ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿಯನ್ನು ಬಲಿ ತೆಗದುಕೊಂಡ ಪ್ರಕರಣಕ್ಕೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿಲ್ಲ. ಕೋಲಾರ ರೈತರೂ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಟೊಮೆಟೊಗೆ ಏಷ್ಯಾಖಂಡದ 2ನೇ ಅತೀದೊಡ್ಡ ಮಾರುಕಟ್ಟೆ ಕೋಲಾರ. ಇಲ್ಲಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಟೊಮೆಟೊ ರಫ್ತಾಗುತ್ತದೆ. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಈ ವರ್ಷ ರೈತರು ಮತ್ತು ವ್ಯಾಪಾರಿಗಳು ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.
ಹಾಗಾಗಿ ಭಾರತ-ಪಾಕಿಸ್ತಾನ ಗಡಿಗೆ ಟೊಮೆಟೊ ಹೊತ್ತು ತೆರಳಬೇಕಿದ್ದ ಲಾರಿಗಳು ಖಾಲಿ ನಿಂತಿವೆ. ಕೋಲಾರ ಜಿಲ್ಲೆಯಲ್ಲಿ ಅಂದಾಜು 2,500 ಟೊಮೆಟೊ ಬೆಳೆಗಾರರಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 50 ವರ್ತಕರು ಟೊಮೆಟೊ ರಫ್ತು ಮಾಡದಿರಲು ತೀರ್ಮಾನಿಸಿದ್ದಾರೆ. ಇಲ್ಲಿಂದ ಪ್ರತಿ ದಿನ 8 ರಿಂದ 10 ಟ್ರಕ್ ಗಳು 20 ರಿಂದ 25 ಟನ್ ಟೊಮೆಟೊವನ್ನು ಪಾಕಿಸ್ತಾನ ಗಡಿಗೆ ಮತ್ತು 20 ಟನ್ ಅನ್ನು ಬಾಂಗ್ಲಾದೇಶದ ಗಡಿಗೆ ಕಳುಹಿಸಲಾಗುತ್ತಿದೆ. ಈ ಮೂಲಕ ಎಪಿಎಂಸಿಯಲ್ಲಿ 1 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆಯುತ್ತದೆ.
ಒಂದು ವೇಳೆ ಕೋಲಾರದ ಟೊಮೆಟೊ ತಲುಪದಿದ್ದರೆ ಪಾಕಿಸ್ತಾನದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ಟೊಮೆಟೊಗೆ ಕೊರತೆ ಉಂಟಾಗಲಿದೆ. ಟೊಮೆಟೊವನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವುದಕ್ಕಿಂತ ಹೊರ ದೇಶಗಳಿಗೆ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಇರುತ್ತದೆ. ಈ ಬಾರಿ ನಷ್ಟವಾದರೂ ಪಾಕಿಸ್ತಾನಕ್ಕೆ ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ವರ್ತಕರು.
ಕೋಲಾರದಿಂದ ಪಾಕಿಸ್ತಾನಕ್ಕೆ ಪ್ರತಿ ವರ್ಷ 800 ರಿಂದ 900 ಟನ್ ಟೊಮೆಟೊ ರಫ್ತಾಗುತ್ತದೆ. ಇದರಿಂದ ಟೊಮೆಟೊ ಬೆಳೆಗಾರರು ಮತ್ತು ವರ್ತಕರು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರು. ಆದರೆ, ಇನ್ನು ಮುಂದೆ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊವನ್ನು ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.