ಜೇನುಕುರುಬ ಸಮುದಾಯದ ನಮ್ಮ ಸೋಮಣ್ಣನಿಗೆ ಪದ್ಮಶ್ರೀ ಬಂದಿದೆ. ಪದ್ಮಶ್ರೀ ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದು. ಸೋಮಣ್ಣನಂತಹ ಸಾರ್ಥಕ ನಾಗರಿಕನಿಗೆ ಈ ಪ್ರಶಸ್ತಿ ಬಂದಿರುವ ಕಾರಣಕ್ಕಾಗಿ ಆ ಪ್ರಶಸ್ತಿಗೂ ಗೌರವ ಸಲ್ಲುವಂತಾಗಿದೆ – ಎ. ಎಸ್. ಪ್ರಭಾಕರ
ತಮ್ಮ ಕ್ರಿಯೆ ಮತ್ತು ವಿವೇಕಗಳಿಂದ ಪರಂಪರೆಗಳನ್ನು ರೂಪಿಸಿದ ತಳಸ್ತರದ ಸಮುದಾಯದ ವ್ಯಕ್ತಿಗಳಿಗೆ ಇತ್ತೀಚೆಗೆ ಪ್ರಶಸ್ತಿಗಳನ್ನು ನೀಡುವ ಪರಿಕ್ರಮ ಮುನ್ನೆಲೆಗೆ ಬರುತ್ತಿದೆ. ಪಿಂಡಪಾಪನಾಯಕಹಳ್ಳಿ ಮುನಿವೆಂಕಟಪ್ಪ, ಹಾಲಕ್ಕಿ ಒಕ್ಕಲಿಗರ ಸುಕ್ರಿ ಬೊಮ್ಮಗೌಡ, ತುಳಸಿಗೌಡ, ಹರೇಕಾಳ್ ಹಾಜಬ್ಬ, ಸಾಲುಮರದ ತಿಮ್ಮಕ್ಕನಂತಹ ತಳಸಮುದಾಯಗಳಿಗೆ ಸೇರಿದ ಪ್ರತಿಭಾವಂತರಿಗೆ ಸರಕಾರಗಳು ಪದ್ಮಶ್ರೀ ಕೊಡುತ್ತಿರುವುದು ಸಂತೋಷದ ವಿಷಯ. ಸಮಾಜ, ಸಂಸ್ಕೃತಿ ಮತ್ತು ನೆಲಮೂಲದ ಪರಂಪರೆಗಳಿಗೆ ಸದ್ದಿಲ್ಲದೆ ಏಗುವ ತಳಸ್ತರದ ಈ ವ್ಯಕ್ತಿತ್ವಗಳನ್ನು ತಲುಪುವ ಯಾವುದೇ ಪ್ರಶಸ್ತಿಯು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ತಳಸ್ತರದ ವ್ಯಕ್ತಿಗಳು ಲೌಕಿಕದ ಆಮಿಷಗಳನ್ನು ಮೀರಿ ನಮ್ಮ ಪರಂಪರೆಯ ಬೇರುಗಳಿಗೆ ಚೈತನ್ಯವನ್ನು ತುಂಬಿರುತ್ತಾರೆ. ಕನಿಷ್ಟ ಪ್ರಚಾರದ ಹಂಗೂ ಇಲ್ಲದೆ, ಸದ್ದು ಮಾಡದೆ ಇವರು ಸದಾ ಕ್ರಿಯಾಶೀಲರಾಗಿರುತ್ತಾರೆ. ದೇಶವೆಂಬ ಬಹುತ್ವದ ಜೇನುಗೂಡಿಗೆ ಈ ತಳಸ್ತರದ ದುಡಿಮೆಗಾರರು ತಂದು ಸುರಿಯುವ ಜೀವದ್ರವದ ಲೆಕ್ಕ ಸಿಗುವುದಿಲ್ಲ. ಬದುಕಿನ ಕಷ್ಟಕೋಟಲೆಗಳ ಸಿಕ್ಕುಗಳಲ್ಲಿದ್ದೂ ನಾಡಿನ ಪರಂಪರೆಯ ಘನತೆಯನ್ನು ಎತ್ತರಿಸುವಲ್ಲಿ ದುಡಿವ ತಳಸಮುದಾಯಗಳ ಪಾತ್ರ ಹಿರಿದು.
ಜೇನುಗೂಡಿನ ಯಾವ ಹನಿಯಲ್ಲಿ ಯಾವ ಹೂವಿನ ಮಕರಂದವಿದೆ ಎಂದು ಪತ್ತೆ ಮಾಡಲು ಸಾಧ್ಯವಿಲ್ಲ. ಹೂವಿಂದ ಹೂವಿಗೆ ಚಲಿಸಿ ಮಕರಂದವನ್ನು ಉತ್ಪಾದಿಸುವವರು ಮಾತ್ರ ದುಡಿಮೆಗಾರ ಜೇನದುಂಬಿಗಳು. ಇಂತಹ ದುಡಿಮೆಗಾರರು ಇಲ್ಲದೇ ಇದ್ದಲ್ಲಿ ಜೇನುಗೂಡು ಸಾಧ್ಯವಿಲ್ಲ, ಮಕರಂದಕ್ಕೆ ಅಸ್ತಿತ್ವವೂ ಇರುವುದಿಲ್ಲ. ಜೇನುಹುಳುಗಳನ್ನು ಓಡಿಸಿ ತುಪ್ಪವನ್ನು ಸವಿಯುವ ನಮಗೆ ದುಂಬಿಗಳ ಶ್ರಮದ ಕುರಿತು ಕೃತಜ್ಞತೆಯೂ ಇರುವುದಿಲ್ಲ. ಹೀಗೆ ನಮ್ಮ ದೇಶವೆಂಬ ಬಹುತ್ವದ ಜೇನುಗೂಡಿಗೆ ಮಕರಂದವನ್ನು ಅಂತರ್ಗತಗೊಳಿಸಿದ ಶ್ರಮಜೀವಿಗಳಲ್ಲಿ ಜೇನುಕುರುಬರ ಸೋಮಣ್ಣ ಸಹ ಒಬ್ಬರು. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಜೇನುಕುರುಬ ಸಮುದಾಯಕ್ಕೆ ಸೇರಿದ ಸೋಮಣ್ಣ ಅತ್ಯಂತ ವಿಶಿಷ್ಟ ವ್ಯಕ್ತಿ.
