ʼಅಮೃತ ಸೋಮೇಶ್ವರʼ ಎಂಬ ಕರಾವಳಿಯ ಇನ್ನೊಂದು ಸಶಕ್ತ ಸಾಕ್ಷಿಪ್ರಜ್ಞೆ, ಅಸಾಧಾರಣ ಸಾಹಿತ್ಯ ಸಂಸ್ಕೃತಿ ಪ್ರತಿಭೆ, ನೊಂದವರು, ಅಶಕ್ತರು, ಶೋಷಿತರ ಪರವಾಗಿ ಸದಾ ತುಡಿಯುವ ಮಾನವೀಯ ಮನಸು, ಅಂಧಶ್ರದ್ಧೆ, ಮತಾಂಧತೆಯ ವಿರುದ್ಧ ಸದಾ ದನಿ ಎತ್ತುತ್ತಿದ್ದ ವಿಶ್ವಮಾನವ ವ್ಯಕ್ತಿತ್ವವೊಂದು ಇಂದು (06.01.2024) ಕಣ್ಮರೆಯಾಗಿದೆ. ಅವರ ಆಪ್ತರಲ್ಲೊಬ್ಬರಾದ ಶ್ರೀನಿವಾಸ ಕಾರ್ಕಳ ಬರೆದ ಈ ನುಡಿನಮನದ ಮೂಲಕ ಅಗಲಿದ ಚೇತನಕ್ಕೆ ಕನ್ನಡ ಪ್ಲಾನೆಟ್ ಬಳಗ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.
ಸಾಹಿತ್ಯ, ಕಲೆ ಇತ್ಯಾದಿ ಪ್ರಕಾರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹನೀಯರನ್ನು ವರ್ಣಿಸುವಾಗ ಸಾಮಾನ್ಯವಾಗಿ ಅವರ ಬಗ್ಗೆ, ‘ಸಂಸ್ಥೆಯೊಂದು ಮಾಡಬಹುದಾದ ಕೆಲಸವನ್ನು ಏಕಾಂಗಿಯಾಗಿ ಮಾಡಿದವರು’ ಎಂದು ಹೇಳುವುದಿದೆ. ಆದರೆ ಸಹಜವಾಗಿಯೇ ಸಾಹಿತ್ಯಲೋಕದ ಇತಿಹಾಸದಲ್ಲಿ ಇಂತಹ ಅಸಾಧಾರಣ ಸಾಧಕರ ಉದಾಹರಣೆಗಳು ಸಿಗುವುದು ವಿರಳಾತಿ ವಿರಳ. ಕರಾವಳಿ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದರೆ ಇಲ್ಲಿ ವಿಶೇಷವಾಗಿ ಕೇಳಿ ಬರುವ ಅಂತಹ ಎರಡು ಹೆಸರುಗಳು – ಶಿವರಾಮ ಕಾರಂತ ಮತ್ತು ಅಮೃತ ಸೋಮೇಶ್ವರ.
