ರಾಜ್ಯ ಪೊಲೀಸರ ಟೋಪಿ ಬದಲಾವಣೆ; ಸ್ಲೋಚ್‌ ಹ್ಯಾಟ್‌ ಗೆ ಬದಲಾಗಿ ಪೀಕ್ ಕ್ಯಾಪ್‌

Most read


ಬೆಂಗಳೂರು: ರಾಜ್ಯದ ಹೆಡ್ ಕಾನ್‌ ಸ್ಟೆಬಲ್‌ ಗಳು ಮತ್ತು ಕಾನ್‌ ಸ್ಟೆಬಲ್‌ ಗಳ ತಲೆ  ಸ್ಲೋಚ್‌ ಹ್ಯಾಟ್‌ ಗೆ  ಬದಲಾಗಿ ಪೀಕ್ ಕ್ಯಾಪ್‌  ಗಳು ಅಲಂಕರಿಸಲಿವೆ. ಸ್ಲೋಚ್‌ ಹ್ಯಾಟ್‌ ಅನ್ನು ಬದಲಾಯಿಸುವಂತೆ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಬೇಡಿಕೆಗೆ ಹಿರಿಯ ಅಧಿಕಾರಿಗಳು ಅಸ್ತು ಎಂದಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಕಾನ್‌ ಸ್ಟೆಬಲ್‌ ಗಳು ಪೀಕ್ ಕ್ಯಾಪ್‌ ಧರಿಸುತ್ತಿದ್ದು, ರಾಜ್ಯದಲ್ಲೂ ಅದೇ ಮಾದರಿ ಟೋಪಿಯನ್ನು ಜಾರಿಗೊಳಿಸುವ ಸಾಧ್ಯತೆಗಳು  ಹೆಚ್ಚು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೋಪಿ ಬದಲಾವಣೆ ಸಂಬಂಧ ಏಪ್ರಿಲ್‌ 4ರಂದು ಸಭೆ ನಡೆಯಲಿದ್ದು, ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ ಆರ್‌ ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಇಲಾಖೆಯ ಅಧಿಕಾರಿಗಳೂ ಭಾಗವಹಿಸಲಿದ್ದಾರೆ. ಹಳೆಯ ಮಾದರಿಯ ಟೋಪಿ ಬದಲಿಗೆ ಸ್ಮಾರ್ಟ್‌ ಪೀಕ್ ಕ್ಯಾಪ್ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

 

80 ರ ದಶಕಕ್ಕೂ ಮುನ್ನ ಕಾನ್‌ ಸ್ಟೆಬಲ್‌ ಗಳು ಟರ್ಬನ್‌ ಮಾದರಿಯ ಟೋಪಿ ಧರಿಸುತ್ತಿದ್ದರು. ಪ್ರಸ್ತುತ ಬಳಸುತ್ತಿರುವ ಸ್ಲೋಚ್‌ ಹ್ಯಾಟ್‌ ಅನ್ನು ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಿಸಲಾಗಿತ್ತು. ಈ ಟೋಪಿ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಲಭೆ, ಲಾಟಿ ಚಾರ್ಜ್ ಪ್ರತಿಭಟನೆ ನಡೆಯುವಾಗ ಈ ಟೋಪಿ ಧರಿಸಿ, ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಈ
ಟೋಪಿ ಧರಿಸಿ ಓಡಲಾಗುವುದಿಲ್ಲ. ಟೋಪಿ ಕೆಳಕ್ಕೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ, ಗಟ್ಟಿಯಾಗಿ ತಲೆಯ ಮೇಲೆ ಕೂರುವಂತಹ ಟೋಪಿ ಬೇಕು ಎಂದು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಕೇಂದ್ರ ಆರೋಗ್ಯ ಇಲಾಖೆಯೂ ಸ್ಲೋಚ್‌
ಹ್ಯಾಟ್‌ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿತ್ತು. ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಸುಮಾರು 85,000  ಎಲ್ಲಾ ಹಂತದ ಪೊಲೀಸರಿದ್ದು ಅವರಲ್ಲಿ 50,000 ಕ್ಕೂ ಹೆಚ್ಚು ಮಂದಿ ಹೆಡ್ ಕಾನ್‌ ಸ್ಟೆಬಲ್‌ ಗಳು ಮತ್ತು ಕಾನ್‌ ಸ್ಟೆಬಲ್‌ ಗಳೇ ಇದ್ದಾರೆ. ಒಂದು ವೇಳೆ ಇವರ ಬೇಡಿಕೆ ಈಡೇರಿದರೆ ಅವರ ಕಾರ್ಯಶೈಲಿಯಲ್ಲೂ ಬದಲಾವಣೆ ಕಾಣಬಹುದು ಮತ್ತು ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಕೀರ್ತಿಗೆ ಸರ್ಕಾರ ಭಾಜನವಾಗುತ್ತದೆ.

ಬ್ರಿಟೀಷರು ಮತ್ತು ಭಾರತೀಯ ಪೊಲೀಸರನ್ನು ಪ್ರತ್ಯೇಕ ಟೋಪಿ ನಿಗದಿಪಡಿಸಲಾಗಿತ್ತು. ಭಾರತೀಯ ಪೊಲೀಸರು ಸ್ಲೋಚ್‌ ಹ್ಯಾಟ್‌ ಧರಿಸುತ್ತಿದ್ದರು. . ಬ್ರಿಟೀಷರ ಅವಧಿಯಲ್ಲಿ ಭಾರತೀಯರನ್ನು ಕೇವಲ ಹೆಡ್ ಕಾನ್‌ ಸ್ಟೆಬಲ್‌ ಗಳು ಮತ್ತು ಕಾನ್‌ ಸ್ಟೆಬಲ್‌ ಹುದ್ದೆಗಳಿಗೆ ಮಾತ್ರ ಆಯ್ಕೆ ಮಾಡಿದರೆ ಉನ್ನತ ಹುದ್ದೆಗಳಿಗೆ ಬ್ರಿಟೀಷರು ಮಾತ್ರ ಆಯ್ಕೆಯಾಗುತ್ತಿದ್ದರು.

ಸ್ಲೋಚ್‌ ಹ್ಯಾಟ್‌ ಮತ್ತು ಪೀಕ್ ಕ್ಯಾಪ್‌ಗಳ ನಡುವೆ ವ್ಯತ್ಯಾಸವೂ ಇದೆ. ಪೀಕ್‌ ಕ್ಯಾಪ್‌ ಧರಿಸಿದರೆ ನೋಡಲು ಅಧಿಕಾರಿಯ ತರಹವೇ ಕಾಣಿಸುತ್ತಾರೆ. ಆದರೆ ಸ್ಲೋಚ್‌ ಹ್ಯಾಟ್‌ ಧರಿಸಿದರೆ ಸರ್ಕಸ್‌ ನಲ್ಲಿ ಆಟಗಾರರು ಧರಿಸುವ ಟೋಪಿ ರೀತಿ ಕಾಣಿಸುತ್ತದೆ. ಇದು ಬ್ರಿಟೀಷರ ಕಾಲದಲ್ಲಿ ಆರಂಭವಾದ ತಾರತಮ್ಯ ಇಂದಿಗೂ ಮುಂದುವರೆದುಕೊಂಡು ಬಂದಿರುವುದನ್ನು ತೋರಿಸುತ್ತದೆ ಎಂದು ಕಾನ್‌ ಸ್ಟೇಬಲ್‌ ಒಬ್ಬರು ಹೇಳುತ್ತಾರೆ.

More articles

Latest article