ಏಪ್ರಿಲ್‌ 16ರಂದು ಪತಂಜಲಿ ಭವಿಷ್ಯ ತೀರ್ಮಾನ: ಜೈಲಿಗೆ ಹೋಗ್ತಾರಾ ಬಾಬಾ ರಾಮದೇವ್‌, ಬಾಲಕೃಷ್ಣ?

Most read


ವಿಶೇಷ ವರದಿ:
We will rip you apart
ಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಖಾರವಾದ ಹೇಳಿಕೆ ಇದು. ಪತಂಜಲಿ ಸಂಸ್ಥೆ ಮತ್ತು ಉತ್ತರಖಂಡ ಸರ್ಕಾರಗಳು ನಡೆಸುತ್ತಿದ್ದ ಆಟಗಳನ್ನೆಲ್ಲ ನೋಡಿದ ಸುಪ್ರೀಂ ಕೋರ್ಟ್ ನಿನ್ನೆ ಅತ್ಯಂತ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ. ಈ ಕೇಸಿನಲ್ಲಿ ನಾವು ಯಾವುದೇ ಹೃದಯ ವೈಶಾಲ್ಯತೆ ತೋರುವುದಿಲ್ಲ. ನಿಮ್ಮ ಕ್ಷಮೆ ಸಾಕಾಗುವುದಿಲ್ಲ. ಕೋರ್ಟ್ ಆದೇಶ ಪಾಲಿಸದೇ ಇದ್ದಿದ್ದಕ್ಕಾಗಿ ನೀವು ಬೆಲೆ ತೆರಲೇ ಬೇಕು ಎಂದು ಹೇಳಿದೆ.

ನಿನ್ನೆ ಸುಪ್ರೀಂಕೋರ್ಟ್ ನಲ್ಲಿ ಪತಂಜಲಿ ಸಂಸ್ಥೆಯ ವಿರುದ್ಧ ಐಎಂಎ ಸಲ್ಲಿಸಿರುವ ದೂರಿನ ಅರ್ಜಿಯ ವಿಚಾರಣೆ ಮುಂದುವರೆಸಿದ ನ್ಯಾಯಪೀಠ, ಪತಂಜಲಿ ಮತ್ತು ಉತ್ತರಖಂಡ ಸರ್ಕಾರಗಳ ವಿರುದ್ಧ ಅಕ್ಷರಶಃ ಕಿಡಿಕಾರಿತು.

ಪತಂಜಲಿ ಪರ ವಕೀಲ ಮುಕುಲ್ ರೋಹ್ಟಗಿ ಒಂದು ವಾರದ ಕಾಲಾವಕಾಶ ಕೋರಿದಾಗ, ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿ, ಸಮಾಜಕ್ಕೆ ಸ್ಪಷ್ಟ ಸಂದೇಶ ಹೋಗಬೇಕಾಗಿದೆ, ಕಾನೂನು ಉಲ್ಲಂಘನೆಯ ಪರಿಣಾಮ ಏನು ಎಂಬುದು ಅರ್ಥವಾಗಬೇಕಿದೆ ಎಂದು ಹೇಳಿತು. ರೋಗ ವಾಸಿಯಾಗುತ್ತದೆ ಎಂಬ ನಿಮ್ಮ ಭರವಸೆಯ ಹಿನ್ನೆಲೆಯಲ್ಲಿ ಔಷಧಿ ಪಡೆದು, ರೋಗದಿಂದ ಗುಣಮುಖರಾಗದ ಸಾಮಾನ್ಯ ಜನರ ಗತಿ ಏನು? ಎಂದು ಕೋರ್ಟ್ ಪ್ರಶ್ನಿಸಿತು. ರಾಜ್ಯ ಸರ್ಕಾರದ ಪರವಾನಗಿ ನೀಡುವ ಇಲಾಖೆ ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದೆ, ನಾವು ಸುಮ್ಮನೆ ಕುರುಡಾಗಿ ಕೂರುವುದಿಲ್ಲ, ನಿಮ್ಮನ್ನು ಛಿದ್ರಗೊಳಿಸುತ್ತೇವೆ ಎಂದು ಕೋರ್ಟ್ ಖಾರವಾಗಿ ಹೇಳಿತು. ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ನೀಡಿರುವ ತಪ್ಪೊಪ್ಪಿಗೆಗಳನ್ನು ತಿರಸ್ಕರಿಸಿರುವ ನ್ಯಾಯಾಲಯ ನಿಮ್ಮ ತಪ್ಪೊಪ್ಪಿಗೆಗಳು ಮೊದಲು ಮೀಡಿಯಾಗಳಿಗೆ ತಲುಪುತ್ತವೆ, ಆಮೇಲೆ ನಮ್ಮ ಬಳಿ ಬರುತ್ತವೆ. ಇದು ನಿಮ್ಮ ಪ್ರಚಾರದ ತಂತ್ರ ಎಂದು ಹೇಳಿತು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಏಪ್ರಿಲ್ 16ರಂದು ಮುಂದಿನ ವಿಚಾರಣೆ ನಿಗದಿಪಡಿಸಿದ್ದು, ಕಠಿಣ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಏನಿದು ಪತಂಜಲಿಯ ವಿವಾದ? ಸುಪ್ರೀಂ ಕೋರ್ಟ್ ಯಾಕೆ ಈ ವಿಷಯದಲ್ಲಿ ಗಂಭೀರವಾಗಿದೆ? ಇಲ್ಲಿದೆ ಪೂರ್ಣ ವಿವರ:

