70 ಸಾವಿರ ರೂ.ಗೆ ವೈದ್ಯಕೀಯ ಪದವಿ; ಬೃಹತ್‌ ಜಾಲ ಪತ್ತೆ ಹಚ್ಚಿದ ಗುಜರಾತ್ ಪೊಲೀಸರು

Most read

ಅಹಮದಾಬಾದ್: 8 ನೇ ತರಗತಿ ಕಲಿತ ವಿದ್ಯಾರ್ಥಿಗೆ ಕೇವಲ 70 ಸಾವಿರ ರೂಪಾಯಿ ಶುಲ್ಕ ವಿಧಿಸಿ ವೈದ್ಯಕೀಯ ಪದವಿ ನೀಡುವ ಬೃಹತ್‌ ಜಾಲವನ್ನು ಗುಜರಾತ್ ಪೊಲೀಸರು ಪತ್ತೆ ಮಾಡಿದ್ದಾರೆ. ಈಗಾಗಲೇ  ನಕಲಿ ವೈದ್ಯಕೀಯ ಪದವಿ ಖರೀದಿಸಿದ 14 ಮಂದಿ ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಗರಣದ ರೂವಾರಿ ಡಾ.ರಮೇಶ್ ಗುಜರಾತಿ ಎಂಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ನ ಎಲೆಕ್ಟ್ರೋ ಹೋಮಿಯೋಪಥಿಕ್ ಮೆಡಿಸಿನ್ ಇಲಾಖೆ ನೀಡುವ ವೈದ್ಯಕೀಯ ಪದವಿಯನ್ನು ಈ ಜಾಲ ನೀಡುತ್ತಿತ್ತು. ಗುಜರಾತ್ ನ ಸೂರತ್ ಮೂಲದ ಈ ಜಾಲದ ಬಳಿ ಸುಮಾರು 1,200 ಮಂದಿಯ ನಕಲಿ ಪದವಿಯ ದಾಖಲೆಗಳನ್ನು ಪತ್ತೆ ಹಚ್ಚಿದೆ.  ಹಲವಾರು ಅರ್ಜಿಗಳು, ಪ್ರಮಾಣಪತ್ರಗಳು ಮತ್ತು ಸೀಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂವರು ನಕಲಿ ವೈದ್ಯಕೀಯ ಪದವಿ ಪಡೆದು ಅಲೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ. ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಇವರ ವಿಚಾರಣೆ ನಡೆಸಿದಾಗ ಬಿಇಎಚ್‌ಎಂ ಇಲಾಖೆ ನೀಡಿದ ಪದವಿ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಆದರೆ ಗುಜರಾತ್ ಸರ್ಕಾರ ಇಂತಹ ಯಾವುದೇ ಪ್ರಮಾಣಪತ್ರವನ್ನು ನೀಡುತ್ತಿಲ್ಲ ಎನ್ನುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಇವರೆಲ್ಲಾ ನಕಲಿ ವೈದ್ಯರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

ನಕಲಿ ವೆಬ್‌ಸೈಟ್‌ನಲ್ಲಿ ಆರೋಪಿಗಳು ಪದವಿಗಳನ್ನು ನೋಂದಾಯಿಸುತ್ತಿದ್ದರು. ಭಾರತದಲ್ಲಿ ಎಲೆಕ್ಟ್ರೋ ಹೋಮಿಯೋಪಥಿಯನ್ನು ನಿರ್ಬಂಧಿಸುವ ಯಾವುದೇ ನಿಯಮಾವಳಿಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಈ ಪದವಿಗಳನ್ನು ನೀಡುವ ಮಂಡಳಿಯನ್ನು ರಚಿಸಿಕೊಂಡಿದ್ದರು. ಸಣ್ಣ ಪ್ರಮಾಣದಲ್ಲಿ ಎಲೆಕ್ಟ್ರೋ ಹೋಮಿಯೋಪಥಿ ತರಬೇತಿ ನೀಡುತ್ತಿದ್ದರು ಮತ್ತು ಮೂರು ವರ್ಷದ ಒಳಗಾಗಿ ಅವರಿಗೆ ಪದವಿ ನೀಡಲಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡು ಗುಜರಾತ್ ಆಯುಷ್ ಸಚಿವಾಲಯದ ವತಿಯಿಂದ ಪದವಿ ನೀಡಲಾಗುವುದು ಎಂದು ಆರೋಪಿಗಳು ಪ್ರಚಾರ ಮಾಡುತ್ತಿದ್ದರು. ಈ ಪ್ರಮಾಣ ಪತ್ರಕ್ಕೆ 70 ಸಾವಿರ ಶುಲ್ಕ ವಿಧಿಸಿ, ಅಲೋಪಥಿ, ಹೋಮಿಯೋಪಥಿ ಮತ್ತು ಆರೋಗ್ಯ ವೈದ್ಯಪದ್ಧತಿಯಲ್ಲಿ ಔಷಧಿ ನೀಡಲು ಅವಕಾಶ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article