5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಿಗೆ ರೂ. 5,200 ಕೋಟಿ ನಷ್ಟ: ಸಚಿವ ರಾಮಲಿಂಗಾರೆಡ್ಡಿ

Most read

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ರೂ. 5,200 ಕೋಟಿ ನಷ್ಟ ಉಂಟಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ಚೇತನಕ್ಕೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತೈಲ ಬೆಲೆ, ಸಿಬ್ಬಂದಿ ವೇತನ, ಹಾಗೂ ವಾಹನ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಲಾಗಿದೆ‌‌. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ರೂ.9,978 ಕೋಟಿ ಅನುದಾನ ಪೈಕಿ ರೂ. 7,796 ಕೋಟಿ ಈಗಾಗಲೇ ಮಂಜೂರಾಗಿದೆ. ಬಾಕಿ ಸುಮಾರು 2 ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದರು.

ನಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ಇದುವರೆಗೂ 5,360 ಬಸ್ ಖರೀದಿಸಲಾಗಿದೆ. ಬಿಎಂಟಿಸಿ ನಿಗಮ ಹೊರತುಪಡಿಸಿದರೆ ಹಿಂದಿನ ಸರ್ಕಾರವು ಇತರ ಸಾರಿಗೆ ನಿಗಮಗಳಿಗೆ ಬಸ್ ಖರೀದಿಗೆ ಮುಂದಾಗಿರಲಿಲ್ಲ. 2016ರಿಂದ 2023ರವರೆಗೆ 14 ಸಾವಿರ ನೌಕರರು ನಿವೃತ್ತರಾಗಿದ್ದು, ನೇಮಕಾತಿ ನಡೆದಿರಲಿಲ್ಲ‌. ಖಾಲಿ ಹಾಗೂ ತೆರವಾಗಿರುವ ಹುದ್ದೆಗಳಿಗೆ 9 ಸಾವಿರ ಮಂದಿಯನ್ನು ನೇಮಕಾತಿ ಮಾಡಲಾಗಿದೆ. 1 ಸಾವಿರ ಮಂದಿಗೆ ಅನುಕಂಪ ಆಧಾರದ ಮೇರೆಗೆ ಉದ್ಯೋಗ ನೀಡಲಾಗಿದೆ. ದಿನಕ್ಕೆ 1.96 ಲಕ್ಷ ಟ್ರಪ್‌ಗಳು ಸಾರಿಗೆ ನಿಗಮಗಳ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು.

ಸಡೃಢ ಆರೋಗ್ಯಕ್ಕಾಗಿ ಕೆಎಸ್‌ಆರ್‌ಟಿಸಿ ನೌಕರರು ವಂತಿಗೆ ರೂಪದಲ್ಲಿ ಮಾಸಿಕ ರೂ. 650 ಪಾವತಿಸಿದರೆ ನೌಕರನ ಕುಟುಂಬಸ್ಥರು ಚಿಕಿತ್ಸೆ ಪಡೆಯಬಹುದಾಗಿದೆ. ಇತರ ಸಾರಿಗೆ ನಿಗಮಗಳಿಗೂ ಯೋಜನೆ ವಿಸ್ತರಿಸಿದ್ದು ನೌಕರರಿಂದ ದಾಖಲಾತಿ ಪಡೆಯಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ 350 ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಬಹುದು ಎಂದು ಸಚಿವರು ವಿವರಿಸಿದರು.

More articles

Latest article