ಮುಡಾ: ಇಡಿ ಸಮನ್ಸ್‌ ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆ, ಸಿಎಂ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್‌ ಗೆ ತಾತ್ಕಾಲಿಕ ರಿಲೀಫ್

Most read

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ಗೆ​ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದ್ದು ಆರೋಪಿ ಸ್ಥಾನದಲ್ಲಿರುವ  ಮುಖ್ಯಮಂತ್ರಿ ಸಿದ್ದಾರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್​​ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.  ಇಡಿ ನೀಡಿರುವ ಸಮನ್ಸ್​ ರದ್ದುಪಡಿಸುವಂತೆ ಕೋರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್,  ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಅದುವರೆಗೂ ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ.

ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್  ವಾದ ಮಂಡಿಸಿ, ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್  ತೀರ್ಪು ಇದ್ದು, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಸಚಿವ ಭೈರತಿ ಸುರೇಶ್ ಪರ ವಕೀಲ ಸಿ.ವಿ.ನಾಗೇಶ್ ವಾದಿಸಿ ಇಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. 14 ಸೈಟ್ ಹಂಚಿಕೆಗೂ ಭೈರತಿ ಸುರೇಶ್ ಗೂ ಸಂಬಂಧವಿಲ್ಲ. ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಹೀಗಾಗಿ ಇಡಿ ಸಮನ್ಸ್ ಕಾನೂನುಬಾಹಿರ ಎಂದು ವಾದಿಸಿದರು. ಭೈರತಿ ಸುರೇಶ್ 2023 ರಿಂದ ಮಾತ್ರ ನಗರಾಭಿವೃದ್ದಿ ಸಚಿವರಾಗಿದ್ದಾರೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಇಡಿ ಸಮನ್ಸ್ ಹೈಕೋರ್ಟ್ ರದ್ದುಪಡಿಸಿದೆ ಎಂದು ಹೈಕೋರ್ಟ್ ಆದೇಶದ ವಿವರವನ್ನು ಓದಿದರು.

ಸಿ.ವಿ.ನಾಗೇಶ್ ವಾದ ಮುಂದುವರೆಸಿ, ಇಡಿ ಯಾವುದೇ ಕಾರಣ ನೀಡದೇ ಸಮನ್ಸ್ ಜಾರಿಗೊಳಿಸಿದೆ. 14 ಸೈಟ್ ಹಂಚಿಕೆ ವಿಚಾರದಲ್ಲಿ ಭೈರತಿ ಸುರೇಶ್ ಪಾತ್ರವಿಲ್ಲ. ಆದರೂ ತಂಗಿ, ಮಗಳು, ಅಳಿಯ ಹಾಗೂ ಸಂಬಂಧಿಗಳ ಬ್ಯಾಂಕ್ ಅಕೌಂಟ್ ಮಾಹಿತಿ ಕೇಳಿದ್ದಾರೆ ಎಂದರು.

 ಒಂದೆರಡು ದಿನಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇವೆ. ಅರ್ಜಿದಾರರ ಪರ ವಕೀಲರು ಇಂದೇ ವಾದ ಮುಗಿಸಬಹುದು ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರ  ಪತ್ನಿ ಪರ ವಕೀಲ ಸಂದೇಶ್ ಚೌಟ ವಾದಿಸಿ,ಈ ಪ್ರಕರಣದಲ್ಲಿ ಅಪರಾಧದಿಂದ ಗಳಿಸಿದ ಹಣ ಪತ್ತೆಯಾಗಿಲ್ಲ. ಅಕ್ರಮ ಹಣ ವರ್ಗಾವಣೆ ಇಲ್ಲದಿರುವುದರಿಂದ ಇಡಿ ತನಿಖೆ ಸರಿಯಲ್ಲ. ಈಗಾಗಲೇ ತನಿಖೆ ನಡೆದಿರುವ ಪ್ರಕರಣ ಕುರಿತ ಎರಡನೇ ತನಿಖೆ ನಡೆಸುವಂತಿಲ್ಲ. ಅಕ್ರಮ ಹಣದ ಗಳಿಕೆ ಇದ್ದರೆ ಮಾತ್ರ ತನಿಖೆ ನಡೆಸಲು ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಶೊಧ ಮತ್ತು ಜಪ್ತಿ ಮಾಡಬಹುದು ಎಂದು ಹೇಳಿದರು. ಒಬ್ಬ ವ್ಯಕ್ತಿ 1 ಕೋಟಿ ಹಣ ವಂಚಿಸಿದ್ದಾನೆ ಎಂದು ಭಾವಿಸೋಣ. ಆ ಹಣವನ್ನು ಮರಳಿಸಿದರೆ ಪ್ರಕರಣ ಮುಕ್ತಾಯವಾಗುವುದಿಲ್ಲ. ಆದರೆ ಪಿಎಂಎಲ್ ಕಾಯ್ದೆಯಡಿ ಕೇಸ್ ಮುಕ್ತಾಯಗೊಳ್ಳುತ್ತದೆ. ಏಕೆಂದರೆ ಜಪ್ತಿ ಮಾಡಲು ಆ ಅಕ್ರಮ ಹಣ ಇರುವುದಿಲ್ಲ. ಅನುಸೂಚಿತ ಅಪರಾಧದಿಂದ ಅಕ್ರಮ ಹಣ ಗಳಿಸಿರಬೇಕು. ಆ ಹಣವನ್ನು ಆರ್ಥಿಕತೆಗೆ ಬಿಟ್ಟು ಲಾಭ ಗಳಿಸುತ್ತಿರಬೇಕು. ಆದರೆ ಅಂತಹ ಯಾವುದೇ ಪ್ರಕ್ರಿಯೆಗಳು ಈ ಪ್ರಕರಣದಲ್ಲಿ ನಡೆದಿಲ್ಲ ಎಂದು ವಾದಿಸಿದರು. ಅಂತಿಮವಾಗಿ ಹೈಕೋರ್ಟ್ ಫೆಬ್ರವರಿ 20ಕ್ಕೆ ವಿಚಾರಣೆ ನಿಗದಿಪಡಿಸಿತು.

More articles

Latest article