ಬಳ್ಳಾರಿ: ಜಿಲ್ಲೆಯ ಸಂಡೂರಿನ ದಟ್ಟ ಕಾಡಿನ ನಡುವೆ ಇರುವ ನವಲೂಟಿ ಗುಹೆಯಲ್ಲಿ ಮಧ್ಯ ಶಿಲಾಯುಗದ ಸಲಕರಣೆಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕೃತ ಮಾಹಿತಿ ನೀಡಿದ್ದಾರೆ. ಸಂಡೂರು ಪದರ ಶಿಲೆಯ ದಟ್ಟ ಎಲೆಯುದುರುವ ಕಾಡಿನ ಒಂದು ಸಾವಿರ ಚದರ ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಪ್ರಾಗೈತಿಹಾಸಿಕ (ಪ್ರಿಹಿಸ್ಟಾರಿಕ್) ನೆಲೆಗಳು ಇದ್ದವು ಎಂಬ ಸಂಗತಿಯನ್ನು ಇದೀಗ ಪ್ರಾಗೈತಿಹಾಸಿಕ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಈ ನೆಲಗಳಲ್ಲಿ ವಾಸವಾಗಿದ್ದ ಆದಿಮಾನವರು ಬಳಸುತ್ತಿದ್ದ ಶಿಲಾಸಾಧನಗಳ ಪುರಾವೆಗಳು ದೊರಕಿವೆ.
ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ಫೂಟ್ ಸಂಗನಕಲ್ಲು ಪ್ರಿಹಿಸ್ಟಾರಿಕ್ ವಸ್ತುಸಂಗ್ರಹಾಲಯದ ಸದಸ್ಯರು ಹಾಗೂ ಖ್ಯಾತ ಪ್ರಾಗೈತಿಹಾಸಿಕ ತಜ್ಙರಾದ ಡಾ. ರವಿ ಕೋರಿಶೆಟ್ಟರ್, ಡಾ. ಸಮದ್ ಕೊಟ್ಟೂರು ಇವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ತಿಂಗಳ ಕೊನೆಯ ವಾರದಲ್ಲಿ ಸಂಶೋಧನೆ ನಡೆದಿತ್ತು. ಈ ತಂಡದಲ್ಲಿ ಸಂತೋಷ್ ಮಾರ್ಟಿನ್, ಅಹಿರಾಜ್ ಎಂ ಹಾಗೂ ಪ್ರಾಗೈತಿಹಾಸದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ತಂಡ ನಡೆಸಿದ ಶೋಧದಲ್ಲಿ ಮಧ್ಯಶಿಲಾಯುಗದ ಉಪಕರಣಗಳನ್ನು ಹೋಲುವ ಶಿಲಾ ಉಪಕರಣಗಳು ದೊರೆತಿವೆ. ಜೊತೆಗೆ ದನ ಮತ್ತು ಮೇಕೆಗಳ ಮೂಳೆಗಳ ಪಳೆಯುಳಿಕೆಗಳು ದೊರೆತಿವೆ. ಹೆಚ್ಚಿನ ಅಧ್ಯಯನ ಮತ್ತು ವೈಜ್ಞಾನಿಕ ಸಂಶೋಧನೆಯ ಮೂಲಕ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಕನ್ನಡ ಪ್ಲಾನೆಟ್ ನೊಂದಿಗೆ ಮಾತನಾಡಿದ ಪ್ರಾಗೈತಿಹಾಸಿಕ ತಜ್ಞರಾದ ಡಾ. ರವಿ ಕೋರಿಶೇಟ್ಟರ್, “ಸಂಡೂರಿನ ಕಾಡುಗಳಲ್ಲಿ ಅತ್ಯುತ್ಸಾಹಿ ಪರಿಸರ ಪ್ರೇಮಿಗಳಾದ ಡಾ. ಸಮದ್ ಕೊಟ್ಟೂರು, ಸಂತೋಷ್ ಮಾರ್ಟಿನ್ ಮೊದಲಾದವರು ಈ ಹಿಂದೆ ನಡೆಸಿದ್ದ ಪಯಣಗಳಲ್ಲಿ ಇಲ್ಲಿರುವ ಗುಹೆಗಳು ಶಿಲಾಯುಗದ ಆದಿಮ ಜನರ ನೆಲೆಗಳಾಗಿದ್ದಿರಬಹುದು ಎಂದು ಊಹಿಸಲಾಗಿತ್ತು. ಇತ್ತೀಚೆಗೆ ನಾವೆಲ್ಲರೂ ಸೇರಿ ಕೈಕೊಂಡ ಶೋಧದಲ್ಲಿ ನಮ್ಮ ಊಹೆಗೆ ಪೂರಕವಾದ ಪುರಾವೆಗಳು ದೊರೆತವು. ಇದೊಂದು ಮಹತ್ವದ ಶೋಧವಾಗಿದೆ. ಮುಂದಿನ ದಿನಗಳಲ್ಲಿ ಯುವ ಪ್ರಾಗೈತಿಹಾಸಿಕ ತಜ್ಞರು ದೀರ್ಘ ಕಾಲ ಸಂಶೋಧನೆ ನಡೆಸಬೇಕಾಗುತ್ತದೆ. ಈ ದಿಸೆಯಲ್ಲಿ ನಾವು ಆರಂಭಿಕ ಮಾರ್ಗದರ್ಶನ ನೀಡಬಹುದು”ಎಂದರು.
