ಬೆಳಗಾವಿ: ರೋಹಿತ್ ವೇಮುಲ ಕಾಯಿದೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರು ಮತ್ತು ವಿಶೇಷವಾಗಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರೊಂದಿಗೆ ಚರ್ಚೆ ನಡೆಸಿದರು.ಈ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಿಯಾಂಕ್ ಅವರು, ನೂರಾರು ವರ್ಷಗಳಿಂದ ಅಸಮಾನತೆ, ಶೋಷಣೆಗಳು ನಮ್ಮ ಸಮಾಜವನ್ನು ಕಾಡುತ್ತಲೇ ಇದೆ, ಹಾಗೆಯೇ ನೂರಾರು ವರ್ಷಗಳಿಂದಲೂ ಅದರ ವಿರುದ್ಧದ ಪ್ರತಿರೋಧ, ಜಾಗೃತಿಗಳೂ ಸಹ ಘಟಿಸುತ್ತಲೇ ಇವೆ.
ಬುದ್ಧನಿಂದ ಹಿಡಿದು ಬಸವ, ಅಂಬೇಡ್ಕರ್ ರವರವರೆಗೆ ಶೋಷಣೆಯ ವಿರುದ್ಧದ ಜಾಗೃತಿಯ ಶಕ್ತಿಗಳು ಕೆಲಸ ಮಾಡುತ್ತಿವೆ. ಆದರೂ ಪರಂಪರೆಯಾಗಿ ಬಂದಿರುವ ಶೋಷಣೆಯ ಮನಸ್ಥಿತಿಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ, ಆ ಪ್ರಕ್ರಿಯೆ ಬೇರೆ ಬೇರೆ ರೂಪಗಳಲ್ಲಿ ನಿರಂತರವಾಗಿ ನಡೆಯುತ್ತಿರಬೇಕಾಗುತ್ತದೆ. ಕ್ಯಾಂಪಸ್ ಗಳಲ್ಲಿ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಅನುಭವಿಸುವ ಕಿರುಕುಳಕ್ಕೆ ಬಲಿಯಾದ ರೋಹಿತ್ ವೇಮುಲರವರ ಹೆಸರು ಇಂದು ಹೋರಾಟಗಳಿಗೆ ಧ್ವನಿಯಾಗಿ, ಶಕ್ತಿಯಾಗಿ ನಿಂತಿದೆ.
ಸಮುದಾಯದ ಹಿನ್ನೆಲೆಯ ಕಾರಣಕ್ಕಾಗಿ ಉನ್ನತ ಶಿಕ್ಷಣದ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಶೋಷಣೆ, ಕಿರುಕುಳವನ್ನು ತಡೆಗಟ್ಟುವುದನ್ನು, ಅವರಿಗೆ ರಕ್ಷಣೆ ಒದಗಿಸುವುದನ್ನು ನಮ್ಮ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಾಗಿ ಪರಿಣಾಮಕಾರಿ ಕಾಯ್ದೆ ರೂಪಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಉದ್ದೇಶಿತ ಕಾಯ್ದೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

