ಬೆಂಗಳೂರು: ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿಗೆ 101 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ನಿರಂತರ ಪ್ರಯತ್ನದ ಫಲವಾಗಿ ಬಿಡುಗಡೆಗೆ ಸರ್ಕಾರಿ ಅದೇಶ ಹೊರ ಬಿದ್ದಿದೆ.
ಆವರ್ತ ನಿಧಿಯಿಂದ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಈಗಾಗಲೇ ಘೋಷಿಸಿರುವಂತೆ ಶೇ. 50 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಲು ಸಹ ಕ್ರಮ ವಹಿಸುವಂತೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.
ರಾಜ್ಯದಲ್ಲಿ ಮಾವು ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕೃಷಿ ಸಚಿ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು, ಮನವಿಗಳನ್ನು ಅರ್ಪಿಸಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿಗೆ ಕೆಂದ್ರ ಕೃಷಿ ಸಚಿವರ ಸಮ್ಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗೆಳೆರೆಡು ಶೇ 50-50 ಅನುಪಾತದಲ್ಲಿ ಯೋಜನೆ ಅನುಷ್ಠಾನಕ್ಕೆ ಕಳೆದ ವಾರ ಆದೇಶ ಹೊರಡಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಖರೀದಿಗೆ ಬೇಕಾದ 101 ಕೋಟಿ ರೂ ಹಣ ಬಿಡುಗಡೆಗೆ ಆದೇಶ ಹೊರಡಿಸಿ ಸುಗಮ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿದೆ.
ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದೆ. 2025-26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಂದಾಜು 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ.
ಕರ್ನಾಟಕದಲ್ಲಿ, ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ, ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ. ಮೇ 2025 ರಲ್ಲಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಮಾದರಿ ಬೆಲೆಗಳು ಕ್ವಿಂಟಾಲ್‌ಗೆ ರೂ.1,200 ರಿಂದ ರೂ.2,500 ರವರೆಗೆ ಇತ್ತು.
ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ಮಾವು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ 450-550 ರೂಗೆ ಕುಸಿದಿದೆ. ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ 3,460 ರೂ. ಮತ್ತು C-3 ವೆಚ್ಚಕ್ಕೆ 5,466 ರೂ. ಎಂದು ಶಿಫಾರಸು ಮಾಡಿದೆ.
ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು PDPS ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ. 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.