ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಮೇ 1. ಪ್ರತಿ ದುಡಿಮೆಗಾರರ ದುಡಿಮೆಯೊಳಗಣ ಘನತೆ ಮತ್ತು ಸೃಜನಶೀಲತೆಯನ್ನು ಗೌರವಿಸುತ್ತಾ ಸಮಸ್ತ ಕಾರ್ಮಿಕರಿಗೆ ಕನ್ನಡ ಪ್ಲಾನೆಟ್ ಬಳಗದ ಶುಭಾಶಯಗಳು. ಈ ಹೊತ್ತು, ಘನತೆಯ ಬದುಕು ಕಟ್ಟಿಕೊಳ್ಳಲು ಕೊಪ್ಪಳದ ಅಜ್ಜಪ್ಪ ಗೌಡರು ಆರಿಸಿಕೊಂಡ ವಿಶಿಷ್ಠ ಉದ್ಯಮದ ಬಗ್ಗೆ ಬರೆದು ಗಮನ ಸೆಳೆದಿದ್ದಾರೆ ಡಾ. ಎಚ್ ಎಸ್ ಅನುಪಮಾ.
ಉದುರಿದ ತಲೆಗೂದಲು ಕಟ್ಟಿದ ಬದುಕು
ಏಪ್ರಿಲ್ ಕೊನೆಯ ಭಾನುವಾರ. ಬೆಳಿಗ್ಗೆ ಮಾಲಕ್ಕ-ಡಿ.ವಿ.ಬಡಿಗೇರರ ಮನೆಯ ಜ್ವಾಳದ ವಡಿ-ಮೊಸರು, ದೋಸೆ ಚಟ್ನಿ ಪಲ್ಯದ ಭಾರೀ ಉಪಹಾರ ಕಬಳಿಸಿ, ಬಳಿಕ ಇಡಿಯ ದಿನ `ಮೇ ಸಾಹಿತ್ಯ ಮೇಳ’ದ ಸಂಘಟನಾ ಸಭೆಯಲ್ಲಿ ಸಮಾವೇಶದ ಒಳಹೊರಗುಗಳ ಚರ್ಚಿಸಿ, ಕೊಪ್ಪಳದ ಧಗೆ ರೋಮರೋಮಗಳನ್ನು ಹೊಕ್ಕು ಹೊರಬಂದು ಕೂದಲು ಕಳಚಿ ಬೀಳುತ್ತವೇನೋ ಎಂದು ಕರಾವಳಿಯ ನನಗನಿಸುತ್ತಿದ್ದರೆ ಬಿಸಿಲು ನಾಡಿನ ಜನ ಸೂರಪ್ಪನಿಗೆ ಕ್ಯಾರೇ ಅನ್ನದೆ ಮಕ್ಕಳು ಮರಿಗಳ ಎತ್ತಿಕೊಂಡು ಬೆವರಿಗೆ ಬೆದರದೇ ಓಡಾಡುತ್ತಿದ್ದರು. ಅವರ ಎದೆಗಾರಿಕೆಗೆ ನೇಸರನೇ ಶರಣೆಂದು ಪಡುವಣದತ್ತ ವಾಲತೊಡಗಿದ ಹೊತ್ತಿಗೆ ಒಂದು ಸಂಪೂರ್ಣ ವಿಭಿನ್ನ ಕಾಯಕ ಲೋಕವನ್ನು ಪ್ರವೇಶಿಸಿದೆವು. ಬೆವರು, ಧಗೆಯ ಅನುಭವಗಳೆಲ್ಲ ತರುಣ ಅಜ್ಜಪ್ಪ ಗೌಡರ ಮನೆಯ ಲಿಂಬೆಪಾನಕದಲ್ಲಿ, ತಣ್ಣಗೆ ಅವರು ವಿವರಿಸಿದ ತಲೆಗೂದಲ ವಹಿವಾಟಿನ ಮಾಯಾಲೋಕದಲ್ಲಿ ಕರಗಿಹೋದವು.