ಕಾರಂತರು ಮತ್ತು ಅಮೃತ ಸೋಮೇಶ್ವರ ಇಬ್ಬರೂ ಕಡಲಕರೆಯವರು. ಅವರಿಬ್ಬರ ಬದುಕಿನ ಮೇಲೂ ಕಡಲಿನ ಅಗಾಧ ಪ್ರಭಾವವಿದೆ. ಇಬ್ಬರೂ ಇತರ ಸಾಹಿತ್ಯ ಪ್ರಕಾರಗಳ ಜತೆಯಲ್ಲಿ ಇಲ್ಲಿನ ಗಂಡುಕಲೆಯಾದ ಯಕ್ಷಗಾನದ ಬಗ್ಗೆ ವಿಶೇಷ ಪ್ರೀತಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪ್ರಯೋಗಶೀಲತೆಗೆ ವಿಶೇಷವಾಗಿ ಶ್ರಮಿಸಿದವರು. ಯಕ್ಷಗಾನದ ಮಟ್ಟಿಗೆ ಕಾರಂತರು ಪ್ರದರ್ಶನ ಪರಿಕಲ್ಪನೆ ನಿರ್ದೇಶನದತ್ತ ಒಲವು ತೋರಿದರೆ ಅಮೃತರು ಯಕ್ಷಗಾನದ ಅಧ್ಯಯನ, ಪ್ರಸಂಗ ರಚನೆಯತ್ತ ಆಸಕ್ತಿ ತೋರಿದರು. ಪ್ರಸಿದ್ಧಿಯ ವ್ಯಾಪ್ತಿಯನ್ನು ಹೊರತು ಪಡಿಸಿದರೆ ಸಮಾಜಪರ ಕಾಳಜಿ, ಮಾನವೀಯ ನಡವಳಿಕೆ, ವೈಚಾರಿಕ ನಿಲುವುಗಳು, ಪರಿಸರ ಪ್ರೀತಿ, ಅಂಧಶ್ರದ್ಧೆಗಳ ವಿರುದ್ಧದ ಹೋರಾಟ ಇತ್ಯಾದಿ ನಾನಾ ವಿಚಾರಗಳಲ್ಲಿ ಇಬ್ಬರಲ್ಲೂ ಬಹುತೇಕ ಸಾಮ್ಯ ಇದೆ. ಶಿವರಾಮ ಕಾರಂತರು ತಮ್ಮ ಬಹುಮುಖಿ ಸಾಧನೆಯ ಮೂಲಕ ಘಟ್ಟ ಮಾತ್ರವಲ್ಲ ರಾಜ್ಯ ಮತ್ತು ದೇಶದ ಗಡಿಯನ್ನೂ ದಾಟಿಹೋದರೆ, ಅಮೃತರ ಕೆಲಸವು ಬಹುಮುಖ್ಯವಾಗಿ ತುಳು ಜಾನಪದ ಮತ್ತು ಯಕ್ಷಗಾನ ಕ್ಷೇತ್ರವನ್ನು ನೆಲೆಯಾಗಿರಿಸಿಕೊಂಡುದರಿಂದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೆಚ್ಚು ಸೀಮಿತರಾದರು ಅಷ್ಟೆ (ಆದರೆ, ಕೋಟಿಚೆನ್ನಯ ಸಿನಿಮಾದ ‘ಜೋಡುನಂದಾ ದೀಪ ಬೆಳಗ್‌ಂಡ್’ ಎಂಬ ಬಹು ಜನಪ್ರಿಯ ಹಾಡೂ ಸೇರಿದಂತೆ, ಅಸಂಖ್ಯ ತುಳು-ಕನ್ನಡ ಭಾವಗೀತೆಗಳು, ಭಕ್ತಿಗೀತೆಗಳು ಮತ್ತು ಯಕ್ಷಗಾನ ಪ್ರಸಂಗಗಳ ಮೂಲಕ ಕರಾವಳಿಯ ಜನಮನಗಳನ್ನು ಹೊಕ್ಕು ಅಲ್ಲಿ ನೆಲೆಯಾಗಿ ನಿಂತವರು; ಔಪಚಾರಿಕ ಪರಿಚಯದ ಅಗತ್ಯವೇ ಇಲ್ಲದಷ್ಟು ಪರಿಚಿತರಾದವರು).
ಹೆಚ್ಚು ಕಡಿಮೆ ಕಳೆದ ಶತಮಾನದುದ್ದಕ್ಕೂ ನಾಡಿನ ಪ್ರಬಲ ಸಾಕ್ಷಿಪ್ರಜ್ಞೆಯಂತೆ ನಮ್ಮ ನಡುವಿದ್ದ್ದ ಶಿವರಾಮ ಕಾರಂತರು ಈಗ ನಮ್ಮೊಂದಿಗಿಲ್ಲ. ದುರದೃಷ್ಟವಶಾತ್ ಇಂದು (06.01.2024) ಇಹಲೋಕ ತ್ಯಜಿಸುವುದರೊಂದಿಗೆ ಈಗ ಅಮೃತ ಸೋಮೇಶ್ವರ ಎಂಬ ಇನ್ನೊಂದು ಸಾಕ್ಷಿಪ್ರಜ್ಞೆಯೂ ನಮ್ಮೊಂದಿಗೆ ಇಲ್ಲವಾದಂತಾಯಿತು.