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಪತಂಜಲಿ ಸಂಸ್ಥೆ ತನ್ನ ಕೆಲವು ಔಷಧ ಉತ್ಪನ್ನಗಳಿಂದ ರೋಗಗಳು ವಾಸಿಯಾಗುತ್ತವೆ ಎಂಬ ಸುಳ್ಳು ಪ್ರತಿಪಾದನೆ ಮಾಡುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಸುಪ್ರೀಂಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಅಂತಿಮ ಹಂತ ತಲುಪಿದೆ.

2021ರ ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ (ಡೆಲ್ಟಾ) ಅಪ್ಪಳಿಸುವುದಕ್ಕೂ ಮುನ್ನ ಬಾಬಾ ರಾಮದೇವ್ ಪತಂಜಲಿ ಸಂಸ್ಥೆಯ ಕರೋನಿಲ್ ಎಂಬ ಔಷಧಿಯೊಂದನ್ನು ಬಿಡುಗಡೆ ಮಾಡಿದರು. ಕೋವಿಡ್-19ಕ್ಕೆ ಇದು ಮೊದಲ ಸಾಕ್ಷ್ಯಾಧಾರಿತ ಔಷಧಿ ಎಂದು ಅವರು ಘೋಷಿಸಿದರು. ವಿಶೇಷವೆಂದರೆ ಸ್ವತಃ ವೈದ್ಯರೂ ಆಗಿರುವ ಅಂದಿನ ಮೋದಿ ಸರ್ಕಾರದ ಆರೋಗ್ಯ ಸಚಿವ ಹರ್ಷವರ್ಧನ್ ಕರೋನಿಲ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪೋಸ್ಟರ್ ನಲ್ಲಿ ಕರೋನಿಲ್ ಔಷಧವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ನಿಂದ ಪ್ರಾಮಾಣೀಕೃತಗೊಂಡಿದೆ ಎಂದು ಬರೆಯಲಾಗಿತ್ತು. ಆದರೆ ಡಬ್ಲ್ಯು ಎಚ್ ಒ ತಾನು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಂಪ್ರದಾಯಿಕ ಔಷಧಿಗೆ ಪ್ರಮಾಣಪತ್ರ ನೀಡಿಲ್ಲ ಎಂದು ಹೇಳಿತು.

ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಪತಂಜಲಿ ಸಂಸ್ಥೆ ಡಬ್ಲ್ಯುಎಚ್ ಒ ಹೆಸರಿನಲ್ಲಿ ಇಷ್ಟು ದೊಡ್ಡ ಸುಳ್ಳು ಹೇಳಿದ್ದರ ಕುರಿತು ಆಘಾತ ವ್ಯಕ್ತಪಡಿಸಿತು. ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವರೇ ಭಾಗವಹಿಸಿದ್ದರ ಔಚಿತ್ಯವನ್ನು ಪ್ರಶ್ನಿಸಿತ್ತು. ದೇಶದ ಜನತೆ ಆರೋಗ್ಯ ಸಚಿವರಿಂದ ಸ್ಪಷ್ಟನೆ ಬಯಸುತ್ತಾರೆ ಎಂದು ಅದು ಹೇಳಿತ್ತು.

ಇದಾದ ಕೆಲವು ತಿಂಗಳುಗಳ ನಂತರ ಬಾಬಾ ರಾಮದೇವ್ ಅವರ ಒಂದು ವಿಡಿಯೋ ವೈರಲ್ ಆಯಿತು. ಆ ವಿಡಿಯೋದಲ್ಲಿ ರಾಮದೇವ್, ಲಕ್ಷಾಂತರ ಜನರ ಸಾವಿಗೆ ಅಲೌಪಥಿ ವೈದ್ಯಕೀಯ ಪದ್ಧತಿ ಕಾರಣ. ಅಲೌಪಥಿ ಎಂಬುದು ಮೂರ್ಖತನದ ಮತ್ತು ದಿವಾಳಿಕೋರತನ ಸಂಕೇತ ಎಂದು ಹೇಳಿದ್ದರು. ಐಎಂಎ ಕೂಡಲೇ ರಾಮದೇವ್ ಅವರಿಗೆ ನೋಟಿಸ್ ನೀಡಿತಲ್ಲದೆ, ತಮ್ಮ ಹೇಳಿಕೆ ಹಿಂದಕ್ಕೆ ಪಡೆದು ಕ್ಷಮೆ ಯಾಚಿಸುವಂತೆ ಹೇಳಿತ್ತು. ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಕೂಡಲೇ ಬಾಬಾ ರಾಮದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಆಗ್ರಹಿಸಿತ್ತು. ದೇಶಾದ್ಯಂತ ರಾಮದೇವ್ ಹೇಳಿಕೆ ವಿರುದ್ಧ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪತಂಜಲಿ ಸಂಸ್ಥೆ ಸ್ಪಷ್ಟನೆಯೊಂದನ್ನು ನೀಡಿತು. ಬಾಬಾ ರಾಮದೇವ್ ವಾಟ್ಸಾಪ್ ನಲ್ಲಿ ಬಂದ ಸಂದೇಶವೊಂದನ್ನು ಓದುತ್ತಿದ್ದರು. ಅವರು ಆಧುನಿಕ ವೈದ್ಯಪದ್ಧತಿಯ ವಿರೋಧಿಯೇನಲ್ಲ ಎಂದು ಹೇಳಿ ತಿಪ್ಪೆ ಸಾರಿಸಿತು.

ಬಿಬಿಸಿ ವರದಿ ಪ್ರಕಾರ 2020ರ ಡಿಸೆಂಬರ್‌ ನಲ್ಲಿ ಪತಂಜಲಿಯ ಉತ್ಪಾದನೆಯಾಗಿದ್ದ ಕರೋನಿಲ್ ಗೆ ಇಮ್ಯುನಿಟಿ ಬೂಸ್ಟರ್‌ ಎಂಬುದರ ಬದಲಾಗಿ ಕೋವಿಡ್-19 ಗುಣಪಡಿಸುವ ಔಷಧ ಎಂಬ ಲೈಸೆನ್ಸ್‌ ನೀಡುವಂತೆ ಸರ್ಕಾರವನ್ನು ಕೋರಿತ್ತು. 2021ರ ಜನವರಿಯಲ್ಲಿ ಕೋವಿಡ್‌ ಎದುರಿಸುವಲ್ಲಿ ಸಹಾಯ ಮಾಡುವ ಔಷಧವೆಂಬ ಪರವಾನಿಗೆ ದೊರೆತಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು. ಆದರೆ ಆಯುಷ್‌ ಇಲಾಖೆ ಮತ್ತು ಉತ್ತರಖಂಡ ಸರ್ಕಾರಗಳ ಹೇಳಿಕೆ ಬೇರೆಯದ್ದೇ ಆಗಿತ್ತು. ಕರೋನಿಲ್‌ ಕೋವಿಡ್‌ ಗುಣಪಡಿಸುವ ಔಷಧವಲ್ಲ, ಹಾಗೆ ನಾವು ಯಾವುದೇ ಪರವಾನಗಿ ನೀಡಿಲ್ಲ ಎಂದು ಅವು ಹೇಳಿದವು. ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ಜಿಂಕ್‌, ವಿಟಮಿನ್‌ ಸಿ, ಮಲ್ಟಿ ವಿಟಮಿನ್‌ ಅಥವಾ ಇನ್ಯಾವುದೇ ಪೂರಕ ಔಷಧಗಳ ಹಾಗೆ ಕರೋನಿಲ್‌ ಬಳಸಬಹುದು ಎಂದಷ್ಟೇ ನಾವು ಹೇಳಿದ್ದೆವು ಎಂದು ಉತ್ತರಖಂಡದ ಸಾಂಪ್ರದಾಯಿಕ ಔಷಧಗಳ ಇಲಾಖೆಯ ನಿರ್ದೇಶಕ ಡಾ.ವೈ.ಎಸ್.ರಾವತ್‌ ಹೇಳಿದ್ದರು.