`ಈ ಉದುರಿದ ಕೂದಲಾ ನಮಗ ಅನ್ನ ಕೊಟ್ಟೇತಿ, ಕಾಲೇಜಿನ ಫೀಸು ತುಂಬಾಕ ಶಕ್ತಿ ತುಂಬೇತಿ. ಓದೂಮುಂದ ನಸುಕಿನ್ಯಾಗೆದ್ದು ಕೂದ್ಲಾ ಹಿಂಜಿ ಸಾಲೀಗೆ ಹೋಕಿದ್ದೆ. ಸಂಜೆ ಸಾಲಿಂದ ಬಂದ ಕೂಡ್ಲೆ ಮತ್ ಹಿಂಜದು. ನಾ ಇಂಜಿನಿಯರಿಂಗ್ ಮುಗಸಾಕ ಬಲ ಕೊಟ್ಟಿದ್ದು ಇದೇ ಮೇಡಂ. ನಮಗಷ್ಟ ಅಲ್ಲ, ಈ ಊರಾನ ಸಾವಿರಾರು ಮಂದೀ ಜೀವ್ನಕ್ಕ ಇದು ಆಧಾರ ಆಗೇತಿ. ಹಿಡದು ಕುಂತು ಕೆಲಸಾ ಮಾಡಿದರ ಮೋಸ ಇಲ್ಲದ ದುಡಿಮಿ ಇದು’
`ಆದ್ರೆ ಇಂಜಿನಿಯರಿಂಗ್ ಕಲಿತು ನೌಕರಿ ಹಿಡಿದವರು ಮತ್ತೆ ಈ ಉದ್ಯಮಕ್ಕೆ ಬಂದೆ ಅಂದ್ರಲ್ಲ?!’
`ಬೆಂಗಳೂರಿನ್ಯಾಗ ನೌಕರಿ ಹಚ್ಚಿದೆ ಖರೆ. ನನಗ್ಯಾಕೋ ಸರಿ ಬರಲೇ ಇಲ್ಲ ಮೇಡಂ. ವರ್ಕ್ ಎನ್ವಿರಾನ್ ಸರಿ ಅನಸಲಿಲ್ಲ. ಮೊದಲಿಂದ ಕೆಲಸಾ ಮಾಡಿದವನೇ ನಾ. ಆದರ ಅಲ್ಲೀದು ಕೆಲಸ ಅಂತನ ಅನಸಲಿಲ್ಲ. ನನ್ನೊಳಗ ನಾ ತಿಳಕೋತ ಮಾಡುವ ಈ ಕೆಲಸದಂಗಲ್ಲ ಅದು. ಡೆಡ್‍ಲೈನು, ಹಗಲು ರಾತ್ರಿ ಇಲ್ಲದಂಗ ಮಾಡೋ ಕೆಲಸ, ತೆಲಿ ಕೆಟ್ಟಂಗಾತು. ಆ ಊರು, ನೌಕ್ರಿ ನನಗಲ್ಲ ಅನಸತು. ನೌಕ್ರಿ ಬಿಟ್ ಮನೀಗ್ ಬಂದೆ. ಮಂದೀ ಹಿಂದ್ಲಿಂದ ಬಾಳ ಮಾತಾಡಿದ್ರು. ನಾ ಕೇರ್ ಮಾಡಲಿಲ್ಲ. ಜೀವ್ನ ನಡಸಿಕೊಂಡು ಹೋಗೂವಷ್ಟು ದುಡಿಮಿ ಸಾಕು, ಅದಕ ಮಂತಾನದಿಂದ ಬಂದ ಈ ಕಾಯಕದಾಗ ಮೋಸ ಇಲ್ಲ ಅನಸತು. ನಮ್ಮವ್ವಾರು ಸಪೋರ್ಟ್ ಮಾಡಿದುರು. ನಾನು, ಅಣ್ಣ, ಅತ್ಗಿ, ಮಿಸೆಸ್ ಎಲ್ಲಾ ಕೂಡಿ ಕೆಲಸ ಮಾಡತೀವಿ. ನ್ಯಾಯದ ದುಡಿಮಿ ಮಾಡತೀವಿ. ಮನಸಿಗೆ ಬಾಳ ಸಮಾಧಾನ ಐತಿ. ಇದು ಕೈ ಬಿಟ್ರೂ ಮತ್ತೊಂದು ಇರಲಿ ಅಂತ ಕಿರಾಣಿ ದುಕಾನನೂ ಹಾಕೇನಿ. ಹೇಣ್ತಿ ಬಿಎಡ್ ಮುಗಿಸ್ಯಾಳ. ಮಕ್ಳು ಸಣ್ಣದಾವಂತ ನೌಕ್ರಿಗಿ ಹಚ್ಚಿಲ್ಲ, ಈ ವರ್ಷ ಆಕಿನ್ನೂ ಕೆಲಸಕ್ ಹಚ್ಚಬೇಕಂತದೀವಿ. ಇಷ್ಟು ಸಾಕು ನಮಗ. ನೆಮ್ಮದಿಯಿಂದ ಇದೀವಿ.’
