ಬೆಂಗಳೂರು: ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕಾದ ಅಗತ್ಯವಿದ್ದು, ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಸಚಿವ ಎಂ.ಬಿ.ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇವೆರಡೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಲು ಅರ್ಹತೆ ಪಡೆದಿವೆ. ಪ್ರಯಾಣಿಕರ ದಟ್ಟಣೆ ಕೂಡ ಇದೆ. ಸದ್ಯ ಈ ಭಾಗದ ಪ್ರಯಾಣಿಕರು ವಿದೇಶಗಳಿಗೆ ಹೋಗಬೇಕಾದರೆ ಸಮೀಪದ ಗೋವಾಕ್ಕೆ ಹೋಗಬೇಕು. ಅದರ ಬದಲು ಈ ನಿಲ್ದಾಣಗಳನ್ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಘೋಷಿಸಬೇಕು ಎಂದು ಅವರು ಹೇಳಿದರು.
ಕಲ್ಬುರ್ಗಿ ಸೇರಿದಂತೆ ರಾಜ್ಯದ ಎರಡನೇ ಹಂತದ ಆರು ನಗರಗಳಿಗೆ ವಿಮಾನಯಾನ ಸೇವೆಯನ್ನು ಮತ್ತಷ್ಟು ಬಲಪಡಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಖನಿಜ ಭವನದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜತೆಗೂಡಿ ಹಲವು ವಿಮಾನಯಾನ ಸಂಸ್ಥೆಗಳ ಉನ್ನತಾಧಿಕಾರಿಗಳ ಜೊತೆ ದೀರ್ಘ ಸಭೆ ನಡೆಸಿ ಚರ್ಚಿಸಿದರು.
ಕಲ್ಬುರ್ಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಜಿಂದಾಲ್ ಟೌನ್ ಶಿಪ್) ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಗಳಿಂದ ರಾಜ್ಯ ಸೇರಿದಂತೆ ಇತರ ರಾಜ್ಯಗಳಿಗೆ ವಿಮಾನಯಾನ ಸಂಪರ್ಕ ಹೆಚ್ವಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಇಂಡಿಗೋ, ಸ್ಟಾರ್ ಏರ್, ಏರ್ ಇಂಡಿಯಾ, ಆಕಾಶ್, ಅಲೈಯನ್ಸ್ ಏರ್ ವೇಸ್, ಸ್ಪೈಸ್ ಜೆಟ್ ಸೇರಿದಂತೆ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಮಾನ ಸಂಚಾರಕ್ಕೆ ಕಲ್ಬುರ್ಗಿ ಹೆಚ್ಚು ಲಾಭದಾಯಕ ಮಾರ್ಗವಾಗಿದ್ದರೂ ಅಲ್ಲಿಗೆ ಬೆಂಗಳೂರಿನಿಂದ ವಾರಕ್ಕೆ ಕೇವಲ ಮೂರು ದಿನ ಮಾತ್ರ ವಿಮಾನ ಸಂಚಾರ ಇದೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರ ಹಾಗೂ ಅನ್ಯ ರಾಜ್ಯಗಳ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಇಬ್ಬರೂ ಸಚಿವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಎಂಆರ್ ಓ ಸೇವೆಗೂ ಸಿದ್ಧ:
ವಿಮಾನ ಸಂಚಾರದ ಜತೆಗೆ ಈ ವಿಮಾನ ನಿಲ್ದಾಣಗಳನ್ನು ವಿಮಾನಗಳ ನಿರ್ವಹಣೆ ಮತ್ತು ರಿಪೇರಿ (ಎಂಆರ್ ಓ) ಕೇಂದ್ರಗಳಾಗಿಯೂ ಬಳಸಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಈ ಸೇವೆ ದುಬಾರಿ ಕೂಡ ಆಗುತ್ತದೆ. ಹೀಗಾಗಿ ಬೆಳಿಗ್ಗೆ ಇಂತಹ ನಗರಗಳಿಂದ ಪ್ರಯಾಣಿಕರನ್ನು ಹೊತ್ತೊಯ್ದು ರಾತ್ರಿ ನಿಲುಗಡೆಗೆ ವಾಪಸ್ಸಾಗಬಹುದು. ಬೇಕಾದರೆ ನಿಲುಗಡೆ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ಸಚಿವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕಲ್ಬುರ್ಗಿಯಲ್ಲಿ ಈ ವ್ಯವಸ್ಥೆ ಮಾಡಿಕೊಡಲು ತಾವು ಸಿದ್ಧ ಇರುವುದಾಗಿಯೂ ಸಚಿವ ಖರ್ಗೆ ಹೇಳಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಮೈಸೂರು, ಕಲಬುರಗಿ, ಬೀದರ್, ವಿದ್ಯಾ ನಗರ ವಿಮಾನ ನಿಲ್ದಾಣಗಳ ಉಪಯೋಗ ಗರಿಷ್ಠ ಮಟ್ಟದಲ್ಲಿ ಆಗುತ್ತಲೇ ಇಲ್ಲ. ಕಲಬುರಗಿ-ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ಮಾತ್ರ ವಿಮಾನ ಓಡಾಡುತ್ತಿದೆ. ಸ್ಟಾರ್ ಮತ್ತು ಅಲೈಯನ್ಸ್ ವಿಮಾನಯಾನ ಸಂಸ್ಥೆಗಳು ಮೂರು ವರ್ಷಗಳಿಂದ ಹಾರಾಟ ನಿಲ್ಲಿಸಿವೆ. ಕಲಬುರಗಿ ಪ್ರವಾಸೋದ್ಯಮ ಕೇಂದ್ರವಾಗಿದೆ. ಇಲ್ಲಿಂದ ಪುಣೆ, ತಿರುಪತಿ, ಚೆನ್ನೈ, ಮುಂಬೈ ಹೀಗೆ ಹಲವು ಭಾಗಗಳಿಗೆ ವಿಮಾನ ಸಂಚಾರ ಆರಂಭಿಸಿದರೆ ಖಂಡಿತವಾಗಿಯೂ ಲಾಭ ತಂದುಕೊಡಲಿದೆ. ಇಂತಹ ಮಾರ್ಗಗಳಲ್ಲಿ ಸಂಸ್ಥೆಗಳು ಪ್ರಾಯೋಗಿಕ ಸೇವೆ ಕೈಗೊಂಡು ನೋಡಬಹುದು ಎಂದು ಅವರು ನುಡಿದಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಿಂದ ಕೂಡ ವೈಮಾನಿಕ ಸೇವೆ ಹೆಚ್ಚಾಗಬೇಕು. ಇಲ್ಲಿಂದ ಗೋವಾ, ಕೊಚ್ಚಿನ್, ಹೈದರಾಬಾದ್ ಮುಂತಾದ ನಗರಗಳಿಗೂ ವಿಮಾನಸೇವೆ ಆರಂಭಿಸಬಹುದು. ಬೆಳಗಾವಿಯಿಂದ ಈಗ ವಾರಕ್ಕೆ 44 ವಿಮಾನಗಳು ಓಡಾಡುತ್ತಿವೆ. ಇಲ್ಲಿಂದ ಪುಣೆಗೆ ವಿಮಾನಸೇವೆ ಆರಂಭಿಸಬೇಕೆಂಬ ಬೇಡಿಕೆ ಇದೆ. ಆದರೆ, ಲ್ಯಾಂಡಿಂಗ್ ಸಮಯದ ಅನಾನುಕೂಲತೆ ಇದೆ. ಇಲ್ಲಿಂದ ಚೆನ್ನೈ, ಕೊಚ್ಚಿ ಮುಂತಾದ ಕಡೆಗಳಿಗೆ ವಿಮಾನ ಸೇವೆಗೆ ಒಳ್ಳೆಯ ಅವಕಾಶವಿದ್ದು, ಕಲಬುರಗಿಗೂ ಸೇವೆ ಆರಂಭಿಸಬಹುದು. ಜಿಂದಾಲ್ ಟೌನ್-ಶಿಪ್ ನಲ್ಲಿರುವ ವಿಮಾನ ನಿಲ್ದಾಣದಿಂದ ಹೈದರಾಬಾದಿಗೆ ಮಾತ್ರ 2 ವಿಮಾನ ಓಡಾಡುತ್ತಿದೆ. ಇಲ್ಲಿಂದ ಬೆಂಗಳೂರಿಗೂ ವಿಮಾನಯಾನ ಸೇವೆ ಆರಂಭವಾಗಬೇಕು. ಜತೆಗೆ ಜಿಂದಾಲ್ ಟೌನ್‌ಶಿಪ್ ನಲ್ಲಿ ವಿದೇಶೀಯರೂ ಹೆಚ್ಚಾಗಿದ್ದಾರೆ. ಹತ್ತಿರದಲ್ಲೇ ವಿಶ್ವವಿಖ್ಯಾತ ಹಂಪೆ ಇದೆ. ಆದ್ದರಿಂದ ಬೆಂಗಳೂರು-ಜಿಂದಾಲ್-ಗೋವಾ ಈ ಮಾರ್ಗದಲ್ಲಿ ವಿಮಾನ ಓಡಾಡಿದರೆ ಪರಿಣಾಮಕಾರಿ ಎಂದು ಪಾಟೀಲ ವಿವರಿಸಿದರು.
ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಸರಕಾರದ ಪರಿಸರ ಇಲಾಖೆಯ ಅನುಮತಿ ಬಾಕಿ ಇದೆ. ವಿಮಾನಯಾನ ಸಂಸ್ಥೆಗಳು ಈಗಿನಿಂದಲೇ ತಮ್ಮ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿರಬೇಕು. ಈ ವಿಮಾನ ನಿಲ್ದಾಣ ಆರಂಭವಾದರೆ ಮಹಾರಾಷ್ಟ್ರ, ತೆಲಂಗಾಣ, ಉತ್ತರ ಭಾರತದ ಹಲವು ನಗರಗಳಿಗೆ ವಿಮಾನಸೇವೆ ಸುಲಭವಾಗಲಿದೆ ಎಂದು ಅವರು ಸೂಚಿಸಿದ್ದಾರೆ.
ಸಭೆಯಲ್ಲಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮುಖ್ಯಸ್ಥೆ ಖುಷ್ಬೂ ಗೋಯೆಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಏ.15ರಿಂದ ಬೀದರ್- ಬೆಂಗಳೂರು ವಿಮಾನಸೇವೆ ಪುನಾರಂಭ:
ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ವಿಮಾನ ಸೇವೆಯನ್ನು ಸ್ಟಾರ್ ಎರ್ ಸಂಸ್ಥೆಯು ಇದೇ ತಿಂಗಳ 15ರಿಂದ ಪುನಾರಂಭ ಮಾಡಲಿದೆ ಎಂದು ಸಚಿವ ಎಂ ಬಿ ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.