ನಮ್ಮೂರ ಲಕ್ಕಮ್ಮನ ಕಟ್ಟೆಯ ನೆಲದ ಬಯಲು ಈಗ ಸಂಪೂರ್ಣ ಬದಲಾಗಿದೆ. ಅದರ ತುಂಬೆಲ್ಲ ಸಿಮೆಂಟ್ ಮಾಡಲಾಗಿದೆ. ಮೊದಲಿನ ಮಣ್ಣ ಹುಡಿಯ ನೆಲದ ಘಮ ಮರೆಯಾಗಿ ಹೋಗಿದೆ. ಹಾಗೆಯೇ ಅಂತಹ ಅನೇಕ ಕಣ್ಮರೆಗಳು ಊರಲ್ಲಿ ಗತಿಸಿವೆ. ಹೊಸ ತಲೆಮಾರಿಗೆ ಊರ ಪರಂಪರೆಯ ಸರಿಯಾದ ಅರಿವಿಲ್ಲ. ಅದನ್ನು ತಿಳಿಸಿ ಹೇಳುವವರೂ ಇಲ್ಲ. – ಮಲ್ಲಿಕಾರ್ಜುನ ಕಡಕೋಳ, ಹಿರಿಯ ಸಾಹಿತಿ
ನಮ್ಮೂರ ಲಕ್ಕಮ್ಮನ ಗುಡಿಕಟ್ಟೆಗೆ ನೂರಾರು ವರುಷಗಳ ಇತಿಹಾಸ ಇರುವಂತಿದೆ. ಅದನ್ನು ಊರಿನ ಅನೇಕ ಹಿರೀಕರು ಸಾರ್ವತ್ರಿಕವಾಗೇ ಶೃತಪಡಿಸಿ ಹೋಗಿದ್ದಾರೆ. ನಮ‌್ಮೂರ ಲಕ್ಕಮ್ಮನ ಕಟ್ಟೆ ಎಂದರೆ ನಟ್ಟ ನಡೂರಲ್ಲಿರುವ ಗುಡಿಕಟ್ಟೆ. ಇದೀಗ ಅದರ ಐಹಿಕ ಚಹರೆಗಳು ಆಧುನೀಕರಣ ಗೊಂಡಿವೆ. ಅದು ಅದೆಷ್ಟೇ ಪರಿ ಪರಿಯಾಗಿ ಅತ್ಯಾಧುನೀಕರಣಗೊಂಡರೂ ನನ್ನ ಬಾಲ್ಯದ ಲಕ್ಕಮ್ಮನ ಕಟ್ಟೆಯ ಪ್ರಾಚೀನತೆಯಂತಹ ನೆನಪಿನ ‘ಚಿತ್ರ’ ಮಾತ್ರ ಕಣ್ಣಿಗೆ ಕಟ್ಟಿದಂತಿದೆ.
ಗುಂಡುಕಲ್ಲು ಮಣ್ಣಿನ ಸಣ್ಣ ಗುಡಿ ಅದಾಗಿತ್ತು. ಲಕ್ಕಮ್ಮನ ಗುಡಿಯೊಳಗೆ ಬಂಡೆಬದಿಗೆ ಮೊಳದೆತ್ತರದ ಪುಟ್ಟ ಪುಟ್ಟ ಕಟ್ಟಿಗೆ ಗೊಂಬೆಗಳು. ಮತ್ತೆ ಕೆಲವು ಕಲ್ಲುಗೊಂಬೆಗಳು. ಅವು ಆಟದ ಬೊಂಬೆಗಳಲ್ಲ ಅವು ಲಕ್ಕಮ್ಮನ ಮಕ್ಕಳು. ಆ ಮಕ್ಕಳ ಹೆಸರು ಮರೆತಿರುವೆ. ನೆಲದೊಳಗಿಂದಲೇ ಉದ್ಭವಿಸಿದಂತಹ ಗುಂಡುಗಲ್ಲಿನ ಬಂಡಿಗಟ್ಟೆ ಅದು. ಅದಕ್ಕೆ ಅಂಟಿಕೊಂಡಂತೆ ನಿರೂಪಿತ ಈ ಗೊಂಬೆಗಳಿಗೆ ‘ಕಿಣ್ಣಿಸೀರೆ’ ಉಡಿಸುತ್ತಿದ್ದರು. ಮಾತೃತ್ವವೇ ಮೂರ್ತಗೊಂಡಿದ್ದ ಬಂಡಿಗಟ್ಟೆಗೆ ಸೆವೆಣ್ಣೆ ಹಾಕಿ ಹಾಕಿ ಅಲ್ಲೆಲ್ಲ ಜಿಗುಟುಮೇಣ ಮೆತ್ತಿದಂತೆ ‘ಜಿಡ್ಡಿನಂಟು’ ದಡ್ಡುಗಟ್ಟಿರುತ್ತಿತ್ತು. ಅದರ ಅಕ್ಕ ಪಕ್ಕದ ಮಣ್ಣಿನ ಪಣತೆಗಳಿಗೂ ಅದೇ ಸೆವೆಣ್ಣೆ ಹಾಕಿ ದೀಪ ಮುಡಿಸುತ್ತಿದ್ದರು. ಹರಕೆ ಹೊತ್ತು ಅಮವಾಸ್ಯೆ ಹುಣ್ಣಿಮೆಗಳ ಸಂದರ್ಭದಲ್ಲಿ ಲೋಬಾನ, ಕಾಯಿ ಕರ್ಪೂರ, ಹೋಳಿಗೆ ನೈವೇದ್ಯ. ಲಕ್ಕಮ್ಮಗೆ ಮತ್ತು ಆಕೆಯ ಮಕ್ಕಳಿಗೆ ಎಡೆ ಸಲ್ಲಿಕೆ ಆಗುತ್ತಲಿತ್ತು.

ಅದು ಸರ್ವ ದೈವದವರ ಕೇವಲ ಸಣ್ಣ ಗುಡಿಯಾಗಿ ಮಹತ್ವ ಪಡೆದಿರಲಿಲ್ಲ. ಅದನ್ನು ಮೀರಿದ ನಮ್ಮೂರಿನ ಬದುಕು ಬಾಳುವೆಯ ಒಟ್ಟಾರೆ ಊರಿನ ಪ್ರಾಣಧ್ವನಿಯಂತೆ ನಡೂರ ಲಕ್ಕಮ್ಮನ ಕಟ್ಟೆ ಹೆಸರು ಮಾಡಿತ್ತು. ನಮ್ಮೂರಿನ ಮಕ್ಕಳು, ಹೆಣ್ಣುಮಕ್ಕಳ ಒಳಿತು, ಊರಿನ ಆಗು ಹೋಗುಗಳು, ಕಟ್ಲೆ ಕಾರ್ವಾಯಿಗಳು, ಅವುಗಳ ನ್ಯಾಯ ಪಂಚಾಯ್ತಿಯ ಕಟ್ಟೆ ಅದಾಗಿತ್ತು. ಹೈ ಪ್ರೊಫೈಲ್ ಆರೋಪದ ಪ್ರಕರಣಗಳು ಕೂಡಾ ಲಕ್ಕಮ್ಮನ ಕಟ್ಟೆಯಲ್ಲೇ ಫೈಸಲ್ ಆಗುತ್ತಿದ್ದವು. ಅವು ಯಾವತ್ತೂ ಯಡ್ರಾಮಿಯ ಪೊಲೀಸ್ ಠಾಣೆಯ ಪಾವಟಿಗೆ ಏರಿದ ನೆನಪಿರಲಿಲ್ಲ. ಅಷ್ಟು ಮಾತ್ರವಲ್ಲ. ಊರಿನ ಜಾತ್ರೆಗಳು, ಗ್ರಾಮದೇವತೆ ದ್ಯಾವಮ್ಮನ ಛಟ್ಟಿ, ದೊಡ್ಡಾಟ, ಸಣ್ಣಾಟ, ಸಾಮಾಜಿಕ ನಾಟಕ, ಅಲೈದೇವರ ಮೊಹರಂ ಹಬ್ಬ, ಕಾರಹುಣ್ಣಿಮೆ ಕರಿ ಇತ್ಯಾದಿಗಳು ಸೇರಿದಂತೆ ಸಾರ್ವತ್ರಿಕ ಕೆಲಸ ಕಾರ್ಯಗಳನ್ನು ಜಾರಿಗೊಳಿಸುವ ಮತ್ತು ಶಾಸನಗಳನ್ನು ರೂಪಿಸುವ ನಮ್ಮೂರ ವಿಧಾನಸಭೆಯಂತೆ ಸಂಭ್ರಮದ ಕೇಂದ್ರವೇ ಅದಾಗಿತ್ತು.