ತರುಣ ಅಜ್ಜಪ್ಪ ಹೇಳುವ ಮಾತುಗಳ ಹಿಂದೆ ಹೈದರಾಬಾದ್ ಕರ್ನಾಟಕದ ಐತಿಹಾಸಿಕ ಪಟ್ಟಣ ಕೊಪ್ಪಳದ ಸಾವಿರಾರು ಬದುಕುಗಳ ಕಥನವೂ ಅಡಗಿತ್ತು. ಅಶೋಕನ ಶಿಲಾಶಾಸನವನ್ನೂ, ಅಸಂಖ್ಯ ದರ್ಗಾ-ಮಠ-ಗುಡಿ ಮಂಟಪಗಳನ್ನೂ ಹೊಂದಿರುವ ಕಲ್ಲುಬೆಟ್ಟದ ಊರು `ಕುಪಣ’ದ ಜನಭರಿತ ವಸತಿ ಪ್ರದೇಶ `ಭಾಗ್ಯ ನಗರ’ದಲ್ಲಿ ಅವರು ವಾಸವಾಗಿದ್ದಾರೆ. ತುಂಗಭದ್ರಾ ಅಣೆಕಟ್ಟೆಯ ಕಾರಣವಾಗಿ ನೆಲೆ ಕಳೆದುಕೊಂಡ ಸಂತ್ರಸ್ತರ ಆ ಊರಿನಲ್ಲಿಯೇ ಹುಟ್ಟಿ ಬೆಳೆದ ಅಜ್ಜಪ್ಪ, ಕೈ ಬೊಗಸೆಯಲ್ಲಿ ಭಕ್ತಿಭಾವದಿಂದ ಕೂದಲ ಉಂಡೆಗಳನ್ನು ಹಿಡಿದು ತಲೆಗೂದಲ ಉದ್ಯಮದ ಒಳಹೊರಗುಗಳ ಬಿಚ್ಚಿಟ್ಟರು.
ಏನಿದು ಕೂದಲ ವಹಿವಾಟು?
ಭಾರತದ ಕೂದಲು ಉದ್ಯಮವು ಮೂರು ಸಾವಿರ ಕೋಟಿ ರೂಪಾಯಿಯ ವಹಿವಾಟು. ಅದರ 40% ಕೊಪ್ಪಳದಲ್ಲಿ ನಡೆಯುತ್ತದೆ. ಆಂಧ್ರಪ್ರದೇಶದ ಇಲ್ಲೂರು, ಉತ್ತರಪ್ರದೇಶದ ಕೆಲವು ಪಟ್ಟಣಗಳು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಬಿಟ್ಟರೆ ಕೊಪ್ಪಳವೇ ಕೂದಲೋದ್ಯಮದ ಮುಖ್ಯ ಕೇಂದ್ರ. ಅಣೆಕಟ್ಟೆಯ ಕಾರಣವಾಗಿ ಸ್ಥಳಾಂತರಗೊಂಡ ಜನರು ಕೃಷಿಯೇತರ ಜೀವನೋಪಾಯಗಳತ್ತ ಗಮನ ಹರಿಸಲೇ ಬೇಕಾಯಿತು. ಆಂಧ್ರದ ಇಲ್ಲೂರಿನಿಂದ 1960ರ ಸುಮಾರಿಗೆ ಕೊಪ್ಪಳಕ್ಕೆ ಬಂದ ಶ್ರೀನಿವಾಸ ಗುಪ್ತ ಅವರು ಕೂದಲೋದ್ಯಮ ಆರಂಭಿಸಿದ ಮೊದಲಿಗರು. ಈಗ ಭಾಗ್ಯನಗರ, ಕೊಪ್ಪಳ, ಯತ್ನಟ್ಟಿ, ಹಿರೇಸಿಂದೋಗಿ ಸೇರಿ ಆ ಸುತ್ತಮುತ್ತ 400ಕ್ಕೂ ಹೆಚ್ಚು ಕೂದಲು ಸಂಸ್ಕರಣಾ ಘಟಕಗಳಿವೆ.
