ಚಿಕ್ಕಮಗಳೂರು: ಜನರೇ ವಿದ್ಯುತ್ ಉತ್ಪಾದಿಸಿ ಬಳಸಲು ಉತ್ತೇಜನ ನೀಡುವ ಕುಸುಮ್-ಎ (ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ ಮಹಾಭಿಯಾನ್) ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಕಡೂರು ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಮಂಗಳವಾರ ಟಿಎಪಿಸಿಎಂಎಸ್ ಅಮೃತ ಮಹೋತ್ಸವ ಹಾಗೂ ರೈತ ಬಜಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಈಗಾಗಲೇ ರಾಜ್ಯದಲ್ಲಿ ಕುಸುಮ್- ಬಿ (ರೈತರಿಗೆ ಸೋಲಾರ್ ಕೃಷಿ ಪಂಪ್ ಸೆಟ್) ಮತ್ತು ಕುಸುಮ್-ಸಿ (ಕೃಷಿ ಫೀಡರ್ ಗಳ ಸೌರೀಕರಣ) ಯೋಜನೆ ಅನುಷ್ಠಾನದಲ್ಲಿದೆ. ಇದರೊಂದಿಗೆ ಕುಸುಮ್- ಎ ಯೋಜನೆಯನ್ನೂ ಜಾರಿಗೊಳಿಸುವ ಕುರಿತು ಯೋಚಿಸಲಾಗಿದೆ”, ಎಂದರು.
“ಕುಸುಮ್- ಎ ಯೋಜನೆಯಡಿ ರೈತರು, ರೈತರ ಗುಂಪುಗಳು, ಸಹಕಾರಿ ಸಂಸ್ಥೆಗಳು, ಪಂಚಾಯತ್‌ಗಳು, ರೈತ ಉತ್ಪಾದಕರ ಸಂಸ್ಥೆಗಳು, ನೀರು ಬಳಕೆದಾರರ ಸಂಘಗಳು ವಿದ್ಯುತ್ ಉಪ ಕೇಂದ್ರಗಳಿಂದ 5 ಕಿ.ಮೀ. ಒಳಗೆ 500 ಕಿಲೋ ವ್ಯಾಟ್ ನಿಂದ ಗರಿಷ್ಠ 2 ಮೆಗಾ ವ್ಯಾಟ್ ವರೆಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಬಹುದು. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಅವರೇ ಬಳಸಿಕೊಳ್ಳಬಹುದು. ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರ ಖರೀದಿಸುತ್ತದೆ. ಇದರಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರೈತರಿಗೂ ಆದಾಯ ಬರುತ್ತದೆ. ಈ ಹಿನ್ನೆಲೆಯಲ್ಲಿ ಕುಸುಮ್- ಎ ಯೋಜನೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು” ಎಂದು ತಿಳಿಸಿದರು.
“ರೈತರಿಗೆ ಸಬ್ಸಿಡಿ ಮೂಲಕ ಸೋಲಾರ್ ಪಂಪ್ ಸೆಟ್ ನೀಡುವ ಕುಸುಮ್- ಬಿ ಯೋಜನೆ ಈಗಾಗಲೇ ಜಾರಿಯಲ್ಲಿದೆ. ರೈತರು ಬೋರ್ ವೆಲ್ ಕೊರೆಸಿ ಅದರಲ್ಲಿ ನೀರು ಲಭ್ಯವಾದರೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಪರಿಶೀಲನೆ ನಡೆಸಿ ಯೋಜನೆ ಕಾರ್ಯರೂಪಕ್ಕೆ ತರಲು 12 ಮಂದಿ ಗುತ್ತಿಗೆದಾರರನ್ನು ಗುರುತು ಮಾಡಲಾಗಿದೆ. ಅವರುಗಳು ಬೋರ್‌ವೆಲ್‌ಗೆ ಮೋಟಾರ್, ಪ್ಯಾನಲ್ ಹಾಗೂ ಪೈಪ್ ಅಳವಡಿಸಲಿದ್ದಾರೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ. 20 ರಷ್ಟು ಹಣವನ್ನು ರೈತರು ಭರಿಸಬೇಕು, ಇನ್ನುಳಿದ ಶೇ. 50 ರಷ್ಟು ಹಣ ರಾಜ್ಯ ಸರ್ಕಾರ ಭರಿಸುತ್ತದೆ. ಇನ್ನುಳಿಕೆ ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ ಡಿಸೆಂಬರ್ ಅಂತ್ಯದವರೆಗೆ 40 ಸಾವಿರ ಪಂಪ್ ಸೆಟ್ ಅಳವಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ” ಎಂದರು.
ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ:
“ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. 18,500 ಮೆಗಾವ್ಯಾಟ್ ವರೆಗೆ ಬೇಡಿಕೆ ಇದ್ದು, ಅಷ್ಟು ವಿದ್ಯುತ್ ಪೂರೈಸಲು ಸಮರ್ಥರಾಗಿದ್ದೇವೆ. ಅದಕ್ಕಾಗಿ ವಿದ್ಯುತ್ ತಂತಿಗಳ ಬದಲಾವಣೆ, ಹೊಸ ಸಬ್ ಸ್ಟೇಷನ್ ಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಹೊಸದಾಗಿ ನಿರ್ಮಾಣ ಮಾಡುತ್ತಿರುವ 100 ಸಬ್ ಸ್ಟೇಷನ್ ಗಳ ಮೂಲಕ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಸಂಗ್ರಹಿಸಿ ಪೂರೈಸಲು ಅವಕಾಶ ಇದೆ ಈ ಪೈಕಿ 1,500 ಮೆಗಾವ್ಯಾಟ್ ವಿದ್ಯುತ್ತನ್ನು ರೈತರಿಗೆ ಪೂರೈಸಿದರೆ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವಿದ್ಯುತ್ ಕ್ಷೇತ್ರಕ್ಕೆ ಆದ್ಯತೆ ನೀಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ವಿದ್ಯುತ್ ಉತ್ಪಾದನೆ ಮತ್ತು ಸಮರ್ಪಕ ಪೂರೈಕೆಗೆ ಆದ್ಯತೆ ನೀಡಲಾಗಿದೆ. ರೈತರಿಗೆ ದಿನದ 7 ಗಂಟೆವಿದ್ಯುತ್ ಪೂರೈಸುವುದಾಗಿ ಮಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದು, ಅದನ್ನು ಜಾರಿಗೊಳಿಸಲು ನಡೆಸಿದ ಪ್ರಯತ್ನ ಫಲವಾಗಿ ಪ್ರತಿ ದಿನ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ” ಎಂದು ತಿಳಿಸಿದರು.
“ವಿದ್ಯುತ್ ಉತ್ಪಾದನಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಾವಗಡದಲ್ಲಿ ಈಗಿರುವ 2050 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ಸೋಲಾರ್ ಪಾರ್ಕ್ ಜತೆಗೆ ಮತ್ತೆ 10 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಆ ಮೂಲಕ ಪಾವಗಡ ಸೋಲಾರ್ ಪಾರ್ಕನ್ನು ಮತ್ತೆ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿ ಹೊರಹೊಮ್ಮುವಂತೆ ಮಾಡಲಾಗುವುದು” ಎಂದರು.
“ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ನೋಡಿಕೊಳ್ಳಲು ಹೆಚ್ಚು ರೈತ ಬಜಾರ್ ಗಳನ್ನು ಸ್ಥಾಪಿಸಬೇಕು ಎಂದು ಹೇಳಿದ ಅವರು, ಸಾವಯವ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಈ ಉತ್ಪನ್ನಗಳನ್ನು ಬೆಳೆಯಲು ರೈತರು ಆದ್ಯತೆ ನಡಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೆ” ಎಂದು ಹೇಳಿದರು.
ಕಡೂರು ಶಾಸಕ ಕೆ.ಎಸ್.ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭದ್ರಾ- ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.