ಅಷ್ಟೇ ಯಾಕೆ ಅದು ನಮ್ಮೂರ ಸಂಸತ್ತು, ಹೈಕೋರ್ಟ್ ಕೂಡಾ ಆಗಿತ್ತೆಂದರೆ ಅತಿಶಯೋಕ್ತಿ ಏನಲ್ಲ. ಆ ಪುಟ್ಟ ಗುಡಿಕಟ್ಟೆಗೆ ಅದ್ಯಾಕೆ ಅಷ್ಟೊಂದು ಮಹತ್ವ ಇತ್ತೆಂಬುದು ಸಣ್ಣ ಚುಕ್ಕೋಳಾಗಿದ್ದ ನಮಗೆ ಆಗ ಭಲೇ ಭಲೇ ಸೋಜಿಗವೇ ಸೋಜಿಗ. ಹೌದು ಅಕ್ಷರಶಃ ಊರನ್ನು ಒಂದುಗೂಡಿಸುವ ಭಾವೈಕ್ಯದ ಕೇಂದ್ರಸ್ಥಳ ಅದಾಗಿತ್ತು. ಹೀಗಂತಲೇ ಅದಕ್ಕೆ ಇವೊತ್ತಿಗೂ ಅಂತಹದ್ದೊಂದು ಅಮೂರ್ತ ಮಹತ್ವ. ಗ್ರಾಮ ಪಂಚಾಯತಿ ಕಚೇರಿ ಹುಟ್ಟಿಕೊಂಡು ದಶಕಗಳೇ ಕಳೆದರೂ ಲಕ್ಕಮ್ಮನ ಕಟ್ಟೆಯ ಸಂಪ್ರದಾಯಸ್ಥ ಕದರಿಗೆ ಕುಂದು ಬಂದಿಲ್ಲ. ಇವತ್ತಿಗೂ ಊರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ಣಯಿಸುವ ಮತ್ತು ನಿಯಂತ್ರಿಸುವ ಕೇಂದ್ರ ಸ್ಥಳವೇ ನಡೂರಿನ ಲಕ್ಕಮ್ಮನ ಕಟ್ಟೆ. ಹಾಗೆ ನೋಡಿದರೆ ನಮ್ಮೂರ ನಾಗರಿಕ ಬದುಕಿನ ಸಾಕ್ಷೀಪ್ರಜ್ಞೆಯೆಂದರೆ ಲಕ್ಕಮ್ಮನ ಕಟ್ಟೆಯೇ ಆಗಿದೆ. ಹಾಗಾದರೆ ಕಡಕೋಳ ಮಡಿವಾಳಪ್ಪ? ಖಂಡಿತವಾಗಿ ಮಡಿವಾಳಪ್ಪ ಕಡಕೋಳಕ್ಕೆ ಮಾತ್ರ ಸೀಮಿತವಲ್ಲ. ಅವರು ಕನ್ನಡ ನಾಡಿನ ಸಮಗ್ರ ತತ್ವಪದ ಲೋಕದ ಸಾಕ್ಷಿಪ್ರಜ್ಞೆ.