ಸಣ್ಣಪುಟ್ಟ ಗಂಟುಗಳಾಗಿ ಬರುವ ಉದುರಿದ ಕೂದಲನ್ನು ದಬ್ಬಣದ ಸಹಾಯದಿಂದ ಬಿಚ್ಚಿ, ಹಿಂಜಿ, ಎಳೆಗಳಲ್ಲಿ ಒಂದೂ ಗಂಟಿಲ್ಲದಂತೆ ಮಾಡಿ ಗುಡ್ಡೆ ಹಾಕುತ್ತಾರೆ. ಬಳಿಕ ಅದನ್ನು ಶ್ಯಾಂಪೂ, ನೀರಲ್ಲಿ ನೆನೆಸಿಟ್ಟು ತೊಳೆಯುತ್ತಾರೆ. ನಂತರ ಎಳೆ ಹಿಡಿದು ಜೋಡಿಸಿ, ಎಣ್ಣೆ ಹಚ್ಚಿ ನೀವಿ ತೊಳೆಯುತ್ತಾರೆ. ಅಳತೆ, ಆಕಾರ, ಗುಣಕ್ಕೆ ತಕ್ಕಂತೆ ಬೇರ್ಪಡಿಸಿ ಅರ್ಧ ಕೆಜಿ, ಕಾಲು ಕೆಜಿ, ಒಂದು ಕೆಜಿಯ ಕುಚ್ಚುಗಳ ಮಾಡಿ ಕಟ್ಟಿಡುತ್ತಾರೆ. ಅಲ್ಲಿಗೆ ಒಂದು ಹಂತದವರೆಗಿನ ಸಂಸ್ಕರಣೆ ನಡೆದಂತೆ. ಇದನ್ನು ಮನೆಯಲ್ಲಾದರೂ ಮಾಡಬಹುದು, ಸಂಸ್ಕರಣಾ ಘಟಕಗಳಿಗೆ ಹೋಗಿಯಾದರೂ ಮಾಡಬಹುದು. ವಿಶೇಷ ಕೌಶಲ್ಯ, ಶಿಕ್ಷಣ, ಶಕ್ತಿ ಬೇಡುವ ಕೆಲಸವಲ್ಲವಾದ್ದರಿಂದ ಯಾರು ಬೇಕಾದರೂ ಮಾಡಬಹುದು. ನಿರಂತರ ಬೇಡಿಕೆಯಿರುವುದರಿಂದ ಸದಾಕಾಲ ಕೆಲಸವಿರುತ್ತದೆ. ಸುಮಾರು ಎಂಟ್ಹತ್ತು ಸಾವಿರ ಜನರಿಗೆ ಉದ್ಯೋಗಾವಕಾಶ ಒದಗಿಸಿದ ಕೂದಲೋದ್ಯಮದಲ್ಲಿ ಮಹಿಳೆಯರು ಹೆಚ್ಚಿದ್ದಾರೆ. ಭಾಗ್ಯನಗರದ ಮನೆಮನೆಯಲ್ಲೂ ಕೂದಲ ಕಾಯಕ ನಡೆಯುತ್ತಿದೆ. ಹಿಂಜುವ ಕೆಲಸದಿಂದ ದಿನವೊಂದಕ್ಕೆ ಅಜಮಾಸು 400 ರೂಪಾಯಿ ದುಡಿಯಬಹುದಾಗಿದೆ.