ಕಳೆದೊಂದು ಶತಮಾನದ ಅವಧಿಯಲ್ಲಿ ರಾಷ್ಟ್ರೀಯ ಉದ್ಯಾನ ವಿಸ್ತರಣೆಯ ಭಾಗವಾಗಿ ಸರಕಾರಗಳು ಈ ಜೇನುಕುರುಬ ಸಮುದಾಯವದವರನ್ನು ಬೇಕಾಬಿಟ್ಟಿಯಾಗಿ ಒಕ್ಕಲೆಬ್ಬಿಸಿವೆ. ಸಾವಿರಾರು ವರ್ಷಗಳಿಂದ ತಾವು ಬದುಕಿ ಬಾಳಿದ್ದ ಮೂಲನೆಲೆಗಳನ್ನು ಈ ಸಮುದಾಯದವರು ಕಳೆದುಕೊಂಡಿದ್ದಾರೆ. ಸ್ಥಳಾಂತರಗೊಂಡ ನಂತರ ಪುನರ್ವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಇವರಿಗೆ ಇಂದಿಗೂ ಮೂಲಭೂತ ಸೌಕರ್ಯಗಳು ಸೌಲಭ್ಯಗಳು ಲಭಿಸಿಲ್ಲ. ಇಂತಹ ಸಂದರ್ಭದಲ್ಲಿ ಸೋಮಣ್ಣನಿಗೆ ಪದ್ಮ ಪ್ರಶಸ್ತಿ ಸಿಕ್ಕಿರುವುದಕ್ಕೆ ಒಕ್ಕಲೆದ್ದ ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ನನ್ನಲ್ಲಿದೆ.
ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ಆದಿವಾಸಿ ಸಮುದಾಯಗಳನ್ನು ಸರಕಾರಗಳು ಒಕ್ಕಲೆಬ್ಬಿಸಿವೆ. ಮೈಸೂರು ಕೊಡಗು ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರಂತಹ ಆದಿಮ ಸಮುದಾಯಗಳನ್ನು ಸರಕಾರಗಳು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಮೂಢ ಸರಕಾರಗಳು ಮತ್ತು ಲಾಭಕೋರ ಎನ್‌ಜಿಓಗಳು ಯಾವೂ ಈ ಸಮುದಾಯಗಳ ತಾಯ್ನೆಲವನ್ನು ಅವುಗಳಿಗೆ ಉಳಿಸಿಕೊಟ್ಟಿಲ್ಲ. ಅರಣ್ಯಗಳಿಂದ ಒಕ್ಕಲೆದ್ದ ಆದಿವಾಸಿಗಳನ್ನು ಕಾಡಂಚಿನ ನಿರುಪಯುಕ್ತ ಪ್ರದೇಶಗಳಲ್ಲಿ ನೆಲೆನಿಲ್ಲಿಸಲಾಗಿದೆ. ಒಕ್ಕಲೆದ್ದು ಘಾಸಿಗೊಂಡ ಸಮುದಾಯಗಳು ನೆಲೆನಿಂತ ಕಡೆಯಲ್ಲಿ ನಿರುಮ್ಮಳವಾಗಿ ಬದುಕಲು ಪ್ರಯತ್ನಿಸುತ್ತಿವೆ. ರಾಜ್ಯದ ಹೆದ್ದಾರಿಯೊಂದರ ಪಕ್ಕದ ಕಣಿವೆಯಲ್ಲಿ ಸೋಮಣ್ಣನ ಮತ್ತಾ ಹಾಡಿ ಇದೆ. ತೊಳೆದಿಟ್ಟಂತಹ ಸ್ಫಟಿಕದ ಆವರಣ, ಪುಟ್ಟ ಪುಟ್ಟ ಚೊಕ್ಕಟ ಗುಡಿಸಲುಗಳು, ಎತ್ತರೆತ್ತರ ಮರಗಳ ಮಡಿಲು, ಎಲ್ಲವೂ ನೀರವ, ಸೋಮಣ್ಣನಂತೆ. ಅರಣ್ಯವಾಸಿ ಬುಡಕಟ್ಟುಗಳ ಸೋಪಜ್ಞತೆಯು ರೂಪುಗೊಂಡಿರುವುದು ನಿಸರ್ಗದ ಈ ಅಗಾಧತೆಯಿಂದ.