ಅಂದಹಾಗೆ ಇವತ್ತಿಗೂ ನಮ್ಮೂರಿನ ನಡೂರ ಲಕ್ಕಮ್ಮನ ಕಟ್ಟೆಯ ಗಮನಕ್ಕೆ ಬರದಿರುವ ಸಾಮೂಹಿಕ ಸಂಗತಿಗಳೇ ಇಲ್ಲ. ಅದು ಅನೈತಿಕ ಸಂಬಂಧಗಳಿಂದ ಹಿಡಿದು ತರಹೇವಾರಿ ಗಮ್ಮತ್ತಿನವರೆಗೂ ಬಾರದಿರುವ ವಿಚಾರಗಳೇ ಇಲ್ಲದಿಲ್ಲ. ಹಾಗೆಯೇ ಅಲ್ಲಿ ಮನರಂಜನೆಗೂ ಬರವಿರಲಿಲ್ಲ. ಬಾಲ್ಯದಲ್ಲಿ ಪ್ರತಿ ವರುಷವೂ ಇಂಗಳಗಿ ಮತ್ತು ಹಂಸನೂರಿನ ದಾಸ ಚೆಲುವೆಯರ ಪ್ರಭಾವಶಾಲಿ ರಾಧಾನಾಟ. ಅವರು ಕೃಷ್ಣ ಪಾರಿಜಾತ ಆಡಿ ಹೋದಮೇಲೂ ನಮ್ಮೂರಿನ ದನ ಕಾಯುವ ಹುಡುಗರ ಬಾಯಲ್ಲೂ ಪಾರಿಜಾತದ ಪರಿಮಳ ಪುಂಖಾನುಪುಂಖ ಪಸರಿಸುತ್ತಿತ್ತು.
ಶೈಕ್ಷಣಿಕವಾಗಿಯೂ ಲಕ್ಕಮ್ಮನ ಕಟ್ಟೆ ಪರಿಸರ ಸಣ್ಣದೇನಲ್ಲ. ನಮ್ಮೂರ ಲಕ್ಕಮ್ಮನ ಕಟ್ಟೆಯ ಬಲಕ್ಕಿದ್ದ ಛಾವಡಿಯೇ ಸರ್ಕಾರಿ ಶಾಲೆ. ಅಲ್ಲೇ ನಾನು ಮೂರನೇ ಈಯತ್ತೆ ಉತ್ತೀರ್ಣನಾದೆ. ಆಗ ನನಗೆ ಓನಾಮ ಕಲಿಸಿದವರು ಕೋಣಶಿರಸಗಿಯ ಸುಭೇದಾರ ಗುಂಡೇರಾಯ ಮಾಸ್ತರರು. ಅದೇ ಆಗ ಮಳ್ಳಿಯ ನಾರಾಯಣರಾಯರು ವರ್ಗವಾಗಿ ಹೋದ ನೆನಪು. ಅದಾದ ಮೇಲೆ ನಾಲ್ಕನೇ ಈಯತ್ತೆ ಕಲಿಯಲು ಯಡ್ರಾಮಿಯ ಸರಕಾರಿ ಮಾಧ್ಯಮಿಕ ಶಾಲೆಗೆ ಹೋದೆ.
ಯಡ್ರಾಮಿಯಲ್ಲಿ ನಾಲ್ಕನೇ ಈಯತ್ತೆ ಓದುವಾಗ ನಮ್ಮೂರಲ್ಲಿ ”ದೇವಿಮಹಾತ್ಮೆ” ಎಂಬ ದೊಡ್ಡಾಟ ಜರುಗಿತು. ಆಗ ಹುಡೇದ ಸಿದ್ದಪ್ಪ ಕಾಕಾ ದೊಡ್ಡಾಟದ ಮಾಸ್ತರ. ಹಗಲು ಶಾಲೆ ನಡೆಯುವ ಅದೇ ಛಾವಡಿಯಲ್ಲಿ ರಾತ್ರಿಹೊತ್ತು ಕಂದೀಲು ಬೆಳಕಿನಡಿ ಜಡತಿ. ಅಂದರೆ ದೊಡ್ಡಾಟದ ತಾಲೀಮು. ನನಗೆ ಗಣಪತಿ ಪಾತ್ರ. ಅದೇ ದೊಡ್ಡಾಟದಲ್ಲಿ ಬಡಿಗೇರ ಇಮಾಮಸಾ ಮಾವನನ್ನು ದೇವಿಪಾತ್ರದಲ್ಲಿ ನೋಡುವುದೇ ಥ್ರೀಡೀ ಎಫೆಕ್ಟ್ ಸಿನೆಮಾ ನೋಡಿದ ಸಡಗರ. ಅದರಲ್ಲೂ ಸಚಿದೇವಿಯಾಗಿ ಮುದ್ದಾ ಭೀಮರಾಯ ಮತ್ತು ಇಂದ್ರಲೋಕದ ದೇವೇಂದ್ರನಾಗಿ ಹಿರೇಗೋಳ ಹಣಮಂತ್ರಾಯ ಮಾವ. ಅವರ ಸಂಭಾಷಣೆ ಮತ್ತು ಕುಣಿತ ನೋಡುವುದೇ ಮಹಾ ಸಂಭ್ರಮ ಅದಾಗಿರುತ್ತಿತ್ತು.