ಪ್ರಯೋಗಶಾಲೆಯಲ್ಲಿ ಬೆಳೆಸಲಾಗದ ಕೂದಲು ಒಂದು ಸಂಪತ್ತು. ಪ್ರಸಾದನ ಸಾಮಗ್ರಿ, ಗೊಬ್ಬರ, ಔಷಧಿ, ಜೀವವೈದ್ಯಕೀಯ ಕ್ಷೇತ್ರ, ಬ್ರಶ್, ಪ್ರಯೋಗಶಾಲೆ, ಕಲೆ, ನೇಯ್ಗೆ, ಕಟ್ಟಡ ನಿರ್ಮಾಣ ವಸ್ತುಗಳೇ ಮೊದಲಾದವುಗಳ ತಯಾರಿಕೆಗೆ ಕೂದಲು ಉಪಯೋಗವಾಗುತ್ತದೆ. ಬ್ಯೂಟಿಪಾರ್ಲರುಗಳಲ್ಲಿ ಕೂದಲನ್ನು ನೇರಮಾಡಿ, ಹೊಳೆಯಿಸಿ, ಸಿಕ್ಕಾಗದಂತೆ, ನುಣುಪಾಗಿಸುವ ಕೆರಾಟಿನ್ ಚಿಕಿತ್ಸೆ ಈಗ ಜನಪ್ರಿಯವಾಗುತ್ತಿದೆ. ಕೂದಲಿಗೆ ಕೆರಾಟಿನ್ ದ್ರಾವಣ ಹಚ್ಚಿ ಇಸ್ತ್ರಿ ಮಾಡಿ ಅದರ ಗುಣ, ಬಣ್ಣವನ್ನೇ ಬದಲಿಸುವುದು ಸಾಧ್ಯವಾಗಿದೆ. ಉದುರಿದ ಕೂದಲಿನಿಂದ ಕೆರಾಟಿನ್ ಅನ್ನು ತಯಾರಿಸುತ್ತಾರೆ. ಇಷ್ಟು ಬೇಡಿಕೆಯಿರುವುದರಿಂದಲೇ ಮನೆಮನೆಯಿಂದ ಉದುರಿದ ಕೂದಲು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸುವವರಿಗೆ ಏನಿಲ್ಲವೆಂದರೂ ತಿಂಗಳಿಗೆ 10-15 ಸಾವಿರ ಗಳಿಕೆಯಾಗುತ್ತದಂತೆ. ಅವರದನ್ನು ದಲ್ಲಾಳಿ, ಅಂಗಡಿಗಳಿಗೆ ಮಾರುತ್ತಾರೆ. ಅವರಿಂದ ಕಚ್ಛಾ ಕೂದಲನ್ನು ಮನೆಗೆ ತಂದು ಸಂಸ್ಕರಿಸುವ ಕೆಲಸ ಕೊಪ್ಪಳದಲ್ಲಿ ನಡೆಯುತ್ತದೆ. ಇದಲ್ಲದೆ ದೇವಾಲಯಗಳಲ್ಲಿ ಹರಕೆಗೆಂದು ನೀಡಿದ ಮುಡಿಯನ್ನು ಲಿಲಾವಿನಲ್ಲಿ ಕೊಂಡು ತರುತ್ತಾರೆ. ಭಾರತದ ಅತಿ ಸಿರಿವಂತ ದೇವಸ್ಥಾನವಾದ ತಿರುಪತಿಯಲ್ಲಿ ಭಕ್ತಾದಿಗಳೊಪ್ಪಿಸಿದ ಹರಕೆಯ ಕೂದಲ ಹರಾಜಿನಿಂದ ಪ್ರತಿವರ್ಷ 150 ಕೋಟಿಗಿಂತ ಮಿಗಿಲು ಹಣ ದೊರೆಯುತ್ತದೆ.