ಹೀಗೆ ತನ್ನ ಪಾರಂಪರಿಕ ವಾಸದ ನೆಲೆಯನ್ನು ಕಳೆದುಕೊಂಡು ಜೀತ ಮಾಡುತ್ತಿದ್ದ ಕುನ್ನಯ್ಯ ಎಂಬ ವ್ಯಕ್ತಿಯೊಬ್ಬರ ಮಗ ಸೋಮಣ್ಣ. ತಾನು ಹುಟ್ಟಿ ಬೆಳೆದ ಆಲತ್ತಾಳಹುಂಡಿಯಿಂದ ಒಕ್ಕಲೆದ್ದು ಮತ್ತಾ ಹಾಡಿಗೆ ಬಂದು ನೆಲೆಸಿದ ಸೋಮಣ್ಣನ ಹಾಸ್ಯಭರಿತ ತೀಕ್ಷ್ಣ ಮಾತುಗಳಲ್ಲಿ ತನ್ನ ತಾಯ್ನೆಲದ ನೆನಪುಗಳ ಮೆರವಣಿಗೆಯೇ ಇದೆ. ನೆನಪುಗಳು ಹುಟ್ಟುಹಾಕಿರುವ ತಪ್ತತೆ ಮತ್ತು ಆದಿವಾಸಿಗಳ ಸಹಜ ತಾಯ್ತನಗಳು ಸೋಮಣ್ಣನನ್ನು ಅಪರೂಪದ ಚಿಂತಕನನ್ನಾಗಿಸಿವೆ.
ಸರಿಸುಮಾರು ಅರ್ಧ ಶತಮಾನ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ಕ್ರೌರ್ಯವನ್ನು ಸೋಮಣ್ಣ ಕೇವಲ ತನ್ನ ಮುಗುಳ್ನಗೆಯಿಂದಲೇ ಮುಖಾಮುಖಿ ಮಾಡುತ್ತಾರೆ. ಅರಣ್ಯಾಧಿಕಾರಿಗಳ ಮೇಲಿನ ಅವನ ಕ್ರೋಧ, ಮಾತು ಬೆಳೆಯ ಬೆಳೆಯುತ್ತಲೇ ಆತನ ತಾಯ್ತನದ ಒರತೆಯಲ್ಲಿ ಅಮೃತವಾಗಿ ಹರಿದು ಬಿಡುತ್ತದೆ. ತನ್ನ ಮೂಲ ನೆಲೆ, ದೈವ, ತನ್ನ ಹಿರೀಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹ ಜೀವನ ನಡೆಸಿದ್ದ ಕಾಡು ಪ್ರಾಣಿಗಳು ಇವ್ಯಾವು ಈಗ ಸೋಮಣ್ಣನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ, ಎದುರಾ ಎದುರೇ ಮೋಸ ಮಾಡಿ ಆತನ ಮೂಲ ನೆಲೆಯಿಂದ ಎತ್ತಿ ಬಿಸಾಡಿದೆ. ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳೆಗೇರಿಗಳಲ್ಲಿ ಬದುಕುತ್ತಿವೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳನ್ನು ಬಿಸಾಡಲಾಗಿದೆ. ಆದರೂ ಸೋಮಣ್ಣ ತನ್ನ ಅಖಂಡ ಕೋಪದಲ್ಲಿ ಎದುರಿನ ಶತ್ರುವನ್ನು ಸುಟ್ಟುಬಿಡಲಾರ. ಆಕ್ರೋಶದ ಮಾತುಗಳಿಂದ ತಿವಿಯಲಾರ, ಸೇಡಿನ ಈಟಿಯಿಂದ ಚುಚ್ಚಲಾರ. ಆದರೆ ಈತನ ಅಪಾರ ತಿಳುವಳಿಕೆಯಿಂದ ಬರುವ ಮಾತುಗಳು ಮಾತ್ರ ಎದುರು ನಿಂತ ಎಲ್ಲವನ್ನೂ ಸೋಲಿಸಿ ಬಿಡುತ್ತವೆ. ದಶಕಗಳಿಂದ ಆತನಲ್ಲಿ ಮಡುಗಟ್ಟಿರುವ ಗಾಢ ವಿಷಾದವು ಆತನನ್ನು ಸಿನಿಕನನ್ನಾಗಿಸಿಲ್ಲ. ಆವರಿಸಿದ ವಿಷಾದದ ತೀವ್ರತೆಯನ್ನು ಮೀರಲು ಲಘು ವಿಡಂಬನೆಯನ್ನು ಸೋಮಣ್ಣ ರೂಢಿಸಿಕೊಂಡಿದ್ದಾರೆ. ಈ ವಿಡಂಬನೆಯಲ್ಲಿ ಸಮಾಜದ ಆಷಾಡಭೂತಿ ನಿಲುವುಗಳನ್ನು ಬೆತ್ತಲು ಮಾಡುವ ಚಾಕಚಕ್ಯತೆ ಇದೆ. ಸೇಡು, ಕಹಿ ಮತ್ತು ಕ್ರೌರ್ಯಗಳನ್ನು ಮೈಗೂಡಿಸಿಕೊಳ್ಳದೆಯೂ ಎದುರಾಳಿಯನ್ನು ಗೆಲ್ಲುವ ತಂತ್ರವಾಗಿ ಸೋಮಣ್ಣ ಈ ವಿಡಂಬನೆಯನ್ನು ಬಳಸುತ್ತ ಬಂದಿದ್ದಾರೆ.
