ಕಂದಹಾರ್ ವಿಮಾನ ಅಪಹರಣಕಾರ, ಯೂಸುಫ್ ಅಜರ್ ಹತ್ಯೆ; ಆಪರೇಷನ್‌ ಸಿಂಧೂರ್‌ ಗೆ ಬಲಿಯಾದ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌

Most read

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನೆಲೆ ಕಂಡುಕೊಂಡಿದ್ದ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಅಸುನೀಗಿದವರಲ್ಲಿ ಜೈಷ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ಬಾವ ಯೂಸುಫ್ ಅಜರ್‌ ಒಬ್ಬನಾಗಿದ್ದಾನೆ.  ಯೂಸುಫ್ ಅಜರ್‌ 1999ರ ಡಿಸೆಂಬರ್‌ನಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದ ರೂವಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಅಪಹರಣಕ್ಕೂ ಒಂದು ವರ್ಷ ಮುಂಚೆ 1998ರಲ್ಲಿ ನಕಲಿ ಪಾಸ್‌ಪೋರ್ಟ್‌ ಪಡೆದು ಭಾರತದೊಳಗೆ ನುಸುಳಿದ್ದ ಈತ ವಿಮಾನ ಅಪಹರಿಸಿದ್ದ. ಇವನಿಗೆ ಅಬ್ದುಲ್ ಲತೀಫ್ ಎಂಬಾತ ನೆರವಾಗಿದ್ದ. ಯೂಸುಫ್ ವಿರುದ್ಧ ಇಂಟರ್‌ ಪೋಲ್‌ 2002ರಲ್ಲಿ ರೆಡ್‌ ನೋಟಿಸ್ ಜಾರಿ ಮಾಡಿತ್ತು. ಪಾಕಿಸ್ತಾನಕ್ಕೆ ಭಾರತ ನೀಡಿದ್ದ  21 ‘ಮೋಸ್ಟ್‌ ವಾಂಟೆಡ್‌’ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರನ್ನು ಸೇರಿಸಲಾಗಿತ್ತು.

179 ಪ್ರಯಾಣಿಕರನ್ನು ಹೊತ್ತು ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್‌ ಏರ್‌ ಲೈನ್ಸ್‌ ಐಸಿ–814 ವಿಮಾನವನ್ನು ಯೂಸುಫ್ ಅಜರ್ ಅಪಹರಿಸಿದ್ದ. ದೆಹಲಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಆಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಸಹಿತ ಒತ್ತೆಯಾಳುಗಳ ಬಿಡುಗಡೆಗೆ ಜಮ್ಮು ಜೈಲಿನಲ್ಲಿದ್ದ ತನ್ನ ಬಾವ ಜೆಎಎಂ ಸ್ಥಾಪಕ ಭಯೋತ್ಪಾದಕ ಮಸೂದ್ ಅಜರ್‌, ಒಮರ್‌ ಶೇಖರ್ ಹಾಗೂ ಮುಷ್ತಾಕ್ ಅಹ್ಮದ್ ಜ‌ರ್ಗಾರ್‌ ಅವರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದ.

ಜಮ್ಮು ಜೈಲಿನಲ್ಲಿದ್ದ ಮಸೂದ್ ಅಜರ್‌ ನನ್ನು ಬಿಡುಗಡೆ ಮಾಡಲು ಯೂಸುಫ್ ಹಲವು ಬಾರಿ ವಿಫಲ ಯತ್ನ ನಡೆಸಿದ್ದ. ಇದರ ಭಾಗವಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ತೆರಳಿ ಅಲ್ಲಿ ಅಬ್ದುಲ್ ರವೂಫ್ ಮತ್ತು ಇಬ್ರಾಹಿಂ ಅಖ್ತರ್‌ ಎಂಬುವವರನ್ನು ಭೇಟಿ ಮಾಡಿ, ಅವರ ಆಶ್ರಯ ಪಡೆದಿದ್ದ.

ನಂತರ ನೇಪಾಳದ ಕಠ್ಮಂಡುಗೆ ಬಂದ ಈತ ಅಲ್ಲಿ ಹಲವು ದಿನಗಳನ್ನು ಕಳೆದಿದ್ದ. ಕಠ್ಮಂಡುವಿನ ವಿಮಾನ ನಿಲ್ದಾಣದಲ್ಲಿನ ಭದ್ರತಾ ಲೋಪಗಳನ್ನು ಗುರುತಿಸಿದ್ದ. ಈ ಲೋಪಗಳನ್ನೇ ತನ್ನ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿದ. ಹರ್ಕತ್‌ ಉಲ್ ಮುಜಾಹಿದ್ದೀನ್‌ ನಿಂದ ವಿಮಾನ ಅಪಹರಣದ ನೀಲನಕ್ಷೆಯನ್ನು ರವೂಫ್ ಪಡೆದಿದ್ದ. ಜತೆಗೆ ವಿಮಾನದಲ್ಲಿದ್ದವರ ಸುರಕ್ಷಿತ ಬಿಡುಗಡೆಗೆ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು.