ಇಲ್ಲಿ ಕಂಡುಬಂದ ಪುರಾವೆಗಳ ಕುರಿತು ಮಾಹಿತಿ ನೀಡಿದ ಡಾ. ಕೋರಿಶೆಟ್ಟರ್, ಈ ಗುಹೆಗಳಲ್ಲಿ ತಾಮ್ರಶಿಲೆಗಳು ಇರುವುದು ಹಿಂದೆಯೇ ಕಂಡುಬಂದಿತ್ತು. ನಮಗೆ ಆರಂಭಿಕವಾಗಿ ಸಿಕ್ಕಿರುವ ಶಿಲಾ ಉಪಕರಣಗಳು ಹಾಗೂ ಮೂಳೆ ಮತ್ತು ಹಲ್ಲುಗಳ ಆಧಾರದಲ್ಲಿ ಈ ಗುಹೆಗಳು ಮಧ್ಯಶಿಲಾಯುಗದ ಮನುಷ್ಯರ ನೆಲೆಯಾಗಿದ್ದರು ಎಂದು ಊಹಿಸಬಹುದಾಗಿದೆ. ನೆಲಮಟ್ಟದಿಂದ ಎರಡು ಮೀಟರ್ ಆಳದಲ್ಲಿ ಈ ಪಳೆಯುಕೆಗಳಿದ್ದುದರಿಂದ ಇವುಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿರಲಿಲ್ಲ. ಆದರೆ ಇಲ್ಲಿ ಯಾರೋ ಯೋಗಿಯೊಬ್ಬರು ವಾಸವಾಗಿದ್ದು ಇಲ್ಲಿ ಗುಂಡಿ ಅಗೆದಿದ್ದರ ಪರಿಣಾಮವಾಗಿ ಕೆಲವು ಪಳೆಯುಳಿಕೆಗಳು ಮೇಲಕ್ಕೆ ಬಂದಿದ್ದವು. ಇವುಗಳನ್ನು ನಮ್ಮ ತಂಡ ಗುರುತಿಸಲು ಸಾಧ್ಯವಾಯಿತುʼ ಎಂದರು.
ಈಗ ಪತ್ತೆಯಾಗಿರುವ ಈ ಆದಿಮ ನೆಲೆಯ ಕುರಿತ ಹೆಚ್ಚಿನ ಅಧ್ಯಯನಗಳ ಮೂಲಕ ಜಗತ್ತಿನ ಪ್ರಾಗೈತಿಹಾಸಿಕ ತಜ್ಞರ ಗಮನ ಬಳ್ಳಾರಿಯ ಕಡೆ ಬೀಳುವುದಂತೂ ನಿಜ. ಭಾರತೀಯ ಪುರಾತತ್ವ ಇಲಾಖೆ ಸೂಕ್ತ ಸಹಯೋಗ ಮತ್ತು ಸಹಕಾರ ನೀಡಿದರೆ ಈ ಶಿಲಾಯುಗದ ಹೊಸನೆಲೆಯ ಅನ್ವೇಷಣೆ ಕರ್ನಾಟಕದ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ನೆಗೆತವನ್ನು ಉಂಟುಮಾಡಲಿದೆ. ಈ ಮೂಲಕ ನಾಡಿನ ಮೂಲನಿವಾಸಿಗಳ ಕುರಿತು, ಅವರ ಆವಾಸಗಳ ಕುರಿತು ಹೆಚ್ಚಿನ ಒಳನೋಟಗಳು ಲಭ್ಯವಾಗಲಿವೆ. ಈಗಾಗಲೇ ಇದೇ ಪ್ರಾಗೈತಿಹಾಸಿಕ ತಜ್ಞರು ತಮ್ಮ ದಶಕಗಳ ಶ್ರಮದಿಂದಾಗಿ ಬಳ್ಳಾರಿ ಸಮೀಪದ ಸಂಗನಕಲ್ಲು ಶಿಲಾಯುಗದ ನೆಲೆಗಳಲ್ಲಿ ನಡೆಸಿರುವ ಅಗೆತ (ಉತ್ಖನನನ) ಹಾಗೂ ಅಲ್ಲಿಂದ ಪಡೆದ ಅಮೂಲ್ಯ ವಸ್ತುಗಳನ್ನು ಬಳ್ಳಾರಿಯ ಪ್ರಾಗೈತಿಹಾಸಿಕ ವಸ್ತುಸಂಗ್ರಹಾಲಯದಲ್ಲಿ ದಾಖಲಿಸಿ ಇಟ್ಟಿರುವುದು ಜನಸಾಮಾನ್ಯರಿಗೇ ಹಾಗೂ ಇತಿಹಾಸ ಆಸಕ್ತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಡೂರಿನ ಅನ್ವೇಷಣೆಗಳೂ ಹೊಸ ತಿಳುವಳಿಕೆಗೆ ದಾರಿಯಾಗುತ್ತವೆ ಎಂಬ ನಿರೀಕ್ಷೆ ಹುಟ್ಟಿದೆ.