ಹೀಗೆ ತಂದ ಕೂದಲನ್ನು ಮೊದಲು ಹಿಂಜಬೇಕು. ಬಳಿಕ ಸಂಸ್ಕರಣೆ. ಸಂಸ್ಕರಿಸಲ್ಪಟ್ಟ ಕೂದಲು ಚೀನಾ, ಅಮೆರಿಕಾ, ಆಫ್ರಿಕಾ, ಬರ್ಮಾಗಳಿಗೆ ರಫ್ತಾಗುತ್ತದೆ. ಕೊಪ್ಪಳಕ್ಕೆ ಚೀನಾದ ವ್ಯಾಪಾರಿಗಳು ಖರೀದಿಗಾಗಿ ಬರುತ್ತಾರೆ. ಭಾರತದವರ ಕೂದಲ ಉದ್ದ ಹೆಚ್ಚು. ಕಪ್ಪು ಬಣ್ಣವೂ ಆಕರ್ಷಕ. ಅದಕ್ಕೇ ಇಲ್ಲಿನ ಕೂದಲಿಗೆ ವಿಪರೀತ ಬೇಡಿಕೆಯಂತೆ. ಉದ್ದದ ಆಧಾರದ ಮೇಲೆ ಕೂದಲಿನಲ್ಲಿ 5 ದರ್ಜೆಗಳಿವೆ. 27 ಇಂಚಿಗಿಂತ ಮೇಲ್ಪಟ್ಟದ್ದು ಮೊದಲ ಗ್ರೇಡ್. 19-26 ಇಂಚಿನದು ಎರಡನೆಯ ಗ್ರೇಡ್. 10-18 ಇಂಚಿನದು ಮೂರನೆಯ; 5-9 ಇಂಚಿನ ಕೂದಲು ನಾಲ್ಕನೆಯ; 5 ಇಂಚಿಗಿಂತ ಕಡಿಮೆಯದು 5ನೆಯ ಗ್ರೇಡ್. ಸಾಧಾರಣ ಮೊದಲ ಗ್ರೇಡ್‍ಗೆ, ಅದರಲ್ಲೂ 31 ಇಂಚು ಉದ್ದದ ಒಂದು ಕೆಜಿ ತಲೆಗೂದಲಿಗೆ 50-60 ಸಾವಿರ ರೂಪಾಯಿ ಬೆಲೆಯಿದೆ ಎಂದರೆ ನೀವು ನಂಬಲೇಬೇಕು!!
ಕೂದಲಿನಲ್ಲಿರುವ ಮುಖ್ಯ ವಸ್ತು ಕೆರಾಟಿನ್ ಎಂಬ ಪ್ರೋಟೀನ್. ಮನುಷ್ಯರ, ಪ್ರಾಣಿಪಕ್ಷಿಗಳ ಕೂದಲು, ಉಗುರು, ಗರಿ, ಗೊರಸು, ಚಿಪ್ಪು, ಕೊಂಬು, ಕೋಡು, ಕೊಕ್ಕು, ಪಂಜಾ, ಕೇಸರ, ಪೊರೆ, ಬಲೆ ಮುಂತಾದವು ಕೆರಾಟಿನ್‍ನಿಂದ ಮಾಡಲ್ಪಟ್ಟಿವೆ. ನಮ್ಮ ಚರ್ಮದ ಹೊರಪದರವೂ ಕೆರಾಟಿನ್‍ನಿಂದಾದದ್ದು. ರೇಶಿಮೆ, ತುಪ್ಪಳ, ಕೂದಲುಗಳಲ್ಲೆಲ್ಲ ಕೆರಾಟಿನ್ ಇದೆ. ಸೌಂದರ್ಯವರ್ಧಕಗಳಿಗೆ ಕೆರಾಟಿನ್‍ನ ಅವಶ್ಯಕತೆಯಿದೆ. ಶರವೇಗದಲ್ಲಿ ಕಾಸ್ಮೆಟಿಕ್ ಇಂಡಸ್ಟ್ರಿ ಬೆಳೆಯುತ್ತಿರುವುದರಿಂದ ಕೂದಲ ಬೇಡಿಕೆಯೂ ಹೆಚ್ಚಾಗಿದೆ.