ಪೂರ್ವ ನಿರ್ಧಾರಿತ ಯೋಜನೆ ಪ್ರಕಾರ 1999ರ ಡಿ. 24ರಂದು  ಐಸಿ–814 ವಿಮಾನವನ್ನು ಅಪಹರಿಸಿದ್ದರು. 11 ಸಿಬ್ಬಂದಿ ಹಾಗೂ 179 ಪ್ರಯಾಣಿಕರಿದ್ದ ಈ ವಿಮಾನ ಏರಿದ ಪಾಕಿಸ್ತಾನ ಮೂಲದ ಐವರು ಭಯೋತ್ಪಾದಕರು ವಿಮಾನ ಅಪಹರಿಸಿದ್ದರು. ಅತ್ತರ್‌, ಶಾಹೀದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್‌ ಇಬ್ರಾಹಿಮ್ ಹಾಗೂ ಶಾಖೀರ್‌ ಅಪಹರಣಕಾರರು.

ದೆಹಲಿಗೆ ಹೊರಟಿದ್ದ ವಿಮಾನವನ್ನು ಮೊದಲು ಅಮೃತಸರದಲ್ಲಿ ಇಳಿಸಿ ನಂತರ ಲಾಹೋರ್‌ ಹಾಗೂ ಅಬುಧಾಬಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಂತಿಮವಾಗಿ ಕಂದಹಾರ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐಸಿ–814 ವಿಮಾನದಲ್ಲಿದ್ದ ಪ್ರಯಾಣಿಕರು 1999ರ ಡಿ. 31ರಂದು ಬಿಡುಗಡೆಗೊಂಡರು.

ಪ್ರಕರಣ ನಡೆದು 26 ವರ್ಷಗಳ ನಂತರ ಯೂಸುಫ್ ಅಜರ್‌ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್‌ ಸಿಂಧೂರ ಆರಂಭಿಸಿದ ಭಾರತೀಯ ಸೇನೆಯು ಮೇ 7ರಂದು ಭಹವಾಲ್‌ ಪುರದಲ್ಲಿದ್ದ ಜೈಶ್ ಎ ಮೊಹಮ್ಮದ್‌ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಯೂಸುಫ್ ಅಜರ್‌ ಸಹಿತ 26 ಭಯೋತ್ಪಾದಕರು ಹತರಾದರು.

ಭಾರತದ ದಾಳಿಯಲ್ಲಿ ಐವರು ಪ್ರಮುಖ ಭಯೋತ್ಪಾದಕರು ಹತರಾಗಿದ್ದಾರೆ. ಮುರಿಡ್ಕೆನಲ್ಲಿದ್ದ ಲಷ್ಕರ್ ಎ ತೈಬಾದ ತರಬೇತಿ ಕೇಂದ್ರವನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದೆ. ಇದರಲ್ಲಿ ಮುದಸ್ಸಾರ್ ಖಾಡಿಯನ್ ಖಾಸ್ ಅಲಿಯಾಸ್‌ ಅಬುದ ಜುಂದಾಲ್‌ ಮತ್ತು ಖಾಲಿದ್ ಅಲಿಯಾಸ್ ಅಬು ಅಕಾಶಾ, ಹಫೀಜ್‌ ಮೊಹಮ್ಮದ್‌ ಜಮೀಲ್ ಮತ್ತು ಮೊಹಮ್ಮದ್‌ ಹಸ್ಸನ್ ಖಾನ್‌ ಹತರಾಗಿದ್ದಾರೆ.

ಮಸೂದ್ ಅಜರ್‌ ಕುಟುಂಬದೊಂದಿಗೆ ಆತನ ಸೋದರಿ ಹಾಗೂ ಬಾವ ಭಹವಾಲ್‌ ಪುರದಲ್ಲಿ ನೆಲೆಸಿದ್ದರು. ಇವರನ್ನೂ ಒಳಗೊಂಡು ಹತ್ತು ಮಂದಿ ಭಾರತದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ಹೇಳಿಕೊಂಡಿದ್ದಾನೆ  ಎಂದು ಮೂಲಗಳು ಹೇಳಿವೆ.

More articles

Latest article