ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಆದ್ದರಿಂದ ಪ್ರತಿಯೊಬ್ಬರು ಇತಿಹಾಸವನ್ನು ಅರಿಯಬೇಕು ಎಂದು ಕೃಷಿ ಸಚಿವ ಎಂ ಚೆಲುವರಾಯಸ್ವಾಮಿ ಹೇಳಿದರು.
ಗುರುತಿನ ಬಾಣಗಳು(ಹರೀಶ್ ಗಂಗಾಧರ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬರು ಇತಿಹಾಸವನ್ನು ಅರಿಯಬೇಕಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಲೇಖಕರು ಮತ್ತು ಓದುಗರ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಮುಂದಿನ ಪೀಳಿಗೆಗೆ ಉತ್ತಮ ಬರಹಗಳನ್ನು ತಲುಪಿಸುವುದು ನಿಮ್ಮಂತಹ ಬರಹಗಾರ ಕೆಲಸ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಚಿಂತಕರಾದ ನೆಲ್ಲಿಕುಂಟೆ ವೆಂಕಟೇಶ್ ಮಾತನಾಡಿ, ‘ಕನ್ನಡಕ್ಕೆ ಅಗತ್ಯ ಇದ್ದ ಒಬ್ಬ ಲಂಕೇಶ್ ಮತ್ತೆ ಹುಟ್ಟಿಬಂದಿದ್ದಾರೆ’ ಎಂದರು. ಮನುಷ್ಯನ ವಿಕಾಸದ ಹಾದಿಯಲ್ಲಿ ಬೆಂಕಿ, ಬಾಣಗಳು ಮತ್ತು ಮನುಷ್ಯ ಜೇನು ತಿನೋಕೆ ಶುರು ಮಾಡಿದ್ದು ಬಹಳ ಮುಖ್ಯವಾದವು ಎಂದರು.
ಮುಂದುವರಿದು, ಮನುಷ್ಯನ ವಿಕಾಸನದಲ್ಲಿ ಜೇನು ತಿನ್ನುವುದು ಬಹಳ ಮುಖ್ಯ ಮತ್ತು ತನ್ನ ಬದುಕಿನ ಹೋರಾಟದ ಭಾಗವಾಗಿಯೇ ಬಾಣಗಳನ್ನು ಕಂಡುಕೊಂಡದ್ದು ಎಂದರು. ಕಪ್ಪುಜನರು, ದಮನಿತ ವರ್ಗಕ್ಕೆ ಸೇರಿದವರು, ಮಹಿಳೆಯರು, ಬಿಳಿಯರು-ಕಪ್ಪುಜನರ ನಡುವಿನ ಹೋರಾಟ ಇವೆಲ್ಲವೂ ಪುಸ್ತಕದಲ್ಲಿ ಬರುವ ಲೇಖನಗಳಲ್ಲಿ ಅಡಗಿದೆ. ಲೇಖಕ ತನ್ನನ್ನು ತಾನು ಗುರಿತಿಸಿಕೊಳ್ಳುವ ಬಾಣವಾಗಿ ಕನ್ನಡಕ್ಕೆ ಬಂದಿದ್ದಾರೆ ಎಂದರು.
ಹರೀಶ್ (ಲೇಖಕ) ಯಾವಾಗಲು ವಿಶ್ವದ ಭಾಷೆಯಲ್ಲಿ ಮಾತನಾಡುತ್ತಾರೆ. ಅವರ ಬರವಣಿಗೆಯಲ್ಲಿ ಸಹನೆ, ಪ್ರೀತಿ, ಬಾಂಧವ್ಯ ತುಂಬಾ ಮುಖ್ಯವಾಗಿ ಪ್ರತಿಧ್ವನಿಸುತ್ತದೆ. ಇಡೀ ಪುಸ್ತಕದ ಕೇಂದ್ರ ಅಂಬೇಡ್ಕರ್ ಮತ್ತು ಗಾಂಧಿ. ಇವರಿಬ್ಬರ ಚಿಂತನೆಗಳೆ ಜಾಗತೀಕ ವಿಚಾರಗಳು. ಕನ್ನಡದಲ್ಲಿ ಇದೊಂದು ಹೊಸ ವಿದ್ಯಮಾನ ಎಂದರು. ಇಲ್ಲಿ ಮುಖ್ಯವಾಗಿ ಇಡೀ ಜಗತ್ತನ್ನು ನಾಲ್ಕು ಕಂಪನಿಗಳಾದ ಫೇಸ್ಬುಕ್, ಆಲ್ಫಾಬೆಟ್, ಗೂಗಲ್, ನೆಟ್ ಫ್ಲಿಕ್ಸ್ ಗಳು ಮನುಷ್ಯ ಹೇಗಿರಬೇಕು ಎಂದು ನಿರ್ಧರಿಸುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಬರಹಗಾರರು ಮತ್ತು ಓದುಗರು ಕಡಿಮೆ ಆಗಿದ್ದಾರೆ ಎಂದ ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಒಬ್ಬ ಬರಹಗಾರ ಯಾವಾಗಲೂ ರಾಜಕೀಯ ಹೋರಾಟಗಾರನಾಗಿರುತ್ತಾನೆ. ಶಾಸ್ತ್ರೀಯ ಚೌಕಟ್ಟನ್ನು ಮುರಿದು ಕಟ್ಟುವಲ್ಲಿ ಎಲ್ಲಾ ಬರಹಗಾರರು ತೊಡಗಿಸಿಕೊಳ್ಳಬೇಕು ಎಂದರು.
ಲೇಖಕರು ಇದೇ ತಿಂಗಳನ್ನು (ಫೆಬ್ರವರಿ) ಪುಸ್ತಕ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿರುವುದೆ ವಿಶೇಷ. ಏಕೆಂದರೆ, ಫೆಬ್ರವರಿ ತಿಂಗಳು ಎನ್ನುವುದು black history month ಮತ್ತು Dalit history month ಎಂದು ಕರೆಯುತ್ತಾರೆ. ಈ ತಿಂಗಳು ಜಾತಿ, ವರ್ಣಬೇದ, ಜನಾಂಗೀಯ ಬೇದದ ಬಗ್ಗೆ ಮಾತನಾಡುತ್ತದೆ. ಅದೇ ರೀತಿಯಲ್ಲಿ ಹರೀಶ್ ಅವರ ಬರಹಗಳು ಗಟ್ಟಿಯಾಗಿ ಇದೇ ವಿಷಯಗಳನ್ನು ಧ್ವನಿಸುತ್ತವೆ ಎಂದು ಕೆ ಪಿ ಅಶ್ವಿನಿ ಹೇಳಿದರು.
ಕೊನೆಯದಾಗಿ ಲೇಖಕರಾದ ಹರೀಶ್ ಗಂಗಾಧರ್ ಮಾತನಾಡಿ, ತಮ್ಮ ಶಾಲೆಯ ದಿನಗಳನ್ನು ಹಾಗು ತಂದೆಯ ಮಾದರಿಯನ್ನು ನೆನಪಿಸಿಕೊಂಡರು.