ಆದರೆ ಇತ್ತೀಚೆಗೆ ಕೂದಲ ಕಾಯಕಕ್ಕೂ ಅಡೆತಡೆ ಎದುರಾಯಿತು. ಚೀನಾದಲ್ಲಿ ಕೋವಿಡ್ ಆರಂಭವಾದಾಗ ಬಹುತೇಕರು ಕೆಲಸ ಕಳೆದುಕೊಂಡರು. ಚೀನಾ, ಯೂರೋಪ್, ಅಮೆರಿಕದ ಮಾರುಕಟ್ಟೆಗಳು ಮುಚ್ಚಿದಾಗ ಉದ್ಯಮ ನಷ್ಟ ಅನುಭವಿಸಿತು. ಚೀನಾ ಹಾಗೂ ಬರ್ಮಾಗೆ ಸಂಸ್ಕರಿಸದೇ ಇರುವ ಕಚ್ಛಾ ಕೂದಲು ಕಳ್ಳಸಾಗಣೆಯಾಗಿ ನಷ್ಟವಾಗುತ್ತಿದೆ ಎನ್ನುತ್ತಾರೆ ಕೆಲವರು. ಅದನ್ನು ನಿಲ್ಲಿಸಲು ಕಚ್ಛಾ ಕೂದಲ ರವಾನೆಗೆ ನಿರ್ಬಂಧ ಹಾಕಿದ್ದರು. ಆದರೆ ಈಗ ಲೈಸೆನ್ಸ್ ಪಡೆದು ಕಳಿಸಬಹುದಾಗಿದೆ. ಹಾಗಾಗಿ ಸ್ಥಳೀಯ ಉದ್ಯೋಗ ನಷ್ಟವಾಗುತ್ತಿದೆ, ಹಲವರು ಬೇರೆ ಕೆಲಸ ಹುಡುಕ ಬೇಕಾಗಿದೆ. ಹಾಗಾಗದಂತೆ ಆಳುವವರು ಮಧ್ಯ ಪ್ರವೇಶಿಸಬೇಕು; ಇಲ್ಲಿಯೇ ವಿಗ್ ಮತ್ತು ಸೌಂದರ್ಯವರ್ಧಕಗಳನ್ನು ತಯಾರಿಸುವ ಕೌಶಲ್ಯ, ತರಬೇತಿಯನ್ನು ಸರ್ಕಾರ ನೀಡಬೇಕು; ಆಗ ನಷ್ಟದ ಹೊರೆ ಕಡಿಮೆಯಾಗುತ್ತದೆ ಎನ್ನುವುದು ಕೆಲಸಗಾರರ ಆಗ್ರಹವಾಗಿದೆ.
ಅವರ ಮಾತಿನಲ್ಲಿ ಹುರುಳಿದೆ. ಆದರೆ ಬದಲಾವಣೆ ತಂತಾನೇ ಆಗುವುದಿಲ್ಲ. ಅದಕ್ಕೆ ಕೂದಲ ಕಾಯಕದವರೆಲ್ಲ ಒಂದಾಗಿ ಹೋರಾಡಬೇಕು. ಒತ್ತಡ ಹೇರಬೇಕು. ಕೂದಲವರು, ಕಸದವರು, ಬಟ್ಟೆಯವರು, ಅಟ್ಟುಣಿಸುವವರು, ಕುಡುಗೋಲು ಕತ್ತಿಯವರು ಮುಂತಾಗಿ ಶ್ರಮಶಕ್ತಿಯೆಲ್ಲ ಒಂದಾಗಿ ತಮಗೇನು ಬೇಕೆಂದು ಕೇಳಲೇಬೇಕು.