ಜನನ, ಬಾಲ್ಯ, ಉದ್ಯೋಗ, ನಿವೃತ್ತಿ
ಮಂಗಳೂರಿನ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ27 ಸೆಪ್ಟಂಬರ್ 1935 ರಲ್ಲಿ ಹುಟ್ಟಿದ ಶ್ರೀ ಅಮೃತ ಸೋಮೇಶ್ವರರು (ತಂದೆ ಚಿರಿಯಂಡ, ತಾಯಿ ಅಮ್ಮುಣಿ) ಸ್ಥಳೀಯ ಸ್ಟೆಲ್ಲಾ ಮೇರೀಸ್ ಶಾಲೆ, ಆನಂದಾಶ್ರಮ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದು ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಪದವೀಧರರಾದರು. ಅದೇ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪನವನ್ನು ಮಾಡಿ ಮತ್ತೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನು ಪಡೆದರು. ಎರಡು ವರ್ಷ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿದು ಆನಂತರ ವಿವೇಕಾನಂದ ಕಾಲೇಜು ಸೇರಿ, ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ದುಡಿದು 1993 ರಲ್ಲಿ ನಿವೃತ್ತರಾದವರು.
ಬರವಣಿಗೆಯ ಕ್ಷೇತ್ರದ ದುಡಿಮೆ
ಬರವಣಿಗೆಯ ಕ್ಷೇತ್ರದಲ್ಲಿ ಅಮೃತರದ್ದು ಸುಮಾರು ಏಳು ದಶಕಗಳ ದುಡಿಮೆ. ಸಾಹಿತ್ಯದ ವಿವಿಧ ಪ್ರಕಾರಗಳು, ಯಕ್ಷಗಾನ – ಜಾನಪದ ಇತ್ಯಾದಿಗಳಲ್ಲಿ ಅಭಿರುಚಿ ಹೊಂದಿರುವ ಶ್ರೀಯುತರ ಸುಮಾರು 85 ಕ್ಕೂ ಅಧಿಕ ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಕನ್ನಡದಲ್ಲಿ ಸಣ್ಣಕತೆ, ಕವಿತೆ, ವಿಮರ್ಶೆ, ಸಂಶೋಧನೆ ನಾಟಕ, ಜಾನಪದ, ಅನುವಾದ, ಯಕ್ಷಗಾನ, ನೃತ್ಯರೂಪಕ, ಸ್ವತಂತ್ರ ಗಾದೆಗಳು, ವಿನೋದ ಕೋಶ, ಶಬ್ದಕೋಶ, ಕಾದಂಬರಿ, ತುಳುವಿನಲ್ಲಿ ನಾಟಕ, ರೇಡಿಯೋ ರೂಪಕ, ನೃತ್ಯರೂಪಕ, ಕಾವ್ಯಾನುವಾದ, ಯಕ್ಷಗಾನ, ಕವನ ಸಂಕಲನ, ಸ್ವತಂತ್ರ ಗಾದೆಗಳು ಇತ್ಯಾದಿ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಇನ್ನು ಬಿಡಿಬಿಡಿಯಾಗಿ ಪತ್ರಿಕೆಗಳಿಗೆ, ಸ್ಮರಣ ಸಂಚಿಕೆಗಳಿಗೆ ಬರೆದ ಲೇಖನಗಳಾದರೋ ಅಗಣಿತ. ಅಲ್ಲದೆ ಕನ್ನಡ ಮತ್ತು ತುಳುವಿನಲ್ಲಿ 60 ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ!