ಸೋಮಣ್ಣನನ್ನೂ ಒಳಗೊಂಡಂತೆ ಆದಿವಾಸಿಗಳು ಸೋತು ಹೋಗಿದ್ದಾರೆ. ಸೋತ ಕಾರಣಕ್ಕೆ ಈ ಸಮುದಾಯಗಳು ಪರಂಪರೆಯನ್ನು ದ್ವೇಷಿಸಲಿಲ್ಲ. ತಾವು ಕಟ್ಟಿದ ಜೇನುಗೂಡು ಪರರ ಸ್ವತ್ತಾದ ನಂತರವೂ ಈ ದುಡಿಮೆಗಾರರು ಪರಾಭವಗೊಳ್ಳಲಿಲ್ಲ. ಮತ್ತೆ ಬೇರೆಡೆ ಹಾರಿ ಹೋಗಿ ಇನ್ನೊಂದು ಗೂಡು ಕಟ್ಟುವಲ್ಲಿ ಈ ಸಮುದಾಯಗಳು ನಿರತವಾಗಿವೆ. ಸೋತೂ ಗೆಲ್ಲುವ ಈ ಸಮುದಾಯಗಳ ಮುಂದೆ ನಾಗರಿಕ ಸಮಾಜದ ಲೌಕಿಕದ ವಿಜಯಗಳು ಕ್ಷುಲ್ಲಕವಾಗಿ ಕಾಣುತ್ತವೆ. ಸೋತು ಕುಗ್ಗಿದ ಈ ಆದಿವಾಸಿ ಸಮುದಾಯಗಳ ಸಮಾಜವು ಛಿದ್ರಗೊಳ್ಳಲಿಲ್ಲ. ತಮ್ಮ ಪರಂಪರೆಯನ್ನು ಕುಗ್ಗಿಸುವ ಪ್ರಯತ್ನಗಳನ್ನು ಈ ಸಮುದಾಯಗಳು ನಗುತ್ತಲೇ ಪರಾಭವಗೊಳಿಸಿದವು. ಶತಾಯಗತಾಯ ಬದುಕಲು ಈ ಸಮುದಾಯಗಳು ನಡೆಸಿದ ಇಂತಹ ಅಖಂಡ ಪ್ರಯತ್ನಗಳು ನಮ್ಮ ದೇಶದ ಪರಂಪರೆಯನ್ನು ರೂಪಿಸುತ್ತಾ ಬಂದಿವೆ. ಪದ್ಮಶ್ರೀ ಸೋಮಣ್ಣ ಇಂತಹ ಸೃಜನಶೀಲ ಪರಂಪರೆಯ ವಾರಸುದಾರ.
ಇಂತಹ ಅಪರೂಪದ ವ್ಯಕ್ತಿಗೆ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ತಪ್ಪಿಹೋಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿದ್ದ ಸೋಮಣ್ಣನ ಹೆಸರು ರಾತ್ರೋರಾತ್ರಿ ಕಣ್ಮರೆಯಾಗಿತ್ತು. ಸೋಮಣ್ಣ ಮತ್ತು ಅವರನ್ನು ಬಲ್ಲ ನನ್ನಂತಹ ಅನೇಕರಿಗೆ ಸಹಜವಾಗಿಯೇ ನೋವಾಗಿತ್ತು. ಆದರೆ, ಸೋಮಣ್ಣ ಫೋನ್ ಮಾಡಿ ನಮ್ಮನ್ನೇ ಸಮಾಧಾನಪಡಿಸಿದರು. ‘ಸಾ, ನಮ್ಮ ಹಾಡಿತಾವ ಬಂದುಬುಡಿ ಇಲ್ಲೆ ಮರದ ಬುಡದಲ್ಲಿ ಮಾಂಸ ಬೇಯಿಸ್ಕೊಂಡು ಊಟ ಮಾಡೋವ’ಎಂದು ತಮಾಷೆ ಮಾಡಿ, ಸೋಮಣ್ಣ ನಮ್ಮನ್ನು ನಗಿಸಿ ತಾವೂ ನಕ್ಕಿದ್ದರು. ಸೋಮಣ್ಣನಿಗೆ ಆದ ವಂಚನೆಗೆ ಪ್ರತಿಯಾಗಿ ನಾವೆಲ್ಲ ಗೆಳೆಯರು ಸೇರಿ ಅವರಿಗೆ `ಜನರಾಜ್ಯೋತ್ಸವ’ ಪ್ರಶಸ್ತಿಯನ್ನು ಆತನ ಮತ್ತಾ ಹಾಡಿಯಲ್ಲೇ ಪ್ರದಾನ ಮಾಡಿದೆವು. ನಮ್ಮ ರಾಜ್ಯದ ಅನೇಕ ಮಾನವಂತರು ಅಂದು ಸೋಮಣ್ಣನ ಸಂತೋಷದಲ್ಲಿ ಭಾಗಿಯಾದರು. ಸೋಮಣ್ಣನ ವಿರೋಚಿತ ನಗು ನಮ್ಮಲ್ಲಿ ಹೊಸ ಪರ್ಯಾಯವನ್ನು ಕಂಡುಕೊಳ್ಳಲು ಪ್ರೇರಣೆ ನೀಡಿತ್ತು.