ಆಗಸ್ಟ್ 2022ರಲ್ಲಿ ಐಎಂಎ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಪತಂಜಲಿ ಸಂಸ್ಥೆ ವಾರ್ತಾಪತ್ರಿಕೆಗಳಲ್ಲಿ ನೀಡಿದ್ದ ಜಾಹೀರಾತಿನಲ್ಲಿ ಆಧುನಿಕ ವೈದ್ಯ ಪದ್ಧತಿಯ ವಿರುದ್ಧ ದಾಳಿ ಮಾಡಲಾಗಿತ್ತು. ‘ಅಲೋಪತಿ ಹರಡಿದ ತಪ್ಪುಗ್ರಹಿಕೆಗಳು: ಫಾರ್ಮಾ ಮತ್ತು ವೈದ್ಯಕೀಯ ಉದ್ಯಮದಿಂದ ಹರಡಿದ ತಪ್ಪು ಕಲ್ಪನೆಗಳಿಂದ ನಿಮ್ಮನ್ನು ಮತ್ತು ದೇಶವನ್ನು ಉಳಿಸಿ’ ಎಂಬ ಶೀರ್ಷಿಕೆಯ ಜಾಹೀರಾತನ್ನು ಪತಂಜಲಿ ಹೆಸರಿನಲ್ಲಿ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಇಷ್ಟೇ ಅಲ್ಲದೆ ಪತಂಜಲಿ ಔಷಧಗಳು ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್, ಲಿವರ್ ಸಿರೋಸಿಸ್, ಸಂಧಿವಾತ ಮತ್ತು ಅಸ್ತಮಾದ ಜನರನ್ನು ಗುಣಪಡಿಸುತ್ತವೆ ಎಂದು ಜಾಹೀರಾತಿನಲ್ಲಿ ಹೇಳಿಕೊಳ್ಳಲಾಗಿತ್ತು.

ಈ ಜಾಹೀರಾತುಗಳ ವಿರುದ್ಧ ಸುಪ್ರೀಂಕೋರ್ಟ್‌ ನಲ್ಲಿ ದೂರು ಸಲ್ಲಿಸಿದ ಐಎಂಎ, ಬಾಬಾ ರಾಮದೇವ್‌ ಹಿಂದೆ ಆಧುನಿಕ ವೈದ್ಯಪದ್ಧತಿಗಳ ಕುರಿತು ನೀಡಿದ್ದ ಹೇಳಿಕೆಯನ್ನೂ ಉಲ್ಲೇಖಿಸಿತ್ತು. ಕಾನೂನಿನ ಪ್ರಕಾರ ಪತಂಜಲಿಯ ಔಷಧ ಉತ್ಪನ್ನಗಳಂಥ ಮ್ಯಾಜಿಕಲ್‌ ಔಷಧಿಗಳ ಕುರಿತು ಜಾಹೀರಾತು ನೀಡುವುದು ಅಪರಾಧವಾಗಿದ್ದು, ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

