಜೀವ ತುಂಬುತ್ತ ಹೋಗಿದ್ದು ಅತ್ಯಂತ ಗಮನಾರ್ಹವಾಗಿತ್ತು. ಮೂಲತಃ ಚಳವಳಿಗಳಿಂದ ಬಂದವರಾದ್ದರಿಂದ ಅವರು ಚಳವಳಿಗಾರರ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಒಬ್ಬ ಜರ್ನಲಿಸ್ಟ್ ಆಕ್ಟಿವಿಸ್ಟ್ ಕೂಡ ಆಗಿರಬಲ್ಲ ಎಂಬುದು ಅವರನ್ನು ನೋಡಿ ಅರ್ಥವಾಗಿತ್ತು.
ಜಯಕುಮಾರ್ ನಂತರ ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದರು, ದೊಡ್ಡ ಪತ್ರಿಕೆಗಳ ಸಹವಾಸ ಸಾಕೆಂದು ಮಿನುಗುವ ಚುಕ್ಕಿ ಎಂಬ ಪತ್ರಿಕೆಯನ್ನು ನಡೆಸಿದರು. ರಾಜೇಂದ್ರ ಎಂಬುವವರು ಅದರ ಮಾಲೀಕರಾಗಿದ್ದರು. ನಂತರ ಅವರು ಬೆಂಗಳೂರು ಸೇರಿದರು. ಇತ್ತೀಚಿನ ಹಲವು ವರ್ಷಗಳು ಅವರು ಸತೀಶ್ ಜಾರಕಿಹೊಳಿಯವರ ಮಾನವ ಬಂಧುತ್ವ ವೇದಿಕೆಗಾಗಿ ಕೆಲಸ ಮಾಡಿದರು.
ಜಯಕುಮಾರ್ ಅವರ ಒಡನಾಟದ ಜೊತೆಜೊತೆಗೆ ನಮಗೆ ಡಾ.ಲೀಲಾ ಸಂಪಿಗೆ ಅವರ ಪರಿಚಯವಾಗಿತ್ತು. ಅವರು ಆಗ ಏಡ್ಸ್ ರೋಗದ ಜನಜಾಗೃತಿಗೆ ಕುರಿತಾದ ಎನ್ ಜಿಒ ಒಂದರ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಒಂದು ಪುಟ್ಟ ತಂಡ ಬೀದಿನಾಟಕ ತಯಾರಿಸಿ ಕೆಲ ಕಾಲ ಅವರೊಂದಿಗೆ ಕೆಲಸ ಮಾಡಿದ್ದೆವು.
ಜಯಕುಮಾರ್ ಅವರಿಗೆ ಆಗಿರುವ ಅನಾರೋಗ್ಯದ ಸಮಸ್ಯೆ ಕುರಿತು ಗೆಳೆಯರೊಬ್ಬರು ಹೇಳಿದ ನಂತರ ಅವರೊಂದಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಅವರಿಗಿದ್ದ ಖಾಯಿಲೆ, ಅದು ನೀಡುವ ಯಾತನೆಗಳ ಇಂಚಿಂಚೂ ವಿವರಗಳೂ ನನಗೆ ಗೊತ್ತಿತ್ತು. ಎಂಥವರೂ ಅಧೀರರಾಗುವಂಥ ಸಂಕಷ್ಟಗಳು ಅವು. ಆದರೆ ಅವರು ಖಿನ್ನತೆಗೆ ಒಳಗಾಗಲಿಲ್ಲ. ತಮಗೆ ಇರುವ ಸಮಸ್ಯೆ, ಎಷ್ಟು ಕಾಲ ಬದುಕಬಹುದೆಂಬ ಸ್ಪಷ್ಟತೆ ಇದ್ದ ಮೇಲೂ ಆಗಬೇಕಾದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಪೂರೈಸಿದರು. ಎರಡು ಪುಸ್ತಕಗಳನ್ನು ತಂದರು. ಎಂಥೆಂಥದ್ದೋ ಸಮಸ್ಯೆಗಳನ್ನು ಎದುರಿಸಿ ಮೇಲೆ ಬಂದ ಅವರು, ಸಾವನ್ನೂ ಕೂಡ ಲೆಕ್ಕಿಸಲಿಲ್ಲ.
ಜಯಕುಮಾರ್ 64 ವರ್ಷಗಳಿಗೇ ತೀರಿಕೊಂಡರು. ಖಾಯಿಲೆ ಆಕ್ರಮಿಸಿಕೊಳ್ಳದಿದ್ದರೆ ಕನಿಷ್ಠ ಇನ್ನೂ ಇಪ್ಪತ್ತು ವರ್ಷ ಬದುಕಬಹುದಿತ್ತು. ಆದರೆ ಬದುಕಿದಷ್ಟೂ ದಿನ ಅವರು ಅವರಿಗೆ ಇಷ್ಟವಾದಂತೆ ಬದುಕಿದರು, ಇತರರನ್ನು ಪ್ರೀತಿಸಿದರು, ಸಮಾನತೆಯ ಕನಸು ಕಂಡರು. ಕೊನೆಯವರೆಗೆ ಅವರು ಆಶಾವಾದಿಯಾಗಿಯೇ ಉಳಿದಿದ್ದರು. ಮನುಷ್ಯನ ಬದುಕು ಸಾರ್ಥಕವಾಗಲು ಇನ್ನೇನು ಬೇಕು ಹೇಳಿ?
– ದಿನೇಶ್ ಕುಮಾರ್ ಎಸ್.ಸಿ.