ಮಾನ ಸನ್ಮಾನಗಳು
ಅಮೃತರಿಗೆ ಮಣಿಪಾಲ ಅಕಾಡೆಮಿ ಫೆಲೋಶಿಪ್, ಜಾನಪದ ತಜ್ಞ ಪ್ರಶಸ್ತಿ (ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ), ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ, ಮಂಗಳೂರು ವಿವಿ ಗೌರವ ಡಾಕ್ಟರೇಟ್, ಪಾರ್ತಿ ಸುಬ್ಬ ಪ್ರಶಸ್ತಿ, ಡಾ ಕಾರಂತ ಪುರಸ್ಕಾರ ಸಹಿತ 35 ಕ್ಕೂ ಅಧಿಕ ಪ್ರಶಸ್ತಿಗಳು ಒಲಿದುಬಂದಿವೆ.
ಕೇಂದ್ರ ವಿದ್ಯಾ ಇಲಾಖೆ (ತುಳು ಪಾಡ್ದನ ಕಥೆಗಳು), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (ಯಕ್ಷಗಾನ ಕೃತಿ ಸಂಪುಟ), ಆರ್ಯಭಟ (ಅಪಾರ್ಥಿನೀ), ಕರ್ನಾಟಕ ಸಾಹಿತ್ಯ ಅಕಾಡೆಮಿ (ತುಳುನಾಡ ಕಲ್ಕುಡೆ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (ಭಗವತೀ ಆರಾಧನೆ) ಮೊದಲಾದ ಪುಸ್ತಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ (ಮುಂಬಯಿ), ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ, ಅ.ಕ. ಜಾನಪದ ಸಮ್ಮೇಳನದ ಅಧ್ಯಕ್ಷತೆ, ಬಹರೈನ್ ಕನ್ನಡ ಸಂಘ, ದುಬೈ ತುಳುಕೂಟ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಗೌರವವೂ ಸಂದಿದೆ.
ಶ್ರೀಸಾಮಾನ್ಯರನ್ನು ಸಮೀಪಿಸುವುದೇ ಮೂಲೋದ್ದೇಶ
ಸಾಹಿತ್ಯ ಸಾಧಕನೊಬ್ಬ ಎಷ್ಟು ಕೃತಿ ರಚಿಸಿದ ಎನ್ನುವುದು ಯಾವತ್ತೂ ಮುಖ್ಯವಲ್ಲ. ಆತ ಎಂತಹ ಕೃತಿಯನ್ನು ರಚಿಸಿದ ಮತ್ತು ಅದು ಎಷ್ಟರಮಟ್ಟಿಗೆ ಸಮಾಜಮುಖಿಯಾಗಿತ್ತು, ಸಮಾಜದ ಹಿತಕ್ಕೆ ಪೂರಕವಾಗಿತ್ತು ಎನ್ನುವುದು ಮುಖ್ಯ. ಈ ಅರ್ಥದಲ್ಲಿ ಅಮೃತರ ಒಂದೊಂದು ಕೃತಿಯೂ ಸಾರ್ಥಕ ಕೃತಿಗಳು. ಅವರದು ಪಂಥಗಳಲ್ಲಿ ಯಾವುದೇ ನಂಬಿಕೆ ಇಲ್ಲದ ಶ್ರೀ ಸಾಮಾನ್ಯರ ಸಾಹಿತ್ಯ. ‘ಸಾಹಿತ್ಯದಲ್ಲಿ ಎಡಬಲ ಪಂಥಗಳ ಮಹಿಮೆಗಳನ್ನು ನಾನರಿಯೆನಾದರೂ ಜನಸಾಮಾನ್ಯರ ಮುಗ್ಧ ಜಾನಪದ ಮಂದಿಯ ಜೊತೆಗೆ ನಿಲ್ಲುವ ಮನಸ್ಸು ನನ್ನದು, ಅಧ್ಯಯನ ಗಂಭೀರರನ್ನು ತುಷ್ಟಿಪಡಿಸುವುಕ್ಕಿಂತಲೂ ಶ್ರೀ ಸಾಮಾನ್ಯರನ್ನು ಸಮೀಪಿಸುವುದೇ ಮೂಲೋದ್ದೇಶವಾಗಿದೆ’ ಎನ್ನುವ ಅವರ ಮಾತುಗಳಲ್ಲಿಯೇ ಅವರ ಸಾಹಿತ್ಯದ ಒಲವು ನಿಲುಮೆಗಳು ಸ್ಪಷ್ಟವಾಗುತ್ತವೆ.
