ನವದೆಹಲಿ: ಉತ್ತರ ಪ್ರದೇಶದ ಬ್ಲಾಕ್, ಜಿಲ್ಲೆ, ರಾಜ್ಯ ಸಮಿತಿ ಸೇರಿದಂತೆ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ. 2027ರ ವಿಧಾನಸಭೆಯ ಚುನಾವಣೆಗೆ ತಯಾರಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಪುನಾರಚಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳೊಂದಿಗೆ ಪಿಸಿಸಿಯ ಸಂಪೂರ್ಣ ರಾಜ್ಯ ಘಟಕವನ್ನು ವಿಸರ್ಜಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 2019 ಮತ್ತು 2024ರ ಲೋಕಸಭೆ ಚುನಾವಣೆ ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸಾಧನೆ ಕಳಪೆಯಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮತ್ತೆ ಬಲಪಡಿಸುವ ಮತ್ತು ಸಂಘಟಿಸುವ ಅನಿವಾರ್ಯತೆ ಖರ್ಗೆ ಅವರಿಗೆ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಯುವಕರಿಗೆ ಅವಕಾಶಗಳನ್ನು ಕೊಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ ಯಾವುದೇ ಪಕ್ಷಕ್ಕೆ ಮಹತ್ವ ಹೊಂದಿದೆ. ಹಾಗಾಗಿ ಈಗಿನಿಂದಲೇ ಪಕ್ಷ ಸಂಘಟನೆಗೆ ಎಐಸಿಸಿ ಮುಂದಾಗಿದೆ. ಅದರ ಮೊದಲ ಹಂತವಾಗಿ ಪಕ್ಷದ ಸಮಿತಿಗಳ ವಿಸರ್ಜನೆ ಮಾಡಿ ಪುನರ್ ರಚಿಸಲಾಗುತ್ತಿದೆ. ನವೆಂಬರ್ 6ರಂದು ಮಲ್ಲಿಕಾರ್ಜುನ ಖರ್ಗೆ ಅವರು ಹಿಮಾಚಲ ಪ್ರದೇಶದ ಬ್ಲಾಕ್, ಜಿಲ್ಲೆ, ರಾಜ್ಯ ಸಮಿತಿ ಸೇರಿದಂತೆ ಎಲ್ಲಾ ಘಟಕಗಳನ್ನು ವಿಸರ್ಜಿಸಿದ್ದರು.