Sunday, September 8, 2024

ಮುಸ್ಲಿಂ ಮಹಿಳೆ ಮತ್ತು ಷರಿಯತ್

Most read

ಮೃತ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಆತನ ಹೆಣ್ಣು ಮಕ್ಕಳ ಹಕ್ಕನ್ನು ಕಡಿಮೆಗೊಳಿಸಿ ಆಸ್ತಿಯಲ್ಲಿ ಒಂದು ಭಾಗವನ್ನು ಮೃತನ ತಂದೆ ಅಥವಾ ಸಹೋದರರಿಗೆ ನೀಡುವುದು ನ್ಯಾಯವೇ ? ತಂದೆ ಮತ್ತು ತಾಯಿಗಿಂತ ಮೊದಲೇ  ಮಗ ಮೃತನಾದಲ್ಲಿ ಆತನ ಪತ್ನಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನಿರಾಕರಿಸುವುದು ಎಷ್ಟು ಸರಿ ? – ಶಫೀರ್ ಎ ಎ, ವಕೀಲರು.

ಸುಮಾರು ಹತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಅನಾರೋಗ್ಯದ ನಿಮಿತ್ತ  ದಿಢೀರ್ ತೀರಿಕೊಂಡರು. ಆಗ ಅವರಿಗೆ ಸುಮಾರು ನಲ್ವತ್ತು ವರ್ಷ ವಯಸ್ಸು ಇದ್ದಿರ ಬಹುದು. ಅವರು ತಮ್ಮ ಪತ್ನಿ ಹಾಗು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಬಿಟ್ಟು  ಅಗಲಿದ್ದರು. ಉತ್ತಮ ಸ್ಥಿತಿವಂತ ಮುಸ್ಲಿಂ ಕುಟುಂಬಕ್ಕೆ ಸೇರಿದ ನನ್ನ ಆ ಸ್ನೇಹಿತ ಹಲವಾರು ಸ್ಥಿರಾಸ್ತಿಗಳನ್ನು ಬಿಟ್ಟು ಹೋಗಿದ್ದರು. ಅವರ ತಂದೆಗೆ ಆಗ ಸುಮಾರು 70 ವರ್ಷ ಪ್ರಾಯವಿದ್ದು ಅವರು ಸಹ ಹಲವಾರು ಸ್ಥಿರಾಸ್ತಿ ಗಳನ್ನು ಹೊಂದಿದ್ದರು. ಅಗಲಿದ ನನ್ನ ಸ್ನೇಹಿತನಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರು ಇದ್ದರು.

ನನ್ನ ಸ್ನೇಹಿತನ ಮರಣದ ತರುವಾಯ ಅವರ ಪತ್ನಿ ಮತ್ತು ಗಂಡನ ಕುಟುಂಬದವರ ನಡುವೆ ಆಸ್ತಿ ವಿಭಾಗ ಮಾಡಿಕೊಳ್ಳುವ ವಿಚಾರದಲ್ಲಿ ವಿವಾದ ಉಂಟಾಯಿತು. ಇಸ್ಲಾಮಿಕ್ ಶರಿಯತ್ ಪ್ರಕಾರ ಮೃತ ವ್ಯಕ್ತಿಯ ಪತ್ನಿ ಆತನ ಆಸ್ತಿಯಲ್ಲಿ ಎಂಟರಲ್ಲಿ ಒಂದು ಭಾಗ ಹಾಗು ಹೆಣ್ಣು ಮಕ್ಕಳು 3/2 ಮತ್ತು ತಂದೆ 6/1 ಭಾಗವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಗಂಡನ ಆಸ್ತಿಯಲ್ಲಿ ಯಾವುದೇ ಪಾಲನ್ನು ತಂದೆಗೆ ಬಿಟ್ಟು ಕೊಡಲು ನನ್ನ ಸ್ನೇಹಿತನ ಪತ್ನಿ ಸಿದ್ಧರಿರಲಿಲ್ಲ. ಇದರಿಂದ ಮೃತನ ತಂದೆ ಮತ್ತು ಸಹೋದರರು ಆಸ್ತಿಯಲ್ಲಿ 6/1 ಭಾಗ ಹಕ್ಕು ಕೇಳಿ ನ್ಯಾಯಾಲಯದ ಮೆಟ್ಟಿಲು ಹತ್ತಿದರು.

ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದಾಗ ಮೃತನ ತಂದೆ ಹಾಗು ತಾಯಿ ತೀರಿಕೊಂಡರು. ಆಗ  ಇವರಿಬ್ಬರಿಗೂ ಸೇರಿದ ಸ್ಥಿರಾಸ್ತಿ ಗಳಲ್ಲಿ ತನಗೆ ಮತ್ತು ಮಕ್ಕಳಿಗೆ ಭಾಗ ಕೊಡ ಬೇಕೆಂದು ನನ್ನ ಸ್ನೇಹಿತನ ಪತ್ನಿ ಹಕ್ಕು ಮಂಡಿಸಿದರು.

ಆದರೆ ನಿಜವಾಗಿ  ಷರಿಯತ್ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಮೃತನಾಗುವ ಕಾಲಕ್ಕೆ ಬದುಕಿದ್ದ ವಾರಸುದಾರರು ಮಾತ್ರ ಆತನ ಆಸ್ತಿಯ ಹಕ್ಕುದಾರನಾಗಿದ್ದು ನನ್ನ ಸ್ನೇಹಿತ  ಮೊದಲೇ ತೀರಿಕೊಂಡಿದ್ದರಿಂದ ಆತನ ತಂದೆ ಮತ್ತು ತಾಯಿಯ ಆಸ್ತಿಯಲ್ಲಿ ಅವರ ಪತ್ನಿ ಮತ್ತು ಮಕ್ಕಳಿಗೆ ಹಕ್ಕು ಇರುವುದಿಲ್ಲ. ಇದೇ ಕಾರಣವೊಡ್ಡಿ ನನ್ನ ಸ್ನೇಹಿತನ ಪತ್ನಿ ಮತ್ತು ಮಕ್ಕಳಿಗೆ ತಮ್ಮ ಪೋಷಕರ ಆಸ್ತಿಯಲ್ಲಿ  ಭಾಗ ನೀಡಲು ಸಹೋದರರು ಮತ್ತು ಸಹೋದರಿಯರು ನಿರಾಕರಿಸಿದರು. ಈಗ ಈ ವಿಚಾರದಲ್ಲಿ ಎರಡು ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಈ ಮೇಲ್ಕಂಡ ಪ್ರಕರಣ ಓದಿದ ನಂತರ ಸಹಜವಾಗಿ ಓದುಗರಿಗೆ ಕೆಲವೊಂದು ಪ್ರಶ್ನೆಗಳು ಉದ್ಭವವಾಗ ಬಹುದು. ಮೃತ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಆತನ ಹೆಣ್ಣು ಮಕ್ಕಳ ಹಕ್ಕನ್ನು ಕಡಿಮೆಗೊಳಿಸಿ ಆಸ್ತಿಯಲ್ಲಿ ಒಂದು ಭಾಗವನ್ನು ಮೃತನ ತಂದೆ ಅಥವಾ ಸಹೋದರರಿಗೆ ನೀಡುವುದು ನ್ಯಾಯವೇ ? ತಂದೆ ಮತ್ತು ತಾಯಿಗಿಂತ ಮೊದಲೇ  ಮಗ ಮೃತನಾದಲ್ಲಿ ಆತನ ಪತ್ನಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನಿರಾಕರಿಸುವುದು ಎಷ್ಟು ಸರಿ ? ಈ ಪ್ರಶ್ನೆಗಳನ್ನು ಚರ್ಚೆಗೆ ಕೈಗೆ ಎತ್ತಿ ಕೊಳ್ಳುವ ಮುನ್ನ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಮುಸ್ಲಿಂ ವೈಯುಕ್ತಿಕ ಕಾನೂನಿನ ರೂಪು ರೇಷೆಗಳನ್ನು ಕೊಂಚ ತಿಳಿದು ಕೊಳ್ಳೋಣ.

ಹಿಂದುಗಳಿಗೆ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ಉತ್ತರಾಧಿಕಾರ/ವಾರಸು ಕಾನೂನು ಇರುವಂತೆಯೇ ಭಾರತದ ಮುಸ್ಲಿಮರ ಉತ್ತರಾಧಿಕಾರ, ವಿವಾಹ, ವಿವಾಹ ವಿಚ್ಛೇದನ,  ಜೀವನಾಂಶ, ಪಾಲನೆ ಮತ್ತು ಪೋಷಣೆ, ದಾನ, ನ್ಯಾಸ ಹಾಗು ವಕ್ಫ್ ಗಳಿಗೆ ಸಂಬಂಧಿಸಿದಂತೆ ಮುಸ್ಲಿಂ ಪರ್ಸನಲ್ ಲಾ ಅಸ್ತಿತ್ವದಲ್ಲಿದೆ. THE MUSLIM PERSONAL LAW (SHARIAT) APPLICATION ACT, 1937 ಈ ಕಾಯ್ದೆಯ ಸೆಕ್ಷನ್ 2 ಮುಸ್ಲಿಂ ಪಕ್ಷಕಾರರ ನಡುವೆ ಉಂಟಾಗುವ ಮೇಲ್ಕಂಡ ವ್ಯಾಜ್ಯಗಳನ್ನು ಮುಸ್ಲಿಂ ಷರಿಯತ್ ಅನುಸಾರ ಇತ್ಯರ್ಥಪಡಿಸ ಬೇಕೆಂದು ತಿಳಿಸುತ್ತದೆ.