ಮುಂದುವರೆದು ಆಟದ ನಸುಕಿನಲ್ಲಿ ಉರಿದೀವಟಿಗೆ ಸಮೇತ ಹಲಗೆ ಕುಣಿತದೊಡನೆ ಮಲಗಿದವರನ್ನೇ ಎದ್ದು ಕೂಡಿಸುವ ನಟಭಯಂಕರ ಮುದ್ದಾ ಮಾಂತಪ್ಪನ ರಕ್ತಬೀಜಾಸುರ ಪಾತ್ರವಂತೂ ಇವತ್ತಿನ ಕಾಂತಾರ ಸಿನೆಮಾ ನೋಡಿದ ಖುಷಿ. ನೆನಪಿರಲಿ ಇದೆಲ್ಲ ಜರುಗುತ್ತಿದ್ದುದು ನಮ್ಮೂರ ಲಕ್ಕಮ್ಮನ ಕಟ್ಟೆಯ ಮುಂದಿರುವ ವಿಶಾಲ ಬಯಲಲ್ಲಿ. ಒಟ್ಟಾರೆ ನಮ್ಮೂರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಜರುಗುವುದೇ ಲಕ್ಕಮ್ಮನ ಕಟ್ಟೆಯ ಮಹಾ ಬಯಲಲ್ಲಿ.
ಇಂತಹ ರಂಗಭೂಮಿಯ ಸಾಂಸ್ಕೃತಿಕ ಸಂಗತಿ, ಸಂವೇದನೆಗಳನ್ನು ಮತ್ತೆ ಮುಂದುವರೆದು ಸಾದರ ಪಡಿಸುವುದಾದರೆ ಮನೋಹರ ಕುಲಕರ್ಣಿಯವರ ಕೃಷ್ಣನ ಪಾತ್ರದ ಕಂದಗಲ್ ಹಣಮಂತರಾಯರ ‘ರಕ್ತರಾತ್ರಿ’ ಎಂಬ ಸುಪ್ರಸಿದ್ಧ ನಾಟಕ. ಅದರ ರೋಚಕ ಕತೆ ಜರುಗಿದ್ದು ಇದೇ ಜಾಗದಲ್ಲಿ. ತದನಂತರ ನಮ್ಮಕಾಲದ ಹಿರೀಕರಾದ ಮಾಲಿ ಗುರುಪಾದಪ್ಪಗೌಡ ಮಾವ ಮತ್ತು ಪೋಲೇಸಿ ಶಿವಪ್ಪಗೌಡ ಅಣ್ಣನವರ ಅಭಿನಯದ ”ಮಾವನಮನೆ” ಎಂಬ ಎಚ್. ಎನ್. ಹೂಗಾರ ಅವರ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಕಂಡದ್ದು ಇದೇ ಸ್ಥಳದಲ್ಲೇ.