ಪ್ರಗತಿಪರ ಚಿಂತನೆ
ಬದಲಾದ ಕಾಲದೊಂದಿಗೆ ನಮ್ಮ ಆಚಾರ ವಿಚಾರಗಳೂ ಬದಲಾಗಬೇಕು ಎಂದು ಪ್ರತಿಪಾದಿಸುವ ಅಮೃತರು ಇಂತಹ ವೈಚಾರಿಕ ನಿಲುವನ್ನು ತಮ್ಮ ಕೃತಿಗಳೆಲ್ಲದರಲ್ಲೂ ಕಾಣಿಸಿದ್ದಾರೆ. ಹೊಸ ಯುಗಕ್ಕೆ ಸಲ್ಲದ ಚಿಂತನೆಗಳನ್ನು ಮೌಲ್ಯಗಳನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.
ಹೆಚ್ಚು ಸ್ವಾತಂತ್ರ್ಯವಿಲ್ಲದ ಯಕ್ಷಗಾನ ಪ್ರಸಂಗ ಅಷ್ಟೇ ಏಕೆ, ಭಕ್ತಿಗೀತೆಗಳಲ್ಲಿಯೂ ಅವರು ಪ್ರಗತಿಪರ ಚಿಂತನೆಯನ್ನು ತರುವ ಯತ್ನ ನಡೆಸಿದ್ದಾರೆ. ಅರ್ಥಹೀನ ಸಂಪ್ರದಾಯಗಳನ್ನು, ಸ್ತ್ರೀಯರಿಗೆ ಸಮಾನ ಅವಕಾಶವನ್ನು ನಿರಾಕರಿಸುವ, ಅವರನ್ನು ಅಗೌರವದಿಂದ ಕಾಣುವ ಆಚರಣೆಗಳನ್ನು, ವರ್ಣಾಶ್ರಮ ಪದ್ಧತಿಯ ಭೇದಭಾವಗಳನ್ನು ಅವರು ಸಹಿಸಿದವರಲ್ಲ. ಅಯ್ಯಪ್ಪನ ಗುಡಿಯಿರಬಹುದು, ಅಣ್ಣಪ್ಪನ ಗುಡಿಯಿರಬಹುದು ಅಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಿಸಿ ಮಾಡುವ ಅನ್ಯಾಯದ ವಿರುದ್ಧ ದನಿ ಎತ್ತುವಾಗ ಅವರು ಯಾವುದೇ ಮುಲಾಜಿಗೆ ಒಳಗಾದವವರಲ್ಲ. ಅದಕ್ಕಾಗಿ ‘ಧರ್ಮದ ಅಧಿಕಾರ ಹಿಡಿದವರನ್ನೂ’ ಅವರು ಎದುರು ಹಾಕಿಕೊಳ್ಳಲು ಹಿಂಜರಿದವರಲ್ಲ. ಅಖಂಡ ಭಾರತ ನಿರ್ಮಾಣದ ಹುಚ್ಚಾಟಕ್ಕಿಳಿಯುವವರು ಮತ್ತು ದ್ವೇಷ ಬಿತ್ತಿ ಸಮಾಜವನ್ನು ಒಡೆಯುವ ಮತಾಂಧರ ವಿರುದ್ಧವೂ ಅವರು ಅಕ್ಷರ ಕತ್ತಿ ಎತ್ತಿದವರೇ. ಆಟಿಯ ಹೆಸರಿನಲ್ಲಿ ತಮ್ಮನ ಮಾಡುವವರನ್ನೂ ಅವರು ಎಚ್ಚರಿಸದೆ ಬಿಟ್ಟದ್ದಿಲ್ಲ. ಕಾವಿ ತೊಟ್ಟು ಕಪಟ ವ್ಯವಹಾರ ಮಾಡುವವರೂ ಅವರ ವಿಮರ್ಶೆಗೆ ಒಳಗಾದವರೇ. ಅವರಿಗೆ ಒಡೆಯುವುದರಲ್ಲಿ ನಂಬಿಕೆ ಇಲ್ಲ. ಅವರದ್ದೇನಿದ್ದರೂ ಜೋಡಿಸುವ ಕೆಲಸ. ಸಾಮರಸ್ಯಕ್ಕೆ ಸಹೋದರ ಭಾವಕ್ಕೆ ಸದಾ ತುಡಿದವರು ಅವರು.
