ರೈತರನ್ನು ಒಕ್ಕಲೆಬ್ಬಿಸಿದರೆ ಬೃಹತ್ ಜನಾಂದೋಲನ ಆದೀತು- ಮುಖ್ಯಮಂತ್ರಿ ಚಂದ್ರು ಸರ್ಕಾರಕ್ಕೆ ಎಚ್ಚರಿಕೆ

Most read

ಚಿಕ್ಕಮಗಳೂರು – ತರೀಕೆರೆ ತಾಲೂಕಿನ ರೈತರ ಹಿತರಕ್ಷಣ ಸಮಿತಿಯ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರುರವರು ಇಂದು ಭಾಗವಹಿಸಿ ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದರು.

ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ಖಂಡಿಸಿ ಮಾತನಾಡಿದ ಚಂದ್ರು “ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಅನೇಕ ದಶಕಗಳಿಂದ ಅರಣ್ಯ ಇಲಾಖೆಯ ಜಮೀನುಗಳಲ್ಲಿ ಕೃಷಿ ಕಾರ್ಯವನ್ನು ಮಾಡುತ್ತಿರುವ ಸಣ್ಣ ಸಣ್ಣ ಹಿಡುವಳಿದಾರರಿಗೆ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲವೆಂದು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ರೀತಿ ಆದೇಶವನ್ನು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಯಾಕೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದರು.

“ಈ ಬಗ್ಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಅರಣ್ಯ ಸಚಿವ ಭೀಮಣ್ಣ ಖಂಡ್ರೆರವರ ಬಳಿ ಮಾತನಾಡುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ಸಹ ಮಾತನಾಡಿ ತಮ್ಮ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ನಾನು ಮುಂದಾಗುತ್ತೇನೆ” ಎಂದು ಸೇರಿದ್ದ ಸಾವಿರಾರು ರೈತರಿಗೆ ಮುಖ್ಯಮಂತ್ರಿ ಚಂದ್ರು ಆಶ್ವಾಸನೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲೆಯ ನಾನಾ ರೈತ ಸಂಘಟನೆಗಳು ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.

More articles

Latest article