ಈ ನಾಟಕದಲ್ಲಿ ಹುಡೇದ ನೂರಂದಪ್ಪ ಕಾಕಾ ಸೊಗಸಾದ ಹಾಸ್ಯಪಾತ್ರ ಮಾಡಿದ್ದ. ಅಮ್ಮಾಪೂರದ ಪೇಟಿ (ಹಾರ್ಮೋನಿಯಂ) ಮಾಸ್ತರ ನಾಟಕದ ನಿರ್ದೇಶನ ಮಾಡಿದ್ದ. ನಮ್ಮ ಭಾಗದ ಪಿಟೀಲು ಚೌಡಯ್ಯನೇ ಆಗಿದ್ದ ತೆಲಗಬಾಳ ಮಲ್ಲಪ್ಪನ ಪಿಟೀಲು ಆಗ ದೊಡ್ಡಾಟ ಮತ್ತು ನಾಟಕಗಳಿಗೂ ಸ್ವರಸಾಂಗತ್ಯ ಒದಗಿಸಿತ್ತು ಎಂದರೆ ಈಗಿನ ಸಂಗೀತಗಾರರಿಗೆ ಅಚ್ಚರಿ ಅನಿಸಬಹುದು. ಹೀಗೆ ನಡೂರ ಲಕ್ಕಮ್ಮನ ಕಟ್ಟೆ ಪರಿಸರ ನಮ್ಮೂರಿನ ಪ್ರತಿಭಾವಂತ ಕಲಾವಿದರ ಕಲಾಪ್ರದರ್ಶನದ ಕಲಾಕ್ಷೇತ್ರವೇ ಆಗಿತ್ತು.

ಹಾಗೇ ಮುಂದುವರೆದು ವಿವರಿಸುವುದಾದರೆ, ಉಗಾದಿಯ ಲಗೋರಿ ಆಟ ಜರುಗುತ್ತಿದ್ದುದೇ ಲಕ್ಕಮ್ಮನ ಕಟ್ಟೆಯ ಪಕ್ಕದ ಬೇವಿನ ಕಟ್ಟೆಯ ಮುಂದೆ. ಹದಿಹರೆಯದ ಹುಡುಗರು ಪೈಪೋಟಿಯಿಂದ ಮಣಭಾರದ ಸಂಗ್ರಾಣಿ ಕಲ್ಲೆತ್ತುವ, ಕುಸ್ತಿ ಮತ್ತು ಕಬಡ್ಡಿ ಆಡುವ ಆಟದ ಕಣವೇ ಲಕ್ಕಮ್ಮನ ಕಟ್ಟೆಯ ಬಯಲು. ಇದೆಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಜರುಗುವ ಕಾರ ಹುಣ್ಣಿಮೆಯ ಕರಿ ಹರಿಯುವ ಹಬ್ಬ. ಅದಂತೂ ಮೆಗಾ ಇವೆಂಟ್. ನಡೂರಿನ ಲಕ್ಕಮ್ಮನ ಕಟ್ಟೆ ಬಯಲು ಅದಕ್ಕೆ ಪೂರ್ತಿಯಾಗಿ ಬಳಕೆ ಆಗುತ್ತಿತ್ತು. ನಿಜಕ್ಕೂ ಅದೊಂದು ಕಲರ್‌ಫುಲ್ ಪ್ರದರ್ಶನ. ಸಿಂಗಾರಗೊಂಡ ಬೀಜದ ಹೋರಿ ಮತ್ತು ತೊಡ್ಡು ಬಡಿದ ಎತ್ತುಗಳ ಓಟದ ಸ್ಪರ್ಧೆ. ಅದು ನಿಕ್ಕಿಬಯಲು ಜಾಗದ ಪಂದ್ಯಾಟ.