ಸೋಮಣ್ಣ ಅನೇಕರಂತೆ, ಯಾವ ಪ್ರಶಸ್ತಿಗೆ ಅರ್ಜಿ ಹಾಕಿದವರಲ್ಲ, ಪ್ರಶಸ್ತಿಯ ಕುರಿತು ಅವರಿಗೆ ಸಹಜವಾಗಿಯೇ ಯಾವ ಮೋಹಗಳೂ ಇಲ್ಲ. ಪ್ರಶಸ್ತಿಗಳ ಹಂಬಲದಲ್ಲಿ ಸೋಮಣ್ಣ ಯಾವ ಕೆಲಸಗಳಲ್ಲೂ ತೊಡಗಿಕೊಂಡವರಲ್ಲ. ರಾಜೀವ್ ಗಾಂಧೀ ರಾಷ್ಟ್ರೀಯ ಉದ್ಯಾನದಿಂದ ಒಕ್ಕಲೆದ್ದ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ತಿರುಗಾಡಿ ಅವರ ಕಷ್ಟ್ಟಗಳಲ್ಲಿ ಭಾಗಿಯಾಗುತ್ತಿರುವ ಸೋಮಣ್ಣ ಯಾವ ಪ್ರಶಸ್ತಿಗಳ ಕನಸು ಕಾಣಬೇಕು? ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಟ್ಟರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದವರು ಹೇಗೆ ತಾನೆ ಪ್ರಶಸ್ತಿಗಳನ್ನು ನಿರೀಕ್ಷಿಸಲು ಸಾಧ್ಯ? ಇಂತಹ ಒಂದು ಕುಟುಂಬದಲ್ಲಿ ಸೋಮಣ್ಣ ದಿ:01 ೦6.1957 ರಲ್ಲಿ ಜನಿಸುತ್ತಾರೆ. ಕಾಡೇ ಇವರ ಪಾಠ ಶಾಲೆ. ಹೀಗಾಗಿ ಸೋಮಣ್ಣ ಶಾಲೆಯ ಸಾಂಪ್ರದಾಯಿಕ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ತಂದೆ ಕುನ್ನಯ್ಯನಿಗಿದ್ದ ತೀವ್ರ ಬಡತನದಿಂದ ಸೋಮಣ್ಣ ತನ್ನ ಹಾಡಿಗೆ ಸೀಮಿತವಾಗಬೇಕಾಯಿತು. ಆದರೆ ಕ್ರಿಯಾಶೀಲ ಸೋಮಣ್ಣ ತನ್ನ ಸಮುದಾಯದ ಇರುವನ್ನು ಬದಲಾಯಿಸಲು ಮುಂದಾದರು. ತನಗಿದ್ದ ಮಿತಿಗಳನ್ನು ಮತ್ತು ಬಡತನವನ್ನೂ ಮೀರಿ ಸೋಮಣ್ಣ ಬೆಳೆದರು.
ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಸ್ಥಳೀಯ ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ‘ರಾಜ್ಯ ಮೂಲನಿವಾಸಿ ವೇದಿಕೆಯ’ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದಾರೆ. ಸೋಮಣ್ಣ ತನ್ನ ಈ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿ ಕೊಟ್ಟಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳುವಳಿಗಳನ್ನು ರೂಪಿಸಿದ್ದಾರೆ. ಸರ್ಕಾರ ಬೇಕಾಬಿಟ್ಟಿಯಾಗಿ ಮತ್ತು ದೌರ್ಜನ್ಯದ ಮೂಲಕ ಒಕ್ಕಲೆಬ್ಬಿಸಿದ ಆದಿವಾಸಿಗಳಿಗೆ ಈ ಸೋಮಣ್ಣ ಅಂತರಂಗದ ಬಂಧು.
1989 ರಿಂದಲೇ ಸೋಮಣ್ಣ ಸ್ಥಳಾಂತರಗೊಂಡು ದಿಕ್ಕೆಟ್ಟು ಹೋದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಆದರೆ, ನಮ್ಮ ಪರಂಪರೆಯ ಮೂಲ ಬೇರುಗಳಂತಿರುವ ಆದಿವಾಸಿಗಳಿಗೆ ಮಾತ್ರ ಘನತೆಯುಳ್ಳ ಪುನರ್ವಸತಿ ಮಾತ್ರ ದೊರಕಿಲ್ಲ. ಸೋಮಣ್ಣ ಈ ಕಾರಣಕ್ಕಾಗಿ ಸುಮ್ಮನೆ ಕುಳಿತವರೂ ಅಲ್ಲ. ಚಳುವಳಿಯ ದಾರಿಯ ಜೊತೆಗೆ ಕಾನೂನು ಹೋರಾಟಕ್ಕೂ ಸೋಮಣ್ಣ ಮುಂದಾದ ಉದಾಹರಣೆಗಳಿವೆ. ಒಕ್ಕಲೆದ್ದ ಆದಿವಾಸಿಗಳ ಪರ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಇತರ ಚಳುವಳಿಗಾರರ ಜೊತೆಗೆ ಸೋಮಣ್ಣ ಹೈಕೋರ್ಟ್ ಮೊರೆ ಹೋದರು. ರಾಜ್ಯದ ಹೈಕೋರ್ಟ್, ಒಕ್ಕಲೆದ್ದ ಆದಿವಾಸಿಗಳ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಏಕವ್ಯಕ್ತಿ ಆಯೋಗವನ್ನು ಪ್ರೊ. ಮುಜಫರ್ ಅಸಾದಿಯವರ ಹೆಸರಲ್ಲಿ ರಚಿಸಿತು. ಪ್ರೊ. ಅಸಾದಿಯವರು ನೀಡಿದ ವರದಿಯನ್ನಾಧರಿಸಿ ಹೈಕೋರ್ಟ್ ಆದಿವಾಸಿಗಳ ಪುನರ್ವಸತಿಯನ್ನು ಗೌರವಾನ್ವಿತವಾಗಿ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು. ಆದರೆ, ಹೈಕೋರ್ಟ್ ಆದೇಶವು ಕಡತದ ಪಾಲಾಗಿ ಧೂಳು ಹಿಡಿಯುತ್ತಿದೆ. ಹೈಕೋರ್ಟ್ ಆದೇಶದ ಮೂಲಕ ಸೋಮಣ್ಣನಿಗೆ ನೈತಿಕ ಜಯವೇನೋ ಸಿಕ್ಕಿತು. ಆದರೆ ಆ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರಗಳು ಮುಂದಾಗುತ್ತಿಲ್ಲ. ಆದರೆ ಸೋಮಣ್ಣ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸ್ಥಳಾಂತರಗೊಂಡ ಆದಿವಾಸಿಗಳಿಗೆ ಪಡಿತರ ಚೀಟಿ ದೊರಕಿಸಿ ಕೊಟ್ಟು, ಆದಿವಾಸಿಗಳ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಬಡ ಆದಿವಾಸಿಗಳಿಗೆ ಆಹಾರದ ಕೊರತೆ ನೀಗುವಂತೆ ಮಾಡಿದ್ದರಲ್ಲಿ ಸೋಮಣ್ಣನ ಪಾತ್ರ ಹಿರಿದು.
ಸೋಮಣ್ಣ ಅವರದು ಕೇವಲ ಸಮಾಜಸೇವಕನ ಶುಷ್ಕ ವ್ಯಕ್ತಿತ್ವವಲ್ಲ. ಸದಾ ನಗುವ, ಜೊತೆಗಿದ್ದವರನ್ನು ನಗೆಯ ಕಡಲಲ್ಲಿ ಮುಳುಗೇಳಿಸುವ ಸೋಮಣ್ಣ ಬಂಡವಾಳಶಾಹಿಗಳ ವಿರುದ್ಧವೂ ಬಂಡೆದ್ದಿದ್ದಾರೆ. ನಾಗರಹೊಳೆ ದಟ್ಟಾರಣ್ಯದಲ್ಲಿ ಬಂಡವಾಳಶಾಹಿಗಳು ಕಟ್ಟಲು ಹೊರಟಿದ್ದ ತಾಜ್ ಹೋಟೆಲ್ ನಿರ್ಮಾಣದ ವಿರುದ್ಧವೂ ಸೋಮಣ್ಣ ಹೋರಾಡಿದ್ದಾರೆ. ಆ ಭಾಗದ ಆದಿವಾಸಿ ಮತ್ತು ಪ್ರಗತಿಪರರ ಜೊತೆ ಹೋರಾಟಕ್ಕಿಳಿದ ಸೋಮಣ್ಣ ತಾಜ್ ಹೋಟೆಲ್ ನಿರ್ಮಾಣ ರದ್ದಾಗುವವರೆಗೂ ಸುಮ್ಮನಾಗಲಿಲ್ಲ. ಮೇಧಾ ಪಾಟ್ಕರ್ ಜೊತೆ ಸೇರಿ ಅವರು ನರ್ಮದಾ ಬಚಾವ್ ಆಂದೋಲನದ ಭಾಗವಾಗಿ ದುಡಿದಿದ್ದಾರೆ. ಇದಲ್ಲದೆ ಪಶ್ಚಿಮಘಟ್ಟ ಉಳಿಸುವ ಸಲುವಾಗಿ ಕೈಗೊಂಡ ಗೋವಾ ಕನ್ಯಾಕುಮಾರಿ ಕಾಲ್ನಡಿಗೆ ಜಾಥಾದಲ್ಲಿ ಸೋಮಣ್ಣ ಮುಂಚೂಣಿಯಲ್ಲಿದ್ದವರು. 2006 ರಲ್ಲಿ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸೋಮಣ್ಣ ಸಕ್ರೀಯನಾಗಿ ಆದಿವಾಸಿಗಳ ಪರ ಹೋರಾಡುತ್ತಲೇ ಇದ್ದಾರೆ. 1991 ರಲ್ಲಿ ಫಿಲಿಫೈನ್ಸ್ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಸೋಮಣ್ಣ ಕರ್ನಾಟಕದ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಇಂತಹ ಸೋಮಣ್ಣ ನಿರಂತರ `ಆಂದೋಲನ ಜೀವಿ’. ಇಂತಹ ಅಪರೂಪದ ವ್ಯಕ್ತಿಗೆ ಪದ್ಮಶ್ರೀ ಸಂದಿದೆ. ಇದು ತಳಸಮುದಾಯಗಳ ಸೃಜನಶೀಲ ಬದುಕಿಗೆ ಲಭಿಸಿದ ಬಹುಮಾನ. ಹೀಗೆ ತಳಸಮುದಾಯಗಳ ವ್ಯಕ್ತಿತ್ವಗಳನ್ನು ಹುಡುಕಿ ಗೌರವಿಸುವ ಪರಂಪರೆಯನ್ನು ಪ್ರಭುತ್ವ ರೂಢಸಿಕೊಳ್ಳುತ್ತಿದೆ. ಪ್ರಭುತ್ವ ಹೀಗೆ ಆದಿವಾಸಿಗಳಿಗೆ ನೀಡುವ ಗೌರವ ಕೇವಲ ಸಂಕೇತದ ಮಟ್ಟದಲ್ಲಿದೆ.