2023ರ ನವೆಂಬರ್‌ 21ರಂದು ಸುಪ್ರೀಂ ಕೋರ್ಟ್‌ ಪತಂಜಲಿ ಸಂಸ್ಥೆಯ ಔಷಧಿಗಳ ಜಾಹೀರಾತಿನ ಕುರಿತು ಎಚ್ಚರಿಕೆ ನೀಡಿತು. ಸಕ್ಕರೆ ಖಾಯಿಲೆ, ಅತಿಯಾದ ರಕ್ತದೊತ್ತಡವನ್ನು ಗುಣಪಡಿಸುತ್ತೇವೆ ಎಂಬ ಪತಂಜಲಿಯ ಜಾಹೀರಾತಿನ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿತ್ತು.

ಈ ಸಂದರ್ಭದಲ್ಲಿ ಪತಂಜಲಿಯ ಪರವಾದ ವಕೀಲರು, ಸುಪ್ರೀಂ ಕೋರ್ಟ್‌ ಮುಂದೆ ಇನ್ನುಮುಂದೆ ಈ ರೀತಿ ಯಾವುದೇ ಕಾನೂನು ಉಲ್ಲಂಘನೆ ಆಗುವುದಿಲ್ಲ. ವಿಶೇಷವಾಗಿ ಜಾಹೀರಾತು ಮತ್ತು ಉತ್ಪನ್ನಗಳ ಬ್ರಾಂಡಿಂಗ್‌ ಸಂದರ್ಭದಲ್ಲಿ ನಾಔಉ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದರು. ಇತರ ವೈದ್ಯಕೀಯ ಪದ್ಧತಿಗಳ ಕುರಿತು ಯಾವುದೇ ರೀತಿಯ ಉಡಾಫೆಯ ಹೇಳಿಕೆಯನ್ನು ನಾವು ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಿಲ್ಲ ಎಂದು ಅವರು ವಾಗ್ದಾನ ಮಾಡಿದ್ದರು.

ಈ ವರ್ಷ ಜನವರಿ 15ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನು ಉದ್ದೇಶಿಸಿ ಬರೆಯಲಾದ ಅನಾಮಧೇಯ ಪತ್ರವೊಂದು ಕೋರ್ಟ್ ಕೈ ಸೇರಿತು. ಯಥಾಪ್ರತಿಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಮಾನುಲ್ಲಾ ಅವರಿಗೂ ನೀಡಲಾಗಿತ್ತು. ಪತಂಜಲಿ ಸಂಸ್ಥೆ ತನ್ನ ದಾರಿತಪ್ಪಿಸುವ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸದೇ ಇರುವುದನ್ನು ಪತ್ರದಲ್ಲಿ ದಾಖಲೆ ಸಮೇತ ಬರೆಯಲಾಗಿತ್ತು. ಇದಾದ ನಂತರ ಐಎಂಎ ಪರ ವಕೀಲರು ಸಹ 2023ರ ನವೆಂಬರ್‌ 21ರ ನಂತರವೂ ಪತಂಜಲಿ ಸಂಸ್ಥೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಕೋರ್ಟ್‌ ವಿಚಾರಣೆಯ ನಂತರ ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ನಡೆಸಿದ ಪತ್ರಿಕಾಗೋಷ್ಠಿಯ ಪೂರ್ಣಪಾಠವನ್ನು ಸಹ ಕೋರ್ಟ್‌ ಮುಂದೆ ಇರಿಸಲಾಯಿತು.

ಸುಪ್ರೀಂ ಕೋರ್ಟ್‌ ಇದನ್ನೆಲ್ಲ ಗಮನಿಸಿ ಖಾರವಾದ ಟಿಪ್ಪಣಿ ಮಾಡಿತು. ಪತಂಜಲಿ ಸಂಸ್ಥೆ ಸುಪ್ರೀಂ ಕೋರ್ಟ್‌ ಮುಂದೆ ನೀಡಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿದೆ ಎಂದು ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ತಿಳಿದುಬರುತ್ತಿದೆ. ಸಂಸ್ಥೆಯ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂದು ನೋಟಿಸ್‌ ನೀಡಿತು. ಅಷ್ಟೇ ಅಲ್ಲದೆ ದೇಶದ ಕಾನೂನನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ತೀಕ್ಷ್ಣವಾಗಿ ಟಿಪ್ಪಣಿ ಮಾಡಿತ್ತು.