ಸಮಸ್ಯೆ ಏನೆಂದರೆ ಹಿಂದೂ, ಕ್ರೈಸ್ತ, ಜೈನ, ಪಾರ್ಸಿ, ಬೌದ್ಧ ಮತ್ತು ಇತರ ಸಮುದಾಯಗಳಲ್ಲಿರುವಂತೆ ಭಾರತದಲ್ಲಿ ಮುಸ್ಲಿಂ ಶರಿಯತ್ ಕಾನೂನನ್ನು ಸಮಗ್ರವಾಗಿ ಕಾಯಿದೆಯ ರೂಪದಲ್ಲಿ ಕ್ರೋಢೀಕರಣಕ್ಕೆ ಒಳಪಡಿಸಿರುವುದಿಲ್ಲ.  ಸರ್ ದಿನ್ಶಾ ಫರ್ದುನ್ಜಿ  ಮುಲ್ಲಾ ಅವರ Mulla’s Principles of Mohammedan Law ಈ ಕೃತಿಯು ಇಸ್ಲಾಮಿಕ್ ಕಾನೂನು ವಿಷಯಗಳ ಕುರಿತಾಗಿ ನ್ಯಾಯಾಲಯದ ಮಾನ್ಯತೆಯನ್ನು ಹೊಂದಿದ್ದು  ಈ ಗ್ರಂಥವನ್ನು ನಮ್ಮ ನ್ಯಾಯಾಲಯಗಳು ಸಾಮಾನ್ಯವಾಗಿ ಮುಸ್ಲಿಂ ಕಾನೂನಿನ ಆಧಾರವಾಗಿ ಬಳಸುತ್ತವೆ.

ಸ್ವಾತಂತ್ರ್ಯಾ ನಂತರದಲ್ಲಿ ನಮ್ಮ ದೇಶದಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಲಿಂಗ ಸಮಾನತೆಯ ಆಧಾರದಲ್ಲಿ ಹಿಂದೂಗಳ ವಾರಸು ಮತ್ತು ಕೌಟುಂಬಿಕ ಕಾನೂನುಗಳನ್ನು ಹಲವಷ್ಟು ಸುಧಾರಣೆ ಹಾಗು ಕ್ರೋಢೀಕರಣಕ್ಕೆ   ಒಳಪಡಿಸಲಾಯಿತು.  ಇದಕ್ಕೆ ನಮ್ಮ ಆಗಿನ ಕಾನೂನು ಮಂತ್ರಿಗಳೂ, ಸಂವಿಧಾನ ಶಿಲ್ಪಿಗಳೂ ಆದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಕಾಳಜಿ ಮತ್ತು ಕೊಡುಗೆ ಸಹ ಅಪಾರ.

ಆದರೆ ಮುಸ್ಲಿಂ ಸಮಾಜದ ಪುರೋಹಿತರು ಹಾಗು ರಾಜಕೀಯ ಮುಖಂಡರ ಪ್ರತಿರೋಧ ಹಾಗು ವಿರೋಧದ ಕಾರಣದಿಂದ ಮುಸ್ಲಿಮ್ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ನಮ್ಮಲ್ಲಿ  ಹೇಳಿ ಕೊಳ್ಳುವಂತಹ ಯಾವುದೇ ಆಮೂಲಾಗ್ರ ಸುಧಾರಣಾ ಪ್ರಕ್ರಿಯೆ ನಡೆದಿಲ್ಲ.

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಮತ್ತು ಪ್ರವಾದಿ ಮುಹಮ್ಮದ್ ರವರ  ಹದೀಸ್ ಗಳು ಮುಸ್ಲಿಂ ಕಾನೂನಿನ ಪ್ರಾಥಮಿಕ ಆಕರಗಳು. 1400 ವರ್ಷಗಳ ಹಿಂದೆ ಅರೇಬಿಯಾದಲ್ಲಿ ಪ್ರವಾದಿಯ ಆಗಮನಕ್ಕೂ ಮುನ್ನ ಹೆಣ್ಣು ಮಕ್ಕಳನ್ನು ಬಹಳ ತುಚ್ಛವಾಗಿ ನಡೆಸಿ ಕೊಳ್ಳಲಾಗುತ್ತಿತ್ತು. ಹೆಣ್ಣು ಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಯಾವುದೇ ಹಕ್ಕನ್ನು ನೀಡಲಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಪ್ರವಾದಿಗಳು ಜಾರಿಗೆ ತಂದ ಶರೀಯತ್ ಕಾನೂನು ಆ ವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ  ಹೆಣ್ಣು ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ವಿಚಾರದಲ್ಲಿ ಬಹಳ ಕ್ರಾಂತಿಕಾರಕ ಹಾಗು ಸುಧಾರಣಾ ಹೆಜ್ಜೆ ಎಂದು ಎನಿಸಿಕೊಂಡಿತ್ತು.

ದಮನಿತ ಹೆಣ್ಣುಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಪ್ರವಾದಿಗಳು ಹೆಣ್ಣು ಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಅರ್ಧ ಪಾಲನ್ನು ಕೊಟ್ಟು, ಆಕೆಯ ಸಂಪೂರ್ಣ ಪೋಷಣೆ ಮತ್ತು ಪಾಲನೆಯ ಜವಾಬ್ದಾರಿಯನ್ನು ಗಂಡಿನ ಹೆಗಲಿಗೆ ಹೊರೆಸಿದರು. ಗಂಡಿನಂತೆ ಹೆಣ್ಣಿಗೂ ವಿವಾಹ ವಿಚ್ಛೇದನ ಪಡೆಯುವ ಹಕ್ಕು ಕೊಟ್ಟರು. ಮದುವೆಯ ಸಂದರ್ಭದಲ್ಲಿ ಕೇಳಿದಷ್ಟು ವಧು ದಕ್ಷಿಣೆಯನ್ನು ವರನಿಂದ ಪಡೆಯುವ ಹಕ್ಕನ್ನು ಮಹಿಳೆಗೆ ಕೊಟ್ಟರು. ಮಹಿಳೆಗೆ ಗಂಡ ಮತ್ತು ತಂದೆ, ಹೀಗೆ ಎರಡೂ ಕಡೆಯಿಂದ ಆಸ್ತಿಯಲ್ಲಿ ಭಾಗ ಪಡೆಯುವ ಹಕ್ಕು ಕೊಟ್ಟು ವಿಧವೆ ಮತ್ತು ಅನಾಥ ಮಕ್ಕಳ ಪಾಲನೆ ಮತ್ತು ಪೋಷಣೆಯನ್ನು ಕುಟುಂಬದ ಪುರುಷ ಸದಸ್ಯರ ಹೆಗಲಿಗೆ ವಹಿಸಿದರು. ಅಂದಿನ ಮಟ್ಟಿಗೆ ಇದು ಅತ್ಯಂತ ಪುರೋಗಾಮಿ ಕ್ರಮಗಳು ಎಂದರೆ ತಪ್ಪಿಲ್ಲ.

ಆದರೆ ಕಾಲ ಬದಲಾದಂತೆ ನಮ್ಮ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿನ ಜೀವನ ಶೈಲಿ, ಆಲೋಚನಾ ವಿಧಾನ, ಕೌಶಲ್ಯ ಮತ್ತು ಸಾಮರ್ಥ್ಯ ಹಾಗು  ಸ್ಥಾನ ಮಾನ-ಅಂತಸ್ತು ಇವುಗಳಲ್ಲಿ ಊಹಿಸಲಾಗದಷ್ಟು ಬದಲಾವಣೆ ಉಂಟಾಗಿದೆ. ಸಹಜವಾಗಿ ಇದಕ್ಕೆ ಮುಸ್ಲಿಂ ಸಮಾಜ ಕೂಡ ಹೊರತಲ್ಲ. ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳು ಇಂದು ಪುರುಷ ಪ್ರಧಾನ ವ್ಯವಸ್ಥೆಯನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಲು ತಯಾರಿಲ್ಲ. ಮುಸ್ಲಿಂ ಷರಿಯತ್ ಕಾನೂನುಗಳನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ ಹೆಣ್ಣಿನ ಶೋಷಣೆಗಾಗಿ ಅವುಗಳನ್ನು ಬಳಸಿ ಕೊಳ್ಳುತ್ತಿರುವುದರ ವಿರುದ್ಧ ಮುಸ್ಲಿಂ ಹೆಣ್ಣು ಮಕ್ಕಳಿಗೆ ಅಸಮಾಧಾನವಿದೆ.