ಗ್ರಾಮಸ್ವರಾಜ್ಯ
ಉಣ್ಣುವ ಅನ್ನದಲ್ಲಿ ಕೂದಲು ಸಿಕ್ಕಿತೆಂದು ಊಟ ಬಿಟ್ಟೇಳುವವರು, ಕೂದಲೊಡತಿಯರಾದ ಮನೆಯ ಹೆಣ್ಣುಗಳಿಗೆ ಹೊಡೆಯುವವರು ಸಾಕಷ್ಟಿದ್ದಾರೆ. ಕೂದಲನ್ನು ತೆಗೆಯಲೆಂದೇ ಒಂದು ಜಾತಿ ಸೃಷ್ಟಿಸಿ ಅವರನ್ನು ದೂರ ಇಟ್ಟ; ಅವರು ಎದುರು ಕಂಡರೆ ಅಪಶಕುನ ಎನ್ನುವ ಸಮಾಜ ನಮ್ಮದು. ಆದರೆ ಅಂತಹ `ಮಂಡೆ ಕಸ’ವು ಭಾರೀ ಬೆಲೆ, ಬೇಡಿಕೆ ಪಡೆದಿರುವುದು ಮತ್ತು ಕೂದಲು ಹಿಂಜುವ ಕಾಯಕವನ್ನು ಬಹುತೇಕ ಎಲ್ಲ ಜಾತಿಮತದ ಜನರೂ ಅವಲಂಬಿಸಿರುವುದು ವಿಶಿಷ್ಟವಾಗಿದೆ. ಕಸದಿಂದ ರಸ ತೆಗೆಯುವುದು; ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವುದು; ಮನೆಯಲ್ಲೇ ಬಿಡುವಿನ ವೇಳೆ ಮಾಡುವಂತಹುದು; ವಿಶೇಷ ಕೌಶಲ್ಯವಿಲ್ಲದೆ ಯಾರು ಬೇಕಾದರೂ ಕಲಿತು ಮಾಡುವಂತಹುದು; ಅಮಾನವೀಯ ಶ್ರಮ ಬೇಡದಿರುವ ಕಾಯಕ; ಎಲ್ಲ ಸಮುದಾಯದವರೂ ಮಾಡುವ ಕಾಯಕ – ಮುಂತಾದ ಅಂಶಗಳು ಕೂದಲೋದ್ಯಮವು ಗಾಂಧಿ ಕಂಡ ಸ್ವರಾಜ್ಯ ಕಲ್ಪನೆಗೆ ಹತ್ತಿರ ಇದ್ದಂತೆ ಭಾಸ ಮೂಡಿಸುತ್ತದೆ. ಮೆಲು ಮಾತಿನ ಸರಳ ಜೀವಿ ಅಜ್ಜಪ್ಪ ಗೌಡ ನಗರ ಬಿಟ್ಟು ತನ್ನ ಊರಿನಲ್ಲೇ ದುಡಿಮೆ-ವಿರಾಮ-ಮನರಂಜನೆಗಳ ಘನತೆಯ ಬದುಕು ಕಟ್ಟಿಕೊಳ್ಳಲು ಹಿಡಿದ ದಾರಿಯು ಗಾಂಧೀಜಿ ಹೇಳಿದ, ಮಾರ್ಕ್ಸ್ ಹೇಳಿದ ಆದರ್ಶ ಬದುಕಿನ ಪ್ರತಿರೂಪದಂತಿದೆಯಲ್ಲ ಅನಿಸಿದೆ.
`ಉದುರಿದ ಕೂದಲು ಹಕ್ಕಿ ಗೂಡಿಗೆ ದಾರವಾಗಿ ಧನ್ಯವಾಗಲಿ ಹಾಗೇ’ ಎಂದು ಕವಿತೆ ಬರೆದಿದ್ದೆ. ಆದರೆ ಕೊಪ್ಪಳದ ಕಾಯಕ ಲೋಕಕ್ಕೆ ಹೋಗಿ ಬಂದ ಮೇಲೆ ಉದುರಿದ ಕೂದಲನ್ನು ನೀಟಾಗಿ ತೆಗೆದಿಟ್ಟು ಕೂಗುತ್ತ ಬರುವ ಅಲೆಮಾರಿಗಳಿಗೆ ಕೊಟ್ಟು ಬಿಡಬೇಕು ಎನಿಸುತ್ತಿದೆ. ಲೋಕ ನಡೆಸುವ ಎಲ್ಲ ಕಾಯಕ ಜೀವಿಗಳಿಗೂ ಶರಣು ಶರಣೆನ್ನುವೆ.
ಡಾ. ಎಚ್. ಎಸ್. ಅನುಪಮಾ
ಖ್ಯಾತ ಲೇಖಕರು, ವೈದ್ಯರು, ಹೋರಾಟಗಾರರು.
ಇದನ್ನೂ ಓದಿ- http://ಕೆನರಾ ಕ್ಷೇತ್ರದಲ್ಲಿ ಯಾಕೆ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರೇ ಗೆಲ್ಲಬೇಕು ಎಂದರೆ…..https://kannadaplanet.com/why-anjali-hemant-nimbalkar-should-win/