ಅಮೃತರ ಕೃತಿಗಳನ್ನು ಲೆಕ್ಕ ಹಾಕುವುದು, ವಿಶ್ಲೇಷಿಸುವುದು ಎಷ್ಟು ಕಷ್ಟಕರವೋ, ಅವರ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ, ಮಾತುಗಳಲ್ಲಿ ಕಟ್ಟಿಕೊಡುವುದು ಅಷ್ಟೇ ಕಷ್ಟ. ಸಮಾಜಕ್ಕೆ ಉಪಕಾರವಾಗುವ ಓರ್ವ ಆದರ್ಶ ವ್ಯಕ್ತಿ ಹೇಗಿರಬೇಕು ಎಂದು ನಾವು ಆಶಿಸುತ್ತೇವೆಯೋ ಆ ಎಲ್ಲ ಗುಣಗಳೂ ಅವರಲ್ಲಿವೆ. ಸರಿಸುಮಾರು ಏಳು ದಶಕಗಳ ತಮ್ಮ ಸಾಹಿತ್ಯ ದುಡಿಮೆಯ ಮೂಲಕ, ಸಕಲ ಸಂಪನ್ಮೂಲ ವ್ಯವಸ್ಥೆ ಹೊಂದಿರುವ ಸಂಸ್ಥೆಯೊಂದು ಮಾಡಬಹುದಾದನ್ನೂ ಮೀರಿ ಅವರು ಕೆಲಸ ಮಾಡಿದ್ದರೂ, ತನ್ನದು ಕೇವಲ ‘ಗೂಡಂಗಡಿ’ ಎನ್ನುವಂತಹ ನಿಗರ್ವಿ ಅವರು. ಆದರೆ ಅವರ ಗೂಡಂಗಡಿಯ ಒಳಗಡೆಯೇ ದೊಡ್ಡದೊಂದು ಬಂಡಸಾಲೆಯೇ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಸದಾ ಸ್ನೇಹಶೀಲ ಅಮೃತರು
ಅಮೃತರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಇದಕ್ಕೆ ಅವರ ಸಾಹಿತ್ಯ ಕೃಷಿಯ ಜನಪ್ರಿಯತೆಯ ಜತೆಗೆ, ಅವರ ಸ್ನೇಹಶೀಲ ವ್ಯಕ್ತಿತ್ವವೂ ಒಂದು ಮುಖ್ಯ ಕಾರಣ. ಯಾರೇ ಪತ್ರ ಬರೆಯಲಿ, ಅದಕ್ಕೆ ಅವರು ತಕ್ಷಣ ಉತ್ತರಿಸುತ್ತಿದ್ದವರು. ತಮ್ಮ ಪರಿಚಿತರು ಯಾರೇ ಪತ್ರಿಕೆಗಳಲ್ಲಿ ಲೇಖನ ಬರೆಯಲಿ, ಬಾನುಲಿಯಲ್ಲಿ ಮಾತನಾಡಲಿ, ತಮ್ಮ ಗಮನಕ್ಕೆ ಬರುತ್ತಲೇ ಅವರು ಆ ವ್ಯಕ್ತಿಗಳನ್ನು ಸಂಪರ್ಕಿಸಿ ಒಂದೆರಡು ಮೆಚ್ಚುಗೆಯ ಮಾತು ಆಡದವರಲ್ಲ.