ಈಗ ಮೇಲ್ಕಂಡ ಪ್ರಕರಣಗಳಲ್ಲಿ ಉದ್ಭವ ವಾಗುವ ಪ್ರಶ್ನೆಗಳನ್ನು ಮತ್ತೊಮ್ಮೆ ನೋಡೋಣ. ಮೃತ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಆತನ ಹೆಣ್ಣು ಮಕ್ಕಳ ಹಕ್ಕನ್ನು ಕಡಿಮೆ ಗೊಳಿಸಿ ಆಸ್ತಿಯಲ್ಲಿ ಒಂದು ಭಾಗವನ್ನು ಮೃತನ ತಂದೆ ಅಥವಾ ಸಹೋದರರಿಗೆ ನೀಡುವುದು ನ್ಯಾಯವೇ ? ತಂದೆ ಮತ್ತು ತಾಯಿಗಿಂತ ಮೊದಲೇ  ಮಗ ಮೃತನಾದಲ್ಲಿ ಆತನ ಪತ್ನಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನಿರಾಕರಿಸುವುದು ಎಷ್ಟು ಸರಿ ?

ಈ ಎರಡು ಪ್ರಶ್ನೆಗಳಿಗೆ ಸಾಂಪ್ರದಾಯಿಕವಾಗಿ ಸಮರ್ಥನೆಯ ರೂಪದಲ್ಲಿ ನೀಡಲಾಗುವ ಉತ್ತರ ಏನೆಂದರೆ ಹೆಣ್ಣು ಮಕ್ಕಳು ಮತ್ತು ವಿಧವೆಯ ಪಾಲನೆ ಮತ್ತು ಪೋಷಣೆ ಕುಟುಂಬದ ಪುರುಷ ಸದಸ್ಯರ ಹೊಣೆಯಾದ್ದರಿಂದ ಮೃತನಿಗೆ ಹೆಣ್ಣು ಮಕ್ಕಳಷ್ಟೇ ಇದ್ದಲ್ಲಿ ಆಸ್ತಿಯಲ್ಲಿ ಒಂದು ಪಾಲನ್ನು ತಂದೆಯ ತಂದೆ ಅಥವಾ ಅಣ್ಣ ಅಥವಾ ತಮ್ಮಂದಿರಿಗೆ ಕೊಡಲಾಗುತ್ತದೆ.  ಈ ಸಮರ್ಥನೆಗಳು ಧಾರ್ಮಿಕ ಹಿನ್ನಲೆಯಲ್ಲಿ ಸರಿ ಇರಬಹುದು. ಆದರೆ ಸಾಂವಿಧಾನಿಕ ಮೌಲ್ಯಗಳ ಅಡಿಯಲ್ಲಿ  ಮುಸ್ಲಿಂ ಮಹಿಳೆಗೆ ಸಿಗಬೇಕಾದ ಸಮಾನತೆ, ಮಾನ್ಯತೆ,  ಆಕೆಯ ಘನತೆ ಮತ್ತು ಗೌರವದ ದೃಷ್ಟಿಯಿಂದ ನಮ್ಮ ಮುಸ್ಲಿಂ ವೈಯುಕ್ತಿಕ ಕಾನೂನುಗಳು ಸುಧಾರಣೆಗೆ ಒಳಪಡಲೇ ಬೇಕು.

ಶಫೀರ್ ಎ ಎ

ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಾವೇ ನಿವೃತ್ತಿಯನ್ನು ಪಡೆದು ಮತ್ತೆ ವಕೀಲರಾಗಿ ಸಕ್ರಿಯರಾಗಿದ್ದಾರೆ. ಸದಾ ಸಮಾಜಮುಖಿ ಚಿಂತನೆ,ಬರೆಹಗಳಲ್ಲಿ ತೊಡಗಿಕೊಂಡಿದ್ದಾರೆ. ಮೊ : 9342104296

ಇದನ್ನೂ ಓದಿ- http://ಅಪ್ರಾಪ್ತರ ವಾಹನ ಚಾಲನೆ ಮತ್ತು ಕಾನೂನು https://kannadaplanet.com/minor-driving-and-the-law/

More articles

Latest article