ಮಾರ್ಚ್‌ 19ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪತಂಜಲಿ ಸಂಸ್ಥೆ ನ್ಯಾಯಾಂಗ ನಿಂದನೆ ನೋಟಿಸ್‌ ಸಂಬಂಧಿಸಿದಂತೆ ಯಾವುದೇ ಪ್ರಮಾಣಪತ್ರ ಸಲ್ಲಿಸದೇ ಇರುವುದು ನ್ಯಾಯಾಲಯದ ಗಮನಕ್ಕೆ ಬಂದಿತು. ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ಇಬ್ಬರೂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿತು. ಮಾರ್ಚ್‌ 21ರಂದು ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಬೇಷರತ್‌ ಕ್ಷಮೆ ಕೋರಿದರು.

ಆದರೆ ಇಷ್ಟು ಹೊತ್ತಿಗೆ ಕೋರ್ಟ್‌ ತಾಳ್ಮೆಗೆಡಿಸಿದ್ದ ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ಪಾರಾಗಿ ಬರುವುದು ಸಾಧ್ಯವೇ ಇರಲಿಲ್ಲ. ಏಪ್ರಿಲ್‌ 2ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಜಾಹೀರಾತುಗಳ ಕುರಿತು ಸರಿಯಾದ ಪ್ರಮಾಣಪತ್ರ ಸಲ್ಲಿಸದ ಕುರಿತು ಕೋರ್ಟ್‌ ಕೆಂಡಕಾರಿತು. ನಿಮ್ಮ ಜಾಹೀರಾತುಗಳು ಕಾನೂನಿನ ಹಲ್ಲಿನಿಂದ ಸಿಕ್ಕಿಬಿದ್ದಿವೆ. ಕಾನೂನಿನ ಕ್ರಿಯೆಗಾಗಿ ಕಾದುನೋಡಿ ಎಂದು ಹೇಳಿತು.

ಏಪ್ರಿಲ್‌ 10ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಮತ್ತೆ ಹೊಸ ಅಫಿಡೆವಿಟ್‌ ಗಳನ್ನು ಸಲ್ಲಿಸಲಾಯಿತಾದರೂ ಅದನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ನ್ಯಾಯಾಲಯಕ್ಕೆ ನಿಮ್ಮ ತಪ್ಪೊಪ್ಪಿಗೆ ತಲುಪುವ ಮೊದಲು ಅದು ಮಾಧ್ಯಮಗಳನ್ನು ತಲುಪಿವೆ. ಅವರು ಪ್ರಚಾರ ಪಡೆಯುವುದರಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದರು.

ಹಿರಿಯ ವಕೀಲ ಮುಕ್‌ ರೋಹ್ಟಗಿ, ಕ್ಷಮಾಯಾಚನೆ ಪತ್ರ ನೀಡಿದ್ದೇವಲ್ಲ ಎಂದು ಹೇಳಿದಾಗ, ನಿಮ್ಮ ಕ್ಷಮಾಪಣೆ ಸಾಕಾಗುವುದಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅದರ ಪರಿಣಾಮಗಳನ್ನು ನಿಮ್ಮ ಕಕ್ಷಿದಾರರು ಎದುರಿಸಲೇಬೇಕು. ಈ ಪ್ರಕರಣದಲ್ಲಿ ನಾವು ವಿಶಾಲ ಹೃದಯಿಗಳಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಮಾನುಲ್ಲ ಸ್ಪಷ್ಟವಾಗಿ ನುಡಿದರು.

ಮೇಲಿಂದ ಮೇಲೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ, ಕಾಟಾಚಾರದ ಕ್ಷಮೆ ಕೋರಿದ ಪತಂಜಲಿ ಸಂಸ್ಥೆ ವಿರುದ್ಧ ಸುಪ್ರೀಂ ಕೋರ್ಟ್‌ ಏಪ್ರಿಲ್‌ 16ರಂದು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

More articles

Latest article