ಸಂತಾಲ ಸಮುದಾಯದ ಶ್ರೀಮತಿ ದ್ರೌಪತಿ ಮುರ್ಮು ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿಸಲಾಗಿದೆ. ಮುರ್ಮು ಅವರು ಮಧ್ಯಭಾರತದ ಸಂತಾಲ ಆದಿವಾಸಿ ಸಮುದಾಯಕ್ಕೆ ಸೇರಿದವರು. ಮುರ್ಮು ಅವರು ಪ್ರತಿನಿಧಿಸುವ ಸಂತಾಲ ಸಮುದಾಯದವರು ತಾವು ಅನುಸರಿಸುವ `ಸರ್ಣ’ಧರ್ಮವನ್ನು ಸರಕಾರ ಅಧಿಕೃತಗೊಳಿಸಬೇಕು ಎಂಬ ಹಕ್ಕೊತ್ತಾಯವನ್ನು ಅನೇಕ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಸಂತಾಲರ ಈ ಬೇಡಿಕೆಯನ್ನು ನಿರಂತರವಾಗಿ ಬದಿಗೆ ಸರಿಸಲಾಗಿದೆ. ಶ್ರೀಮತಿ ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿಸಿ ಗೌರವಿಸುವ ನಮ್ಮ ಪ್ರಭುತ್ವವು, ಸುಂದರಬನ್ ಅರಣ್ಯ ಪ್ರದೇಶದಲ್ಲಿನ ಹುಲಿಗಳಿಗೆ ಬಲಿಯಾದ ಆದಿವಾಸಿ ಕುಟುಂಬಗಳ ಕಣ್ಣೀರನ್ನೂ ಒರೆಸಬೇಕಿದೆ.
ಪಿಂಡಪಾಪನಾಯಕಹಳ್ಳ ಮುನಿವೆಂಕಟಪ್ಪ ಅವರಿಗೆ, ಹಾಲಕ್ಕಿ ಒಕ್ಕಲಿಗರ ಸುಕ್ರಿ ಬೊಮ್ಮಗೌಡ, ತುಳಸಿಗೌಡ ಅವರಂತಹ ತಸಮುದಾಯಗಳಿಗೆ ಸೇರಿದ ಪ್ರತಿಭಾವಂತರಿಗೆ ಸರಕಾರಗಳು ಪದ್ಮಶ್ರೀ ಕೊಡುತ್ತಿರುವುದು ಸಂತೋಷದ ವಿಷಯ. ಹೀಗೆ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿಯೇ ಲೋಕಸಭೆಯಲ್ಲಿ ಅರಣ್ಯ ಕಾಯ್ದೆಗೆ ಸಂಬಂಧಿಸಿದ ಒಂದು ತಿದ್ದುಪಡಿ ಮಸೂದೆಯೊಂದನ್ನು ಇತ್ತೀಚೆಗೆ (1.08.2023 ರಂದು) ಅಂಗೀಕರಿಸಲಾಯ್ತು. ಅರಣ್ಯಗಳ ಸಂರಕ್ಷಣೆಗಾಗಿ ಜಾರಿಗೆ ತಂದಿದ್ದ ಕಾಯ್ದೆಯಲ್ಲಿದ್ದ ಬಿಗಿ ನಿಲುವನ್ನು ಸಡಿಲಿಸಿ ಬಂಡವಾಳಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿಯನ್ನು ತರಲಾಯಿತು. ಸರಕಾರ ಮತ್ತು ಅನುಮತಿ ಪಡೆದ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿ ಯಾವುದೇ ಯೋಜನೆಗಳನ್ನು ಪ್ರಾರಂಭಿಸಲು ಈ ತಿದ್ದುಪಡಿ ಕಾಯ್ದೆ ಅವಕಾಶ ನೀಡಲಿದೆ. ಈ ಮೊದಲು ಸರಕಾರವು ರಕ್ಷಿತ ಅರಣ್ಯಗಳಲ್ಲಿ ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ಸ್ಥಳೀಯ ಗ್ರಾಮಸಭಾಗಳ ಮತ್ತು ಆದಿವಾಸಿ ಅರಣ್ಯ ಸಮಿತಿಗಳ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ಅನುಸೂಚಿತ ಪ್ರದೇಶಗಳಲ್ಲಿನ ಆದಿವಾಸಿಗಳಿಗೆ ತಮ್ಮ ಪಾರಂಪರಿಕ ನೆಲೆಗಳ ಮೇಲೆ ಇದ್ದ ಸಹಜ ಅಧಿಕಾರಗಳನ್ನು ಈ ಕಾಯ್ದೆ ಕಿತ್ತುಕೊಳ್ಳಲಿದೆ. ಜೊತೆಗೆ, 1996 ರಲ್ಲಿ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ವ್ಯಾಖ್ಯಾನಿಸಿದ್ದ `ಅರಣ್ಯ’ ಎಂಬ ಪರಿಕಲ್ಪನೆಯನ್ನೇ ಈ ಕಾಯ್ದೆಯು ಬದಲಾಯಿಸುತ್ತದೆ. ಲೋಕಸಭೆಯ ಮೇಲ್ಮನೆಯಲ್ಲೂ ಈ ತಿದ್ದುಪಡಿ ಕಾಯ್ದೆಯು ಅಂಗೀಕರಿಸಲ್ಪಟ್ಟರೆ ಅರಣ್ಯ ಮತ್ತು ಅದನ್ನು ಶತಮಾನಗಳಿಂದ ಸಂರಕ್ಷಿಸಿಕೊಂಡು ಬಂದ ಆದಿವಾಸಿಗಳ ಸಾಂವಿಧಾನಿಕ ಹಕ್ಕುಗಳು ನಾಶವಾಗುತ್ತವೆ. ಒಂದೆಡೆ ಆದಿವಾಸಿ ಸಮುದಾಯಗಳ ಪ್ರತಿಭಾವಂತ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡುತ್ತ ಇನ್ನೊಂದೆಡೆ ಈ ಸಮುದಾಯಗಳ ಬದುಕುವ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ. ಪ್ರಭುತ್ವ ಕೊಡಮಾಡುವ ಈ ಸಾಂಕೇತಿಕ ಗೌರವಗಳು ತಳಸಮುದಾಯಗಳ ಬದುಕುಗಳಿಗೆ ಘನತೆಯನ್ನು ತರಲಾರವು.