ಅಪಘಾತವೊಂದರಿಂದ ಉಂಟಾದ ಅಶಕ್ತತೆಯ ಕಾರಣದಿಂದ ನಾನು ಹೋಗಿ ಅವರನ್ನು ಭೇಟಿಯಾಗಲಾರೆನಾದರೆ, ವಯಸ್ಸು ಮತ್ತು ಸಣ್ಣಪುಟ್ಟ ಅಸೌಖ್ಯಗಳ ಕಾರಣವಾದ ಆಶಕ್ತತೆಯಿಂದಾಗಿ ಅವರು ಬಂದು ನನ್ನನ್ನು ಭೇಟಿಯಾಗಲಾರದ ಸ್ಥಿತಿಯಲ್ಲಿ ನಾವಿಬ್ಬರೂ ಇದ್ದೆವು. ಆದರೆ ನನಗೆ ಅವರು ಆಗಾಗ ಪತ್ರ ಬರೆಯುತ್ತಲೇ ಇರುತ್ತಿದ್ದರು ಮತ್ತು ತಿಂಗಳಿಗೆರಡು ಬಾರಿಯಾದರೂ ನನ್ನೊಂದಿಗೆ ದೂರವಾಣಿಯಲ್ಲಿ ಹರಟದೆ ಇರುತ್ತಿರಲಿಲ್ಲ; ಅದೂ ಒಮ್ಮೊಮ್ಮೆ ಗಂಟೆಗಟ್ಟಲೆ. ಅವರ ಮುಂದೆ ನಾನು ಏನೂ ಅಲ್ಲ. ಆದರೆ ಅವರ ಸಹೃದಯತೆ, ಪ್ರೀತಿಯೇ ಅಂತಹದು. ಆ ಸಹೃದಯತೆಗೆ, ಪ್ರೀತಿಗೆ ಅವರಿವರೆಂದಿಲ್ಲ. ಅವರ ಸ್ನೇಹ ವಲಯಕ್ಕೆ ಸೇರಿಕೊಂಡವರಿಗೆಲ್ಲ ಈ ಅನುಭವ ಆಗಿಯೇ ಆಗಿರುತ್ತದೆ.
ಕೊನೆಗೂ ಕರಾವಳಿಯ ಇನ್ನೊಂದು ಸಶಕ್ತ ಸಾಕ್ಷಿಪ್ರಜ್ಞೆ, ಅಸಾಧಾರಣ ಸಾಹಿತ್ಯ ಸಂಸ್ಕೃತಿ ಪ್ರತಿಭೆ, ನೊಂದವರು, ಅಶಕ್ತರು, ಶೋಷಿತರ ಪರವಾಗಿ ಸದಾ ತುಡಿಯುವ ಮಾನವೀಯ ಮನಸು, ಅಂಧಶ್ರದ್ಧೆ, ಮತಾಂಧತೆಯ ವಿರುದ್ಧ ಸದಾ ದನಿ ಎತ್ತುತ್ತಿದ್ದ ವಿಶ್ವಮಾನವ ವ್ಯಕ್ತಿತ್ವವೊಂದು ಕಣ್ಮರೆಯಾದಂತಾಯಿತು. ಆದರೆ ಕರಾವಳಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರ ಅನನ್ಯ ಸಾಧನೆ ಮತ್ತು ಅವರ ವಿಶ್ವಮಾನವ ವ್ಯಕ್ತಿತ್ವದ ಅದ್ಭುತ ನೆನಪುಗಳು ಎಂದಿಗೂ ಮರೆಯಾಗಲಾರವು.
ಶ್ರೀನಿವಾಸ ಕಾರ್ಕಳ
2-11-868/21, ‘ನೆಲೆ’, ಭಜನಾಮಂದಿರ ರಸ್ತೆ, ಬಿಜೈ,
ಮಂಗಳೂರು, 575004