ಅಲೈ ದೇವರ ಪೀರಲ ಹಬ್ಬದಲ್ಲಂತೂ ವಾರಗಟ್ಟಲೇ ಸಂಭ್ರಮ. ಗುದ್ದಲಿ ಪೂಜೆಯಿಂದ ದಫನ್ ಸಂಜೆ ತನಕ ಹಾಡು ಕುಣಿತಗಳ ಹಬ್ಬ. ಇನ್ನುಳಿದ ಎಲ್ಲ ಮಂಗಳಕರ ಮೆರವಣಿಗೆ ಸೇರಿದಂತೆ ಬದುಕಿನ ಅಂತಿಮ ಗಳಿಗೆಗಳಾದ ಶವಯಾತ್ರೆ ಮೆರವಣಿಗೆಗಳು ಸಹಿತ ಜರುಗುವ ಪ್ರಮುಖ ಜಾಗೆ ಇದು. ಹಾಗೇ ತುಸು ಮುಂದೆ ಬಲಗಡೆ ಕಣ್ಣು ಹಾಯಿಸಿದರೆ ಮಸೂತಿ ಹತ್ತಿರದ ಅಲ್ಲೊಂದು ಉದ್ದನೇ ಕಟ್ಟೆ ಇತ್ತು. ನಮ್ಮೂರ ಪಾಳು ದೇಗುಲಗಳ ದೈತ್ಯಾಕಾರದ ಕಲ್ಲುಗಳ ಕಟ್ಟೆ ಅದಾಗಿತ್ತು. ಅದು ಸಂಜೆಹೊತ್ತಿನ ಯುಥ್ ಕ್ಲಬ್ ಅಡ್ಡೆ. ಹಾಗೆಯೇ ಮುಂದಕ್ಕೆ ಸಾಗಿದರೆ ಅಗಸಿ ಜಾಗದ ನೆಲಗಲ್ಲು. ಇನ್ನಷ್ಟು ಮುಂದಕ್ಕೆ ಹೋದರೆ ಸಿರೆಪ್ಪನ ಕಟ್ಟೆ. ಅದು ದಾಟಿದರೆ ಊರ ಹೊರಗಿನ ಹಣುಮಪ್ಪನ ಗುಡಿ.
ಆದರೆ ನಮ್ಮೂರ ಲಕ್ಕಮ್ಮನ ಕಟ್ಟೆಯ ನೆಲದ ಬಯಲು ಈಗ ಸಂಪೂರ್ಣ ಬದಲಾಗಿದೆ. ಅದರ ತುಂಬೆಲ್ಲ ಸಿಮೆಂಟ್ ಮಾಡಲಾಗಿದೆ. ಮೊದಲಿನ ಮಣ್ಣ ಹುಡಿಯ ನೆಲದ ಘಮ ಮರೆಯಾಗಿ ಹೋಗಿದೆ. ಹಾಗೆಯೇ ಅಂತಹ ಅನೇಕ ಕಣ್ಮರೆಗಳು ಊರಲ್ಲಿ ಗತಿಸಿವೆ.
ಹುಡೇದ ಚಂದ್ರಾಮ, ಮಾಲಿ ಸಿದ್ರಾಮಪ್ಪ ಗೌಡ, ಪೋಲೇಸಿ ಹಳ್ಳೆಪ್ಪಗೌಡ, ಕವಲ್ದಾರ ತಿಪ್ಪಣ್ಣ, ದೊರಿಗೋಳ ರಾಜಶೇಕರಪ್ಪ, ಶಿವಪ್ಪ ಸಾಹುಕಾರ, ಕುಲಕರ್ಣಿ ಮನೋಹರರಾವ್, ಐಗೋಳ ಮುರಿಗೆಪ್ಪ ಮುತ್ಯಾ ಹೀಗೆ ಊರ ಹಿರಿಯ ತಲೆಮಾರಿನ ಪರಂಪರೆಯೇ ಕಾಲಗರ್ಭದಲ್ಲಿ ಕಣ್ಮರೆಯಾಗಿದೆ.
ಹೊಸ ತಲೆಮಾರಿಗೆ ಊರ ಪರಂಪರೆಯ ಸರಿಯಾದ ಅರಿವಿಲ್ಲ. ಅದನ್ನು ತಿಳಿಸಿ ಹೇಳುವವರೂ ಇಲ್ಲ. ಹೀಗಾಗಿ ಲಕ್ಕಮ್ಮನ ಕಟ್ಟೆಯ ಪೂರ್ಣಪ್ರಜ್ಞೆಯ ಪರಿಜ್ಞಾನ ಮತ್ತೆ ಅರಳಿ ಪರಿಮಳ ಬೀರುವುದಾದರೂ ಹೇಗೆ ಸಾಧ್ಯ.? ಪ್ರಾಯಶಃ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾರಸುದಾರರಿಲ್ಲದೇ ನಮ್ಮೂರ ಲಕ್ಕಮ್ಮನಕಟ್ಟೆ ಸೊರಗಿ ಹೋಗಿದೆ.
ಮಲ್ಲಿಕಾರ್ಜುನ ಕಡಕೋಳ
ಹಿರಿಯ ಸಾಹಿತಿ