ಸೋಮಣ್ಣ ತನ್ನ ಬದುಕಿನುದ್ದಕ್ಕೂ ಸೋಲುಗಳ ಪ್ರವಾಹದಲ್ಲಿ ಈಜಿ ಬಂದಿದ್ದಾರೆ. ಸೋಲುಗಳನ್ನು ಪರಾಭಾವಗೊಳಿಸುವ ಈತನ ನಿರಂತರ ಪ್ರಯತ್ನಗಳು ಇಂದಿಗೂ ಜಾರಿಯಲ್ಲಿವೆ. ಸೋಮಣ್ಣ ತನ್ನ ಸಹವಾಸಿಗಳ ಜೊತೆ ಸೇರಿ ಪ್ರೊ. ಅಸಾದಿಯವರ ಏಕವ್ಯಕ್ತಿ ಆಯೋಗದ ವರದಿ ರಚನೆಗಾಗಿ ದುಡಿದಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಈ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರಕ್ಕೆ ಸೂಚಿಸಿದೆ. ಪದ್ಮ ಪ್ರಶಸ್ತಿಯನ್ನು ನೀಡಿ ಆದಿವಾಸಿಗಳನ್ನು ತಾನು ಗೌರವಿಸುತ್ತಿದ್ದೇನೆ ಎಂದು ಭಾವಿಸುವ ಸರಕಾರಗಳು ಈ ವರದಿಯ ಅನುಷ್ಠಾನಕ್ಕೂ ಮುಂದಾಗಬೇಕಿದೆ.
ಕೇವಲ ಪ್ರಶಸ್ತಿಗಳಿಂದಾಗಿ ತಳಸಮುದಾಯಗಳ ಬದುಕು ಹಸನಾಗಲು ಸಾಧ್ಯವಿಲ್ಲ. ಸಾಂಕೇತಿಕತೆ ನೀಡುವ ಕ್ಷಣಿಕ ಅಹ್ಲಾದವು ತಳಸಮುದಾಯಗಳ ಬದುಕನ್ನು ಹಸನು ಮಾಡುವುದಿಲ್ಲ ಎಂಬುದಕ್ಕೆ ನಮ್ಮ ದೇಶದ ಚರಿತ್ರೆಯಲ್ಲಿ ರಾಶಿರಾಶಿ ಸಾಕ್ಷ್ಯಗಳು ದೊರೆಯುತ್ತವೆ. ಆದಿವಾಸಿಗಳು ಘನತೆಯಿಂದ ಬದುಕಲು ಅವುಗಳಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು. ನಮ್ಮ ಸಮಾಜದ ಬೇರುಗಳೇ ಆಗಿರುವ ಆದಿವಾಸಿಗಳು ಸೋತು ಹೋಗಬಾರದು. ಸೋಮಣ್ಣನಂತಹ ವಿವೇಕಶಾಲಿಗಳು ಸ್ವಾವಲಂಬಿ ಬದುಕನ್ನು ನಡೆಸುವಂತಾಗಬೇಕು. ಆದಿವಾಸಿಗಳಿಗೆ ಹೀಗೆ ಘನತೆಯ ಬದುಕನ್ನು ನಡೆಸಲು ಅನುವು ಮಾಡಿಕೊಡುವ ಉಪಕ್ರಮವು ಪ್ರಶಸ್ತಿಗಳನ್ನು ನೀಡುವ ಶುಷ್ಕ ಔದಾರ್ಯಕ್ಕಿಂತ ಮಿಗಿಲಾದದ್ದು. ಪದ್ಮ ಪ್ರಶಸ್ತಿ ಪಡೆಯುವ ವೇದಿಕೆಯಲ್ಲೂ ಸೋಮಣ್ಣ ಪಾರಿತೋಷಕ ಹಿಡಿದು ಇದನ್ನೇ ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ.
ಎ. ಎಸ್. ಪ್ರಭಾಕರ
ಹಂಪಿಯ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